ನವದೆಹಲಿ, ನ. 21 (ಪಿಟಿಐ)- ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಧಾನ ಮಾಡಿಕೊಂಡ ಪ್ರಧಾನಿ ಎಂಬ ಟೀಕೆ ಮಾಡಿದ್ದ ರಾಹುಲ್ಗಾಂಧಿ ಅವರ ವಿರುದ್ಧ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕಿಡಿ ಕಾರಿದ್ದಾರೆ. ಮಾತ್ರವಲ್ಲ ವಿರೋಧ ಪಕ್ಷಕ್ಕೆ ನಾಲ್ಕು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. 1962ರ ಅವಮಾನಕ್ಕಾಗಿ ಕಾಂಗ್ರೆಸ್ ಕ್ಷಮೆ ಕೇಳುತ್ತದೆಯೇ ಮತ್ತು ಭಾರತವನ್ನು ಏಕೆ ಬಡ ರಾಷ್ಟ್ರವನ್ನಾಗಿ ಇರಿಸಿತ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸುವಂತೆ ಅವರು Xನಲ್ಲಿ ಆಗ್ರಹಿಸಿದ್ದಾರೆ.
1962ರಲ್ಲಿ ನನ್ನ ಗ್ರಾಮವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಈ 1962ರ ಅವಮಾನಕ್ಕಾಗಿ ಕಾಂಗ್ರೆಸ್ ಕ್ಷಮೆ ಕೇಳುತ್ತದೆಯೇ? 2. ಕಾಂಗ್ರೆಸ್ ಭಾರತವನ್ನು ಬಡ ರಾಷ್ಟ್ರವನ್ನಾಗಿ ಇರಿಸಿತ್ತು, ಏಕೆ? 3. ಭಾರತವನ್ನು ಹಾವು ಹಿಡಿಯುವವರ ನಾಡು ಎಂದು ಏಕೆ ಕರೆಯಲಾಗುತ್ತಿತ್ತು? 4. ಭಾರತದ ಆರ್ಥಿಕ ಬೆಳವಣಿಗೆಯ ದರವನ್ನು ಹಿಂದೂ ಬೆಳವಣಿಗೆ ದರ ಎಂದು ಕರೆದು ಏಕೆ ಅವಮಾನಿಸಲಾಯಿತು? ಎಂದು ಪ್ರಶ್ನಿಸಿದ್ದಾರೆ.
ಚೀನಾದಲ್ಲಿ ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯ ಸಂದರ್ಭದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್್ಡ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಡುವೆ ನಡೆದ ತ್ರಿಪಕ್ಷೀಯ ಸಭೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಟೀಕಿಸಿದ ನಂತರ ರಿಜಿಜು ಈ ಪ್ರತಿಕ್ರಿಯೆ ನೀಡಿದ್ದಾರೆ. ಸಭೆಯಲ್ಲಿ ಈ ಮೂವರು ನಾಯಕರು ಕುಳಿತಿರುವ ಫೋಟೋವನ್ನು ಎಕ್್ಸನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ಒಂದು ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ, ಭಾರತದ ಪ್ರಧಾನಿ ಈ ಮೇಜಿನ ಬಳಿ ಕುಳಿತಿರುತ್ತಿದ್ದರು.
ಆದರೆ, ಸಂಧಾನ ಮಾಡಿಕೊಂಡ ಪ್ರಧಾನಿ ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು, ರಾಹುಲ್ ಗಾಂಧಿ ಅವರು ದೇಶದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು. ಕಾಂಗ್ರೆಸ್ ನಾಯಕರ ಈ ಹೇಳಿಕೆಯು ಬಿಜೆಪಿ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಹಲವು ಬಿಜೆಪಿ ನಾಯಕರು, ರಾಹುಲ್ ಗಾಂಧಿ ಅವರಿಗೆ ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ಯಾವುದೇ ಅರಿವಿಲ್ಲ ಎಂದು ಆರೋಪಿಸಿದರು.
ಆಡಳಿತ ಪಕ್ಷವು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ವ್ಯಂಗ್ಯವಾಡಲು, ಕೃತಕ ಬುದ್ಧಿಮತ್ತೆ ಬಳಸಿ ಸಿದ್ಧಪಡಿಸಿದ ಚಿತ್ರವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ರಾಹುಲ್ ಗಾಂಧಿ ಅವರು ಚೀನಾದಲ್ಲಿ ನಡೆದ ಆ ತ್ರಿಪಕ್ಷೀಯ ಸಭೆಯಲ್ಲಿ ಅಮೆರಿಕ ಅಧ್ಯಕ್ಷರಿಗೆ ಪಾನೀಯಗಳನ್ನು ಬಡಿಸುತ್ತಿರುವುದು ಕಂಡುಬರುತ್ತದೆ.
ಈ ಚಿತ್ರವನ್ನು ಎಕ್್ಸನಲ್ಲಿ ಹಂಚಿಕೊಂಡಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಕುಚ್ ಐಸೆ (ಅಂದರೆ ಇದೇ ರೀತಿಯಲ್ಲಿ ಅಥವಾ ಹೀಗೆ) ಎಂಬ ಶೀರ್ಷಿಕೆಯೊಂದಿಗೆ ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಿದ್ದಾರೆ. ಇದರ ಜೊತೆಗೆ ನಗುವಿನ ಮತ್ತು ಬೆಂಕಿಯ ಎಮೋಜಿಗಳನ್ನು ಕೂಡ ಬಳಸಿದ್ದಾರೆ.
