ಚೆನ್ನೈ, ಸೆ.23- ಸರ್ಕಾರಿ ವಸತಿ ನಿಲಯಗಳ ಆಹಾರ ಮೆನುವಿನಲ್ಲಿ ಚಿಕನ್, ಮಟನ್ ಜೊತೆಗೆ ಗೋಮಾಂಸವನ್ನೂ ಸೇರಿಸುವಂತೆ ತಮಿಳುನಾಡಿನ ಕೆಲ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಸರ್ಕಾರ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಈ ವಿಷಯದ ಕುರಿತು ತಮಿಳುನಾಡು ಸಾಮಾಜಿಕ ನ್ಯಾಯ ಸಚಿವ ವನ್ನಿ ಅರಸು ಮಾತನಾಡಿ, ಕೆಲ ವಿದ್ಯಾರ್ಥಿಗಳು ತಮ್ಮ ಊಟದ ಮೆನುವಿನಲ್ಲಿ ಗೋಮಾಂಸವನ್ನು ಸೇರಿಸುವಂತೆ ಮನವಿ ಮಾಡಿರುವುದು ನಿಜ ಎಂದು ತಿಳಿಸಿದ್ದಾರೆ.
ಚೆನ್ನೈನ ಸೈದಾಪೇಟೆಯಲ್ಲಿರುವ ಎಂ.ಸಿ. ರಾಜಾ ಸಾಮಾಜಿಕ ನ್ಯಾಯ ವಿದ್ಯಾರ್ಥಿ ವಸತಿ ನಿಲಯಕ್ಕೆ ಅರಸು ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಸಂವಾದ ನಡೆಸಿದರು. ಈ ವೇಳೆ ಗ್ರಾಮೀಣ ಹಿನ್ನೆಲೆಯ ಕೆಲ ವಿದ್ಯಾರ್ಥಿಗಳು ಈಗಿರುವ ಮಾಂಸಾಹಾರಿ ಮೆನುವಿನಲ್ಲಿ ಗೋಮಾಂಸವನ್ನು ಸೇರಿಸುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ.
ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಈಗಾಗಲೇ ಮಟನ್ ಮತ್ತು ಚಿಕನ್ ನೀಡಲಾಗುತ್ತಿದ್ದು, ಸೋಮವಾರದಂದು ಬಿರಿಯಾನಿ ನೀಡಲಾಗುತ್ತಿದೆ. ಮಟನ್ ದುಬಾರಿಯಾಗಿರುವುದರಿಂದ ಗ್ರಾಮೀಣ ಹಿನ್ನೆಲೆಯ ಕೆಲ ವಿದ್ಯಾರ್ಥಿಗಳು ಅದನ್ನು ತಮ್ಮ ಮನೆಗಳಲ್ಲಿ ಹೆಚ್ಚಾಗಿ ಸೇವಿಸುವುದಿಲ್ಲ. ಹೀಗಾಗಿ ಮೆನುವಿನಲ್ಲಿ ಗೋಮಾಂಸ ಸೇರಿಸುವಂತೆ ಮನವಿ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ವನ್ನಿ ಅರಸು, ಈ ಕುರಿತು ಸರ್ಕಾರ ತಕ್ಷಣ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ಮಧ್ಯೆ, ಗೋಮಾಂಸವನ್ನು ಹಾಸ್ಟೆಲ್ ಮೆನುವಿನಲ್ಲಿ ಸೇರಿಸುವ ಸಾಧ್ಯತೆಯನ್ನು ಪುತ್ತಿಯ ತಮಿಳಗಂ ಪಕ್ಷದ ನಾಯಕ ಕೆ. ಕೃಷ್ಣಸಾಮಿ ವಿರೋಧಿಸಿದ್ದು, ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
