ಬೆಂಗಳೂರು, ಅ. 31- ನಾಳೆಯಿಂದ ಕೇವಲ ಹಾಲಿನ ದರ ಹೆಚ್ಚಳವಾಗುವುದಿಲ್ಲ ಇದರ ಜೊತೆಗೆ ಮೊಸರಿನ ಬೆಲೆಯೋ ಬರೊಬ್ಬರಿ 14 ರೂ. ಏರಿಕೆಯಾಗಲಿದೆ.ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನವೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಎಲ್ಲಾ ಬ್ರ್ಯಾಂಡ್ಗಳ ಹಾಲಿನ ದರವನ್ನು ಏಕರೂಪದಲ್ಲಿ ಹೆಚ್ಚಿಸಲಾಗುತ್ತಿದೆ. ಇದರೊಂದಿಗೆ ನಿತ್ಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸುವ ಕುಟುಂಬಗಳ ಮಾಸಿಕ ವೆಚ್ಚವೂ ಹೆಚ್ಚಾಗಲಿದೆ.
ಹಾಲಿಗಿಂತಲೂ ಮೊಸರಿನ ದರ ಏರಿಕೆ ಗ್ರಾಹಕರಿಗೆ ದೊಡ್ಡ ಆಘಾತ ನೀಡಿದೆ. ಸದ್ಯ ಕೆ.ಜಿ. ಮೊಸರಿಗೆ 54 ರೂಪಾಯಿ ಇದ್ದ ದರವನ್ನು ನಾಳೆಯಿಂದ 68 ರೂಪಾಯಿಗೆ ಹೆಚ್ಚಿಸಲಾಗುತ್ತಿದೆ. ಅಂದರೆ, ಪ್ರತಿ ಕೆ.ಜಿ. ಮೊಸರಿಗೆ ಬರೋಬ್ಬರಿ 14 ರೂಪಾಯಿ ಹೆಚ್ಚುವರಿ ಪಾವತಿಸಬೇಕಾಗುತ್ತದೆ.
ಅದೇ ರೀತಿ, ಅರ್ಧ ಲೀಟರ್ ಮೊಸರಿನ ಬೆಲೆಯೂ 28 ರೂಪಾಯಿಯಿಂದ 34 ರೂಪಾಯಿಗೆ ಏರಿಕೆಯಾಗಲಿದೆ. ಇದರಿಂದ ಅರ್ಧ ಲೀಟರ್ ಮೊಸರು ಖರೀದಿಸುವ ಗ್ರಾಹಕರು ಹೆಚ್ಚುವರಿಯಾಗಿ 6 ರೂಪಾಯಿ ಪಾವತಿಸಬೇಕಾಗುತ್ತದೆ.ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಹಾಲು ಮತ್ತು ಮೊಸರಿನ ದರ ಹೆಚ್ಚಳ ಮತ್ತಷ್ಟು ಹೊರೆಯಾಗಲಿದೆ.
ವಿಶೇಷವಾಗಿ ಮಕ್ಕಳಿರುವ ಕುಟುಂಬಗಳು, ಹೋಟೆಲ್ಗಳು, ಟೀ ಮತ್ತು ಕಾಫಿ ಅಂಗಡಿಗಳು ಹಾಗೂ ಹಾಲಿನ ಉತ್ಪನ್ನಗಳನ್ನು ಅವಲಂಬಿಸಿರುವ ಸಣ್ಣ ವ್ಯಾಪಾರಿಗಳಿಗೆ ಬೆಲೆ ಏರಿಕೆಯ ಪರಿಣಾಮ ಎದುರಾಗುವ ಸಾಧ್ಯತೆ ಇದೆ.ಒಟ್ಟಿನಲ್ಲಿ, ನವೆಂಬರ್ 1ರಿಂದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರು ಹೆಚ್ಚಿನ ಹಣ ತೆರಬೇಕಾಗಲಿದ್ದು, ಕೆಎಂಎಫ್ನ ದರ ಪರಿಷ್ಕರಣೆ ಜನಸಾಮಾನ್ಯರ ನಿತ್ಯದ ಖರ್ಚಿನ ಮೇಲೆ ಪರಿಣಾಮ ಬೀರಲಿದೆ.
