ಅಹಮದಾಬಾದ್,ಅ.31- ಗಿರ್ ಸೋಮನಾಥ ಜಿಲ್ಲೆಯ ಪ್ರಸಿದ್ಧ ಸೋಮನಾಥ ಮಹಾದೇವ ದೇವಾಲಯದ ಸುತ್ತಮುತ್ತ ಮಾಂಸಾಹಾರ ಆಹಾರ ಮಾರಾಟ ಮತ್ತು ತಯಾರಿಕೆಯ ಮೇಲಿದ್ದ ನಿಷೇಧವನ್ನು ಗುಜರಾತ್ ಹೈಕೋರ್ಟ್‌ನ ವಿಭಾಗೀಯ ಪೀಠವು ಪುನಃಸ್ಥಾಪಿಸಿದೆ. ಏಕಸದಸ್ಯ ಪೀಠದ ನ್ಯಾಯಾಧೀಶರು ನೀಡಿದ್ದ ನಿಷೇಧ ರದ್ಧತಿ ಆದೇಶದ ಮೂಲಕ, ನಿರ್ಬಂಧಗಳನ್ನು ಕೆಲವೇ ಗಂಟೆಗಳಲ್ಲಿ ಮತ್ತೆ ಜಾರಿಗೆ ತರಲಾಗಿದೆ.
ಗಿರ್ ಸೋಮನಾಥ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಸೋಮನಾಥ ದೇವಾಲಯದ 500 ಮೀಟರ್ ವ್ಯಾಪ್ತಿಯಲ್ಲಿ ಹಾಗೂ ಭಾಲ್ಕಾ ತೀರ್ಥ, ಗೀತಾ ಮಂದಿರ ಸೇರಿದಂತೆ ಪ್ರಮುಖ ಯಾತ್ರಾ ಮಾರ್ಗಗಳಲ್ಲಿ ಮಾಂಸಾಹಾರ ಆಹಾರವನ್ನು ತಯಾರಿಸುವುದು, ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.
ಈ ಅಧಿಸೂಚನೆಯನ್ನು ಪ್ರಶ್ನಿಸಿ ಸ್ಥಳೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿಶಾ ಎಂ. ಠಾಕೋರ್ ಅವರಿದ್ದ ಏಕಸದಸ್ಯ ನಿನ್ನೆ ಮಧ್ಯಾಹ್ನ ಆದೇಶವನ್ನು ರದ್ದುಗೊಳಿಸಿ ಆದೇಶಿಸಿತ್ತು. ಈ ತೀರ್ಪಿಗೆ ತಡೆ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಯನ್ನೂ ನ್ಯಾಯಾಧೀಶರು ತಿರಸ್ಕರಿಸಿದ್ದರು.
ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ತಕ್ಷಣವೇ ಮೇಲನವಿ ಸಲ್ಲಿಸಿತು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮನಶ್ ರಂಜನ್ ಪಾಠಕ್ ಮತ್ತು ನ್ಯಾಯಮೂರ್ತಿ ನಿರ್ಜರ್ ದೇಸಾಯಿ ಅವರಿದ್ದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ, ಮುಂದಿನ ವಿಚಾರಣೆಯವರೆಗೆ ಮಾಂಸಾಹಾರ ನಿಷೇಧ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಸ್ಪಷ್ಟಪಡಿಸಿತು.
ಅಧಿಸೂಚನೆಯಿಂದಾಗಿ ತಮ ವ್ಯಾಪಾರ ಮಾಡುವ ಮತ್ತು ಜೀವನೋಪಾಯ ಕಂಡುಕೊಳ್ಳುವ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.ಯಾವುದೇ ಸ್ಥಳದಲ್ಲಿ ಪ್ರತಿಯೊಂದು ವಾಣಿಜ್ಯ ಚಟುವಟಿಕೆಯನ್ನು ನಡೆಸಲು ಅನಿಯಂತ್ರಿತ ಹಕ್ಕಿರುವುದಿಲ್ಲ. ಸೋಮನಾಥ ದೇವಾಲಯವು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾಗಿದ್ದು, ಅತ್ಯಂತ ಪವಿತ್ರ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.
ಲಕ್ಷಾಂತರ ಯಾತ್ರಾರ್ಥಿಗಳು ಸಂಚರಿಸುವ ಈ ಪ್ರದೇಶದ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳಲು ಈ ನಿರ್ಬಂಧ ಅಗತ್ಯ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿತು.ವಿಭಾಗೀಯ ಪೀಠದ ಈ ತುರ್ತು ಆದೇಶದಿಂದಾಗಿ ಸೋಮನಾಥ ದೇವಾಲಯದ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಮಾರಾಟದ ಮೇಲಿನ ನಿಷೇಧವು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
