Homeರಾಜ್ಯಬೆಂಗಳೂರು : ಹೋಟೆಲ್‌ ಈಜು ಕೊಳದಲ್ಲಿ ವಿದ್ಯುತ್‌ ಸ್ಪರ್ಶಿಸಿ ಇಬ್ಬರು ವಿದೇಶಿಗರ ಸಾವು

ಬೆಂಗಳೂರು : ಹೋಟೆಲ್‌ ಈಜು ಕೊಳದಲ್ಲಿ ವಿದ್ಯುತ್‌ ಸ್ಪರ್ಶಿಸಿ ಇಬ್ಬರು ವಿದೇಶಿಗರ ಸಾವು

ಬೆಂಗಳೂರು,ಅ.31-ಪ್ರವಾಸಕ್ಕೆ ಬಂದು ಹೋಟೇಲ್‌ವೊಂದರಲ್ಲಿ ಉಳಿದುಕೊಂಡಿದ್ದ ಇಬ್ಬರು ಪ್ರವಾಸಿಗರು ಈಜುಕೊಳದಲ್ಲಿ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಹಲಸೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೃತಪಟ್ಟವರನ್ನು ಜರ್ಮನ್‌ ದೇಶದ ಅಲೆಕ್ಸಾಂಡರ್‌ (57) ಮತ್ತು ಸ್ಲೋವೇಕಿಯಾ ಪ್ರಜೆ ಜೂರಾಜ್‌ ಹಾರ್ವೆಟ್‌(45) ಎಂದು ಗುರುತಿಸಲಾಗಿದೆ.

ಪ್ರವಾಸದ ನಿಮಿತ್ತ ಭಾರತಕ್ಕೆ ಬಂದಿದ್ದ ಕೆಲ ವಿದೇಶಿ ಪ್ರಜೆಗಳು ಬೆಂಗಳೂರಿಗೆ ಆಗಮಿಸಿದ್ದು, ಹಲಸೂರಿನ ಗುರುದ್ವಾರ ಪಕ್ಕದಲ್ಲಿರುವ ಪ್ರತಿಷ್ಠಿತ ಕಾನ್ರಾಡ್‌ ಫೈವ್‌ಸ್ಟಾರ್‌ ಹೋಟೇಲ್‌ನಲ್ಲಿ ಉಳಿದುಕೊಂಡಿದ್ದಾರೆ. ನಿನ್ನೆ ಸಂಜೆ ಈ ಇಬ್ಬರು ವಿದೇಶಿಗರು ಹೋಟೇಲ್‌ನ 3ನೇ ಮಹಡಿಯಲ್ಲಿರುವ ಈಜುಕೊಳದಲ್ಲಿ ಈಜುತ್ತಿದ್ದಾಗ ಆಕಸಿಕವಾಗಿ ವಿದ್ಯುತ್‌ ಪ್ರವಹಿಸಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.

ತಕ್ಷಣ ಈ ಇಬ್ಬರನ್ನು ರಕ್ಷಿಸಲು ಹೋಟೇಲ್‌ ಸಿಬ್ಬಂದಿ ಹಾಗೂ ಅಲ್ಲಿ ಉಳಿದುಕೊಂಡಿದ್ದ ವಿದೇಶಿ ಪ್ರಜೆಯೊಬ್ಬರು ಮುಂದಾದರಾದರೂ ಅವರಿಗೂ ವಿದ್ಯುತ್‌ ತಗುಲಿದ್ದರಿಂದ ರಕ್ಷಿಸಲು ಸಾಧ್ಯವಾಗದೇ ಅವರಿಬ್ಬರೂ ಮೃತಪಟ್ಟಿದ್ದಾರೆ. ಈ ವೇಳೆ ಗಾಯಗೊಂಡಿರುವ ಅಮೇರಿಕ ಪ್ರಜೆ ಮ್ಯಾಥ್ಯೂ (41) ಮತ್ತು ಹೋಟೆಲ್‌ನ ಲೈಫ್‌ಗಾರ್ಡ್‌ ರಾಹುಲ್‌ (28) ಅವರನ್ನು ತಕ್ಷಣ ಮಣಿಪಾಲ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಹಲಸೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ರವಾನಿಸಿದ್ದಾರೆ.ಹೋಟೇಲ್‌ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ನಿಖರ ಕಾರಣವೇನು, ಶಾರ್ಟ್‌ಸರ್ಕ್ಯೂಟ್‌ ಹೇಗೆ ಸಂಭವಿಸಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

RELATED ARTICLES

Latest News