Homeರಾಜ್ಯನಾಳೆಯಿಂದ ಪರಿಷ್ಕೃತ ಹಾಲಿನ ದರ ಜಾರಿ, ಪ್ರತಿ ಲೀಟರ್‌ಗೆ 8 ರೂ ಹೆಚ್ಚಳ

ನಾಳೆಯಿಂದ ಪರಿಷ್ಕೃತ ಹಾಲಿನ ದರ ಜಾರಿ, ಪ್ರತಿ ಲೀಟರ್‌ಗೆ 8 ರೂ ಹೆಚ್ಚಳ

ಬೆಂಗಳೂರು, ಅ.31- ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್‌) ನಂದಿನಿ ಹಾಲು ಮತ್ತು ಮೊಸರಿನ ಗರಿಷ್ಠ ಮಾರಾಟ ದರವನ್ನು ಪರಿಷ್ಕರಿಸಿದ್ದು, ನಾಳೆಯಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.ಹಾಲು ಉತ್ಪಾದಕ ರೈತರ ಹಿತದೃಷ್ಟಿಯಿಂದ ಪ್ರತಿ ಲೀಟರ್‌ ಹಾಲಿನ ಮಾರಾಟ ದರದಲ್ಲಿ 8 ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಈ ಹೆಚ್ಚುವರಿ ಮೊತ್ತದಲ್ಲಿ ಪ್ರತಿ ಲೀಟರ್‌ಗೆ 7 ರೂಪಾಯಿಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲು ಸೂಚಿಸಲಾಗಿದೆ. 1 ರೂಪಾಯಿಯನ್ನು ಹಾಲು ಮಂಡಳಿಗೆ ನೀಡಲು ನಿರ್ಧರಿಸಲಾಗಿದೆ.

2026ರ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ನೀರು ಮತ್ತು ಮೇವಿನ ಕೊರತೆ ಉಂಟಾಗಿದೆ. ಇದರಿಂದ ಬರ ಪರಿಸ್ಥಿತಿ ಎದುರಾಗಿದ್ದು, ಹೈನುಗಾರಿಕೆ ಮುಂದುವರಿಸುವುದು ರೈತರಿಗೆ ಕಷ್ಟಕರವಾಗಿದೆ.

ಜಾನುವಾರುಗಳ ನಿರ್ವಹಣೆ, ಔಷಧೋಪಚಾರ ಮತ್ತು ಮೇವು ಪೂರೈಕೆಯ ವೆಚ್ಚ ಹೆಚ್ಚಾಗಿರುವುದರಿಂದ ಹಾಲು ಖರೀದಿ ದರವನ್ನು ಪ್ರತಿ ಲೀಟರ್‌ಗೆ ಕನಿಷ್ಠ 10ರಿಂದ 12 ರೂಪಾಯಿವರೆಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.ಈ ಹಿನ್ನೆಲೆಯಲ್ಲಿ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ರೈತರ ಹಿತಾಸಕ್ತಿಯನ್ನು ಪರಿಗಣಿಸಿ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್‌ ತಿಳಿಸಿದೆ.

ಪರಿಷ್ಕೃತ ದರದ ಪ್ರಕಾರ, ಟೋನ್‌್ಡ ಹಾಲಿನ ಗರಿಷ್ಠ ಮಾರಾಟ ದರ 46ರಿಂದ 54 ರೂಪಾಯಿಗೆ, ಹೋಮೋಜಿನೈಸ್ಡ್‌ ಟೋನ್‌್ಡ ಹಾಲಿನ ದರ 47ರಿಂದ 56 ರೂಪಾಯಿಗೆ, ಹೋಮೋಜಿನೈಸ್ಡ್‌ ಹಸುವಿನ ಹಾಲಿನ ದರ 50ರಿಂದ 58 ರೂಪಾಯಿಗೆ ಏರಿಕೆಯಾಗಲಿದೆ.ವಿಶೇಷ ಟೋನ್‌್ಡ ಹಾಲು ಮತ್ತು ಶುಭಂ ಹಾಲಿನ ದರ ತಲಾ 52ರಿಂದ 64 ರೂಪಾಯಿಗೆ ಹೆಚ್ಚಳವಾಗಲಿದೆ. ಹೋಮೋಜಿನೈಸ್ಡ್‌ ಶುಭಂ ಹಾಲಿನ ದರ 53ರಿಂದ 65 ರೂಪಾಯಿಗೆ ಏರಿಕೆಯಾಗಲಿದೆ.

ಮೊಸರಿನ ದರದಲ್ಲಿಯೂ ಪರಿಷ್ಕರಣೆ ಮಾಡಲಾಗಿದ್ದು, 500 ಗ್ರಾಂ ಮೊಸರಿನ ಪೊಟ್ಟಣದ ದರ 28ರಿಂದ 34 ರೂಪಾಯಿಗೆ ಹಾಗೂ ಒಂದು ಕೆ.ಜಿ. ಮೊಸರಿನ ಪೊಟ್ಟಣದ ದರ 54ರಿಂದ 68 ರೂಪಾಯಿಗೆ ಹೆಚ್ಚಳವಾಗಲಿದೆ. ಹಾಲು ಉತ್ಪಾದಕರಿಗೆ ನ್ಯಾಯಯುತ ದರ ಒದಗಿಸುವುದರ ಜತೆಗೆ ಹೈನುಗಾರಿಕೆಯನ್ನು ಲಾಭದಾಯಕವಾಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಂಎಫ್‌ ತಿಳಿಸಿದೆ. ರೈತರ ಅಭಿವೃದ್ಧಿಗೆ ಗ್ರಾಹಕರು ನಂದಿನಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದೆ.

RELATED ARTICLES

Latest News