ಆಜಂಗಢ, ಸೆ.23- ಪತ್ನಿ ಹಾಗೂ ಇಬ್ಬರು ಅರ್ಚಕರನ್ನು ಗುಂಡಿಕ್ಕಿ ಹತ್ಯೆಗೈದು, ಮೂವರು ಮಕ್ಕಳನ್ನು ಕೊಠಡಿಯಲ್ಲಿ ಒತ್ತೆಯಾಳಾಗಿಸಿಕೊಂಡಿದ್ದ ಆರೋಪಿಯೊಬ್ಬ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ.ಸುಮಾರು ಏಳು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಇಂದು ಮುಂಜಾನೆ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಅಹರೌಲಾ ಪ್ರದೇಶದ ಶಂಭೂಪುರ ಗ್ರಾಮದ ಅರವಿಂದ್ ಸಿಂಗ್ ಎಂದು ಗುರುತಿಸಲಾಗಿದೆ. ಮುಂಜಾನೆ ಸುಮಾರು 3.30ಕ್ಕೆ ಗುಂಡೇಟಿನಿಂದ ಗಾಯಗೊಂಡಿದ್ದ ಆತ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.
ನಿನ್ನೆ ಸಂಜೆ ಧಾರ್ಮಿಕ ವಿಧಿವಿಧಾನ ನಡೆಯುತ್ತಿದ್ದ ವೇಳೆ ಅರವಿಂದ್ ಮನೆಗೆ ಬಂದಿದ್ದ. ಪತ್ನಿ ಬಬಿತಾ ಸಿಂಗ್ (32) ಹಾಗೂ ಅರ್ಚಕರಾದ ಮಹೇಂದ್ರ ಪಾಠಕ್ (60) ಮತ್ತು ಅಖಿಲೇಶ್ ಮಿಶ್ರಾ (50) ಅವರೊಂದಿಗೆ ಪೂಜೆ ನಡೆಯುತ್ತಿತ್ತು.
ವಿಧಿವಿಧಾನದ ಕುರಿತು ಅರ್ಚಕರನ್ನು ಪ್ರಶ್ನಿಸಿದ ಅರವಿಂದ್, ಅವರ ಆಧಾರ್ ಕಾರ್ಡ್‌ಗಳನ್ನು ಕೇಳಿದ್ದಾನೆ. ಈ ವೇಳೆ ವಾಗ್ವಾದ ನಡೆದಿದ್ದು, ಆತ ತನ್ನ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪತ್ನಿ ಹಾಗೂ ಇಬ್ಬರು ಅರ್ಚಕರನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಮೂವರು ಮಕ್ಕಳೊಂದಿಗೆ ಕೊಠಡಿಯೊಳಗೆ ಸೇರಿಕೊಂಡ ಅರವಿಂದ್, ಮಕ್ಕಳನ್ನು ಕೊಲ್ಲುವುದಾಗಿ ಪದೇಪದೇ ಬೆದರಿಕೆ ಹಾಕಿದ್ದ. ಎಂಟು ಪೊಲೀಸ್ ಠಾಣೆಗಳ ಸಿಬ್ಬಂದಿ ಮನೆ ಸುತ್ತುವರಿದಿದ್ದರು. ಎಸ್‌ಪಿ, ಡಿಐಜಿ ಸುನಿಲ್ ಕುಮಾರ್ ಸಿಂಗ್ ಹಾಗೂ ವಾರಾಣಸಿ ಎಡಿಜಿ ನವೀನ್ ಅರೋರಾ ಸೇರಿದಂತೆ ಹಿರಿಯ ಅಧಿಕಾರಿಗಳು ಹಲವು ಗಂಟೆಗಳ ಕಾಲ ಆರೋಪಿಯನ್ನು ಶರಣಾಗುವಂತೆ ಮನವೊಲಿಸಲು ಪ್ರಯತ್ನಿಸಿದ್ದರು.
ಈ ವೇಳೆ ಆರೋಪಿ ಮಕ್ಕಳ ಮೇಲೂ ಗುಂಡು ಹಾರಿಸಿದ್ದು, ಓರ್ವ ಮಗು ಗಂಭೀರವಾಗಿ ಗಾಯಗೊಂಡಿದೆ. ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
