ನವದೆಹಲಿ, ಫೆ. 22- ಮುಂದಿನ 5 ವರ್ಷಗಳಲ್ಲಿ 20 ಶತಕೋಟಿ ಡಾಲರ್ಗೂ ಹೆಚ್ಚಿನ ದ್ವಿಪಕ್ಷೀಯ ವ್ಯಾಪಾರ ನಡೆಸಲು ಭಾರತ- ಬ್ರೇಜಿಲ್ ಗುರಿಯನ್ನು ನಿಗದಿಪಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಭವಿಷ್ಯಕ್ಕಾಗಿ ಡಿಜಿಟಲ್ ಪಾಲುದಾರಿಕೆ, ಭೂಮಿಯ ಮೇಲಿನ ಅಪರೂಪದ ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರಗಳಲ್ಲಿ ಸಹಕಾರ ಮತ್ತು ಉಕ್ಕಿನ ಸರಬರಾಜು ಸರಪಳಿಯಲ್ಲಿ ಗಣಿಗಾರಿಕೆ ಕ್ಷೇತ್ರದಲ್ಲಿ ಸಹಕಾರದ ಕುರಿತು 3 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮುಂದಿನ 5 ವರ್ಷಗಳಲ್ಲಿ ಭಾರತವು ದ್ವಿಪಕ್ಷೀಯ ವ್ಯಾಪಾರವನ್ನ 20 ಬಿಲಿಯನ್ ಡಾಲರ್ಗಿಂತ ಹೆಚ್ಚು ಕೊಂಡೊಯ್ಯಲು ಬದ್ಧವಾಗಿದೆ ಎಂದು ಹೇಳಿದರು.
ಭೂಮಿಯ ಮೇಲಿನ ಅಪರೂಪದ ಮತ್ತು ನಿರ್ಣಾಯಕ ಖನಿಜಗಳ ಒಪ್ಪಂದವು ಬಲವಾದ ಪೂರೈಕೆ ಸರಪಳಿಯನ್ನು ನಿರ್ಮಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದರೊಂದಿಗೆ ರಕ್ಷಣಾ ಸಹಕಾರವು ಸ್ಥಿರವಾಗಿ ಬೆಳೆಯುತ್ತಿದೆ ಎಂದ ಪ್ರಧಾನಿ, ಬ್ರೆಜಿಲ್ಗೆ ಕೈಗೆಟುಕುವ ಮತ್ತು ಗುಣಮಟ್ಟದ ಔಷಧಿಗಳ ಪೂರೈಕೆ ಹೆಚ್ಚಿಸುವ ಮತ್ತು ಆಯುರ್ವೇದ ಉತ್ತೇಜಿಸುವ ಬಗ್ಗೆಯೂ ಚರ್ಚಿಸಿದರು.
ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಮಾತನಾಡಿ, ನನ್ನ ಪ್ರಿಯ ಸ್ನೇಹಿತ ಮೋದಿ ಅವರೇ, ಭಾರತಕ್ಕೆ ಇದು ನನ್ನ 6ನೇ ಭೇಟಿ. ಇಲ್ಲಿಗೆ ಪ್ರತಿ ಬಾರಿ ಬರಲು ಸಂತೋಷವಿದೆ. ಎರಡೂ ರಾಷ್ಟ್ರಗಳ ನಡುವಿನ ಸಭೆಯು ಅತ್ಯುನ್ನತ ಅಂಶಗಳಿಂದ ಕೂಡಿದೆ.
ನಾವು ಜಾಗತಿಕ ದಕ್ಷಿಣದ ಎರಡು ದೊಡ್ಡ ಪ್ರಜಾಪ್ರಭುತ್ವ ದೇಶಗಳು. ನವೀಕರಿಸಬಹುದಾದ ಇಂಧನದ ಸೂಪರ್ ಪವರ್ ಹೊಂದಿರುವ ರಾಷ್ಟ್ರಗಳೂ ಹೌದು. ನಾವಿಬ್ಬರೂ ವೈವಿಧ್ಯಮಯ ದೇಶಗಳು ಮತ್ತು ಸಾಂಸ್ಕೃತಿಕ ಉದ್ಯಮದ ಕೇಂದ್ರಗಳು. ವೈವಿಧ್ಯತೆ ಮತ್ತು ಶಾಂತಿಯನ್ನು ರಕ್ಷಿಸುವ ರಾಷ್ಟ್ರಗಳು ಎಂದು ಬಣ್ಣಿಸಿದರು.
ತಮ್ಮದೇ ಕರೆನ್ಸಿಯಲ್ಲಿ ವ್ಯಾಪಾರಸಹಜವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ವಹಿವಾಟುಗಳು ಡಾಲರ್ ಮೂಲಕ ನಡೆಯುತ್ತವೆ. ಆದ್ರೆ ಭಾರತ ಮತ್ತು ಬ್ರೆಜಿಲ್ ನಡುವೆ ತಮ್ಮದೇ ಆದ ಕರೆನ್ಸಿಗಳಲ್ಲಿ ವ್ಯಾಪಾರ ಮಾಡಬಹುದಾಗಿದೆ. ಇದರಿಂದ ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಲೂಲಾ ಹೇಳಿದರು.
5 ವರ್ಷದಲ್ಲಿ 20 ಶತಕೋಟಿ ವ್ಯಾಪಾರ ಗುರಿ2025 ರ ಜುಲೈನಲ್ಲಿ ಪ್ರಧಾನಿ ಮೋದಿ ಬ್ರೆಜಿಲಿಯಾಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಉಭಯ ದೇಶಗಳು 2030 ರ ವೇಳೆಗೆ 20 ಶತಕೋಟಿ ಡಾಲರ್ ವ್ಯಾಪಾರ ಗುರಿ ನಿಗದಿಪಡಿಸಿದ್ದವು. ಈ ದ್ವಿಪಕ್ಷೀಯ ವ್ಯಾಪಾರವು 2025 ರಲ್ಲೇ 15 ಶತಕೋಟಿ ಡಾಲರ್ ತಲುಪಿತ್ತು, ಬ್ರೇಜಿಲ್ನಲ್ಲಿ ಭಾರತೀಯ ಹೂಡಿಕೆ 15 ಶತಕೋಟಿ ಡಾಲರ್ ಮೀರಿದೆ. ಇಂಧನ ಸಹಕಾರವು ಪ್ರಬಲವಾಗಿದೆ. ಅಲ್ಲದೇ ಡಿಜಿಟಲ್ ತಂತ್ರಜ್ಞಾನ, ಸೆಮಿಕಂಡಕ್ಟರ್ಗಳು ಮತ್ತು ಪಾವತಿ ವ್ಯವಸ್ಥೆಗಳಲ್ಲಿ ಸಹಕಾರವು ವಿಸ್ತರಿಸುತ್ತಿದೆ.
