ತುಮಕೂರು, ಆ.18- ವಂದೇ ಭಾರತ್ ರೈಲು ತುಮಕೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಆದೇಶ ನೀಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ನೂತನ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ನಗರದ ರೈಲ್ವೆ ನಿಲ್ದಾಣಕ್ಕೆ ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರು ಹಾಗೂ ಕ್ಯಾತಸಂದ್ರ ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗಾ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಸಂಘ ಸಂಸ್ಥೆಗಳ ಮನವಿ ಬಂದಿದ್ದು, ಈ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದರು.
ಶ್ರವಣಬೆಳಗೊಳ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳನ್ನು ಅಮೃತ್ ಭಾರತ್ ಯೋಜನೆಯಡಿ ಮೇಲ್ದರ್ಜೆಗೇರಿಸಲು ತಲಾ 7 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ತುಮಕೂರಿನಿಂದ ಅರಸೀಕೆರೆವರೆಗೂ 220 ಕೋಟಿ ವೆಚ್ಚದಲ್ಲಿ ಆಟೋಮೆಟಿಕ್ ಸಿಗ್ನಲ್ ಅಳವಡಿಸಲು ಮಂಜೂರಾತಿ ನೀಡಲಾಗಿದೆ. ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯನ್ನು 2026ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.
ನೆಲಮಂಗಲದಿಂದ ಶಿರಾವರೆಗೂ ಆರುಪಥದ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ವೇಗ ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಗುಬ್ಬಿ ತಾಲ್ಲೂಕಿನ ದೊಡ್ಡಗುಣಿ ಬಳಿ ಜನರು ರಸ್ತೆ ದಾಟಲು ಹಾಗೂ ಅಪಘಾತ ತಪ್ಪಿಸಲು ಸ್ಕೈವಾಕ್ ನಿರ್ಮಾಣ ಮಾಡಲಾಗುವುದು ಎಂದರು.
ಜಲಶಕ್ತಿ ಯೋಜನೆಗೆ ಕೇಂದ್ರದಿಂದ ಶೇ.49, ರಾಜ್ಯ ಸರ್ಕಾರದಿಂದ ಶೇ.51ರಷ್ಟು ಹಣ ವಿನಿಯೋಗಿಸಬೇಕು. ಕೃಷಿ ಸಿಂಚಾಯಿ ಯೋಜನೆಯನ್ನು ರಾಜ್ಯ ಮತ್ತು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಸಮರ್ಪಕವಾಗಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ಗೌಡ, ಮಾಜಿ ಸಚಿವ ಬಿ.ಸಿ.ನಾಗೇಶ್, ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ವಕ್ತಾರ ಸದಾನಂದ, ಚಿದಾನಂದಗೌಡ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.