Monday, November 11, 2024
Homeಬೆಂಗಳೂರುಬೆಂಗಳೂರಲ್ಲಿ ಕಂಡು ನೀರಿನ ಹಾಹಾಕಾರ, RO ಘಟಕಗಳ ಬಂದ್, ಜನ ಕಂಗಾಲು

ಬೆಂಗಳೂರಲ್ಲಿ ಕಂಡು ನೀರಿನ ಹಾಹಾಕಾರ, RO ಘಟಕಗಳ ಬಂದ್, ಜನ ಕಂಗಾಲು

ಬೆಂಗಳೂರು,ಏ.1- ಕುಡಿಯುವ ನೀರಿಗೆ ನಗರದಲ್ಲಿ ಕಂಡು ಕೇಳರಿಯದಂತಹ ಅಭಾವ ಸೃಷ್ಟಿಯಾಗಿದೆ. ಜನರ ಕುಡಿಯುವ ನೀರಿಗಾಗಿ ಮೊರೆ ಹೋಗುತ್ತಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲೇ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನೀರಿಗಾಗಿ ತಿರುಗಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಬಿಬಿಎಂಪಿ ಕೇಂದ್ರ, ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಈ ಭಾಗದಲ್ಲಿರುವ ನೂರಾರು RO ಘಟಕಗಳನ್ನು ಬಂದ್ ಮಾಡಿರುವುದರಿಂದ ಜನ ಕಂಗಲಾಗಿದ್ದಾರೆ. ನಗರದಲ್ಲಿರುವ ಸಾವಿರಾರು ಬೋರ್ವೆಲ್ಗಳು ಬತ್ತಿ ಹೋಗಿದ್ದು, ಅಂತರ್ಜಲದ ಸೆಲೆಯೂ ಒಣಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ RO ಶುದ್ಧ ಕುಡಿಯುವ ನೀರಿನ ಘಟಕಗಳು ಮುಚ್ಚಿ ಹೋಗಿವೆ.

ಅಲ್ಪ ಸ್ವಲ್ಪ ನೀರಿರುವ ಘಟಕಗಳನ್ನು ಇನ್ನೇನು ಮುಚ್ಚುವ ಸ್ಥಿತಿಗೆ ತಲುಪಿವೆ. ಕೆಲವು RO ಘಟಕಗಳಲ್ಲಿ ವಿದ್ಯುತ್ ಹಾಗೂ ನೀರಿನ ವೆಚ್ಚ ಹೆಚ್ಚಾಗುತ್ತಿದ್ದು, ಇದನ್ನು ನಿರ್ವಹಿಸಲು 20 ಲೀಟರ್ ನೀರಿನ ಬೆಲೆಯನ್ನು ದುಪ್ಪಟ್ಟು ಮಾಡುವುದು ಅನಿವಾರ್ಯವಾಗಿದೆ. ನಗರದಲ್ಲಿ 1,052 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಈ ಪೈಕಿ 209 ಘಟಕಗಳು ಈಗಾಗಲೇ ಸ್ಥಗಿತಗೊಂಡಿವೆ. ಉಳಿದ ಘಟಕಗಳಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಅನೇಕ ಘಟಕಗಳು ಮುಚ್ಚುವ ಹಂತದಲ್ಲಿದೆ.

ಇನ್ನು ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಬೆಲೆಯನ್ನು 5 ರೂಪಾಯಿ ಬದಲಾಗಿ 10 ರೂಪಾಯಿಗೆ ಹೆಚ್ಚಿಸಲಾಗಿದೆ. ಒಬ್ಬರಿಗೆ ಒಂದು ಕ್ಯಾನ್ ನೀರು ನಿಯಮದ ಜಾರಿಗೆ ತರಲಾಗಿದೆ. ಇನ್ನು ಹಲವೆಡೆ 20 ಲೀ. ನೀರಿನ ಕ್ಯಾನ್ಗಳಲ್ಲಿ 19 ಲೀಟರ್ ನೀರು ಮಾತ್ರ ತುಂಬುತ್ತಿರುವ ದೂರುಗಳು ಕೇಳಿ ಬರುತ್ತಿವೆ.

ಈ RO ಘಟಕಗಳನ್ನೇ ಅವಲಂಬಿಸಿದ್ದ ಸಣ್ಣ ಹೊಟೇಲ್ಗಳು, ಚಾಟ್ ಸೆಂಟರ್ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ, ಮನೆಯಲ್ಲಿ ನೀರು ಶುದ್ಧೀಕರಣ ಯಂತ್ರಗಳನ್ನು ಹೊಂದಲು ಸಾಧ್ಯವಾಗದ ಅನೇಕರಿಗೆ ಕೇವಲ 5 ರೂಪಾಯಿಗೆ ದೊರೆಯುತ್ತಿದ್ದ 20 ಲೀ ಕುಡಿಯುವ ನೀರು ಜೀವನಾಡಿಯಾಗಿತ್ತು. ಇದೀಗ ಅಂತಹ Ro ಘಟಕಗಳನ್ನು ಮುಚ್ಚುತ್ತಿರುವುದು ಜನರಲ್ಲಿ ಆತಂಕ ಹೆಚ್ಚಾಗಿಸಿದೆ.

ಹೊಸ ಬೋರ್ವೆಲ್ ನಲ್ಲೂ ನೀರು ಸಿಗುತ್ತಿಲ್ಲ;
ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಸಂಪರ್ಕ ಕಲ್ಪಿಸಿರುವ ಬೋರ್ವೆಲ್ ಬತ್ತಿ ಹೋಗಿರುವುದನ್ನು ಮನಗಂಡು ಸರ್ಕಾರ ಹೊಸ ಬೋರ್ವೆಲ್ ಕೊರೆಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಕೆಲವು ಕಡೆ 1000 ಅಡಿ ಕೊರೆದರೂ ನೀರು ಸಿಗದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಒಂದು ಕಡೆ ನೀರು ಸಿಕ್ಕರೆ ಅದರಿಂದ ಸಮೀಪದ ಹಳೆ ಬೋರ್ವೆಲ್ಗಳು ಬತ್ತಿಹೋಗುತ್ತಿರುವುದು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಹಿಡಿದ ಕೈಗನ್ನಡಿಯಂತಿದೆ.

ಸಂಸ್ಕರಿಸದ ನೀರು ಸರಬರಾಜು:
ನಗರದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನೇ ತಮ್ಮ ಬಂಡವಾಳ ಮಾಡಿಕೊಂಡಿರುವ ಕೆಲ ಕಿಡಿಗೇಡಿಗಳು ಶುದ್ಧಿಕರಿಸದ ನೀರನ್ನೆ ಕ್ಯಾನ್ಗಳಿಗೆ ತುಂಬಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಜನ ಇಂತಹ ವ್ಯಕ್ತಿಗಳ ವಿರುದ್ಧ ದೂರು ನೀಡಿದರೆ ಮತ್ತೆ ನಮಗೆ ಎಲ್ಲಿ ನೀರು ಸಿಗುವುದಿಲ್ಲವೋ ಎಂಬ ಅನುಮಾನದಿಂದ ದೂರು ನೀಡದೆ ಅವರು ಕೇಳುವ ಬೆಲೆಗೆ ನೀರು ಖರೀದಿಸುತ್ತಿದ್ದಾರೆ.

ಇನ್ನು ಕೆಲ ದಿನಗಳಲ್ಲಿ ಮಳೆ ಬಂದು ನಗರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಜನ ರಾಜಧಾನಿಯಿಂದ ಬೇರೆ ಕಡೆಗೆ ವಲಸೆ ಹೋಗುವಂತಹ ಸನ್ನಿವೇಶ ನಿರ್ಮಾಣವಾದರೂ ಅಚ್ಚರಿಪಡುವಂತಿಲ್ಲ ಎನ್ನುವಂತಾಗಿದೆ.

RELATED ARTICLES

Latest News