Monday, May 4, 2026
Homeರಾಷ್ಟ್ರೀಯಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಯಕತ್ವ ಕೊರತೆಯಿಂದ ಕಂಗೆಟ್ಟ ಕಾಂಗ್ರೆಸ್‌‍

ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಯಕತ್ವ ಕೊರತೆಯಿಂದ ಕಂಗೆಟ್ಟ ಕಾಂಗ್ರೆಸ್‌‍

Congress reels from lack of leadership in five state elections

ಬೆಂಗಳೂರು, ಮೇ 4- ಪಂಚ ರಾಜ್ಯಗಳ ಚುನಾ ವಣೆಯಲ್ಲಿ ಕೇರಳ ಹೊರತುಪಡಿಸಿ ಉಳಿದೆಲ್ಲಾ ಕಡೆ ಕಾಂಗ್ರೆಸ್‌‍ ಮಕಾಡೆ ಮಲಗಿದ್ದು, ನಾಯಕತ್ವದ ಕೊರತೆ ಮತ್ತೊಮೆ ಪಕ್ಷವನ್ನು ಕಂಗೆಡುವಂತೆ ಮಾಡಿದೆ.

ಪಂಚ ರಾಜ್ಯಗಳ ಚುನಾವಣೆ ಪೈಕಿ ರಾಹುಲ್‌ ಗಾಂಧಿ ಪಶ್ಚಿಮಬಂಗಾಳ ರಾಜ್ಯದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದರು. ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲದೇ ಸ್ವತಂತ್ರ್ಯವಾಗಿ ಕಾಂಗ್ರೆಸ್‌‍ ಕಣದಲ್ಲಿತ್ತು. ಆದರೆ ಪಶ್ಚಿಮ ಬಂಗಾಳದಲ್ಲಿ ನಿರೀಕ್ಷಿತ ಸಾಧನೆ ಮಾಡುವಲ್ಲಿ ಕಾಂಗ್ರೆಸ್‌‍ ಹಿನ್ನೆಡೆ ಅನುಭವಿಸಿದೆ.

ಇತ್ತ ಕೇರಳ, ತಮಿಳುನಾಡಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜವಾಬ್ದಾರಿ ವಹಿಸಿಕೊಂಡಿದ್ದರು. ಕೇರಳದಲ್ಲಿ ಎಲ್‌ಡಿಎಫ್‌ನ ಮೈತ್ರಿ ಕೂಟದ ಸರ್ಕಾರ ಆಡಳಿತ ವಿರೋಧಿ ಅಲೆ ಕಾಡಿದ್ದು, ಕಾಂಗ್ರೆಸ್‌‍ ನೇತೃತ್ವದ ಯುಡಿಎಫ್‌ಗೆ ರಾಜಕೀಯ ಲಾಭ ಮಾಡಿಕೊಟ್ಟಿದೆ.

ತಮಿಳುನಾಡಿನಲ್ಲಿ ಮತ್ತೆ ಅಧಿಕಾರಕ್ಕೆ ಮರಳುವ ಭಾರಿ ವಿಶ್ವಾಸದಲ್ಲಿದ್ದ ಡಿಎಂಕೆ ಮತ್ತು ಕಾಂಗ್ರೆಸ್‌‍ ಮೈತ್ರಿ ಕೂಟಕ್ಕೆ ನಟ ವಿಜಯ್‌ ಅವರ ಟಿವಿಕೆ ಪಕ್ಷ ಪೆಟ್ಟು ನೀಡಿದೆ. ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದ ಟಿವಿಕೆ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಹಳೆಯ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆಗೆ ಠಕ್ಕರ್‌ ನೀಡಿದೆ. ಅಸ್ಸಾಂನಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಮತ್ತೆ ಅಧಿಕಾರ ಹಿಡಿಯುತ್ತಿದೆ. ಫುದುಚೇರಿಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಕೂಟ ಭರ್ಜರಿ ಗೆಲುವು ಸಾಧಿಸುತ್ತಿದೆ.

ಕಾಂಗ್ರೆಸ್‌‍ನಲ್ಲಿ ಮತದಾರರನ್ನು ಸೆಳೆಯುವ ಗಟ್ಟಿ ನಾಯಕತ್ವದ ಕೊರತೆ ಕಳೆದ ದಶಕದಿಂದಲೂ ತೀವ್ರವಾಗಿ ಕಾಡಲಾರಂಭಿಸಿದೆ. ಕಳೆದ ವಿಧಾನಸಭೆಗಳ ಚುನಾವಣೆಗಳ ಪೈಕಿ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್‌‍ ಅಧಿಕಾರದಲ್ಲಿದೆ. ಜಾರ್ಖಂಡ್‌ನಲ್ಲಿ ಇಂಡಿ ಕೂಟ ಅಧಿಕಾರದಲ್ಲಿದ್ದು ಜಾರ್ಖಂಡ್‌ ಮುಕ್ತಿಮೋರ್ಚ ಮತ್ತು ಕಾಂಗ್ರೆಸ್‌‍ ಪಕ್ಷಗಳು ಆಡಳಿತದಲ್ಲಿ ಸಹಭಾಗಿಗಳಾಗಿವೆ.

ಬಿಜೆಪಿ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ್‌, ಛತ್ತೀಸ್‌‍ಘಡ, ಗೋವಾ, ಗುಜರಾತ್‌, ಹರಿಯಾಣ, ಮಧ್ಯಪ್ರದೇಶ್‌, ಮಹಾರಾಷ್ಟ್ರ, ದೆಹಲಿ, ಮಣಿಪುರ, ರಾಜಸ್ತಾನ್‌, ತ್ರಿಪುರ, ಉತ್ತರಾಖಂಡ್‌, ಉತ್ತರಪ್ರದೇಶದಲ್ಲಿ ಕೆಲವೆಡೆ ಸ್ವತಂತ್ರವಾಗಿ ಇನ್ನೂ ಕೆಲವಡೆ ಮಿತ್ರ ಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಂಡಿದೆ. ಉಳಿದಂತೆ ಪಶ್ಚಿಮಬಂಗಾಲದಲ್ಲಿ ಟಿಎಂಸಿ ಪ್ರಾಬಲ್ಯಕ್ಕೆ ಪೆಟ್ಟು ಬಿದ್ದಿದ್ದು, ಇದೇ ಮೊದಲ ಬಾರಿಗೆ ಬಿಜೆಪಿ ತನ್ನ ಕೇಸರಿ ಧ್ವಜವನ್ನು ಹಾರಿಸುತ್ತಿದೆ.

ಪ್ರಮುಖವಾದ ರಾಜ್ಯವನ್ನು ಕಳೆದುಕೊಳ್ಳುವ ಮೂಲಕ ಟಿಎಂಸಿಗಷ್ಟೇ ಅಲ್ಲ, ಇಂಡಿ ಮೈತ್ರಿಕೂಟಕ್ಕೂ ಭಾರಿ ಹಾನಿಯಾಗಿದೆ. 2011 ರಿಂದಲೂ ನಿರಂತರವಾಗಿ ಸುಮಾರು 15 ವರ್ಷ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ 4ನೇ ಅವಧಿಯಲ್ಲಿ ಎಡವಿದ್ದಾರೆ.

ತಮಿಳುನಾಡಿನಲ್ಲೂ ಕಾಂಗ್ರೆಸ್‌‍ನ ಮಿತ್ರ ಪಕ್ಷವಾದ ಡಿಎಂಕೆ ಎಡವಟ್ಟು ಮಾಡಿಕೊಂಡಿದೆ. ದಳಪತಿ ವಿಜಯ್‌ ಅವರ ಪಕ್ಷ ಟಿವಿಕೆ ಭಾರೀ ಪೈಪೋಟಿ ನೀಡಿದೆ. ಬಹಳಷ್ಟು ಕಡೆ ಸ್ಥಳೀಯ ನಾಯಕತ್ವ ಮಾತ್ರ ಕಾಂಗ್ರೆಸ್‌‍ ಮೈತ್ರಿ ಕೂಟದ ಕೈ ಹಿಡಿದಿದೆ. ಕಾಂಗ್ರೆಸ್‌‍ನ ರಾಷ್ಟ್ರೀಯ ನಾಯಕತ್ವ ಎಲ್ಲಾ ಚುನಾವಣೆಗಳಲ್ಲೂ ಸರಣಿ ಸೋಲುಗಳ ಮೂಲಕ ಮುಖ ಭಂಗ ಅನುಭವಿಸುತ್ತಿದೆ.

ರಾಹುಲ್‌ ಗಾಂಧಿ ಲೋಕಸಭಾ ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಮತ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಂತೆ ಕಾಂಗ್ರೆಸ್‌‍ಗೆ ಗಟ್ಟಿ ನಾಯಕತ್ವದ ಕೊರತೆ ಕಾಡುತ್ತಿದೆ. ಎಐಸಿಸಿ ಪ್ರಧಾನಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಮುಂಚೂಣಿಗೆ ತರಬೇಕೆಂಬ ಚರ್ಚೆಗೆ ಮತ್ತಷ್ಟು ಬಲ ಬಂದಂತಾಗಿದೆ.

RELATED ARTICLES

Latest News