Homeರಾಷ್ಟ್ರೀಯಹೈದರಾಬಾದ್‌ನಲ್ಲಿರುವ ಮೆಟಾ ಕಚೇರಿ ಮೇಲೆ ಯುವ ಕಾಂಗ್ರೆಸ್‌‍ ಕಾರ್ಯಕರ್ತರ ದಾಳಿ

ಹೈದರಾಬಾದ್‌ನಲ್ಲಿರುವ ಮೆಟಾ ಕಚೇರಿ ಮೇಲೆ ಯುವ ಕಾಂಗ್ರೆಸ್‌‍ ಕಾರ್ಯಕರ್ತರ ದಾಳಿ

ಹೈದರಾಬಾದ್‌,ನ.21- ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್‌‍ ನಾಯಕರು ಹಾಗೂ ಕಾರ್ಯಕರ್ತರ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಯುವ ಕಾಂಗ್ರೆಸ್‌‍ ಕಾರ್ಯಕರ್ತರು ಹೈದರಾಬಾದ್‌ನಲ್ಲಿರುವ ಮೆಟಾ ಕಚೇರಿಗೆ ನುಗ್ಗಿ ಪ್ರತಿ ಭಟನೆ ನಡೆಸಿದ್ದಾರೆ.

ಈ ವೇಳೆ ಕಚೇರಿ ಆವರಣದಲ್ಲಿನ ಹೂವಿನ ಕುಂಡಗಳು ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಿರುವ ಆರೋಪ ಕೇಳಿಬಂದಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಕಾಂಗ್ರೆಸ್‌‍ ಪಕ್ಷವನ್ನು ಗೂಂಡಾಗಳ ಪಕ್ಷ ಎಂದು ಟೀಕಿಸಿದೆ.

ತೆಲಂಗಾಣ ಯುವ ಕಾಂಗ್ರೆಸ್‌‍ ಅಧ್ಯಕ್ಷ ಜಕ್ಕಿಡಿ ಶಿವಚರಣ್‌ ರೆಡ್ಡಿ ನೇತೃತ್ವದಲ್ಲಿ ಶುಕ್ರವಾರ ಈ ಪ್ರತಿಭಟನೆ ನಡೆದಿದೆ. ಮೆಟಾ ಸಂಸ್ಥೆಯು ಇನ್‌ಸ್ಟಾಗ್ರಾಮ್‌ನಲ್ಲಿ ಹಲವು ಕಾಂಗ್ರೆಸ್‌‍ ನಾಯಕರ ಖಾತೆಗಳನ್ನು ಅಮಾನತುಗೊಳಿಸಿದೆ ಹಾಗೂ ಪ್ರಮುಖ ನಾಯಕರ ಪೋಸ್ಟ್‌ಗಳನ್ನು ತೆಗೆದುಹಾಕಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.

ಭಾರತೀಯ ಯುವ ಕಾಂಗ್ರೆಸ್‌‍ ರಾಷ್ಟ್ರೀಯ ಅಧ್ಯಕ್ಷ ಉದಯ್‌ ಭಾನು ಚಿಬ್‌ ಮತ್ತು ರಾಷ್ಟ್ರೀಯ ಉಸ್ತುವಾರಿ ಮನೀಶ್‌ ಶರ್ಮಾ ಅವರ ಖಾತೆಗಳು ಹಾಗೂ ಪೋಸ್ಟ್‌ಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಪೊಲೀಸರ ಪ್ರಕಾರ, ಸುಮಾರು 25 ಯುವ ಕಾಂಗ್ರೆಸ್‌‍ ಕಾರ್ಯಕರ್ತರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೈದರಾಬಾದ್‌ನ ಸ್ಕೈ ವ್ಯೂ ಆವರಣದಲ್ಲಿರುವ ಮೆಟಾ ಕಚೇರಿಗೆ ಪ್ರವೇಶಿಸಿದ್ದಾರೆ.

ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕಚೇರಿ ಕಾರಿಡಾರ್‌ಗಳಲ್ಲಿ ಓಡಾಡಿ, ಹೂವಿನ ಕುಂಡಗಳು ಹಾಗೂ ಇತರ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಚೇರಿ ಆವರಣದ ಹೊರಭಾಗದಲ್ಲಿಯೂ ಹೂವಿನ ಕುಂಡವನ್ನು ಒಡೆದುಹಾಕಿರುವ ದೃಶ್ಯಗಳು ಕಂಡುಬಂದಿವೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸುಮಾರು 20ರಿಂದ 21 ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಬಳಿಕ ಸುಮಾರು ಮೂರು ಗಂಟೆಗಳ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಪ್ರತಿಭಟನಾಕಾರರು ಮೆಟಾ ಸಂಸ್ಥೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಮೆಟಾಗೆ ಏಳು ದಿನಗಳ ಗಡುವು
ಇದೇ ವಿಚಾರವಾಗಿ ಭಾರತೀಯ ಯುವ ಕಾಂಗ್ರೆಸ್‌‍ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಮೆಟಾ ಸಂಸ್ಥೆಗೆ ಎಚ್ಚರಿಕೆ ನೀಡಿದೆ. ನಿರ್ಬಂಧಿತ ಖಾತೆಗಳು ಮತ್ತು ತೆಗೆದುಹಾಕಿರುವ ಪೋಸ್ಟ್‌ಗಳನ್ನು ಏಳು ದಿನಗಳೊಳಗೆ ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದೆ. ಅಲ್ಲದೆ, ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ಖಾತೆಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದೆ.

RELATED ARTICLES

Latest News