ರಾಯಪುರ, ಆ.27- ಛತ್ತೀಸ್ಗಢದ ರಾಯಪುರದಲ್ಲಿರುವ ಸರ್ಕಾರಿ ಸ್ವಾಮ್ಯದ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ (ಐಜಿಕೆವಿಸಿ) ಬಿಎಸ್ಸಿ ಕೃಷಿಯ ಮತ್ತೊಂದು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.ಈ ಕುರಿತು ಪೊಲೀಸ್ ತನಿಖೆ ನಡೆಸುವಂತೆ ವಿಶ್ವವಿದ್ಯಾಲಯ ಮನವಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಬಿಎಸ್ಸಿ ಕೃಷಿಯ ಎರಡು ವಿಷಯಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ಎಪಿಬಿ-5121 (ಜೆನೆಟಿಕ್ಸ್ನ ಮೂಲಭೂತ ಅಂಶಗಳು) ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.
ಆ.19ರಂದು ರಾಜ್ಯದ 28 ಕೃಷಿ ಕಾಲೇಜುಗಳಲ್ಲಿ ಈ ಪರೀಕ್ಷೆ ನಡೆದಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾದ ದೂರಿನಲ್ಲೂ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಉಲ್ಲೇಖಿಸಲಾಗಿದೆ.
ಪ್ರಕರಣದ ಪರಿಶೀಲನೆಗಾಗಿ ವಿಶ್ವವಿದ್ಯಾಲಯ ಐವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಪ್ರಾಥಮಿಕ ತನಿಖೆಯ ವೇಳೆ ಸಮಿತಿಯು ಕೃಷಿ ಕಾಲೇಜೊಂದಕ್ಕೆ ಕಳುಹಿಸಲಾಗಿದ್ದ ಬಳಿಕ ವಿಶ್ವವಿದ್ಯಾಲಯಕ್ಕೆ ವಾಪಸ್ ಬಂದ ಪ್ರಶ್ನೆಪತ್ರಿಕೆಗಳ ಲಕೋಟೆಗಳನ್ನು ಪರಿಶೀಲಿಸಿದೆ.
ಈ ವೇಳೆ ಕೆಲವು ಲಕೋಟೆಗಳಲ್ಲಿ ಮೇಲ್ನೋಟಕ್ಕೆ ಕಳ್ಳತನ ಅಥವಾ ಹಸ್ತಕ್ಷೇಪದ ಗುರುತುಗಳು ಕಂಡುಬಂದಿವೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಜೆನೆಟಿಕ್ಸ್ನ ಮೂಲಭೂತ ಅಂಶಗಳ ಪ್ರಶ್ನೆಪತ್ರಿಕೆ ಹೊಂದಿದ್ದ ಲಕೋಟೆಯಲ್ಲಿಯೂ ಇಂತಹ ಗುರುತುಗಳು ಪತ್ತೆಯಾಗಿದ್ದು, ಈ ಹಿಂದೆ ಪೊಲೀಸ್ ತನಿಖೆಗೆ ಒಳಪಟ್ಟಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಂಡುಬಂದ ಗುರುತುಗಳಿಗೆ ಹೋಲಿಕೆಯಾಗಿವೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಈ ಕುರಿತು ದೂರು ಸ್ವೀಕರಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
