Wednesday, May 1, 2024
Homeರಾಜ್ಯಕೋವಿಡ್ ಹೆಸರಿನಲ್ಲಿ ವಂಚಿಸಿದ್ದವರ ವಿರುದ್ಧ ಕ್ರಮಕ್ಕೆ ಎನ್.ಆರ್.ರಮೇಶ್ ಆಗ್ರಹ

ಕೋವಿಡ್ ಹೆಸರಿನಲ್ಲಿ ವಂಚಿಸಿದ್ದವರ ವಿರುದ್ಧ ಕ್ರಮಕ್ಕೆ ಎನ್.ಆರ್.ರಮೇಶ್ ಆಗ್ರಹ

ಬೆಂಗಳೂರು,ಏ.16- ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಲಕ್ಷಾಂತರ ರೂ.ಗಳನ್ನು ಬಿಬಿಎಂಪಿಗೆ ವಂಚಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ಗಿರಿನಾಥ್ ಹಾಗೂ ಬಿಎಂಟಿಎಫ್ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ಆರೋಗ್ಯ ಅಧಿಕಾರಿಯಾಗಿದ್ದ ಡಾ. ಸವಿತ ಮತ್ತು ಶಾಂತಿನಗರ ವಿಭಾಗದ ಆರೋಗ್ಯ ವೈದ್ಯಾಧಿಕಾರಿಗಳಾಗಿದ್ದ ಶ್ರೀನಿವಾಸ್ ಗೌಡ ಅವರು ಭಾರಿ ಅಕ್ರಮ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆರೋಪಿಗಳು ಶಾಂತಿನಗರ ರೇಂಜ್ ಕೋವಿಡ್ ಸ್ಟಾಪ್ ಡಿಇಒ ಮತ್ತು ಸ್ವಾಬ್ ಕಲೆಕ್ಟರ್ ಸ್ಯಾಲರಿ ಬಿಲ್ ಎಂಬ ಹೆಸರಿನಲ್ಲಿ ಆರೋಗ್ಯ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಖಾತೆಗಳಿಗೆ ತಲಾ ಎಪ್ಪತ್ತೈದು ಸಾವಿರದ ಇನ್ನೂರಾ ಇಪ್ಪತ್ತೈದು ರೂ.ಗಳನ್ನು ನೇರವಾಗಿ ಡಿಸಿ ಬಿಲ್ಗಳ ಮೂಲಕ ವರ್ಗಾವಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿರುತ್ತದೆ.

ಮೇಲೆ ತಿಳಿಸಿರುವ ಕಾರ್ಯವು ಸಂಪೂರ್ಣ ಕಾನೂನು ಬಾಹಿರ ಕಾರ್ಯವಾಗಿದ್ದು, ವಲಯ ಆಯುಕ್ತರ ಅನುಮೋದನೆಯನ್ನು ಪಡೆಯದೇ ಮತ್ತು ವಿಶೇಷ ಆಯುಕ್ತರು (ಆರೋಗ್ಯ) ರವರ ಅನುಮತಿಯನ್ನು ಪಡೆಯದೆಯೇ ನೇರವಾಗಿ ಈ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೂರ್ವ ವಲಯ ಆರೋಗ್ಯ ಅಧಿಕಾರಿಗಳಾಗಿದ್ದ ಡಾ. ಸವಿತರವರು ಮತ್ತು ಶಾಂತಿನಗರ ವಿಭಾಗದ ಆರೋಗ್ಯ ವೈದ್ಯಾಧಿಕಾರಿ ಗಳಾಗಿದ್ದ ಡಾ. ಶ್ರೀನಿವಾಸ್ ಗೌಡ ರವರು ಸೇರಿಕೊಂಡು ಪಾಲಿಕೆಗೆ ಹತ್ತಾರು ಲಕ್ಷ ರೂಪಾಯಿಗಳನ್ನು ವಂಚಿಸಿರುತ್ತಾರೆ.

ಅಲ್ಲದೇ, ಯಾವುದೇ ಹಿರಿಯ ಮತ್ತು ಕಿರಿಯ ಆರೋಗ್ಯ ಪರಿವೀಕ್ಷಕರ ಗಮನಕ್ಕೆ ತಾರದೆಯೇ ಅವರವರ ಖಾತೆಗಳಿಗೆ ಹಣವನ್ನು ವರ್ಗಾಯಿಸಿ ನಂತರ ಈ ಹಣವನ್ನು ಡಾ.ಸವಿತ ಅವರ ಮಗನಾದ ಸಿದ್ಧರಾಜು ಚಿರಾಗ್ ಎಂಬುವವರ ಖಾತೆಗೆ ವರ್ಗಾವಣೆ ಮಾಡಿಕೊಂಡಿರುತ್ತಾರೆ.


ಈ ಸಂಬಂಧ ಪಾಲಿಕೆಗೆ ಹತ್ತಾರು ಲಕ್ಷ ರೂಪಾಯಿಗಳಷ್ಟು ಹಣವನ್ನು ವಂಚನೆ ಮಾಡಿರುವ ಪೂರ್ವ ವಲಯದ ಆರೋಗ್ಯ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರನ್ನು ಮತ್ತು ಆಡಳಿತಾಕಾರಿಗಳನ್ನು ಅಗ್ರಹಿಸಿದ್ದಾರೆ.

ಹಾಗೆಯೇ, ಈ ಇಬ್ಬರು ಅಧಿಕಾರಿಗಳ ವಿರುದ್ಧ ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಪ್ರಕರಣ ಗಳನ್ನು ದಾಖಲಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಬಿಎಂಟಿಎಫ್ನಲ್ಲಿ ದಾಖಲೆಗಳ ಸಹಿತ ದೂರು ದಾಖಲಿಸಿದ್ದಾರೆ.

RELATED ARTICLES

Latest News