Homeರಾಷ್ಟ್ರೀಯದೇಶದಲ್ಲಿ ಚುನಾವಣಾ ಫಲಿತಾಂಶಗಳು ಪೂರ್ವನಿರ್ಧರಿತವಾಗಿವೆ : ಕಾಕ್ರೋಚ್‌ ದೀಪ್ಕೆ ಆರೋಪ

ದೇಶದಲ್ಲಿ ಚುನಾವಣಾ ಫಲಿತಾಂಶಗಳು ಪೂರ್ವನಿರ್ಧರಿತವಾಗಿವೆ : ಕಾಕ್ರೋಚ್‌ ದೀಪ್ಕೆ ಆರೋಪ

ಮುಂಬೈ,ಅ.5- ದೇಶದಲ್ಲಿ ಚುನಾವಣಾ ಫಲಿತಾಂಶಗಳು ಪೂರ್ವನಿರ್ಧರಿತ ವಾಗಿವೆ. ಹೀಗಾಗಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡುವವರೆಗೆ ಚುನಾವಣೆಯಲ್ಲಿ ಭಾಗವಹಿಸುವುದು ಸಂಪೂರ್ಣವಾಗಿ ಅರ್ಥಹೀನ ಎಂದು ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್‌ ದೀಪ್ಕೆ ಆರೋಪಿಸಿದ್ದಾರೆ.

ಮಹಾರಾಷ್ಟ್ರ ಸಾರ್ವಜನಿಕ ಸೇವಾ ಆಯೋಗದ (ಎಂಪಿಎಸ್‌‍ಸಿ) ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒಗ್ಗಟ್ಟು ಪ್ರದರ್ಶಿಸಲು ಪುಣೆಗೆ ಭೇಟಿ ನೀಡಿದ್ದ ವೇಳೆ ಅಭಿಜೀತ್‌ ದೀಪ್ಕೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೋದಿ ಅಲೆಯ ಉತ್ತುಂಗದಲ್ಲಿದ್ದಾಗಲೂ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗದ ರಾಜ್ಯಗಳಲ್ಲಿ ಈಗ ಸುಲಭವಾಗಿ ಗೆಲ್ಲುತ್ತಿದೆ. ಜ್ಞಾನೇಶ್‌ ಕುಮಾರ್‌ ಅವರ ಅವಧಿಯ ನಿರ್ಧಾರಗಳು ಮತ್ತು ಎಸ್‌‍ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯ ವೈಫಲ್ಯವೇ ಇದಕ್ಕೆ ಕಾರಣ. ಜ್ಞಾನೇಶ್‌ ಕುಮಾರ್‌ ತಮ ಹುದ್ದೆಗೆ ರಾಜೀನಾಮೆ ನೀಡಿ, ಎಸ್‌‍ಐಆರ್‌ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದಾಗ ಮಾತ್ರ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಸಾಧ್ಯ ಎಂದರು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಅಭಿಜೀತ್‌ ದೀಪ್ಕೆ, ಅಶುತೋಷ್‌ ರಂಕಾ, ಸೌರವ್‌ ದಾಸ್‌‍ ಹಾಗೂ ರತ್ನಾ ಸಿಂಗ್‌ ವಿರುದ್ಧ ಶಿವಾಜಿ ಪಾರ್ಕ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಭುತ್ವ ಉಳಿಸುವ ಹೋರಾಟ :
ಈ ಕುರಿತು ಸೋಷಿಯಲ್‌ ಮೀಡಿಯಾ Xನಲ್ಲಿ ಪ್ರತಿಕ್ರಿಯಿಸಿದ ದೀಪ್ಕೆ, ನಮ ಮೇಲೆ ಎಷ್ಟು ಬೇಕಾದರೂ ಪ್ರಕರಣಗಳನ್ನು ದಾಖಲಿಸಿ, ಆದರೆ ಪ್ರಜಾಪ್ರಭುತ್ವವನ್ನು ಉಳಿಸುವ ನಮ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ದಿ ಇಂಡಿಯನ್‌ ಎಕ್ಸ್ ಪ್ರೆಸ್‍ ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್‌ಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರು ಮತದಾರರ ಪಟ್ಟಿ ಹಾಗೂ ನೋಂದಣಿ ವ್‌ಯವಸ್ಥೆಗಳ ನಿರ್ಧಾರಗಳ ಬಗ್ಗೆ 10 ತಿಂಗಳಲ್ಲಿ ಸುಮಾರು 14 ಬಾರಿ ಔಪಚಾರಿಕ ಆಕ್ಷೇಪಣೆಯನ್ನು ಎತ್ತಿದ್ದಾರೆ ಎನ್ನಲಾಗಿದೆ. ಆದರೆ, ಚುನಾವಣಾ ಆಯೋಗವು ಈ ಆರೋಪವನ್ನು ತಳ್ಳಿಹಾಕಿದ್ದು, ಅಂತಿಮ ನಿರ್ಧಾರಗಳು ಸಾಂಸ್ಥಿಕ ಸಮ್ಮತಿಯಿಂದಲೇ ನಡೆದಿವೆ ಎಂದು ಸ್ಪಷ್ಟನೆ ನೀಡಿದೆ.

ಎಸ್‌‍ಐಆರ್‌ ವಿರುದ್ಧ ಸಿಜೆಪಿ ಆಕ್ರೋಶ :
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಹಾಗೂ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ಕುರಿತು ವಿರೋಧ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಚುನಾವಣಾ ಆಯೋಗದ ವಿರುದ್ಧ ಪ್ರಶ್ನೆಗಳನ್ನು ಎತ್ತುತ್ತಿವೆ. ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ತಡೆಯಲು ಎಸ್‌‍ಐಆರ್‌ ಅಗತ್ಯ ಎಂದು ಚುನಾವಣಾ ಆಯೋಗ ಸಮರ್ಥಿಸಿಕೊಂಡಿದ್ದರೆ, ಪ್ರಕ್ರಿಯೆಯ ನೆಪದಲ್ಲಿ ಅರ್ಹ ಮತದಾರರ ಹೆಸರುಗಳು ಅಳಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ವಿರೋಧ ಪಕ್ಷಗಳು ವ್ಯಕ್ತಪಡಿಸುತ್ತಿವೆ.ಇದೇ ಹಿನ್ನೆಲೆಯಲ್ಲಿ ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಒತ್ತಾಯಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸುತ್ತಿದೆ. ದೆಹಲಿಯ ಜಂತರ್‌ ಮಂತರ್‌ನಲ್ಲಿನ ಪ್ರತಿಭಟನೆಯ ಬಳಿಕವೂ ಹೋರಾಟ ಮುಂದುವರಿಸುವುದಾಗಿ ದೀಪ್ಕೆ ಹೇಳಿದ್ದಾರೆ.

RELATED ARTICLES
spot_img

Latest News