ಕೋಲ್ಕತ್ತಾ, ಜೂ.7 ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ಶಾಸಕ ಮದನ್ ಮಿತ್ರ ಅವರ ವಾಹನದ ಮೇಲೆ ಮೊಟ್ಟೆ ಎಸೆದ ಘಟನೆ ನಡೆದಿದೆ.ನಿನ್ನೆ ರಾತ್ರಿ ಕಮರ್ಹತಿಯ ಅರಿಯದಹ ಪ್ರದೇಶದಲ್ಲಿ ಮಿತ್ರ ಅವರ ಕಾರು ಸಾಗುತ್ತಿದ್ದಾಗ ಪ್ರತಿಭಟನಾಕಾರರು ಮೊಟ್ಟೆ ಎಸೆದ ಘಟನೆ ನಡೆದಿದೆ.
ಸ್ಥಳೀಯ ಆಟೋ ಮತ್ತು ಇ-ರಿಕ್ಷಾ ಚಾಲಕರು ವಾರ್ಡ್ ಸಂಖ್ಯೆ 14 ರ ಕೌನ್ಸಿಲರ್ ಕಚೇರಿ ಮುಂದೆ ಜಮಾಯಿಸಿ, ಕಳೆದ ಕೆಲವು ವರ್ಷಗಳಿಂದ ಬಲವಂತವಾಗಿ ವಸೂಲಿ ಮಾಡಲಾಗಿರುವ ಕಟ್ ಮನಿ (ಅಕ್ರಮ ಕಮಿಷನ್) ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ವಾಹನವನ್ನು ಗುರಿಯಾಗಿಸಿ ಮೊಟ್ಟೆ ಎಸೆಯಲಾಗಿದ್ದು, ಚಾಲಕನ ಮೇಲೂ ಹಲ್ಲೆ ನಡೆದಿದೆ ಎನ್ನಲಾಗಿದೆ.
ಈ ದಾಳಿಯ ಹಿಂದೆ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳ ಕೈವಾಡವಿದೆ ಎಂದು ಮದನ್ ಮಿತ್ರ ಆರೋಪಿಸಿದ್ದಾರೆ. ಆದರೆ, ರಾಜ್ಯದಲ್ಲಿನ ರಾಜಕೀಯ ಬದಲಾವಣೆಯ ನಂತರ ಸ್ಥಳೀಯರಲ್ಲಿ ಆಡಳಿತ ಪಕ್ಷದ ವಿರುದ್ಧ ಅಸಮಾಧಾನ ಸ್ಫೋಟಗೊಂಡಿದೆ ಎಂದು ವರದಿಗಳು ತಿಳಿಸಿವೆ.
