Homeರಾಷ್ಟ್ರೀಯಭಾರತದ ಅಭಿವೃದ್ಧಿ ವಿಶ್ವ ಶಾಂತಿ ಸಮೃದ್ಧಿಯ ಸಂಕೇತ : ಮೋಹನ್‌ ಭಾಗವತ್‌

ಭಾರತದ ಅಭಿವೃದ್ಧಿ ವಿಶ್ವ ಶಾಂತಿ ಸಮೃದ್ಧಿಯ ಸಂಕೇತ : ಮೋಹನ್‌ ಭಾಗವತ್‌

India's development is a symbol of world peace and prosperity: Mohan Bhagwat

ನವದೆಹಲಿ,ಜೂ.16- ಭಾರತವು ವಿಶ್ವಗುರುವಾಗಿ ಹೊರಹೊಮುವಾಗ ತನ್ನ ನಾಗರಿಕತೆಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ವಿಶ್ವಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ನೀಡುವ ದಿಕ್ಕಿನಲ್ಲಿ ಸಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌‍ಎಸ್‌‍) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ದೆಹಲಿ ನಗರದಲ್ಲಿ ಹೀರೋ ಎಂಟರ್‌ಪ್ರೈಸ್‌‍ ಆಯೋಜಿಸಿದ್ದ 18ನೇ ಬಿಎಂಎಲ್‌ ಮುಂಜಾಲ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಶ್ರಮದ ಘನತೆ, ಸಂಪತ್ತಿನ ಸಮಾನ ಹಂಚಿಕೆ, ನೈತಿಕ ಸಂಪತ್ತಿನ ಸೃಷ್ಟಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರದ ಮಹತ್ವವನ್ನು ಒತ್ತಿಹೇಳಿದರು.

ಭಾರತವು ಕೇವಲ ಭೌಗೋಳಿಕ ಪ್ರದೇಶದ ಹೆಸರಲ್ಲ. ಇದು ಸಾವಿರಾರು ವರ್ಷಗಳ ನಾಗರಿಕತೆಯ ಅಸ್ತಿತ್ವವಾಗಿದೆ. ಅನೇಕ ಆಕ್ರಮಣಗಳು, ವಿದೇಶಿ ಆಳ್ವಿಕೆ ಹಾಗೂ ಐತಿಹಾಸಿಕ ಸವಾಲುಗಳನ್ನು ಎದುರಿಸಿ ಉಳಿದುಕೊಂಡಿರುವ ಶಾಶ್ವತ ಸಂಸ್ಕೃತಿ ಭಾರತದ್ದಾಗಿದೆ ಎಂದು ಅವರು ಹೇಳಿದರು.

ಗಂಗಾನದಿಯನ್ನು ಉದಾಹರಿಸಿ ಮಾತನಾಡಿದ ಭಾಗವತ್‌ ಗಂಗೆ ಸಾವಿರಾರು ವರ್ಷಗಳಿಂದ ಹರಿಯುತ್ತಿದೆ. ಅದು ಪುರಾತನವಾದರೂ ಅದರ ನೀರು ಸದಾ ಹೊಸದಾಗಿರುತ್ತದೆ. ಭಾರತವೂ ಶಾಶ್ವತ ಮತ್ತು ಸದಾ ನವೀಕೃತವಾಗಿರುವ ನಾಗರಿಕತೆ ಎಂದರು.ಭಾರತದ ಬೆಳವಣಿಗೆಯಿಂದ ಕೇವಲ ದೇಶಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೂ ಪ್ರಯೋಜನವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತ ಉದಯಿಸಿದಾಗ ಕೇವಲ ಭಾರತಕ್ಕೆ ಮಾತ್ರ ಲಾಭವಾಗುವುದಿಲ್ಲ. ವಿಶ್ವದಾದ್ಯಂತ ಶಾಂತಿ ಮತ್ತು ಸಂತೋಷ ಹರಡುತ್ತದೆ. ವ್ಯಕ್ತಿಯ ಕಲ್ಯಾಣ, ರಾಷ್ಟ್ರದ ಅಭಿವೃದ್ಧಿ ಮತ್ತು ಮುಂದಿನ ಪೀಳಿಗೆಯ ಹಿತ ಈ ಮೂರೂ ಗುರಿಗಳು ಒಂದೇ ಪ್ರಯತ್ನದಲ್ಲಿ ಸಾಧನೆಯಾಗುತ್ತವೆ, ಎಂದು ಹೇಳಿದರು.

ಮುಂದಿನ 20ರಿಂದ 30 ವರ್ಷಗಳಲ್ಲಿ ಭಾರತವು ವಿಶ್ವದ ಅಗ್ರ ರಾಷ್ಟ್ರವಾಗಿ ಹೊರಹೊಮಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಭಾರತ ವಿಶ್ವಗುರುವಾಗಲಿದೆ. ಅದು ಶಕ್ತಿಶಾಲಿಯಾಗಲಿದೆ. ಆದರೆ ಆ ಶಕ್ತಿಯನ್ನು ವಿಶ್ವದ ಕಲ್ಯಾಣಕ್ಕಾಗಿ ಬಳಸಲಿದೆ. ಮಾನವಕುಲಕ್ಕೆ ಮಾರ್ಗದರ್ಶಕವಾಗಲಿದೆ. ಇದೇ ನಮ್ಮ ದೃಷ್ಟಿಕೋನ, ಎಂದರು.

ದೇಶದ ಯುವಜನರಲ್ಲಿ ಸೇವಾ ಮನೋಭಾವ, ದೇಶಭಕ್ತಿ ಮತ್ತು ಉತ್ತಮ ವ್ಯಕ್ತಿತ್ವದ ಮೌಲ್ಯಗಳನ್ನು ಬೆಳೆಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ನಾವು ಯುವಜನರನ್ನು ಕಠಿಣ ಪರಿಶ್ರಮ ಮತ್ತು ಸೇವೆಯ ಮನೋಭಾವದಿಂದ ಪ್ರೇರೇಪಿಸಬೇಕು. ಭಾರತದ ಬಲವರ್ಧನೆಗಾಗಿ ಅವರಲ್ಲಿ ಆಶಯವನ್ನು ಜಾಗೃತಗೊಳಿಸಬೇಕು. ನಮ್ಮ ಬದುಕಿನ ಮೂಲಕವೇ ಅವರಿಗೆ ದಾರಿದೀಪವಾಗಬೇಕು, ಎಂದು ಹೇಳಿದರು.

ಪರಿಸರ ಹಾನಿ ಮತ್ತು ಅತಿಯಾದ ಉಪಭೋಗದಂತಹ ಜಾಗತಿಕ ಸಮಸ್ಯೆಗಳಿಗೆ ಭಾರತದಲ್ಲಿ ಪರಿಹಾರದ ವಿಚಾರಗಳಿವೆ ಎಂದು ಭಾಗವತ್‌ ಅಭಿಪ್ರಾಯಪಟ್ಟರು.ಭೂಮಿಯು ಮಾನವಕುಲವನ್ನು ಉಳಿಸಬಲ್ಲದು. ಆದರೆ ದುರಾಸೆ ಅಸಮತೋಲನವನ್ನು ಉಂಟುಮಾಡುತ್ತದೆ. ಅಮೆರಿಕದ ಜೀವನಮಟ್ಟವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ 142 ಕೋಟಿ ಭಾರತೀಯರು ಅದೇ ಮಟ್ಟದಲ್ಲಿ ಸಂಪನ್ಮೂಲಗಳನ್ನು ಬಳಸಿದರೆ ಒಂದು ಭೂಮಿ ಸಾಕಾಗುವುದಿಲ್ಲ; ಆರು ಭೂಮಿಗಳು ಬೇಕಾಗುತ್ತವೆ, ಎಂದು ಅವರು ಎಚ್ಚರಿಸಿದರು.

ಇತರ ರಾಷ್ಟ್ರಗಳನ್ನು ಕುರುಡಾಗಿ ಅನುಕರಿಸಬಾರದು ಎಂದು ಹೇಳಿದ ಅವರು, ಭಾರತವು ಮಹಾಶಕ್ತಿಯಾಗಿ ಬೆಳೆದ ಬಳಿಕ ಅಮೆರಿಕ ಅಥವಾ ಇತರ ಬಲಿಷ್ಠ ರಾಷ್ಟ್ರಗಳಂತೆ ವರ್ತಿಸಿದರೆ ಅದು ಭಾರತವಾಗಿರುವುದಿಲ್ಲ. ಭಾರತ ಶಕ್ತಿಯುತವಾದಾಗ ವಿಶ್ವದಲ್ಲಿ ಶಾಂತಿ ಮತ್ತು ಸೌಹಾರ್ದ ಹೆಚ್ಚಾಗಬೇಕು, ಎಂದರು.

ಭಾರತ ಮತ್ತು ಅಮೆರಿಕದ ಸಂಬಂಧದ ಬಗ್ಗೆ ನಡೆದ ಸಂಭಾಷಣೆಯನ್ನು ಉಲ್ಲೇಖಿಸಿದ ಅವರು, ಒಬ್ಬ ವಿದೇಶಿ ವ್ಯಕ್ತಿ ಭಾರತ ಮತ್ತು ಅಮೆರಿಕ ಸಹಜ ಮಿತ್ರರಾಗಬಹುದು ಎಂದರು. ಆರ್ಥಿಕ ಹಾಗೂ ರಕ್ಷಣಾ ಸಹಕಾರವೂ ಸಾಧ್ಯ ಎಂದರು. ಆದರೆ ಪ್ರತೀ ಬಾರಿ ಅವರು ಅಮೆರಿಕದ ಹಿತಾಸಕ್ತಿಗಳನ್ನು ಕಾಪಾಡುವ ಷರತ್ತು ವಿಧಿಸುತ್ತಿದ್ದರು ಎಂದು ಹೇಳಿದರು.

ನೆರೆಯ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವು ಸ್ವಾರ್ಥದ ಮೇಲೆ ಅಲ್ಲ, ಕರ್ತವ್ಯ ಮತ್ತು ಮಾನವೀಯತೆಯ ಮೇಲೆ ಆಧಾರಿತವಾಗಿದೆ ಎಂದು ಅವರು ತಿಳಿಸಿದರು.ಮಾಲ್ಡೀವ್‌್ಸನಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಎದುರಾದಾಗ ನೆರವಾದದ್ದು ಭಾರತವೇ ಹೊರತು ಚೀನಾ ಅಲ್ಲ. ಶ್ರೀಲಂಕಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಸಹಾಯಕ್ಕೆ ಧಾವಿಸಿದ ದೇಶವೂ ಭಾರತವೇ, ಎಂದು ಹೇಳಿದರು.

ನಾವು ಇನ್ನೂ ದೊಡ್ಡ ಮಟ್ಟದ ನೆರವು ನೀಡುವಷ್ಟು ಶ್ರೀಮಂತರಾಗಿಲ್ಲ. ಆದರೂ ನೆರೆಯ ರಾಷ್ಟ್ರ ಸಂಕಷ್ಟದಲ್ಲಿದ್ದರೆ ಸಹಾಯ ಮಾಡುವುದನ್ನು ಲೆಕ್ಕಾಚಾರ ಮಾಡುವುದಿಲ್ಲ. ಅದು ನಮ್ಮ ಸ್ವಭಾವ, ನಮ್ಮ ಧರ್ಮ, ಎಂದು ಅವರು ಹೇಳಿದರು.ವಿಶ್ವ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಭಾರತದ ನಾಗರಿಕತೆಯ ಜ್ಞಾನದಲ್ಲಿ ಪರಿಹಾರ ಅಡಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೆಲವು ಸಮಸ್ಯೆಗಳಿಗೆ ಬೇರೆ ದೇಶಗಳು ಪರಿಹಾರ ಕಂಡುಕೊಂಡಿವೆ. ಆದರೆ ಕೆಲವು ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಭಾರತಕ್ಕಷ್ಟೇ ಇದೆ, ಎಂದು ಹೇಳಿದರು.
ಸಂಪತ್ತು ಮತ್ತು ಅವಕಾಶಗಳು ಕೆಲವರ ಕೈಯಲ್ಲಿ ಕೇಂದ್ರೀಕೃತವಾಗದೆ ಸಮಾನವಾಗಿ ಹಂಚಿಕೆಯಾಗಬೇಕು ಎಂದು ಕರೆ ನೀಡಿದ ಅವರು, ಶ್ರಮಕ್ಕೆ ಗೌರವ ನೀಡುವ ಸಂಸ್ಕೃತಿ ಬೆಳೆಸಬೇಕೆಂದು ಒತ್ತಾಯಿಸಿದರು.

ಕಠಿಣ ಪರಿಶ್ರಮಕ್ಕೆ ಗೌರವ ಸಿಗಬೇಕು. ಶ್ರಮಕ್ಕೆ ಘನತೆ ದೊರಕಬೇಕು. ಪ್ರಾಮಾಣಿಕ ದುಡಿಮೆಗೆ ಮಾನ್ಯತೆ ಇರಬೇಕು. ಮುಂದಿನ ಪೀಳಿಗೆಗೆ ದುಡಿಯುವುದು ಹೆಮ್ಮೆಯ ವಿಷಯ ಎಂಬುದನ್ನು ಕಲಿಸಬೇಕು. ಶ್ರಮಕ್ಕೆ ಗೌರವ ನೀಡದೇ 140 ಕೋಟಿ ಜನರ ರಾಷ್ಟ್ರ ಸಮೃದ್ಧಿಯಾಗಲು ಸಾಧ್ಯವಿಲ್ಲ, ಎಂದು ಹೇಳಿದರು.

ನೈತಿಕವಾಗಿ ಸಂಪತ್ತು ಸೃಷ್ಟಿಸುವುದು ಹಾಗೂ ಆದಾಯವನ್ನು ಜವಾಬ್ದಾರಿಯಿಂದ ಬಳಸುವ ಅಗತ್ಯವನ್ನೂ ಅವರು ಒತ್ತಿಹೇಳಿದರು.ರಾಷ್ಟ್ರ ಪುನರ್‌ನಿರ್ಮಾಣದ ಕಾರ್ಯವನ್ನು ಯಾವುದೇ ಒಂದು ಸಂಘಟನೆ, ರಾಜಕೀಯ ಪಕ್ಷ ಅಥವಾ ವ್ಯಕ್ತಿ ಒಬ್ಬನೇ ಸಾಧಿಸಲು ಸಾಧ್ಯವಿಲ್ಲ. ಸಮೃದ್ಧ, ನೈತಿಕ ಹಾಗೂ ಪರಿಸರ ಸ್ನೇಹಿ ಭಾರತ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಎಂದು ಭಾಗವತ್‌ ಕರೆ ನೀಡಿದರು.

RELATED ARTICLES

Latest News