Homeಇದೀಗ ಬಂದ ಸುದ್ದಿಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್‌ ಪಡೆದು ಪರಾರಿಯಾಗಿದ್ದ ಅಪರಾಧಿ 40 ವರ್ಷಗಳ ಬಳಿಕ ಅರೆಸ್ಟ್

ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್‌ ಪಡೆದು ಪರಾರಿಯಾಗಿದ್ದ ಅಪರಾಧಿ 40 ವರ್ಷಗಳ ಬಳಿಕ ಅರೆಸ್ಟ್

ಹೈದರಾಬಾದ್‌, ಆ.27- ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪೆರೋಲ್‌ ಪಡೆದ ಬಳಿಕ, ಶಿಕ್ಷೆ ಆರಂಭವಾದ ಆರು ತಿಂಗಳಲ್ಲೇ ಜೈಲಿನಿಂದ ಪರಾರಿಯಾಗಿದ್ದ ಅಪರಾಧಿಯನ್ನು 40 ವರ್ಷಗಳ ಬಳಿಕ ತೆಲಂಗಾಣ ಪೊಲೀಸರು ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ.ನಾಲ್ಕು ದಶಕಗಳ ಕಾಲ ತಲೆಮರೆಸಿಕೊಂಡಿದ್ದ ಅಪರಾಧಿ ಈ ಅವಧಿಯಲ್ಲಿ ಸರ್ಕಾರಿ ಶಿಕ್ಷಕನಾಗಿ ಕೆಲಸ ಗಿಟ್ಟಿಸಿಕೊಳ್ಳುವುದರ ಜತೆಗೆ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದ ಎಂಬುದು ಇದೀಗ ಬೆಳಕಿಗೆ ಬಂದಿದೆ.

ಈಗ 70ರ ದಶಕದ ಅಂತ್ಯದಲ್ಲಿರುವ ಸಂದೇಲ ವೀರಣ್ಣನಿಗೆ 1970ರ ದಶಕದ ಉತ್ತರಾರ್ಧದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ 1983ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಪೆರೋಲ್‌ ಪಡೆದ ಬಳಿಕ ಶಿಕ್ಷೆ ಆರಂಭವಾದ ಆರು ತಿಂಗಳಲ್ಲೇ ಜೈಲಿನಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ. 40 ವರ್ಷಗಳ ಕಾಲ ಪೊಲೀಸರಿಗೆ ಸಿಗದೆ ಇದ್ದ ವೀರಣ್ಣನನ್ನು ಮೇ 2024ರಲ್ಲಿ ಬಂಧಿಸಲಾಗಿತ್ತು.

ಮಹಬೂಬಾಬಾದ್‌ನಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತೆಲಂಗಾಣ ಕಾರಾಗೃಹ ಇಲಾಖೆಯ ವಿಶೇಷ ಕಾರ್ಯಪಡೆ ವೀರಣ್ಣನನ್ನು ಬಂಧಿಸಿತ್ತು. ಬಳಿಕ ಆತನನ್ನು ಚೆರ್ಲಪಲ್ಲಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ಪತ್ನಿಯ ಅರ್ಜಿ ವಜಾ

ವೀರಣ್ಣನ ಪತ್ನಿ ಸಂದೇಲ ಚರಮ ಅವರು ಆತನ ಬಂಧನವನ್ನು ಪ್ರಶ್ನಿಸಿ, ವೈದ್ಯಕೀಯ ಹಾಗೂ ಅನುಕಂಪದ ಆಧಾರದ ಮೇಲೆ ಬಿಡುಗಡೆ ಮಾಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ. ಮಾಧವಿ ದೇವಿ ಅವರು ವೀರಣ್ಣನ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅಲ್ಲದೆ, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವೀರಣ್ಣನನ್ನು ಮತ್ತೆ ಜೈಲಿಗೆ ಕಳುಹಿಸುವಂತೆ ಆದೇಶಿಸಿದ್ದಾರೆ.

ಪೆರೋಲ್‌ ಉಲ್ಲಂಘನೆಗೆ ಸಂಬಂಧಿಸಿದಂತೆ ತನ್ನ ವಾದ ಮಂಡಿಸಲು ವೀರಣ್ಣನಿಗೆ ನ್ಯಾಯಯುತ ಅವಕಾಶ ನೀಡಲಾಗಿಲ್ಲ ಎಂಬ ಪ್ರತಿವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ. ಜೈಲು ಅಧಿಕಾರಿಗಳು ಶೋಕಾಸ್‌ ನೋಟಿಸ್‌ ಜಾರಿ ಮಾಡಿ, ಇತ್ತೀಚಿನ ಪೆರೋಲ್‌ ಮನವಿಯನ್ನು ತಿರಸ್ಕರಿಸುವ ಮುನ್ನ ವಿಚಾರಣೆ ನಡೆಸಿದ್ದಾರೆ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ.

ಇದಲ್ಲದೆ, ವೀರಣ್ಣನಿಗೆ ವರದಿಯಾಗಿರುವ ಅನಾರೋಗ್ಯಗಳಿಗೆ ಅಗತ್ಯ ವೈದ್ಯಕೀಯ ಆರೈಕೆ ಒದಗಿಸಲು ಜೈಲು ವ್ಯವಸ್ಥೆ ಸಜ್ಜಾಗಿದೆ ಎಂದು ರಾಜ್ಯ ಸರ್ಕಾರದ ಕಾನೂನು ಪ್ರತಿನಿಧಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಜೈಲು ಆಡಳಿತಕ್ಕೆ ಹೈಕೋರ್ಟ್‌ ಚಾಟಿ

ವೈಯಕ್ತಿಕ ಪ್ರಕರಣಕ್ಕೆ ಸೀಮಿತವಾಗದೆ, 40 ವರ್ಷಗಳಿಗೂ ಹೆಚ್ಚು ಕಾಲ ಪರಾರಿಯಾಗಿದ್ದ ಅಪರಾಧಿಯನ್ನು ಪತ್ತೆಹಚ್ಚಲು ವಿಫಲವಾದ ಜೈಲು ಆಡಳಿತದ ವಿರುದ್ಧ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಪರಾಧಿಯೊಬ್ಬ ದಶಕಗಳ ಕಾಲ ಕಾನೂನಿನ ಕಣ್ತಪ್ಪಿಸಿ ಬದುಕಲು ಸಾಧ್ಯವಾಗಿರುವುದು ಗಮನಾರ್ಹ ಆಡಳಿತಾತ್ಮಕ ವೈಫಲ್ಯ ಎಂದು ನ್ಯಾಯಮೂರ್ತಿ ಮಾಧವಿ ದೇವಿ ಅಭಿಪ್ರಾಯಪಟ್ಟಿದ್ದಾರೆ.

RELATED ARTICLES
spot_img

Latest News