ಶ್ರೀನಗರ, ಸೆ. 30 (ಪಿಟಿಐ): ಮಧ್ಯ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಎತ್ತರದ ಪ್ರದೇಶವೊಂದರಲ್ಲಿ ರಾಷ್ಟ್ರೀಯ ರೈಫಲ್ಸ್ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರನೊಬ್ಬ ಹತನಾಗಿದ್ದಾನೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರ ಮೂಲದ ಚಿನಾರ್ ಕಾರ್ಪ್ಸ್ ಹತನಾದ ಉಗ್ರನ ಗುರುತನ್ನು ಬಹಿರಂಗಪಡಿಸದಿದ್ದರೂ, ಅಧಿಕಾರಿಗಳು ಆತನನ್ನು ಸುಲೈಮಾನ್ ಶಾ ಅಲಿಯಾಸ್ ಮೂಸಾ ಎಂದು ಗುರುತಿಸಿದ್ದಾರೆ. ಮಧ್ಯ ಕಾಶ್ಮೀರದ ಯೂಸ್‌ಮಾರ್ಗ್‌ನ ಕೊರಾಗ್ ಪ್ರದೇಶದಲ್ಲಿ ಇತರ ಭದ್ರತಾ ಪಡೆಗಳೊಂದಿಗೆ ಸೇರಿ ಕಾರ್ಯಾಚರಣೆ ಆರಂಭಿಸಿದ್ದಾಗಿ ಸೇನೆ ತಿಳಿಸಿದೆ.
ಜಾಗರೂಕರಾಗಿದ್ದ ಸೈನಿಕರು ಶಂಕಿತ ಚಟುವಟಿಕೆಯನ್ನು ಗಮನಿಸಿದರು. ಅವರನ್ನು ಪ್ರಶ್ನಿಸಿದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇದರಿಂದ ತೀವ್ರ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಯಿತು ಎಂದು ಸೇನೆ ತಿಳಿಸಿದೆ. ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ದುಧ್‌ಪತ್ರಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂಸಾನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪೀರ್ ಪಂಜಾಲ್ ಶ್ರೇಣಿಯ ಎರಡೂ ಬದಿಗಳಲ್ಲಿ ನಡೆದ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಬೇಕಾಗಿದ್ದ ಮೂಸಾ, ಈ ತಿಂಗಳ ಆರಂಭದಲ್ಲಿ ಯೂಸ್‌ಮಾರ್ಗ್ ಬೆಟ್ಟಗಳಲ್ಲಿ ನಡೆದ ಗುಂಡಿನ ಚಕಮಕಿಯಿಂದ ತಪ್ಪಿಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೆಪ್ಟೆಂಬರ್ 5ರಂದು ನಡೆದ ಆ ಚಕಮಕಿಯಲ್ಲಿ ಆತನ ಆಪ್ತ ಸಹಚರ ಯಾಸಿರ್ ಹತನಾಗಿದ್ದನು. ಮೂಸಾನ ಹತ್ಯೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಲಷ್ಕರ್-ಎ-ತೈಬಾ ಸಂಘಟನೆಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
