Friday, May 24, 2024
Homeಸಂಪಾದಕೀಯ-ಲೇಖನಗಳುಶ್ರೀರಾಮನವಮಿ ಆಚರಣೆ ಪದ್ಧತಿ ಹೇಗೆ..? ವಿಶೇಷತೆ ಏನು..?

ಶ್ರೀರಾಮನವಮಿ ಆಚರಣೆ ಪದ್ಧತಿ ಹೇಗೆ..? ವಿಶೇಷತೆ ಏನು..?

ಶ್ರೀವಿಷ್ಣುವಿನ ಏಳನೇ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುನರ್ವಸು ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು.

ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮತತ್ತ್ವವು ಎಂದಿಗಿಂತ 1000 ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮ ಜಯ ರಾಮ ಜಯ ಜಯ ರಾಮ | ನಾಮಜಪ, ಹಾಗೆಯೇ ಶ್ರೀರಾಮನ ಇತರ ಉಪಾಸನೆಗಳನ್ನು ಭಾವಪೂರ್ಣವಾಗಿ ಮಾಡುವುದರಿಂದ ಶ್ರೀರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಗ್ರಹಿಸಲು ಸಹಾಯವಾಗುತ್ತದೆ.

ಶ್ರೀರಾಮನವಮಿಯನ್ನು ಆಚರಿಸುವ ಪದ್ಧತಿ :
ಅನೇಕ ರಾಮ ಮಂದಿರಗಳಲ್ಲಿ ಚೈತ್ರ ಶುಕ್ಲ ಪ್ರತಿಪದೆಯಿಂದ ಒಂಭತ್ತು ದಿನಗಳ ಕಾಲ ಈ ಉತ್ಸವವು ನಡೆಯುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರ ಮುಂತಾದವುಗಳೊಂದಿಗೆ ಈ ಉತ್ಸವವನ್ನು ಆಚರಿಸುತ್ತಾರೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಕೀರ್ತನೆಯಾಗುತ್ತದೆ.

ಮಧ್ಯಾಹ್ನ ಕುಂಚಿಗೆ ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದರ ಮೇಲೆ ಹೂವುಗಳನ್ನು ಅರ್ಪಿಸುತ್ತಾರೆ. (ಕೆಲವು ಕಡೆಗಳಲ್ಲಿ ತೆಂಗಿನ ಕಾಯಿಯ ಬದಲು ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಇಡುತ್ತಾರೆ.) ಈ ಸಂದರ್ಭದಲ್ಲಿ ಶ್ರೀರಾಮನ ಜನ್ಮದ ಗೀತೆಯನ್ನು ಹೇಳಲಾಗುತ್ತದೆ. ಅದರ ನಂತರ ಶ್ರೀರಾಮನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಪ್ರಸಾದವೆಂದು ಶುಂಠಿಚೂರ್ಣವನ್ನು ಕೊಡುತ್ತಾರೆ. ಕೆಲವು ಕಡೆಗಳಲ್ಲಿ ಶುಂಠಿಚೂರ್ಣ ದೊಂದಿಗೆ ಮಹಾಪ್ರಸಾದವನ್ನೂ ನೀಡುತ್ತಾರೆ.

ತ್ರೇತಾಯುಗದಲ್ಲಿ ರಾಮನ ಜನ್ಮವಾದಾಗ ಕಾರ್ಯನಿರತ ವಾಗಿದ್ದ ಶ್ರೀವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾ ವಾಸಿಗಳ ಭಕ್ತಿ ಭಾವ ಮತ್ತು ಪೃಥ್ವಿಯಲ್ಲಿನ ಸಾತ್ತ್ವಿಕ ವಾತಾವರಣದಿಂದಾಗಿ ಪ್ರಭು ಶ್ರೀರಾಮನ ಜನ್ಮದಿಂದ ಶೇ. 100 ರಷ್ಟು ಪರಿಣಾಮವಾಗಿತ್ತು. ಅನಂತರ ಪ್ರತಿವರ್ಷ ಬರುವಂತಹ ಚೈತ್ರ ಶುಕ್ಲ ನವಮಿಗೆ ಬ್ರಹ್ಮಾಂಡದಲ್ಲಿನ ವಾತಾವರಣದಲ್ಲಿ ರಾಮತತ್ತ್ವವು ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ತ್ವಿಕ ಮತ್ತು ಚೈತನ್ಯಮಯವನ್ನಾಗಿಸಲು ವಿಷ್ಣುಲೋಕದಿಂದ ಶ್ರೀರಾಮ ತತ್ತ್ವಯುಕ್ತ ವಿಷ್ಣುತತ್ತ್ವವು ಭೂಲೋಕದ ದಿಕ್ಕಿನತ್ತ ಪ್ರಕ್ಷೇಪಿತವಾಗುತ್ತದೆ ಮತ್ತು ಆ ದಿನ ಶ್ರೀರಾಮನ ಅಂಶಾತ್ಮಕ ಜನ್ಮವಾಗುತ್ತದೆ.

ಇದರ ಪರಿಣಾಮವಾಗಿ ಇಡೀ ವರ್ಷ ಬ್ರಹ್ಮಾಂಡದಲ್ಲಿ ರಾಮ ತತ್ತ್ವಯುಕ್ತ ಸಾತ್ತ್ವಿಕತೆ ಮತ್ತು ಚೈತನ್ಯಕ್ಕೆ ಪ್ರಕ್ಷೇಪಣೆಯಾಗುತ್ತದೆ. ರಾಮ ತತ್ತ್ವಯುಕ್ತ ಸಾತ್ತ್ವಿಕತೆ ಮತ್ತು ಚೈತನ್ಯವನ್ನು ಬ್ರಹ್ಮಾಂಡದಲ್ಲಿನ ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುಗಳು ಗ್ರಹಿಸಿಕೊಳ್ಳುತ್ತವೆ ಮತ್ತು ಅದರಿಂದ ಅವುಗಳಿಗೆ ತಮ್ಮ ಕಾರ್ಯವನ್ನು ಒಳ್ಳೆಯ ರೀತಿಯಿಂದ ಮಾಡಲು ಸಾಧ್ಯವಾಗುತ್ತದೆ.

ಶ್ರೀರಾಮನಂತೂ ಶ್ರೇಷ್ಠ ಮತ್ತು ಪೂಜನೀಯ ವ್ಯಕ್ತಿತ್ವವುಳ್ಳವನಾಗಿದ್ದನು, ಅಲ್ಲದೆ ಅವನ ಭಕ್ತರೂ ಅಷ್ಟೇ ವಂದನೀಯರಾಗಿದ್ದರು. ಕಲಿಯುಗದಲ್ಲಿ ಶ್ರೀರಾಮನು ಪುನಃ ಅವತಾರ ತಾಳಬಹುದು. ಆದರೆ ಶ್ರೀರಾಮನ ಸೀಮಾತೀತ ಭಕ್ತಿಯನ್ನು ಮಾಡುವಂತಹ ಉಚ್ಚ ಮಟ್ಟದ ಭಕ್ತರು ಸಿಗುವುದು ಕಠಿಣವಾಗಿದೆ. ಸಾಧಕರು ಶ್ರೀರಾಮನ ಭಕ್ತರ ಗುಣಗಳನ್ನು ಅಂಗೀಕರಿಸಿ ಅದಕ್ಕನುಸಾರ ಸಾಧನೆ ಮಾಡಿದರೆ ಅವರ ಮೇಲೆ ಗುರು ರೂಪೀ ಶ್ರೀರಾಮನ ಕೃಪೆಯಾಗಿ ಅವರಿಗೆ ಅಂತರ್ಬಾಹ್ಯ ಕ್ಷಾತ್ರಧರ್ಮ ಹೋರಾಟವನ್ನು ಯಶಸ್ವಿಯಾಗಿ ನಡೆಸಲು ಆಗುವುದು ಮತ್ತು ಅವರಲ್ಲಿ ಅಂತರ್ಬಾಹ್ಯ ರಾಮ ರಾಜ್ಯವು ಖಂಡಿತವಾಗಿಯೂ ಸ್ಥಾಪನೆಯಾಗುವುದು.
ರಾಮಾಯಣ ಶಬ್ದವು ರಂ + ಅಯನ ಈ ಎರಡು ಶಬ್ದಗಳಿಂದ ನಿರ್ಮಾಣವಾಗಿದೆ. ರಮ್ ರಮಯತೇ ಎಂದರೆ ತಲ್ಲೀನರಾಗುವುದು, ಸಾಧನೆಯಲ್ಲಿ ತಲ್ಲೀನರಾಗುವುದು. ಅಯನ ಎಂದರೆ ಸಪ್ತಲೋಕಗಳು.

ಸಾಧನೆಯಲ್ಲಿ ತಲ್ಲೀನರಾಗಿ ಆನಂದದಲ್ಲಿದ್ದು, ಸಪ್ತಲೋಕ ಗಳನ್ನು ದಾಟಿ ಮೋಕ್ಷಕ್ಕೆ ಹೋಗುವುದನ್ನು ರಾಮಾಯಣದಲ್ಲಿ ಹೇಳಲಾಗಿದೆ. ಸಮಸ್ತ ಅಯನಂ ರಾಮಾಯಣಮ್ | ಅಯನ ಎಂದರೆ ಹೋಗುವುದು, ಮಾರ್ಗ ಇತ್ಯಾದಿ ಅರ್ಥವಾಗುತ್ತದೆ. ಪರಬ್ರಹ್ಮ ಪರಮಾತ್ಮ ಸ್ವರೂಪನಾದ ಶ್ರೀರಾಮನ ಕಡೆಗೆ ಕೊಂಡೊಯ್ಯುವ, ಅದರತ್ತ ಹೋಗಲು ಚಾಲನೆ ನೀಡುವ ಅಥವಾ ಸೂರ್ತಿ, ಉತ್ಸಾಹ ನೀಡುವ, ಜೀವನದ ನಿಜವಾದ ಮಾರ್ಗವನ್ನು ತೋರಿಸುವುದೆಂದರೆ ರಾಮಾಯಣವಾಗಿದೆ.

ಶೂರ್ಪಣಖಿಯು ಅವಳ ಸಹೋದರ ಖರ ಮತ್ತು ದೂಷಣ ಹಾಗೂ 10 ಸಾವಿರ ಸೈನ್ಯದೊಂದಿಗೆ ಬಂದಾಗ ರಾಮನು ಲಕ್ಷ್ಮಣನಿಗೆ, ನೀನು ಸೀತೆಯನ್ನು ನೋಡಿಕೋ ! ಈ ಸೈನ್ಯವನ್ನು ಸೋಲಿಸಲು ನಾನೊಬ್ಬನೇ ಸಾಕು ಎಂದು ಹೇಳಿದನು. ಇದರಿಂದ ರಾಮನ ಶೌರ್ಯದ ಕಲ್ಪನೆ ಬರುತ್ತದೆ. ಇಲ್ಲಿ ರಾಮನ ಮನಸ್ಸಿನ ವೈಶಾಲ್ಯವು ತಿಳಿಯುತ್ತದೆ. ರಾಮನ ಮನಸ್ಸು ವಿಶ್ವವ್ಯಾಪಕವಾಗಿತ್ತು. ಅವನು ಈಶ್ವರನ ಅಂಶವಾಗಿದ್ದನು. ಈಶ್ವರನ ಸಾಮಥ್ರ್ಯವು ಅವನಲ್ಲಿ
ಬಂದಿತ್ತು. ಪೃಥ್ವಿ ಮತ್ತು ಪೃಥ್ವಿಯ ಮೇಲಿನ ಸೈನ್ಯವು ಅವನಿಗೆ ನಗಣ್ಯವಾಗಿತ್ತು.

ಲಕ್ಷ್ಮಣನು ವನವಾಸದಲ್ಲಿದ್ದಾಗ ರಾಮ ಮತ್ತು ಸೀತೆಯರ ಹಿಂದಿನಿಂದ ಹೋಗುತ್ತಿದ್ದನು. ಲಕ್ಷ್ಮಣನಿಗೆ ರಾಮನ ಬಗ್ಗೆ ಬಹಳ ಪ್ರೇಮವಿತ್ತು. ರಾಮನು ಯಾವಾಗಲೂ ತನ್ನ ಎದುರು ಇರಬೇಕೆಂದು ಅನಿಸುತ್ತಿತ್ತು. ಲಕ್ಷ್ಮಣನು ಯಾವಾಗಲೂ ರಾಮನಾಮವನ್ನು ಜಪಿಸುತ್ತಿದ್ದನು, ಅವನು ರಾಮನನ್ನು ಭಜಿಸುತ್ತಿದ್ದನು. ಇಂತಹ ಈ ಭಕ್ತನು ಮಾಯೆಯ, ಅಂದರೆ ಸೀತೆಯ ಮುಖವನ್ನು ಯಾವತ್ತೂ ನೋಡಲಿಲ್ಲ. ಅವನು ಅವಳ ಪಾದಕಮಲಗಳ ಕಡೆಗೆ ನೋಡಿ ನಡೆಯುತ್ತಿದ್ದನು. ಅದರಿಂದ ಲಕ್ಷ್ಮಣನ ಮೇಲಿನ ಮಾಯೆಯ ಹಿಡಿತವು ಕಡಿಮೆಯಾಯಿತು ಮತ್ತು ಸೀತಾ-ರಾಮ-ಲಕ್ಷ್ಮಣ ಈ ಶಬ್ದವು ನಿರ್ಮಾಣವಾಯಿತು.

ಒಮ್ಮೆ ಅಂಗದನು ರಾಮನ ದೂತನಾಗಿ ರಾವಣನ ರಾಜ್ಯಸಭೆಗೆ ಹೋದನು, ಆಗ ರಾವಣನು ತನ್ನ ಪ್ರಶಂಸೆಯನ್ನು ಮಾಡಿಕೊಂಡು ಅವನನ್ನು ಹೆದರಿಸಿದನು. ಆಗ ಅಂಗದನು ಎಲೈ ರಾವಣನೇ, ಇಲ್ಲಿಯವರೆಗೆ ನಾನು ನಿನ್ನ ಶೌರ್ಯದ ಬಗ್ಗೆ ಕೇಳಿದೆ. ಈಗ ನಾನು ನನ್ನ ಕಾಲನ್ನು ಭೂಮಿಯ ಮೇಲೆ ಇಡುತ್ತೇನೆ, ನೀನು ಅಥವಾ ನಿನ್ನ ಸೈನಿಕರು ಅದನ್ನು ಎತ್ತಿ ತೋರಿಸಬೇಕು, ಅಂದರೆ ನಾನು ನಿನ್ನ ಮಾತುಗಳನ್ನು ನಿಜವೆಂದು ನಂಬುತ್ತೇನೆ ಎಂದನು. ಅಂಗದನು ಜೈ ಶ್ರೀರಾಮ ಎಂದು ತನ್ನ ಕಾಲನ್ನು ಭೂಮಿಯ ಮೇಲೆ ಇಟ್ಟನು. ಆಶ್ಚರ್ಯದ ಸಂಗತಿಯೆಂದರೆ ರಾವಣ ಅಥವಾ ಅವನ ಎಲ್ಲ ಸೈನಿಕರಿಂದ ಅಂಗದನ ಕಾಲನ್ನು ಅಲುಗಾಡಿಸಲೂ ಆಗಲಿಲ್ಲ. ಇದೇ ರಾಮಭಕ್ತಿಯ ಪರಿಣಾಮವಾಗಿದೆ !
ವಿನೋದ್ ಕಾಮತ್,
ಸನಾತನ ಸಂಸ್ಥೆ

RELATED ARTICLES

Latest News