ನವದೆಹಲಿ, ಮಾ.16- ದೇಶದ 10 ರಾಜ್ಯಗಳಲ್ಲಿನ 37 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಈ ಪೈಕಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಬಿಹಾರ, ಹರಿಯಾಣ ಮತ್ತು ಒಡಿಶಾದ 11 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತದಾನ ವಾಗಬಹುದು.
ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಆಗಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.ಚುನಾವಣೆ ಎದುರಿಸುತ್ತಿರುವ 37 ರಾಜ್ಯಸಭಾ ಸ್ಥಾನಗಳು ಮಹಾರಾಷ್ಟ್ರ: 7, ತಮಿಳುನಾಡು: 6, ಪಶ್ಚಿಮ ಬಂಗಾಳ: 5, ಬಿಹಾರ: 5, ಒಡಿಶಾ: 4, ಅಸ್ಸಾಂ: 3, ಛತ್ತೀಸ್‌ಗಢ: 2, ಹರ್ಯಾಣ: 2, ತೆಲಂಗಾಣ: 2, ಹಿಮಾಚಲಪ್ರದೇಶದ 1ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ.
234 ಸದಸ್ಯಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 134 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಬಳಿ 80 ಸದಸ್ಯಬಲ ಇದೆ. ವಿವಿಧ ಮಸೂದೆಗಳ ಅನುಮೋದನೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೆಚ್ಚಿನ ಸದಸ್ಯಬಲ ಇರುವುದು ಅಗತ್ಯ.
ಇವತ್ತಿನ ರಾಜ್ಯಸಭಾ ಚುನಾವಣೆ ಬಳಿಕ ಮೇಲ್ಮನೆಯಲ್ಲಿ ಎನ್‌ಡಿಎ ಸದಸ್ಯಬಲ ಮತ್ತಷ್ಟು ಏರಿಕೆ ಆಗಲಿದೆ.ರಾಜ್ಯಸಭಾ ಚುನಾವಣೆ ಆಗಲಿರುವ 10 ರಾಜ್ಯಗಳಲ್ಲಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಬಹುದು. ಅಲ್ಲಿ ಮತದಾನದ ಅವಶ್ಯಕತೆ ಇರುವುದಿಲ್ಲ.
ಶರದ್ ಪವಾರ್, ರಾಮದಾಸ್ ಅತಾವಳೆ, ತಂಬಿದುರೈ, ಬಾಬುಲ್ ಸುಪ್ರಿಯೋ, ವಿನೋದ್ ತಾವಡೆ, ಅಭಿಷೇಕ್ ಮನು ಸಿಂಘ್ವಿ ಮೊದಲಾದವರು ಅವಿರೋಧವಾಗಿ ರಾಜ್ಯಸಭೆಗೆ ಪ್ರವೇಶ ಮಾಡಲಿದ್ದಾರೆ.
ಒಡಿಶಾ, ಬಿಹಾರ ಮತ್ತು ಹರ್ಯಾಣ ರಾಜ್ಯಗಳಲ್ಲಿನ 11 ರಾಜ್ಯಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯಬಹುದು. ಬಿಹಾರದಲ್ಲಿ ಐದು ಸ್ಥಾನಗಳಿವೆ. ಇದರಲ್ಲಿ ನಾಲ್ಕು ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಜೆಡಿಯುನ ನಿತೀಶ್ ಕುಮಾರ್ ಮತ್ತು ರಾಮನಾಥ್ ಠಾಕೂರ್, ಬಿಜೆಪಿಯ ನಿತಿನ್ ನಬಿನ್ ಮತ್ತು ಶಿವಂ ಕುಮಾರ್ ಗೆಲ್ಲುವ ನಿರೀಕ್ಷೆ ಇದೆ.
ಐದನೇ ಸ್ಥಾನಕ್ಕೆ ಎನ್‌ಡಿಎನ ಉಪೇಂದ್ರ ಖುಶ್ವಾ ಮತ್ತು ವಿಪಕ್ಷಗಳ ಎಡಿ ಸಿಂಗ್ ನಡುವೆ ಪೈಪೋಟಿ ಇರುತ್ತದೆ.ಒಡಿಶಾದಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಬಿಜೆಪಿಯ ಇಬ್ಬರು ಮತ್ತು ಬಿಜೆಡಿಯ ಒಬ್ಬರ ಗೆಲುವು ಖಾತ್ರಿ ಇದೆ. ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಇದೆ.ಹರ್ಯಾಣದಲ್ಲಿ ಎರಡು ಸ್ಥಾನ ಇದೆ. ಬಿಜೆಪಿಯ ಸಂಜಯ್ ಭಾಟಿಯಾ ಗೆಲುವು ಖಾತ್ರಿ ಇದೆ. ಎರಡನೇ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ಪೈಪೋಟಿ ಇದೆ.
