ಬೆಂಗಳೂರು, ಮಾ.16- ಶಾಸಕರು ಕೇಳಿದ ಪ್ರಶ್ನೆಗಳಿಗೆ ಸಚಿವರು ಆಯಾ ಇಲಾಖೆಗಳಿಂದ ಸರಿಯಾಗಿ ಉತ್ತರ ನೀಡದೇ ಇದ್ದ ಮೇಲೆ ಯಾವ ಕಾರಣಕ್ಕೆ ಸದನ ನಡೆಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪವನ್ನು ಮುಂದೂಡಿ ಹೊರ ನಡೆದ ವಿಲಕ್ಷಣ ಪ್ರಸಂಗ ಇಂದು ನಡೆಯಿತು.
ಪ್ರಶ್ನೋತ್ತರದ ಬಳಿಕ ಲಿಖಿತವಾಗಿ ಉತ್ತರ ಮಂಡಿಸುವ 230 ಪ್ರಶ್ನೆಗಳಿಗೆ ಸರ್ಕಾರದ ಪರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ 84 ಪ್ರಶ್ನೆಗಳಿಗೆ ಉತ್ತರ ಮಂಡಿಸಿದರು.ಬಿಜೆಪಿಯ ಸುರೇಶ್ ಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ 250 ಪ್ರಶ್ನೆಗಳು ಎಂದರೆ ಕನಿಷ್ಠ 125 ಉತ್ತರಗಳಾದರೂ ಬರಬೇಕಿತ್ತು. ಆಗ ಶೇ.50ರಷ್ಟಾಗುತ್ತದೆ. ಆದರೆ ಇಲ್ಲಿ 84 ಯಾವ ಲೆಕ್ಕಕ್ಕೆ ಎಂದು ಆಕ್ಷೇಪಿಸಿದರು.
ಸಭಾಧ್ಯಕ್ಷರು ಇಂದು ನೀಡುವ ಎಚ್ಚರಿಕೆಯನ್ನು ಸೇರಿದರೆ ಐದು ಬಾರಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಆದರೆ ಸರ್ಕಾರ ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಆರ್.ಅಶೋಕ್ ತೀಕ್ಷ್ಣವಾಗಿ ಆಕ್ಷೇಪಿಸಿದರು.ಸಭಾಧ್ಯಕ್ಷ ಯು.ಟಿ.ಖಾದರ್ ಮಧ್ಯ ಪ್ರವೇಶ ಮಾಡಿ, ಸರ್ಕಾರದ ಈ ಧೋರಣೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈವರೆಗೂ ತಾವು ನಾಲ್ಕು ಬಾರಿ ಪೀಠದಿಂದ ಸ್ಪಷ್ಟ ಆದೇಶ ನೀಡಿದರೂ ಪರಿಸ್ಥಿತಿ ಸುಧಾರಣೆಯಾಗಿಲ್ಲ ಎಂದಾದರೆ, ಇದನ್ನು ಹಗುರವಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದರು.
ಮೂರು ತಿಂಗಳಿಗೊಮೆ ಅಧಿವೇಶನ ನಡೆಸುವುದು ಶಾಸಕರು ತಮ ಸಮಸ್ಯೆಗಳನ್ನು ಚರ್ಚಿಸಲಿಕ್ಕಾಗಿ. ಇಲ್ಲಿ ಎಲ್ಲರೂ, ಎಲ್ಲಾ ಪಕ್ಷದವರು ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರತಿದಿನ 15 ಪ್ರಶ್ನೆಗಳನ್ನು ಮಾತ್ರ ಚುಕ್ಕೆ ಗುರುತು ಎಂದು ಪರಿಗಣಿಸಿ ಇಲ್ಲಿ ಚರ್ಚೆ ಮಾಡಲು ಅವಕಾಶ ನೀಡಲಾಗುತ್ತದೆ. ಉಳಿದ ಪ್ರಶ್ನೆಗಳನ್ನು ಚುಕ್ಕೆ ರಹಿತ ಎಂದು ಪರಿಗಣಿಸಿ ಲಿಖಿತ ಉತ್ತರ ನೀಡಲಾಗುವುದು. ಗಮನ ಸೆಳೆಯುವ ಸೂಚನೆಯಡಿಯ 15ಕ್ಕಿಂತ ಹೆಚ್ಚು ಸದಸ್ಯರ ಅರ್ಜಿಗಳನ್ನು ಪರಿಗಣಿಸಬಾರದು ಎಂದು ಸಚಿವರು ಹೇಳುತ್ತಾರೆ. ಬೆಳಗ್ಗೆ ನಿಗದಿತ ಸಮಯಕ್ಕೆ ಕಲಾಪ ಆರಂಭಿಸಲು ಕೊರತೆ ಇರುತ್ತದೆ. ಈ ರೀತಿಯಾದರೆ ಸದನ ನಡೆಸಲಾಗುವುದಿಲ್ಲ. ಈ ಅಧಿವೇಶನಗಳು ನಡೆಯುವುದು ಸಚಿವರಿಗಾಗಿ ಅಲ್ಲ ಶಾಸಕರಿಗಾಗಿ ಎಂದು ಸಭಾಧ್ಯಕ್ಷರು ಒತ್ತಿ ಹೇಳಿದರು.
ಲಿಖಿತವಾಗಿ ಮಂಡಿಸಬೇಕಾದ ಉತ್ತರಗಳನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಸಚಿವರು ಮತ್ತು ಆಯಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ತಮ ಬಳಿ ಬಂದು ಸಮಸ್ಯೆಯ ಬಗ್ಗೆ ಸ್ಪಷ್ಟ ವಿವರಣೆ ನೀಡಿದ ಹೊರತು, ತಾವು ಸದನ ನಡೆಸುವುದಿಲ್ಲ ಎಂದು ಹೇಳಿ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪವನ್ನು ಮುಂದೂಡಿ ಹೊರ ನಡೆದರು.
ಮಹತ್ವದ ಬೆಳವಣಿಗೆ:
ಆಡಳಿತ ಪಕ್ಷದವರೇ ಆಗಿರುವ ಸಭಾಧ್ಯಕ್ಷರು ಈ ರೀತಿ ಕಲಾಪವನ್ನು ಮುಂದೂಡಿರುವುದು ಸರ್ಕಾರಕ್ಕೆ ಭಾರಿ ಮುಜುಗರ ತಂದಿದೆ. ಸಾಮಾನ್ಯವಾಗಿ ವಿರೋಧಪಕ್ಷದವರು ಗದ್ದಲ ಅಥವಾ ಸದನ ನಡೆಯಲು ಸಾಧ್ಯವಿಲ್ಲದಂತಹ ಕೋಲಾಹಲದ ವಾತಾವರಣ ಇದ್ದಾಗ ಅಧಿವೇಶನ ಮುಂದೂಡಿಕೆಯಾಗುತ್ತದೆ. ಆದರೆ ಸರ್ಕಾರದ ವಿರುದ್ಧವೇ ಸ್ಪೀಕರ್ ಅವರು ಸಿಟ್ಟಾಗಿ ಅಧಿವೇಶನ ಮುಂದೂಡಿದ್ದು ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ನಮೂದಾಗಿದೆ. ಈ ಮೊದಲು ಕಾಗೋಡು ತಿಮಪ್ಪ ಸ್ಪೀಕರ್ ಆಗಿದ್ದಾಗ ಈ ರೀತಿ ನಡೆದಿತ್ತು ಎನ್ನಲಾಗಿದೆ.
ಸಾಮಾನ್ಯವಾಗಿ ಸಭಾಧ್ಯಕ್ಷರು ಸರ್ಕಾರದ ಲೋಪಗಳನ್ನು ಸರಿದೂಗಿಸಿಕೊಂಡು ಅಧಿವೇಶನವನ್ನು ನಡೆಸುತ್ತಾರೆ. ವಿರೋಧ ಪಕ್ಷದವರು ಸ್ಪೀಕರ್ ಅವರು ನಿಷ್ಪಕ್ಷಪಾತವಾಗಿರಬೇಕು ಸರ್ಕಾರವನ್ನು ಸಹಿಸಬಾರದು ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಈ ಬಾರಿ ವಿರೋಧ ಪಕ್ಷದ ನಾಯಕರು ಪ್ರಶ್ನೋತ್ತರದ ಸಂಬಂಧ ಪಟ್ಟಂತೆ ಸರ್ಕಾರವನ್ನು ಕಟು ಶಬ್ದಗಳಲ್ಲಿ ತೆಗೆದುಕೊಂಡಿದ್ದು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಸ್ಪೀಕರ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಕಲಾಪವನ್ನೇ ಮುಂದೂಡುವ ಮೂಲಕ ಐತಿಹಾಸಿಕ ದಾಖಲೆಯನ್ನೇ ಮಾಡಿದ್ದಾರೆ. ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
