ಬೆಂಗಳೂರು,ಮಾ.16- ಹೋಟೆಲ್‌ಗಳಿಗೆ ಸದ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲು ಸಾಧ್ಯವಿಲ್ಲ. ವಿದ್ಯುತ್ ಸ್ಟೌವ್‌ಗಳನ್ನು ಬಳಸಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಇಂದಿಲ್ಲಿ ಹೇಳಿದ್ದಾರೆ.
ತೈಲ ಪೂರೈಕೆ ಕಂಪನಿಗಳ ಜೊತೆ ಇಂದು ಮಹತ್ವದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿ ಸದ್ಯ ಗಂಭೀರವಾಗಿದೆ. ಆದ್ದರಿಂದ ಸದ್ಯಕ್ಕೆ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆಯಲ್ಲಿ ಅಡಚಣೆಯಾಗಲಿದೆ. ಇದನ್ನು ಸರಿದೂಗಿಸಲು ಎಲೆಕ್ಟ್ರಿಕ್ ಸ್ಟೌವ್‌ಗಳನ್ನು ಬಳಬೇಕೆಂದು ಸಚಿವರು ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಈಗಾಗಲೇ ತೈಲಕಂಪನಿಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಅಗತ್ಯ ಮಾಹಿತಿಗಳನ್ನು ಪಡೆದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಗೃಹಬಳಕೆ ಎಲ್‌ಪಿಜಿಗಳನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿನಾಕಾರಣ ಗ್ರಾಹಕರು ಆತಂಕ ಪಡಬಾರದು. ಮಿತವಾಗಿ ಬಳಸಬೇಕು ಮತ್ತು ಡಬ್ಬಲ್ ಬುಕ್ಕಿಂಗ್ ಮಾಡಬೇಡಿ ಎಂದು ಮನವಿ ಮಾಡಿದರು.
ಈಗಾಗಲೇ ಅನಿಲ ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಮಧ್ಯಪ್ರಾಚ್ಯದಿಂದ ಬಂದಿರುವ ಮೂರ್ನಾಲ್ಕು ಹಡಗುಗಳು ಸಾಕಷ್ಟು ಅನಿಲವನ್ನು ತಂದಿವೆ. ಸಂಪೂರ್ಣವಾಗಿ ರೀಫಿಲ್ಲಿಂಗ್ ಆಗಿ ಗ್ರಾಹಕರ ಕೈಸೇರಲು ಇನ್ನು ಕೆಲವು ದಿನಗಳು ಇಂತಹ ಸಮಸ್ಯೆಗಳು ಎದುರಾಗಬಹುದು ಎಂದು ಸುಳಿವು ನೀಡಿದ್ದಾರೆ.
ಮೊದಲ ಆದ್ಯತೆಯಾಗಿ ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್, ರೈಲ್ವೆ ಕ್ಯಾಂಟೀನ್‌ಗಳಿಗೆ ಶೇ.100 ರಷ್ಟು ಸಿಲಿಂಡರ್ ನೀಡಲು ಒಪ್ಪಿಗೆ ನೀಡಲಾಗಿದೆ. ಆರೂವರೆ ಸಾವಿರ ಸಿಲಿಂಡರ್ ಗಳ ಪ್ರತಿದಿನ ಖರ್ಚಿಗೆ ಕೇಂದ್ರ ಒಪ್ಪಿಗೆ ನೀಡಿದೆ. ಇದರಲ್ಲಿ 4,200 ಸಿಲಿಂಡರ್ ಅಗತ್ಯ ವಲಯಕ್ಕೆ ಪೂರೈಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆಟೋಗ್ಯಾಸ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಹೋಟೆಲ್‌ಗಳಿಗೆ ಸದ್ಯಕ್ಕೆ ಪೂರೈಕೆ ಆಗುವುದಿಲ್ಲ. ಕಾಳಸಂತೆಯಲ್ಲಿ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿರುವವರ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ವಿಶೇಷ ತಂಡವೊಂದನ್ನು ರಚಿಸಿರುವುದಾಗಿ ಸಚಿವರು ತಿಳಿಸಿದರು.
ರಾಜ್ಯದಲ್ಲಿ 14 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಅದರಲ್ಲಿ ನಾಲ್ಕುವರೆ ಸಾವಿರ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ನಿತ್ಯ 44 ಸಾವಿರ ಸಿಲಿಂಡರ್ ಬೇಕು, ಆದರೆ ವ್ಯತ್ಯಯ ಉಂಟಾಗಿದೆ ಎಂದರು.
ಈಗಾಗಲೇ ಸಿಎಂ ಕೇಂದ್ರಕ್ಕೆ ಪತ್ರ ಬರೆದು ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ. ಈಗ ಕೇವಲ ಅಗತ್ಯ ವಲಯಕ್ಕೆ ಒಂದು ಸಾವಿರ ವಾಣಿಜ್ಯ ಸಿಲಿಂಡರ್‌ಗಳನ್ನು ಮಾತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.
