ಚನ್ನೈ,ಆ.17- ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ತಮಿಳುನಾಡಿನ ಮೂವರು ಮೃತಪಟ್ಟ ಘಟನೆ ರಾಜಕೀಯ ಹಾಗೂ ಆಡಳಿತಾತಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆ ಕುರಿತು ಎರಡೂ ರಾಜ್ಯಗಳ ಕಡೆಗಳಿಂದ ಭಿನ್ನ ಹೇಳಿಕೆಗಳು ಹೊರಬಿದ್ದಿದ್ದು, ನಿಷ್ಪಕ್ಷಪಾತ ತನಿಖೆಗೆ ಆಗ್ರಹ ಹೆಚ್ಚಾಗಿದೆ.
ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದು, ಕರ್ನಾಟಕ ಅರಣ್ಯ ಇಲಾಖೆಯ ಪ್ರಾಥಮಿಕ ವಿವರಣೆ ಸ್ವೀಕಾರಾರ್ಹವಲ್ಲ. ಘಟನೆಗೆ ಕಾರಣರಾದವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ವಿಜಯ್ ಅವರ ಹೇಳಿಕೆಗೆ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷಗಳೂ ಬೆಂಬಲ ವ್ಯಕ್ತಪಡಿಸಿವೆ. ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ, ನಿಷ್ಪಕ್ಷಪಾತ ತನಿಖೆಯ ಅಗತ್ಯವನ್ನು ಒತ್ತಿಹೇಳಿದ್ದಾರೆ.ಪಿಎಂಕೆ ನಾಯಕ ಡಾ. ಅನ್ಬುಮಣಿ ರಾಮದಾಸ್ ಕೂಡ ಕರ್ನಾಟಕ ಅರಣ್ಯ ಇಲಾಖೆಯ ವಿವರಣೆಯನ್ನು ಪ್ರಶ್ನಿಸಿದ್ದು, ಘಟನೆಯ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ.
ಈ ಘಟನೆ ನಡೆಯುವ ವೇಳೆಯಲ್ಲೇ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆ ಕುರಿತು ರಾಜಕೀಯ ಭಿನ್ನಾಭಿಪ್ರಾಯಗಳು ಮುಂದುವರಿದಿವೆ.
ಜುಲೈ ಅಂತ್ಯದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಕಾವೇರಿ ನೀರು ಹಂಚಿಕೆ ಕುರಿತು ಮಾತುಕತೆಗೆ ಪ್ರಯತ್ನ ನಡೆದಿತ್ತು. ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಬೆಂಗಳೂರಿಗೆ ಆಹ್ವಾನಿಸಿದ್ದರು. ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿಯನ್ನು ಸ್ವತಃ ಪರಿಶೀಲಿಸಲು ವಿಜಯ್ ಅವರಿಗೆ ವೈಮಾನಿಕ ಸಮೀಕ್ಷೆಯ ಅವಕಾಶವನ್ನೂ ಕರ್ನಾಟಕ ನೀಡಿತ್ತು.
ಆದರೆ ಕಾವೇರಿ ವಿಚಾರದಲ್ಲಿ ರಾಜ್ಯಗಳ ನಡುವೆ ಉದ್ವಿಗ್ನತೆ ಮುಂದುವರಿದ ಹಿನ್ನೆಲೆಯಲ್ಲಿ ಆಗಸ್ಟ್ 3ರಂದು ನಿಗದಿಯಾಗಿದ್ದ ವಿಜಯ್ ಅವರ ಬೆಂಗಳೂರು ಭೇಟಿಯನ್ನು ಮುಂದೂಡಲಾಗಿತ್ತು.
ಇದರ ಮಧ್ಯೆಯೇ ತಮಿಳುನಾಡಿನ ಮೂವರು ನಿವಾಸಿಗಳ ಗುಂಡೇಟಿನ ಸಾವು ಸಂಭವಿಸಿರುವುದರಿಂದ ಈ ಘಟನೆಗೆ ಕೇವಲ ಕಾನೂನು-ಸುವ್ಯವಸ್ಥೆಯ ದೃಷ್ಟಿಯಿಂದ ಮಾತ್ರವಲ್ಲದೆ, ಎರಡು ನೆರೆರಾಜ್ಯಗಳ ನಡುವಿನ ಸೂಕ್ಷ್ಮ ಸಂಬಂಧಗಳ ದೃಷ್ಟಿಯಿಂದಲೂ ಮಹತ್ವ ಬಂದಿದೆ.
ಕರ್ನಾಟಕ-ತಮಿಳುನಾಡು ಸಂಬಂಧದಲ್ಲಿ ಕಾವೇರಿ ನೀರು ಹಂಚಿಕೆ ದೀರ್ಘಕಾಲದ ವಿವಾದವಾಗಿದೆ. 2018ರ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಎರಡೂ ರಾಜ್ಯಗಳ ನೀರಿನ ಹಂಚಿಕೆ ಕುರಿತ ಕಾನೂನು ಚೌಕಟ್ಟು ಸ್ಪಷ್ಟಗೊಂಡಿದ್ದರೂ, ಮಳೆ ಕೊರತೆ ಹಾಗೂ ಜಲಾಶಯಗಳಲ್ಲಿನ ನೀರಿನ ಮಟ್ಟದ ಏರಿಳಿತದ ಸಂದರ್ಭಗಳಲ್ಲಿ ವಿವಾದ ಮತ್ತೆ ತೀವ್ರಗೊಳ್ಳುತ್ತಲೇ ಬಂದಿದೆ.
2026ರ ಜುಲೈ-ಆಗಸ್ಟ್ ಅವಧಿಯಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ ಕುರಿತು ಕರ್ನಾಟಕ ಆತಂಕ ವ್ಯಕ್ತಪಡಿಸಿತ್ತು. ಇದೇ ಸಮಯದಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಮುಂದುವರಿಯುತ್ತಿರುವ ಕ್ರಮಗಳನ್ನು ತಮಿಳುನಾಡು ವಿರೋಧಿಸುತ್ತಿದೆ.
ಮೂವರ ಸಾವಿನ ಕುರಿತು ಮ್ಯಾಜಿಸ್ಟೀರಿಯಲ್ ತನಿಖೆಯ ಫಲಿತಾಂಶವೇ ಘಟನೆಯ ನಿಜಸ್ವರೂಪವನ್ನು ಸ್ಪಷ್ಟಪಡಿಸುವ ಪ್ರಮುಖ ಹಂತವಾಗಲಿದೆ. ಅರಣ್ಯ ಇಲಾಖೆ ಹೇಳಿರುವಂತೆ ನಿಜವಾಗಿಯೂ ಗುಂಡಿನ ಚಕಮಕಿ ನಡೆದಿತ್ತೆ, ಗುಂಡು ಹಾರಿಸುವ ಪರಿಸ್ಥಿತಿ ಏನಿತ್ತು, ಬಲಪ್ರಯೋಗ ಕಾನೂನುಬದ್ಧವಾಗಿತ್ತೆ ಮತ್ತು ಮೃತರ ವಿರುದ್ಧದ ಆರೋಪಗಳಿಗೆ ಸಾಕ್ಷ್ಯವೇನು ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ದೊರೆಯಬೇಕಿದೆ.
ಇದೇ ವೇಳೆ, ಮೃತರ ಕುಟುಂಬಗಳು ಎತ್ತಿರುವ ಆರೋಪಗಳನ್ನೂ ಸಮಾನವಾಗಿ ಪರಿಶೀಲಿಸುವ ಅಗತ್ಯವಿದೆ. ತನಿಖೆ ಪಾರದರ್ಶಕವಾಗಿ ನಡೆಯದಿದ್ದರೆ, ಈ ಘಟನೆ ಕಾವೇರಿ-ಮೇಕೆದಾಟು ವಿವಾದದ ಹಿನ್ನೆಲೆಯಲ್ಲಿರುವ ಕರ್ನಾಟಕ-ತಮಿಳುನಾಡು ರಾಜಕೀಯ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ಈ ಪ್ರಕರಣದಲ್ಲಿ ಒಂದು ಕಡೆ ಕರ್ನಾಟಕ ಅರಣ್ಯ ಇಲಾಖೆಯ ಬೇಟೆಗಾರರೊಂದಿಗೆ ಗುಂಡಿನ ಚಕಮಕಿ ಎಂಬ ಅಧಿಕೃತ ವಿವರಣೆಯಿದ್ದರೆ, ಮತ್ತೊಂದೆಡೆ ಮೃತರ ಕುಟುಂಬಗಳು ಅನಗತ್ಯ ಬಲಪ್ರಯೋಗ ನಡೆೆದಿದೆ ಎಂದು ಆರೋಪಿಸುತ್ತಿವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ, ಈಗ ತನಿಖೆಯ ನಿಷ್ಪಕ್ಷಪಾತತೆ ಮತ್ತು ಅದರ ವರದಿ ಎರಡೂ ರಾಜ್ಯಗಳ ಗಮನದ ಕೇಂದ್ರಬಿಂದುವಾಗಿವೆ.
