ನವದೆಹಲಿ, ಆ.15- ಇಂದಿನಿಂದ 15 ದಿನಗಳ ಅವಧಿಗೆ ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ (ವಿಮಾನ ಇಂಧನ) ರಫ್ತಿನ ಮೇಲಿನ ಅನಿರೀಕ್ಷಿತ ಲಾಭದ ತೆರಿಗೆಯನ್ನು ಸರ್ಕಾರ ಕಡಿತಗೊಳಿಸಿದೆ.ಡೀಸೆಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ ದರವು ಈಗ ಪ್ರತಿ ಲೀಟರ್‌ಗೆ 24 ರೂ.ಗೆ ಇಳಿಕೆಯಾಗಿದೆ. ಇದು ಹಿಂದೆ ಪ್ರತಿ ಲೀಟರ್‌ಗೆ 25.5 ರೂ. ಇತ್ತು. ಎಟಿಎಫ್ ರಫ್ತಿನ ಮೇಲಿನ ದರವನ್ನು ಪ್ರತಿ ಲೀಟರ್‌ಗೆ 19.5 ರೂ.ಗೆ ನಿಗದಿಪಡಿಸಲಾಗಿದೆ. ಈ ಹಿಂದೆ ಇದು ಪ್ರತಿ ಲೀಟರ್‌ಗೆ 22 ರೂ. ಇತ್ತು.
ಆಗಸ್ಟ್ 3ರಂದು ಪ್ರತಿ ಲೀಟರ್‌ಗೆ 3.5 ರೂ. ಇದ್ದ ಪೆಟ್ರೋಲ್ ರಫ್ತು ಸುಂಕವನ್ನು ಆ.15ರಿಂದ ಅನ್ವಯವಾಗುವಂತೆ ಶೂನ್ಯಕ್ಕೆ ಇಳಿಸಲಾಗಿದೆ.ಸುಂಕದ ಬದಲಾವಣೆಗಳು ಆಗಸ್ಟ್ 15ರಿಂದ ಜಾರಿಗೆ ಬರಲಿವೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆಯ ನಡುವೆ, ಸರ್ಕಾರವು ಮಾರ್ಚ್ 27ರಂದು ಡೀಸೆಲ್ ಮತ್ತು ಎಟಿಎಫ್ ರಫ್ತಿನ ಮೇಲೆ ಸುಂಕ ವಿಧಿಸಿತ್ತು. ಪ್ರತಿ 15 ದಿನಗಳಿಗೊಮ್ಮೆ ದರವನ್ನು ಪರಿಷ್ಕರಿಸಲಾಗುತ್ತಿತ್ತು. ಮೇ 16ರಿಂದ ಪೆಟ್ರೋಲ್ ರಫ್ತಿನ ಮೇಲೂ ಈ ಸುಂಕವನ್ನು ವಿಧಿಸಲಾಯಿತು.
ದೇಶೀಯ ಬಳಕೆಗೆ ಬಿಡುಗಡೆಯಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಸ್ತಿತ್ವದಲ್ಲಿರುವ ಸುಂಕದ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವಾಲಯ ತಿಳಿಸಿದೆ.ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ದೇಶೀಯವಾಗಿ ಇಂಧನದ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಅನಿರೀಕ್ಷಿತ ಲಾಭದ ತೆರಿಗೆಯನ್ನು ವಿಧಿಸಲಾಗಿತ್ತು.
ಯುದ್ಧದ ಆರಂಭದಿಂದಲೂ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿದ್ದರಿಂದ, ಬೆಲೆ ವ್ಯತ್ಯಾಸಗಳಿಂದ ರಫ್ತುದಾರರು ಅತಿಯಾದ ಲಾಭ ಪಡೆಯುವುದನ್ನು ತಡೆಯುವ ಗುರಿಯನ್ನೂ ಈ ತೆರಿಗೆ ಹೊಂದಿತ್ತು.ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಸಂದರ್ಭದಲ್ಲಿ ರಫ್ತನ್ನು ತಗ್ಗಿಸುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ದೇಶೀಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಈ ತೆರಿಗೆಯ ಉದ್ದೇಶವಾಗಿತ್ತು.
