ನವದೆಹಲಿ, ಅ. 6- ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವೇಳೆ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಬಳಸುವ ಫಾರ್ಮ್ 6 ಅನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕಾನೂನುಬಾಹಿರವಾಗಿ ಮತ್ತು ಏಕಪಕ್ಷೀಯವಾಗಿ ಬದಲಾಯಿಸಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪವನ್ನು ಚುನಾವಣಾ ಆಯೋಗ ದಾರಿತಪ್ಪಿಸುವ ಹೇಳಿಕೆ ಎಂದು ಕರೆದಿದೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, ಸುಪ್ರೀಂ ಕೋರ್ಟ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಸತ್ಯಾಂಶ ಪರಿಶೀಲನೆ ನಡೆಸಿದ ಆಯೋಗವು, ಬಿಹಾರ ಮತ್ತು ಇತರ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಸರ್ವಾನುಮತದ ಅನುಮೋದನೆಯೊಂದಿಗೆ ಜಾರಿಗೆ ತರಲಾಗಿದೆ ಹಾಗೂ ಸುಪ್ರೀಂ ಕೋರ್ಟ್ ಕೂಡ ಮೇ 27ರಂದು ನೀಡಿದ ತೀರ್ಪಿನಲ್ಲಿ ಈ ಕ್ರಮವನ್ನು ಎತ್ತಿಹಿಡಿದಿದೆ ಎಂದು ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಕಳೆದ ವಾರ ಚುನಾವಣಾ ಆಯೋಗವು ಫಾರ್ಮ್ 6ಕ್ಕೆ ಲಗತ್ತಿಸಲಾದ ಹೊಸ ಆನ್‌ಲೈನ್ ಘೋಷಣೆಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ ಎಂದು ಹೇಳಿಕೊಂಡಿತ್ತು. ಆದರೆ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ಈ ವಾದವನ್ನು ತಳ್ಳಿಹಾಕಿದೆ.
“ನಾವು ಯಾವುದೇ ಮಾರ್ಪಡಿಸಿದ ಫಾರ್ಮ್ 6 ಅನ್ನು ಅನುಮೋದಿಸಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ, ನ್ಯಾಯಾಲಯದ ಮುಂದೆ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಿದಾಗ ಅದನ್ನು ಯಾರು ಮತ್ತು ಹೇಗೆ ಬದಲಾಯಿಸಿದ್ದಾರೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ” ಎಂದು ವಿಚಾರಣೆ ವೇಳೆ ಸಿಜೆಐ ಸ್ಪಷ್ಟಪಡಿಸಿದ್ದಾರೆ.
ವಿವಾದದ ಹಿನ್ನೆಲೆ
ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ನಾಗರಿಕರು ಫಾರ್ಮ್ 6 ಅನ್ನು ಬಳಸುತ್ತಾರೆ. ಆದರೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆನ್‌ಲೈನ್ ಫಾರ್ಮ್‌ಗೆ ಹೊಸ ಘೋಷಣೆಯೊಂದನ್ನು ಸೇರಿಸಲಾಗಿತ್ತು. ಇದರಡಿ ಅರ್ಜಿದಾರರು ಅಥವಾ ಅವರ ಪೋಷಕರು ಹಿಂದಿನ ಎಸ್‌ಐಆರ್ ಪಟ್ಟಿಯಲ್ಲಿ ಮ್ಯಾಪ್ ಆಗಿದ್ದಾರೆಯೇ ಎಂಬ ಮಾಹಿತಿಯನ್ನು ನೀಡುವುದು ಕಡ್ಡಾಯಗೊಳಿಸಲಾಗಿತ್ತು. ಆಯೋಗದ ಇತರ ಚುನಾವಣಾ ಆಯುಕ್ತರ ಒಪ್ಪಿಗೆಯಿಲ್ಲದೆ ಮತ್ತು ಸೂಕ್ತ ಅನುಮೋದನೆಯಿಲ್ಲದೆ ಆನ್‌ಲೈನ್ ಆವೃತ್ತಿಯನ್ನು ಬದಲಾಯಿಸಲಾಗಿದೆ ಎಂಬುದು ರಾಹುಲ್ ಗಾಂಧಿ ಮತ್ತು ಅರ್ಜಿದಾರರ ಪ್ರಮುಖ ಆರೋಪವಾಗಿದೆ.
