Homeರಾಷ್ಟ್ರೀಯಬಳ್ಳಾರಿ-ಹೊಸಪೇಟೆ ರೈಲು ಮಾರ್ಗ ಮೇಲ್ದರ್ಜೆಗೆ ಕೇಂದ್ರ ಸಂಪುಟ ಅಸ್ತು

ಬಳ್ಳಾರಿ-ಹೊಸಪೇಟೆ ರೈಲು ಮಾರ್ಗ ಮೇಲ್ದರ್ಜೆಗೆ ಕೇಂದ್ರ ಸಂಪುಟ ಅಸ್ತು

Union Cabinet approves upgrade of Bellary-Hospet railway line

ಬೆಂಗಳೂರು, ಫೆ.15- ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ 167ರ ಗುಡೇಬೆಳ್ಳೂರು-ಮೆಹಬೂಬ್‌ನಗರ ಮಾರ್ಗವನ್ನು ಮೇಲ್ದರ್ಜೆಗೇರಿಸಿ ಚತುಷ್ಪಥಗೊಳಿಸಲು ಅನುಮೋದನೆ ನೀಡಿರುವುದನ್ನು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಸ್ವಾಗತಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕೇಂದ್ರ ಸಚಿವರು, ಬಳ್ಳಾರಿ-ಹೊಸಪೇಟೆ ನಡುವಿನ 3ನೇ ಮತ್ತು 4ನೇ ರೈಲು ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆಯು ಕರ್ನಾಟಕದ ಸರಕು ಸಾಗಣೆ ಮತ್ತು ಜನ ಸಂಚಾರದ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ದೃಢ ನಿರ್ಧಾರವಾಗಿದೆ ಎಂದಿದ್ದಾರೆ.

ಇದರ ಭಾಗವಾಗಿ 65 ಕಿ.ಮೀ. ಉದ್ದದ ಈ ರೈಲು ಮಾರ್ಗದ ವಿಸ್ತರಣೆಯು ಗಣಿಗಾರಿಕೆ, ಉಕ್ಕು ಉತ್ಪಾದನೆ ಹಾಗೂ ಕೈಗಾರಿಕೆಗಳ ಪೂರಕ ವ್ಯವಸ್ಥೆ ವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಂಪರ್ಕ ಸೌಲಭ್ಯವನ್ನು ಹೆಚ್ಚಿಸುವ ಮೂಲಕ ಈ ಯೋಜನೆಯು ಪ್ರಯಾಣಿಕರ ಸೇವೆಗಳನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ. ಸರಕು ಸಾಗಾಣಿಕೆಯನ್ನು ಇನ್ನಷ್ಟು ಸುಗಮಗೊಳಿಸುತ್ತದೆ ಹಾಗೂ ಐತಿಹಾಸಿಕ, ವಿಶ್ವ ಪಾರಂಪರಿಕ ತಾಣವಾದ ಹಂಪಿ ಮತ್ತು ತುಂಗಭದ್ರಾ ಅಣೆಕಟ್ಟೆಯಂತಹ ಪ್ರಸಿದ್ಧ ತಾಣಗಳಿಗೆ ಪ್ರವಾಸಿಗರ ಭೇಟಿಗೆ ಉತ್ತೇಜನ ನೀಡುತ್ತದೆ. ಈ ಯೋಜನೆಯ ಅನುಷ್ಠಾನದಿಂದ ವಾರ್ಷಿಕ 323 ಕೋಟಿ ರೂ.ನಷ್ಟು ಬೃಹತ್‌ ಮೊತ್ತದ ಸರಕು ಸಾಗಾಣಿಕೆ ವೆಚ್ಚ ಉಳಿತಾಯ ಆಗುತ್ತದೆ ಹಾಗೂ ಇಂಗಾಲದ ಹೊರಸೂಸುವಿಕೆಯಲ್ಲಿ ಗಣನೀಯವಾಗಿ ತಗ್ಗುತ್ತಿದೆ. ಈ ಉಪಕ್ರಮವು ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 167ರ ಗುಡೇಬೆಳ್ಳೂರು-ಮಹಬೂಬ್‌ನಗರ ಮಾರ್ಗವನ್ನು ಮೇಲ್ದರ್ಜೆಗೇರಿಸಿ ಚತುಷ್ಪಥಗೊಳಿಸಲು ಸಂಪುಟದ ಅನುಮೋದನೆ ನೀಡಿದ್ದು, ಇದರಿಂದ ಹೈದರಾಬಾದ್‌-ಪಣಜಿ ಆರ್ಥಿಕ ಕಾರಿಡಾರ್‌ಗೆ ದೊಡ್ಡ ಪ್ರಮಾಣದ ಉತ್ತೇಜನ ದೊರೆಯುತ್ತದೆ. ಮುಖ್ಯವಾಗಿ, ಈ ಯೋಜನೆಯು ಕರ್ನಾಟಕದ ರಾಯಚೂರು ಮತ್ತು ಹೈದರಾಬಾದ್‌ ನಡುವಿನ ತಡೆರಹಿತ ಸಂಪರ್ಕವನ್ನು ಬಲಪಡಿಸುತ್ತದೆ, ತ್ವರಿತಗತಿಯ ಸಂಚಾರಕ್ಕೆ ಪೂರಕವಾಗಿದೆ, ಪ್ರಯಾಣದ ಸಮಯವನ್ನು ಸುಮಾರು ಶೇ.50ರಷ್ಟು ಕಡಿಮೆ ಮಾಡುತ್ತದೆ ಮತ್ತು ಪ್ರಾದೇಶಿಕ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.

RELATED ARTICLES
spot_img

Latest News