ನವದೆಹಲಿ, ಜು.8- ರಾಷ್ಟ್ರ ರಾಜಧಾನಿ ದೆಹಲಿಯ ಸಾರ್ವಜನಿಕ ಸಾರಿಗೆ ಬಸ್ಗಳು ಇನ್ನು ಮುಂದೆ ಘನತ್ಯಾಜ್ಯದಿಂದ ಉತ್ಪಾದಿಸಿದ ಹೈಡ್ರೋಜನ್ ಇಂಧನ ಬಳಸಿ ಚಲಿಸಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಪ್ರಕಟಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ಆಯೋಜಿಸಿದ್ದ ಯುವ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಗರಗಳಲ್ಲಿ ಸಂಗ್ರಹವಾಗುವ ಮುನ್ಸಿಪಲ್ ಘನತ್ಯಾಜ್ಯವನ್ನು ಬಳಸಿಕೊಂಡು ಹಸಿರು ಹೈಡ್ರೋಜನ್ ಇಂಧನವನ್ನು ಉತ್ಪಾದಿಸುವ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ ಎಂದರು.
ಇದರಿಂದ ಕಸದ ವಿಲೇವಾರಿ ಸಮಸ್ಯೆಯೂ ಬಗೆಹರಿಯಲಿದ್ದು, ಇಂಧನವೂ ಸಿಗಲಿದೆ.ನಾನು ದೆಹಲಿ ಬಸ್ಗಳನ್ನು ಕಸದಿಂದ ತಯಾರಿಸಿದ ಹೈಡ್ರೋಜನ್ ಮೂಲಕ ಓಡಿಸುತ್ತೇನೆ ಎಂದಾಗ ಜನ ನನ್ನನ್ನು ನೋಡಿ ನಗುತ್ತಾರೆ, ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ. ಆದರೆ, ಕಳೆದ 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ನಾನು ಒಮ್ಮೆ ಹೇಳಿದ ಮಾತು ಜಾರಿಯಾಗದೇ ಉಳಿದ ಇತಿಹಾಸವೇ ಇಲ್ಲ. ನಾನು ಯಾವುದನ್ನೂ ಸುಮ್ಮನೆ ಹೇಳುವುದಿಲ್ಲ, ಆಳವಾಗಿ ಅಧ್ಯಯನ ಮಾಡಿ ಹೇಳುತ್ತೇನೆ ಎಂದು ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.
ಯೋಜನೆಯ ಕಾರ್ಯವಿಧಾನದ ಬಗ್ಗೆ ವಿವರಿಸಿದ ಗಡ್ಕರಿ, ದೆಹಲಿಯಲ್ಲಿ ಬೆಟ್ಟದಂತೆ ರಾಶಿ ಬಿದ್ದಿರುವ ಕಸವೇ ನಮಗೆ ಇಂಧನವಾಗಲಿದೆ. ಕಸವನ್ನು ಆರ್ಗಾನಿಕ್ ಮತ್ತು ಇನ್-ಆರ್ಗಾನಿಕ್ ಎಂದು ಪ್ರತ್ಯೇಕಿಸಿ, ಬಯೋ-ಡೈಜೆಸ್ಟರ್ ತಂತ್ರಜ್ಞಾನದ ಮೂಲಕ ಹಸಿರು ಹೈಡ್ರೋಜನ್ ಗ್ಯಾಸ್ ಉತ್ಪಾದಿಸಲಾಗುವುದು. ಇದೇ ಗ್ಯಾಸ್ ತುಂಬಿಸಿ ದೆಹಲಿಯ ಸಾರ್ವಜನಿಕ ಸಾರಿಗೆ ಬಸ್ಗಳನ್ನು ಓಡಿಸಲಾಗುವುದು. ಇದರಿಂದ ಮಾಲಿನ್ಯವೂ ಇರುವುದಿಲ್ಲ, ದೇಶದ ಹಣವೂ ಉಳಿಯುತ್ತದೆ ಎಂದರು.
