ಬೆಂಗಳೂರು,ಆ.17- ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣ ವಿಧಾನಪರಿಷತ್‌ನಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆಸಿ ಕೋಲಾಹಲ ಸೃಷ್ಟಿಯಾದ್ದರಿಂದ ಸದನವನ್ನು ಮುಂದೂಡಲಾಯಿತು.
ಸದನ ಪ್ರಾರಂಭವಾಗುತ್ತಿದ್ದಂತೆ ಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿಷಯ ಪ್ರಸ್ತಾಪಿಸಿ, ಕಾವೇರಿ ವನ್ಯಧಾಮದಲ್ಲಿ ಮೂವರು ಅಲ್ಪಸಂಖ್ಯಾತರನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಎದೆಗೆ ಗುಂಡಿಟ್ಟು ಎನ್‌ಕೌಂಟರ್ ಮಾಡಿದ್ದಾರೆ. ಇದು ಸರ್ಕಾರಿ ಪ್ರಾಯೋಜಿತ ಕಗ್ಗೊಲೆ. ಇದಕ್ಕೆ ಯಾರು ಹೊಣೆ ಎಂದು ಏರಿದ ಧ್ವನಿಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಆಗ ಸಭಾಪತಿ ಸಲೀಂ ಅವರು ಸದನದ ನಿಯಮದಂತೆ ಮೊದಲು ಪ್ರಶ್ನೋತ್ತರ ಕಲಾಪ ಮುಗಿಯಲಿ. ನೀವು ಪ್ರಸ್ತಾಪಿಸಿರುವ ವಿಷಯವನ್ನು ನಂತರ ಕೈಗೆತ್ತಿಕೊಳ್ಳಲಾಗುವುದು. ಮೊದಲು ಸದನ ನಡೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಒಪ್ಪದ ಛಲವಾದಿ ನಾರಾಯಣಸ್ವಾಮಿ, ಅಲ್ಪಸಂಖ್ಯಾತರಾಗಿದ್ದರಿಂದಲೇ ಅವರನ್ನು ಸರ್ಕಾರವೇ ಗುಂಡಿಕ್ಕಿ ಹೊಡೆದು ಕೊಲೆ ಮಾಡಿದೆ. ಪ್ರಕರಣವು ಗಂಭೀರವಾಗಿದ್ದರೂ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿ ಮುಚ್ಚು ಹಾಕುವ ಪ್ರಯತ್ನ ನಡೆದಿದೆ. ಇದೊಂದು ಅತ್ಯಂತ ಬರ್ಭರ ಕಗ್ಗೊಲೆ ಮತ್ತು ಸರ್ಕಾರವೇ ಮಾಡಿಸಿರುವ ಎನ್‌ಕೌಂಟರ್ ಎಂದು ಟೀಕಾಪ್ರಹಾರ ನಡೆಸಿದರು.
ಆಗ ಸಭಾಪತಿ ನಾಯಕ ಮತ್ತು ಸಚಿವ ಯತೀಂದ್ರ, ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿಲ್ಲ. ಇದನ್ನು ಗಂಭೀರವಾಗಿಯೇ ಪರಿಗಣಿಸಿ ಈಗಾಗಲೇ ತನಿಖೆಗೆ ಆದೇಶ ನೀಡಿದ್ದಾರೆ. ತಪ್ಪಿತಸ್ಥರು ಯಾರೇ ಇದ್ದರೂ ರಕ್ಷಣೆ ಮಾಡುವುದಿಲ್ಲ. ಕಾನೂನು ಪ್ರಕಾರ ಶಿಕ್ಷೆ ಆಗೇ ಆಗುತ್ತದೆ. ಮೊದಲು ಸದನ ನಿಯಮಗಳ ಪ್ರಕಾರ ನಡೆಯಲಿ ಎಂದು ಹೇಳಿದರು.
ಆಗಲೂ ಪ್ರತಿಪಕ್ಷದ ಸದಸ್ಯರು, ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದಕ್ಕೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿರುವುದೇ ನಿದರ್ಶನ. ಮೂವರು ಸತ್ತಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಘಟನಾ ಸ್ಥಳದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಾತು ಮುಂದುವರೆಸಿದ ಯತೀಂದ್ರ, ಸರ್ಕಾರ ಎಲ್ಲಿಯೂ ಪಲಾಯನ ಮಾಡುತ್ತಿಲ್ಲ. ಸಂಬಂಧಪಟ್ಟ ಸಚಿವರು ಸದನಕ್ಕೆ ಬಂದು ಉತ್ತರ ಕೊಡುತ್ತಾರೆ. ಅಲ್ಲಿಯ ತನಕ ಪ್ರತಿಪಕ್ಷದ ಸದಸ್ಯರು ಸಹನೆಯಿಂದ ಇರಲಿ. ಒಂದು ನೋಟಿಸ್ ಕೊಡದೆ ವಿಷಯ ಪ್ರಸ್ತಾಪಿಸುವುದು ಎಷ್ಟರ ಮಟ್ಟಿಗೆ ಸರಿ? ಸಭಾಪತಿಗಳು ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಲಿ ಎಂದು ಮನವಿ ಮಾಡಿದರು.
ಪ್ರತಿಪಕ್ಷಗಳ ಸದಸ್ಯರ ಗಲಾಟೆ ಹೆಚ್ಚಾಗುತ್ತಿದ್ದಂತೆ ಆಕ್ರೋಶಗೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಸರ್ಕಾರದ ಮೇಲೆ ಆರೋಪ ಮಾಡಲು ಯಾವ ವಿಷಯಗಳು ಇಲ್ಲ. ಸುಮನೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.
ಗೋಲಿಬಾರ್ ನಡೆದಿದೆ ಎಂದು ಹೇಳಲು ನೀವೇನು ಘಟನಾ ಸ್ಥಳಕ್ಕೆ ಹೋಗಿ ನೋಡಿದ್ದೀರಾ? ಸಾವಿನಲ್ಲೂ ರಾಜಕೀಯ ಮಾಡಲು ಹೊರಟ್ಟಿದ್ದಾರೆ. ಅಲ್ಪಸಂಖ್ಯಾತರು ಸೇರಿದಂತೆ ಪ್ರತಿಯೊಬ್ಬರನ್ನು ರಕ್ಷಣೆ ಮಾಡಲು ನಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು.
ಆಗ ಸಚಿವ ರಾಯರೆಡ್ಡಿ ಅವರು ನಿಯಮಗಳ ಪುಸ್ತಕವನ್ನು ಕೈಗೆತ್ತಿಕೊಂಡು ಪ್ರತಿಪಕ್ಷದ ಸದಸ್ಯರು, ಯಾವುದೇ ವಿಷಯವನ್ನು ಪ್ರಸ್ತಾಪ ಮಾಡುವ ಮುನ್ನ ಸಭಾಪತಿಗಳಿಗೆ ಒಂದು ನೋಟಿಸ್ ಕೊಡಬೇಕು. ಅದನ್ನು ಪರಿಶೀಲಿಸಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡುತ್ತಾರೆ. ಆದರೆ ಪ್ರತಿಪಕ್ಷದ ಸದಸ್ಯರು ನೋಟಿಸ್ ಕೊಡದೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಸರ್ಕಾರ ಎಲ್ಲಿಯೂ ಉತ್ತರ ಕೊಡುವುದಿಲ್ಲ ಎಂದು ಹೇಳುತ್ತಿಲ್ಲ. ಸಂಬಂಧಪಟ್ಟ ಸಚಿವರು ಸದನಕ್ಕೆ ಬರುತ್ತಾರೆ. ಘಟನೆಯ ಬಗ್ಗೆ ಕೂಲಂಕುಷವಾಗಿ ಉತ್ತರ ಕೊಡುತ್ತಾರೆ. ಪ್ರತಿಪಕ್ಷಗಳ ಸದಸ್ಯರ ಪ್ರತಿಯೊಂದು ಪ್ರಶ್ನೆಗೂ ಸರ್ಕಾರ ಉತ್ತರ ಕೊಡುತ್ತದೆ. ನಿಯಮಗಳನ್ನು ಗಾಳಿಗೆ ತೂರಿ ಸದನ ನಡೆಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜೆಡಿಎಸ್‌ನ ಭೋಜೇಗೌಡ, ಈಗಾಗಲೇ ಮೃತರ ಪತ್ನಿ ನೀಡಿದ ದೂರಿನ ಮೇಲೆ ಎಫ್‌ಐಆರ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಏಕೆ ಇದುವರೆಗೂ ಬಂಧಿಸಿಲ್ಲ. ತಮಿಳುನಾಡಿನಲ್ಲೂ ವಿಷಯ ಪ್ರಸ್ತಾಪವಾಗಿದೆ. ಮೂವರನ್ನು ಕೊಲೆ ಮಾಡಿರುವವರಿಗೆ ಶಿಕ್ಷೆ ಆಗಬೇಕಲ್ಲವೇ? ಕೆಲವು ಸಂದರ್ಭಗಳಲ್ಲಿ ವಿಷಯದ ಮಹತ್ವವನ್ನು ಅರಿತು ಸದನ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಈ ಹಂತದಲ್ಲಿ ಪುನಃ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಗದ್ದಲ ಮಾತಿನ ಚಕಮಕಿ ನಡೆಯಿತು. ಸರ್ಕಾರದ ಪರವಾಗಿ ಸಚಿವರಾದ ಶಿವರಾಜ್ ತಂಗಡಗಿ, ಯು.ಟಿ.ಖಾದರ್, ರಾಯರೆಡ್ಡಿ, ಯತೀಂದ್ರ ಮಾತನಾಡಿದರು. ಪ್ರತಿಪಕ್ಷಗಳ ಸಾಲಿನಿಂದ ಛಲವಾದಿ ನಾರಾಯಣಸ್ವಾಮಿ, ರವಿಕುಮಾರ್, ಭೋಜೇಗೌಡ, ಶರವಣ ಮತ್ತಿತರರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಭಾಪತಿ ಸಲೀಂ ಅವರು ಸದನ ನಡೆಯಲು ಪದೇ ಪದೇ ಮಾಡಿಕೊಂಡ ಮನವಿ ವ್ಯರ್ಥವಾಗಿದ್ದರಿಂದ ಸದನವನ್ನು ಮುಂದೂಡಿದರು.
