ನವದೆಹಲಿ,ಏ.17- ಶತಕೋಟಿ ಭಾರತೀಯರು ಚಾತಕ ಪಕ್ಷಿಯಂತೆ ಎದುರು ನೋಡುತ್ತಿರುವ ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ.33 ರಷ್ಟು ಮೀಸಲಾತಿ ನೀಡುವ ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶದ ಚಿತ್ತ ಸಂಸತ್ನತ್ತ ನೆಟ್ಟಿದೆ.
ಲೋಕಸಭೆಯಲ್ಲಿ ಒಟ್ಟು ಮೂರು ಮಸೂದೆಗಳನ್ನು ಅಂಗೀಕಾರವಾಗಬೇಕು. ಇದರಲ್ಲಿ ಸಂವಿಧಾನ (ನೂರ ಮೂವತ್ತೊಂದನೇ ತಿದ್ದುಪಡಿ) 2026, ಕ್ಷೇತ್ರಗಳ ಪುನರ್ವಿಂಗಡಣೆ 2026 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ 2026ರ ಹಣೆಬರಹ ಇಂದು ನಿರ್ಧಾರವಾಗಲಿದೆ.
ಒಂದು ವೇಳೆ ಈ ಐತಿಹಾಸಿಕ ಮಸೂದೆ ಅನುಮೋದನೆಯಾದರೆ, ಭಾರತದ ಇತಿಹಾಸದಲ್ಲೀ ಹೊಸ ದಾಖಲೆ ಸೃಷ್ಟಿಯಾಗಲಿದೆ. ಏಕೆಂದರೆ, ಇನ್ನು ಮುಂದೆ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮಹಿಳೆಯರಿಗೆ ಒಟ್ಟು ಸ್ಥಾನಗಳಲ್ಲಿ ಶೇ 33 ರಷ್ಟು ಮೀಸಲಾತಿ ನೀಡಬೇಕಾಗುತ್ತದೆ. ಲೋಕಸಭೆಯ ಹಾಲಿ ಇರುವ 543 ಕ್ಷೇತ್ರಗಳಿಂದ ಕೇಂದ್ರಾಡಳಿತ ಪ್ರದೇಶದ 35 ಕ್ಷೇತ್ರಗಳು ಸೇರಿದಂತೆ ಒಟ್ಟು ಸದಸ್ಯರ ಸಂಖ್ಯೆ 850ಕ್ಕೆ ಹಿಗ್ಗಲಿದೆ.
2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆಯಲಿದ್ದು, ಮುಂಬರುವ 2029 ರ ಲೋಕಸಭಾ ಚುನಾವಣೆ ವೇಳೆ ಇದು ಕಾರ್ಯರೂಪಕ್ಕೆ ಬರಲಿದೆ. ಸಂಜೆ 4 ಗಂಟೆಗೆ ಲೋಕಸಭೆಯಲ್ಲಿ ಮೂರು ಮಸೂದೆಗಳ ಮೇಲಿನ ಚರ್ಚೆ ಮುಕ್ತಾಯವಾದ ನಂತರ ಮತದಾನ ನಡೆಯಲಿದೆ. ಈ ಮೂರು ಮಸೂದೆಗಳು ಸಾಂವಿಧಾನಿಕ ಮಸೂದೆಗಳಾಗಿರುವುದರಿಂದ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಬೇಕಾದರೆ 2/3 ಬಹುಮತದ ಅಗತ್ಯವಿದೆ.
ಸಂವಿಧಾನ (ನೂರ ಮೂವತ್ತೊಂದನೇ ತಿದ್ದುಪಡಿ) ಮಸೂದೆ 2026, ಕ್ಷೇತ್ರಗಳ ಪುನರ್ವಿಂಗಡಣೆ ಮಸೂದೆ 2026 ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ 2026 ಕುರಿತು ನಡೆದ ಚರ್ಚೆಯು ಕಳೆದ ತಡರಾತ್ರಿ 1 ಗಂಟೆವರೆಗೂ ನಡೆದಿತ್ತು.
ಪುನಃ ಇಂದು ಬೆಳಿಗ್ಗೆ ಮತ್ತೆ ಚರ್ಚೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳಾದ ಡಿಎಂಕೆ, ಟಿಎಂಸಿ, ಎಎಪಿ ಸೇರಿದಂತೆ ವಿರೋಧಪಕ್ಷದ ನಾಯಕರು ಮಾತನಾಡಿ ಮಸೂದೆಯನ್ನು ಬಲವಾಗಿ ವಿರೋಧಿಸಿದರು. ಈ ಬೆಳವಣಿಗೆಗಳ ನಡುವೆಯೇ ವೈಎಸ್ಆರ್ ಪಕ್ಷ ಮಸೂದೆಗೆ ಬೆಂಬಲ ನೀಡಿರುವುದು ಎನ್ಡಿಎಗೆ ಇನ್ನಷ್ಟು ಬಲ ತಂದಿದೆ.
ಆದರೆ ಮಸೂದೆ ಅಂಗೀಕಾರಕ್ಕೆ ಸದನದಲ್ಲಿ 2/3 ರಷ್ಟು ಬಹುಮತ ಬೇಕಾಗಿರುವುದರಿಂದ ಎನ್ಡಿಎ ಉಳಿದ ಸಂಖ್ಯೆಯನ್ನು ಹೇಗೆ ಹೊಂದಾಣಿಕೆ ಮಾಡುತ್ತದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಏಕೆಂದರೆ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 293 ಸದಸ್ಯರನ್ನು ಹೊಂದಿದ್ದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 234 ಸದಸ್ಯರನ್ನು ಹಾಗೂ ಇತರರು 37 ಸದಸ್ಯರಿದ್ದಾರೆ.
ಲೋಕಸಭೆಯ ಒಟ್ಟು 540 (3 ಸ್ಥಾನಗಳು ಖಾಲಿ) ಸ್ಥಾನಗಳಿರುವುದರಿಂದ 360 ಸದಸ್ಯರ ಬೆಂಬಲದ ಮೂಲಕ ಈ ಸಾಂವಿಧಾನಿಕ ಮಸೂದೆಗಳನ್ನು ಅಂಗೀಕರಿಸಬೇಕು. ಎನ್ಡಿಎಗೆ 67 ಸದಸ್ಯರ ಬೆಂಬಲದ ಕೊರತೆ ಇದೆ. ಇದನ್ನು ಸರಿದೂಗಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಪ್ರತಿಪಕ್ಷಗಳು ಶತಾಯಗತಾಯ ಮಸೂದೆಯನ್ನು ಸೋಲಿಸಲೇಬೇಕೆಂದು ಮೊದಲ ಬಾರಿಗೆ ಲೋಕಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿರುವುದರಿಂದ ಮಸೂದೆ ಅಂಗೀಕಾರಕ್ಕೆ ಭಾರೀ ತೊಡರುಗಾಲು ಎದುರಾಗಿದೆ.
ವಿರೋಧ ಪಕ್ಷಗಳು ಈ ಮಸೂದೆಗಳನ್ನು ಭಾರತದ ಒಕ್ಕೂಟ ವ್ಯವಸ್ಥೆಯ ರಚನೆ ಮೇಲಿನ ದಾಳಿ ಎಂದು ಟೀಕಿಸಿವೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಯಾವುದೇ ರಾಜ್ಯಕ್ಕೂ ಅನ್ಯಾಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನಂತರ, ವಿರೋಧ ಪಕ್ಷಗಳು ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕರಿಸಿದರೆ ಭಾರತದಲ್ಲಿ ಪ್ರಜಾಸತ್ತಾತಕ ವ್ಯವಸ್ಥೆ ಹಾನಿಯಾಗುತ್ತದೆ ಎಂದು ಆರೋಪಿಸಿವೆ. ಇದರಿಂದ ಎನ್ಡಿಎ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆದಿದೆ.
ಮೂರು ಮಸೂದೆಗಳಿಗೆ ವಿರೋಧ ವ್ಯಕ್ತಪಡಿಸಿದರೆ ದೀರ್ಘಕಾಲದ ರಾಜಕೀಯ ಬೆಲೆ ಕಟ್ಟಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡಿದರು. ಹಿಂದೆಯೂ ಇದಕ್ಕೆ ವಿರೋಧಿಸಿದವರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ ಎಂದು ಹೇಳಿದರು.
ಬುಧವಾರ ಕೆಳಮನೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಬೆಳಕು ಚೆಲ್ಲಿದರು. ಮಸೂದೆಗೆ ರಾಜಕೀಯ ಬಣ್ಣ ನೀಡುವ ಅಗತ್ಯವಿಲ್ಲ. ಈ ಮಸೂದೆ ವಿಕಸಿತ ಭಾರತಕ್ಕೆ ಹೊಸ ಅಧ್ಯಾಯವ ಸೇರ್ಪಡೆಗೆ ಒಂದು ಅವಕಾಶ ಎಂದು ಹೇಳಿದ್ದರು.
