ಬೆಂಗಳೂರು, ಅ.31-ನವರಾತ್ರಿ ಉತ್ಸವದ ಆಚರಣೆ ನಂತರ ಅಲ್ಪ ಚೇತರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ಕುಸಿತದ ಹಾದಿ ಹಿಡಿದಿದೆ. ದಸರಾ-ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕುಸಿತವಾದಂತೆ ದೀಪಾವಳಿಗೂ ಮುನ್ನ ಚಿನ್ನ -ಬೆಳ್ಳಿ ದರಗಳು ಇಳಿಮುಖವಾಗುತ್ತಿವೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಭರಣ ಖರೀದಿಸುವುದು ತುಸು ಹೆಚ್ಚಾಗಿರುತ್ತದೆ. ವರ ಮಹಾಲಕ್ಷ್ಮೀ ಹಬ್ಬದಂತೆ ದೀಪಾವಳಿಯ ಸಂದರ್ಭದಲ್ಲೂ ಚಿನ್ನ-ಬೆಳ್ಳಿ ಖರೀದಿ ಹೆಚ್ಚಿರುತ್ತದೆ. ದರ ಕುಸಿತವು ಆಭರಣ ಪ್ರಿಯರಿಗೆ ಖುಷಿಯಾಗಿದ್ದರೆ, ವರ್ತಕರನ್ನು ಚಿಂತೆಗೀಡು ಮಾಡಿದೆ.
ಚಿನಿವಾರಪೇಟೆಯಲ್ಲಿ ಪದೇ ಪದೇ ಏರಿಳಿತಕ್ಕೆ ಒಳಗಾಗಿ ಗೊಂದಲವನ್ನುಂಟು ಮಾಡುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರಗಳ ಮತ್ತೆ ಕುಸಿತ ಹಾದಿ ಹಿಡಿದಿರುವುದು ತಲ್ಲಣವನ್ನುಂಟು ಮಾಡಿದೆ.
ಕಳೆದ ಎರಡು ದಿನಗಳಲ್ಲಿ ಒಂದು ಗ್ರಾಂ ಶುದ್ಧ ಚಿನ್ನ 500 ರೂ. ಹೆಚ್ಚು ಕುಸಿತವಾಗಿದೆ. ಒಂದು ತಿಂಗಳಲ್ಲಿ ಒಂದು ಸಾವಿರ ರೂ.ನಷ್ಟು ಇಳಿಕೆಯಾಗಿದೆ. ಕಳೆ ಆರೇಳು ತಿಂಗಳಲ್ಲೇ ಅತ್ಯಂತ ಕನಿಷ್ಠ ದರಕ್ಕೆ ಚಿನ್ನ ಕುಸಿದೆ.
ಚಿನ್ನದಂತೆ ಬೆಳ್ಳಿ ದರವು ಕುಸಿತದ ಹಾದಿಯಲ್ಲೇ ಸಾಗುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಒಂದು ಕೆ.ಜಿ.ಗೆ 20 ಸಾವಿರ ರೂ. ಕಡಿಮೆಯಾಗಿದೆ. ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಈ ತಿಂಗಳ ಆರಂಭದಿಂದಲೂ ಚಿನ್ನದ ದರ ಕುಸಿತ ಹಾದಿಯಲ್ಲೇ ಇತ್ತು. ಅ.24ರಿಂದ ಅ.28ರ ವರೆಗೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿ ಚೇತರಿಕೆ ಕಾಣುವ ಮುನ್ಸೂಚನೆ ನೀಡಲಾಗಿತ್ತು. ಆದರೆ, ಅ.29ರಂದು ಸ್ಥಿರವಾಗಿದ್ದ ಚಿನ್ನದ ದರವು ನಿನ್ನೆಯಿಂದ ಇಳಿಕೆಯಾಗುತ್ತಿದೆ.
ಇಂದು ಬೆಳಿಗ್ಗೆ 24 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 338 ರೂ.ಕಡಿಮೆಯಾಗಿದ್ದು, 13,888 ರೂ. ನಷ್ಟಿದೆ. ಇದು ಕಳೆದ ಆರು ತಿಂಗಳಲ್ಲೇ ಅತಿ ಕಡಿಮೆ ದರವಾಗಿದೆ. ಒಂದು ಗ್ರಾಂಗೆ 16 ಸಾವಿರದ ಆಸುಪಾಸಿನಲ್ಲಿತ್ತು.
22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 310 ರೂ.ಕಡಿಮೆಯಾಗಿ 12,730 ರೂ.ನಷ್ಟಿದೆ. 18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 253 ರೂ. ಇಳಿಕೆಯಾಗಿದ್ದು, 10,416ರೂ. ನಷ್ಟಿದೆ. ಪ್ಲಾಟಿನಮ್ ಆಭರಣಗಳ ದರದಲ್ಲೂ ಸತತ ಕುಸಿತವಾಗಿದ್ದು, 10 ಗ್ರಾಂಗೆ 730 ರೂ. ಕಡಿಮೆಯಾಗಿದೆ. ಪ್ರಸ್ತುತ 10 ಗ್ರಾಂಗೆ 43,610 ರೂ.ನಷ್ಟಿದೆ.
ಚೇತರಿಕೆಯನ್ನೇ ಕಾಣದ ಬೆಳ್ಳಿಯು ಕುಸಿತವಾಗುತ್ತಿದೆ. ಅ.22 ರಿಂದ ಎರಡು ದಿನಗಳ ಕಾಲ ಸತತ ಕುಸಿತ ಕಂಡಿದ್ದ ಬೆಳ್ಳಿಯು ಐದು ದಿನಗಳ ಕಾಲ ಸ್ಥಿರವಾಗಿತ್ತು. ಮತ್ತೆ ಮೂರು ದಿನಗಳಿಂದಲೂ ಕುಸಿತವಾಗುತ್ತಿದೆ. ಇಂದು ಒಂದು ಕೆ.ಜಿ. ಬೆಳ್ಳಿಯು 10 ಸಾವಿರ ರೂ.ನಷ್ಟು ಕಡಿಮೆಯಾಗಿದ್ದು,2.10 ಲಕ್ಷ ರೂ. ನಿಂದ 2 ಲಕ್ಷರೂ.ಗೆ ಇಳಿದೆ. ಅ.28ರಂದು ಒಂದು ಕೆ.ಜಿ. ಬೆಳ್ಳಿ 2.20 ಲಕ್ಷ ರೂ.ನಷ್ಟಿತ್ತು.
