ನವದೆಹಲಿ, ಅ.31- ಭಾರತದ ಸ್ವದೇಶಿ ಉಪಗ್ರಹ ಸಂಚರಣೆ ವ್ಯವಸ್ಥೆ ನಾವಿಕ್ ಅನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವದ ಸಾಧನೆ ಮಾಡಿದೆ.
NVS-03 ಉಪಗ್ರಹವನ್ನು ಹೊತ್ತ GSLV-F18 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿ, ನಿಗದಿತ ಕಕ್ಷೆಗೆ ಸೇರಿಸಲಾಗಿದ್ದು, ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳನ್ನು ಅಭಿನಂದಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, NVS-03 ಉಡಾವಣೆಯು ಭಾರತದ ಸ್ವದೇಶಿ ಸಂಚರಣೆ ವ್ಯವಸ್ಥೆಯ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. ಸುಧಾರಿತ ಸಾಮರ್ಥ್ಯಗಳನ್ನು ಹೊಂದಿರುವ ಈ ಉಪಗ್ರಹವು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಭಾರತದ ಸ್ವಾವಲಂಬನೆಯ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಲಿದೆ. ಜತೆಗೆ ದೇಶದ ಜನರಿಗೆ ಅನುಕೂಲವಾಗುವ ಸಂಚರಣೆ ಸೇವೆಗಳನ್ನು ಒದಗಿಸಲು ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಭಾರತದ ಬಾಹ್ಯಾಕಾಶ ವಿಜ್ಞಾನಿಗಳ ಸಮರ್ಪಣೆ, ತಾಂತ್ರಿಕ ಜಾಣ್ಮೆ ಮತ್ತು ಪರಿಶ್ರಮ ದೇಶಕ್ಕೆ ಹೆಮ್ಮೆ ತರುತ್ತಿದೆ ಎಂದು ಮೋದಿ ಪ್ರಶಂಸಿಸಿದ್ದಾರೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಕೂಡ ಇಸ್ರೋ ತಂಡವನ್ನು ಅಭಿನಂದಿಸಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ ವಿಸ್ತರಿಸಲು ಪ್ರಧಾನಿ ಮೋದಿ ಕೈಗೊಂಡ ಸುಧಾರಣೆಗಳು ನೆರವಾಗಿವೆ ಎಂದು ಹೇಳಿದ್ದಾರೆ.
ನಾವಿಕ್ ವ್ಯವಸ್ಥೆಗೆ ಹೊಸ ಬಲ:
NVS-03 ಉಪಗ್ರಹದ ಯಶಸ್ವಿ ಸೇರ್ಪಡೆಯಿಂದ ಭಾರತದ ಪ್ರಾದೇಶಿಕ ಉಪಗ್ರಹ ಸಂಚರಣೆ ವ್ಯವಸ್ಥೆಯಾದ ನಾವಿಕ್ ತನ್ನ ಕನಿಷ್ಠ ನಾಲ್ಕು ಉಪಗ್ರಹಗಳ ಕಾರ್ಯಾಚರಣಾ ಸಾಮರ್ಥ್ಯವನ್ನು ಮರಳಿ ಪಡೆಯಲು ನೆರವಾಗಿದೆ. ಈ ಹಿಂದೆ NVS-01 ಸೇರಿದಂತೆ ಮೂರು ಉಪಗ್ರಹಗಳು ಕಾರ್ಯನಿರ್ವಹಿಸುತ್ತಿದ್ದವು. ಇದೀಗ NVS-03 ಸೇರ್ಪಡೆಯಿಂದ ಸ್ಥಾನ, ಸಂಚರಣೆ ಮತ್ತು ಸಮಯ (PNT) ಸೇವೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.
ನಾವಿಕ್ ವ್ಯವಸ್ಥೆಯು ಭಾರತದ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ರಾಷ್ಟ್ರೀಯ ಆಸ್ತಿಯಾಗಿದೆ. ವಿದೇಶಿ ಉಪಗ್ರಹ ಸಂಚರಣೆ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ದೇಶಕ್ಕೆ ಸ್ವತಂತ್ರವಾಗಿ ನಿಖರವಾದ ಸ್ಥಳ, ದಿಕ್ಕು ಮತ್ತು ಸಮಯದ ಮಾಹಿತಿ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
