ನೊಯ್ಡಾ, ಸೆ.24- ದೆಹಲಿಯಿಂದ ಬಿಹಾರದ ಮಹೋಬಾಗೆ ತೆರಳುತ್ತಿದ್ದ ಸ್ಲೀಪರ್ ಬಸ್ಗೆ ಯಮುನಾ ಎಕ್ಸ್ಪ್ರೆಸ್ವೇಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಒಂಬತ್ತು ಪ್ರಯಾಣಿಕರು ಮೃತಪಟ್ಟಿದ್ದು, 20 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಇಂದು ಮುಂಜಾನೆ ಜೆವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಎಕ್ಸ್ಪ್ರೆಸ್ವೇಯ 33ನೇ ಕಿಲೋಮೀಟರ್ ಮೈಲಿಗಲ್ಲಿನ ಬಳಿ ಈ ಘಟನೆ ನಡೆದಿದೆ. ನವದೆಹಲಿಯ ಕಾಶ್ಮೀರಿ ಗೇಟ್ನಿಂದ ಹೊರಟಿದ್ದ ಬಸ್ (328647) ಬೆಂಕಿಗೆ ಆಹುತಿಯಾಗಿದೆ.
ಮಾಹಿತಿ ಲಭಿಸಿದ ತಕ್ಷಣ ಪೊಲೀಸರು, ರಕ್ಷಣಾ ವಾಹನ ಹಾಗೂ ಜೆವಾರ್ ಟೋಲ್ ಪ್ಲಾಜಾದಲ್ಲಿದ್ದ ಅಗ್ನಿಶಾಮಕ ವಾಹನ ಸೇರಿದಂತೆ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ.ಹೊಗೆ ಆವರಿಸಿದ್ದ ಬಸ್ನೊಳಗೆ ಪ್ರವೇಶಿಸಿದಾಗ ಒಂಬತ್ತು ಮಂದಿ ಮೃತಪಟ್ಟಿರುವುದು ಪತ್ತೆಯಾಗಿದೆ. ಸುಟ್ಟ ಗಾಯ ಅಥವಾ ಉಸಿರುಗಟ್ಟುವಿಕೆಯಿಂದ ಅವರು ಮೃತಪಟ್ಟಿರಬಹುದು ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.
ಬಸ್ನ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಉಂಟಾದ ಕಿಡಿ ಅಥವಾ ಸ್ಫೋಟದಿಂದ ಎಂಜಿನ್ನ ಲೂಬ್ರಿಕಂಟ್ ಎಣ್ಣೆಗೆ ಬೆಂಕಿ ಹೊತ್ತಿಕೊಂಡು, ಬಳಿಕ ವೇಗವಾಗಿ ಇಡೀ ಬಸ್ಗೆ ಬೆಂಕಿ ವ್ಯಾಪಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತರ ಗುರುತು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕರನ್ನು ವಶಕ್ಕೆ ಪಡೆಯಲಾಗಿದೆ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಮೃತರ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
