Thursday, November 6, 2025
Home Blog Page 1830

ಸದ್ದು ಗದ್ದಲವಿಲ್ಲದೆ ನಡೆಯುತ್ತಿದೆಯಾ ಆಪರೇಷನ್ ಕಮಲ..?

ಬೆಂಗಳೂರು, ನ.8- ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಭಾಗವಾಗಿ ಸದ್ದು ಮಾಡುತ್ತಿರುವ ಆಪರೇಷನ್ ಕಮಲ ತೆರೆಮರೆಯಲ್ಲಿ ಚಾಲ್ತಿಯಲ್ಲಿದ್ದು, ಕಾಂಗ್ರೆಸ್‍ನ 50ಕ್ಕೂ ಹೆಚ್ಚು ಮಂದಿ ಅಸಮಧಾನಿತ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡುತ್ತಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನವೇ ಸರ್ಕಾರವನ್ನು ಪತನಗೊಳಿಸಲು ಸಂಚು ನಡೆದಿದ್ದು, ಅದಕ್ಕಾಗಿ ಬೇರೆ ಬೇರೆ ರಾಜ್ಯಗಳ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಕಾಂಗ್ರೆಸ್‍ನ ಅಸಮಧಾನಿತ ಶಾಸಕರನ್ನು ಸಂಪರ್ಕ ಮಾಡುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿಯ ಎಲ್ಲಾ ನಾಯಕರು 17 ತಂಡಗಳನ್ನು ಮಾಡಿಕೊಂಡು ಬರ ಅಧ್ಯಯನ ಮಾಡುತ್ತಿರುವುದರಿಂದ ಕಾಂಗ್ರೆಸ್ ನಿರಾಳವಾಗಿದೆ. ಆದರೆ ಬೆಜೆಪಿ ನಾಯಕರು ಬರ ಅಧ್ಯಯನ ನಡೆಸುತ್ತಿದ್ದರೆ, ಒಳಗೊಳಗೆ ಅನಾಮಧೇಯರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯಿದೆ.

ಕಾಂಗ್ರೆಸ್ ಶಾಸಕರ ಬಳಿ ಚರ್ಚೆ ನಡೆಸುವಾಗ ಈಗಾಗಲೇ ತಮ್ಮೊಂದಿಗೆ 50ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿದ್ದಾರೆ. ನೀವು ಒಪ್ಪಿಕೊಂಡರೆ 51ನೇಯವರಾಗುತ್ತಿರಾ ? ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯವನ್ನು ರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಬಿಜೆಪಿ ನಿರ್ವಹಣೆ ಮಾಡಲಿದೆ, ಯಾವುದೇ ಅನುಮಾನ ಇಲ್ಲದೆ ನಮ್ಮ ಜೊತೆ ಕೈ ಜೋಡಿಸಿ ಎಂದು ಕಾಂಗ್ರೆಸ್‍ನ ಅತೃಪ್ತ ಹಾಗೂ ಹೊಸ ಶಾಸಕರಿಗೆ ಹೇಳಲಾಗುತ್ತಿದೆ ಎಂಬ ಮಾಹಿತಿ ಇದೆ.

ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ನಾಯಕರು ರಂಗ ಪ್ರವೇಶ ಮಾಡಿದ್ದಾರೆ. ನೇರವಾಗಿ ದೆಹಲಿಯ ಬಿಜೆಪಿ ನಾಯಕರನ್ನು ಭೇಟಿ ಮಾಡಿಸುವುದಾಗಿ ಹಾಗೂ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

ಹಿಂದೆ ಮಹಾರಾಷ್ಟ್ರ ಸರ್ಕಾರ ಪತನಗೊಳಿಸುವಾಗಿ ಶಿವಸೇನೆಯ 47ಕ್ಕೂ ಹೆಚ್ಚು ಶಾಸಕರನ್ನು ಕೇಂದ್ರ ಮೀಸಲು ಪಡೆಯ ರಕ್ಷಣೆಯೊಂದಿಗೆ ಅಸ್ಸಾಂನಲ್ಲಿರಿಸಲಾಗಿತ್ತು. ಉಗ್ರ ಹೋರಾಟಕ್ಕೆ ಹೆಸರಾಗಿದ್ದ ಶಿವಸೇನೆಯೇ ಅಸಹಾಯಕತೆ ಸಿಲುಕಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಲ್ಲಿಯೂ ಅದೇ ಮಾದರಿಯಲ್ಲಿ ಕಾರ್ಯಚರಣೆಯಾಗುತ್ತದೆ, ನಿಮಗೆ ಸಂಪೂರ್ಣ ರಕ್ಷಣೆ ಕೊಡಿಸುತ್ತೇವೆ, ಮಹಾರಾಷ್ಟ್ರ ಅಸ್ಸಾಂ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ನಿಮಗೆ ಬೇಕಾದ ಕಡೆ ಇರಿಸುತ್ತೇವೆ. ಧೈರ್ಯವಾಗಿ ನಮ್ಮ ಜೊತೆ ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‍ನಲ್ಲಿ ಕೆಲವೇ ಕೆಲವು ಕುಟುಂಬಗಳ ಪ್ರಾಬಲ್ಯದಿಂದ ಬೇಸರಗೊಂಡಿರುವವರು, ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವವರು, ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಾತು ಕೇಳುತ್ತಿಲ್ಲ, ಅಧಿಕಾರಿಗಳ ವರ್ಗಾವಣೆಯಲ್ಲಿ ತಮ್ಮ ಮಾತು ನಡೆಯುತ್ತಿಲ್ಲ ಎಂಬೆಲ್ಲಾ ಆಕ್ಷೇಪಗಳು ಹೊಂದಿರುವವರನ್ನು ಸಂಪರ್ಕಿಸಲಾಗುತ್ತಿದೆ.

ದುಗುಡ ಹುಟ್ಟಿಸಿರುವ ಬೆಳವಣಿಗೆ:
ಕಾಂಗ್ರೆಸ್ ನಾಯಕರಿಗೆ ದುಗುಡ ಹುಟ್ಟಿಸಿರುವ ಮತ್ತೊಂದು ಬೆಳವಣಿಗೆ ಎಂದರೆ, ಬಿಜೆಪಿ ನಾಯಕರು ತಮ್ಮನ್ನು ಸಂಪರ್ಕಿಸಿರುವ ಬಗ್ಗೆ ಕೆಲವು ಶಾಸಕರು ಹೇಳಿಕೊಳ್ಳದೆ, ತಮಗೆ ಏನು ಗೋತ್ತಿಲ್ಲ ಎಂಬಂತೆ ತಟಸ್ಥವಾಗಿರುವುದು.

ಬಿಜೆಪಿಯವರು ಚರ್ಚೆ ಮಾಡುವ ವೇಳೆ ಕಾಂಗ್ರೆಸ್ ಶಾಸಕರ ಬಳಿ, ತಾವು ಯಾರನ್ನೆಲ್ಲಾ ಸಂಪರ್ಕ ಮಾಡಿದ್ದೇವೆ ಎಂದು, ಬಿಜೆಪಿ ಜೊತೆ ಕೈಜೋಡಿಸಲು ಯಾರೆಲ್ಲಾ ಸಿದ್ಧರಿದ್ದಾರೆ ಎಂಬ ವಿಚಾರಗಳನ್ನು ಅನೌಪಚಾರಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಪಕ್ಷ ನಿಷ್ಠ ಹಾಗೂ ಪ್ರಾಮಾಣಿಕ ಶಾಸಕರು ಕಾಂಗ್ರೆಸ್ ನಾಯಕರಿಗೆ ಮಾಹಿತಿ ನೀಡುವಾಗ ಬಿಜೆಪಿಯ ಮುಖಂಡರು ತಮ್ಮನ್ನು ಸಂಪರ್ಕ ಮಾಡಿರುವುದು, ಏನೆಲ್ಲಾ ಆಮಿಶವೊಡ್ಡಿದ್ಧಾರೆ ಎಂಬುದನ್ನು ಹೇಳಿಕೊಳ್ಳುತ್ತಿದ್ದಾರೆ.

ಜೊತೆಗೆ ಬಿಜೆಪಿಯವರು ಯಾರನ್ನೆಲ್ಲಾ ಸಂಪರ್ಕ ಮಾಡಿರುವುದಾಗಿ ಹೇಳಿದ್ದಾರೆ ಎಂದನ್ನು ಬಾಯಿ ಬಿಡುತ್ತಿದ್ದಾರೆ. ಪಕ್ಷ ನಿಷ್ಠರು ಹೇಳಿದಂತೆ ಬಿಜೆಪಿಯವರು ಸಂಪರ್ಕ ಮಾಡಿರುವ ಬಗ್ಗೆ ಬಹಳಷ್ಟು ಶಾಸಕರು ಮಾಹಿತಿ ನೀಡದೆ ಇರುವುದು ಕಾಂಗ್ರೆಸ್ ನಾಯಕರ ನಿದ್ದೆ ಗೆಡಿಸಿದೆ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಗೊಂದಲ ಮೂಡಿಸಲು ಹೆಸರುಗಳನ್ನು ತೇಲಿ ಬಿಡುತ್ತಿದ್ದಾರೆಯೇ ? ಅಥವಾ ಅದರಲ್ಲೇನ್ನಾದರೂ ಸತ್ಯಾಂಶ ಇದೆಯೇ ಎಂಬ ಗೊಂದಲ ಕಾಂಗ್ರೆಸಿಗರನ್ನು ಕಾಡುತ್ತಿದೆ.

ಅಡ್ವಾಣಿ ಹುಟ್ಟುಹಬ್ಬಕ್ಕೆ ಮೋದಿ, ಶಾ ಸೇರಿ ಗಣ್ಯರಿಂದ ಶುಭಾಶಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಪರೇಷನ್ ಕಮಲದ ಮೇಲೆ ನಿಗಾವಹಿಸುವಂತೆ ಸಿಐಡಿಗೆ ಆದೇಶಿಸಿದ್ದು, ಬಿಜೆಪಿ ನಾಯಕರ ಚಲನವಲನಗಳ ಮೇಲೆ ನಿಗಾ ವಹಿಸುವ ಜೊತೆಗೆ ಕಾಂಗ್ರೆಸ್ ನಾಯಕರನ್ನು ಯಾರೆಲ್ಲಾ ಸಂಪರ್ಕ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚಿಸಲಾಗಿದೆ. ಆಪರೇಷನ್ ಕಮಲದ ಪ್ರತಿ ಮಾಹಿತಿ ಮೇಲೂ ಕಣ್ಣಿಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಗುಪ್ತಚರ ಇಲಾಖೆಗೆ ತಾಕೀತು ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ವಾಟ್ಸ್‍ಅಪ್ ಕಾಲ್‍ಗಳಲ್ಲಿ ಸಮಾಲೋಚನೆಗಳಾಗುತ್ತಿರುವುದರಿಂದ ಮಾಹಿತಿ ಮೇಲೆ ನಿಗಾವಹಿಸುವುದು ದೊಡ್ಡ ಸಲಾವಾಗಿದೆ. ಆದರೂ ತಮ್ಮದೇ ಆದ ಮೂಲದಿಂದ ಚಲನವಲನಗಳ ಮೇಲೆ ಗುಪ್ತದಳ ನಿಗಾ ಇಟ್ಟಿದ್ದಾರೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ 50 ಮಂದಿ ಶಾಸಕರನ್ನು ಬಿಜೆಪಿ ಪರವಾಗಿ ಅನಾಮದೇಯರು ಸಂಪರ್ಕ ಮಾಡಿದ್ದಾರೆ. ಗುತ್ತಿಗೆ ಟೆಂಡರ್, ವರ್ಗಾವಣೆ ಸೇರಿದಂತೆ ಇತರ ವಿಚಾರಗಳ ನೆಪದಲ್ಲಿ ಶಾಸಕ ಬಳಿ ಬರುವ ಅನಾಮದೇಯರು, ಅಲ್ಲಿಂದ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಭಾವಿಗಳಿಗೆ ಕರೆ ಮಾಡಿ, ಕಾಂಗ್ರೆಸ್ ಶಾಸಕರೊಂದಿಗೆ ಮಾತನಾಡಿಸುತ್ತಿದ್ದಾರೆ. ಅನಂತರ ಚರ್ಚೆಗಳು ಮುಂದುವರೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಕೆಲವು ಶಾಸಕರು ಮಾಹಿತಿ ಹಂಚಿಕೊಳ್ಳುತ್ತಿರುವುದು, ಇನ್ನೂ ಕೆಲವರು ಏನು ಗೋತ್ತಿಲ್ಲದಂತೆ ಮೌನವಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ. ತಮ್ಮನ್ನು ಭೇಟಿ ಮಾಡಿದವರು ಯಾರು ಎಂಬ ತಲೆಬುಡವೂ ಅರ್ಥವಾಗದೆ ಕೆಲವು ಶಾಸಕರು ಗೊಂದಲದಲ್ಲಿರುವುದಾಗಿಯೂ ಹೇಳಲಾಗುತ್ತಿದೆ.

ಬೆಳಗಾವಿ ಅವೇಶನದಲ್ಲಿ ಆಪರೇಶನ್ ಕಮಲ ಚರ್ಚೆ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಏನಾಗಲಿದೆಯೋ ಗೋತ್ತಿಲ್ಲ, ಅದಕ್ಕೂ ಮುನ್ನಾ ಆಪರೇಷನ್ ಕಮಲ ನಡೆಸಿ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಬೇಕು ಎಂಬ ಉಮೇದಿನಲ್ಲಿ ಕಾರ್ಯಚರಣೆ ನಡೆಯುತ್ತಿದೆ. ಕೆಲವು ಶಾಸಕರು ಲೋಕಸಭೆ ಚುನಾವಣೆವರೆಗೂ ತಾವು ಏನನ್ನೂ ಹೇಳುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಪೈಂಟ್ ಮಿಕ್ಸರ್ ಗ್ರೈಂಡರ್‌ಗೆ ಕೂದಲು ಸಿಲುಕಿ ಮಹಿಳೆ ಕತ್ತು ತುಂಡು

ಬೆಂಗಳೂರು, ನ.8 – ಪೈಂಟ್ ಮಿಕ್ಸ್ ಮಾಡುವ ಗ್ರೈಂಡರ್‌ಗೆ ಮಹಿಳೆಯ ಕೂದಲು ಸಿಕ್ಕಿಕೊಂಡ ಪರಿಣಾಮ ತಲೆ ತುಂಡಾಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ರಾಮನಗರ ಮೂಲದ ಶ್ವೇತಾ (33) ಮೃತಪಟ್ಟಿರುವ ಮಹಿಳೆ. ಇವರು ನಗರದ ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. ನೆಲಗದರನಹಳ್ಳಿಯಲ್ಲಿ ಶ್ರೀ ಪೈಂಟ್ಸ್ ಎಂಬ ಸಣ್ಣ ಪೈಂಟಿಂಗ್ಸ್ ಕಾರ್ಖಾನೆ ಇದೆ. ಈ ಕಾರ್ಖಾನೆಯಲ್ಲಿ ಮೂರ್ನಾಲ್ಕು ಮಂದಿ ಕೆಲಸ ಮಾಡುತ್ತಿದ್ದಾರೆ.

ನಿನ್ನೆ ಎಂದಿನಂತೆ ಶ್ವೇತಾ ಅವರು ಪೈಂಟ್ ಕಾರ್ಖಾನೆಗೆ ಕೆಲಸಕ್ಕೆ ಬಂದಿದ್ದಾರೆ. ನಿನ್ನೆ ಸಂಜೆ 4 ಗಂಟೆ ಸುಮಾರಿನಲ್ಲಿ ಪೈಂಟ್ ಮಿಕ್ಸಿಂಗ್ ಗ್ರೈಂಡರ್ ಹಾಕಲಾಗಿತ್ತು. ಆ ವೇಳೆ ಗ್ರೈಂಡರ್ ಸ್ವಿಚ್ ಆಫ್ ಮಾಡಿ ಪೈಂಟ್ ತೆಗೆದುಕೊಳ್ಳುವ ಬದಲು ಹಾಗೆಯೇ ಬಗ್ಗಿಕೊಂಡು ಪೈಂಟ್ ತೆಗೆಯುತ್ತಿದ್ದಾಗ ಕೂದಲು ಜಾರಿ ಗ್ರೈಂಡರ್‌ಗೆ ಸುತ್ತಿಕೊಂಡಿದೆ.

ಬೆಂಗಳೂರಿಗೆ 24 ಟಿಎಂಸಿ ನೀರು ಮೀಸಲಿಡಲು ಸರ್ಕಾರ ಆದೇಶ : ಡಿಸಿಎಂ

ಆಗ ಸಹಾಯಕ್ಕಾಗಿ ಕೂಗಿಕೊಂಡರಾದರೂ ಯಾರಿಗೂ ಕೇಳಿಸಿಲ್ಲ. ಪರಿಣಾಮ ಗ್ರೈಂಡರ್ ಸುತ್ತುತ್ತಾ ಆಕೆಯ ಕತ್ತು ತುಂಡರಿಸಿದ್ದು. ದಾರುಣವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣ ನೋಡಿ ಸಹಕಾರ್ಮಿಕರು ಮಾಲೀಕರು ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.

ಸುದ್ದಿ ತಿಳಿದು ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಕಾರ್ಖಾನೆ ಮಾಲೀಕರ ವಿರುದ್ಧ ನಿರ್ಲಕ್ಷ್ಯತೆ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಬಂಧನದಲ್ಲಿದ್ದ ಮುರುಘಾ ಶರಣರಿಗೆ ಜಾಮೀನು ಮಂಜೂರು

ಬೆಂಗಳೂರು,ನ.8- ಮಹತ್ವದ ಬೆಳವಣಿಗೆಯಲ್ಲಿ ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪೋಕ್ಸೊ ಪ್ರಕರಣದಲ್ಲಿ ಬಂಧಿಯಾಗಿದ್ದ ಮುರುಘ ಮಠದ ಶ್ರೀಗಳಿಗೆ ಹೈಕೋರ್ಟ್ ಇಂದು ಷರತ್ತು ಬದ್ದ ಮಧ್ಯಂತರ ಜಾಮೀನು ನೀಡಿದೆ.

ಜಾಮೀನು ಪಡೆದ ನಂತರ ಅವರು ಯಾವುದೇ ಕಾರಣಕ್ಕೂ ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ ಮತ್ತು ಸಾಕ್ಷಿ ನಾಶ ಮಾಡುವಂತಹ ಪ್ರಕರಣ ಕಂಡು ಬಂದಲ್ಲಿ ಜಾಮೀನು ರದ್ದುಗೊಳ್ಳಲಿದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಮಾನವಕಳ್ಳ ಸಾಗಾಣಿಕೆ ದಂಧೆ : ಬೆಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ

ಪ್ರಸ್ತುತ ಒಂದು ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದ್ದು, ಇನ್ನೊಂದು ಪ್ರಕರಣ ವಿಚಾರಣೆ ಹಂತದಲ್ಲಿ ಇರುವುದರಿಂದ ಅವರು ಜೈಲಿನಿಂದ ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದೆ. ಪಾಸ್ ಪೋರ್ಟ್ ವಶಕ್ಕೆ ನೀಡುವುದರ ಜೊತೆಗೆ ಒಟ್ಟು ಏಳು ಷರತ್ತುಗಳನ್ನ ನ್ಯಾಯಾಲಯ ವಿಧಿಸಿದೆ. ಸದ್ಯದಲ್ಲಿಯೇ ಮೊತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳ ಪರವಾಗಿ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ

ಮ್ಯಾಕ್ಸ್‌ವೆಲ್‌ಗೆ ಭಾವನಾತ್ಮಕ ಸಂದೇಶ ಕಳುಹಿಸಿದ ಕೊಹ್ಲಿ

ಬೆಂಗಳೂರು, ನ. 8- ಅಫ್ಘಾನಿಸ್ತಾನ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಕರ್ಷಕ ದ್ವಿಶತಕ (ಅಜೇಯ 201) ಬಾರಿಸಿದ ಆರ್‍ಸಿಬಿಯ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‍ವೆಲ್‍ಗೆ ಟೀಂ ಇಂಡಿಯಾದ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ ಭಾವನಾತ್ಮಕ ಸಂದೇಶದ ಮೂಲಕ ಶುಭ ಕೋರಿದ್ದಾರೆ.

ಮ್ಯಾಕ್ಸ್‍ವೆಲ್ ಸ್ನಾಯುಸೆಳೆತವನ್ನು ಲೆಕ್ಕಿಸದೆ ಪಂದ್ಯವನ್ನು ಗೆಲ್ಲಿಸಿದ ನಂತರ ತಮ್ಮ ಅಧಿಕೃತ ಎಕ್ಸ್ ಖಾತೆ ಮೂಲಕ ಶುಭ ಕೋರಿರುವ ವಿರಾಟ್ ಕೊಹ್ಲಿ ಇಂತಹ ವಿಲಕ್ಷಣ ಸಾಧನೆ ನಿಮ್ಮಿಂದ ಮಾತ್ರ ಮಾಡಲು ಸಾಧ್ಯ' ಎಂದು ಪ್ರೀತಿಯ ಗೆಳೆಯನಿಗೆ ಒಂದೇ ಸಾಲಿನಲ್ಲಿ ಶುಭ ಕೋರಿದ್ದಾರೆ.

ಮ್ಯಾಕ್ಸ್‍ವೆಲ್ ಸಂತಸ: ನನಗೆ ಮೊದಲು ಅಂತಹ ಇನ್ನಿಂಗ್ಸ್‍ಗಳನ್ನು ಹೊಂದಿದ್ದೇನೆ ಎಂದು ನಾನು ಭಾವಿಸುತ್ತೇನೆ ಮತ್ತು ಅಲ್ಲಿ ನನಗೆ ಅವಕಾಶವನ್ನು ನೀಡಲಾಯಿತು ಮತ್ತು ನಾನು ಅದರಲ್ಲಿ ಹೆಚ್ಚಿನದನ್ನು ಮಾಡಲಿಲ್ಲ, ಆದ್ದರಿಂದ ಹೆಚ್ಚಿನದನ್ನು ಮಾಡುವುದು ಬಹುಶಃ ಅತ್ಯಂತ ಸಂತೋಷಕರ ವಿಷಯವಾಗಿದೆ, ಪ್ಯಾಟಿಯೊಂದಿಗೆ ಔಟಾಗದೇ ಇರುವುದು ಅಂತ್ಯವು ನನಗೆ ನಿಜವಾಗಿಯೂ ಹೆಮ್ಮೆಯ ವಿಷಯವಾಗಿದೆ ‘ ಎಂದು ಮ್ಯಾಕ್ಸ್‍ವೆಲ್ ಸಂತಸ ವ್ಯಕ್ತಪಡಿಸಿದ್ದಾರೆ.

ರೇಸಾರ್ಟ್‍ನಲ್ಲಿ ಜೆಡಿಎಸ್ ಶಾಸಕರ ವಾಸ್ತವ್ಯ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಇಮ್ರಾನ್ ಜರ್ದಾನ್ ಅವರ ಆಕರ್ಷಕ ಶತಕ (129 ರನ್) ನೆರವಿನಿಂದ 291 ರನ್‍ಗಳ ಬೃಹತ್ ಸವಾಲನ್ನು ಕಲೆ ಹಾಕಿತ್ತು.

ಈ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ 91 ರನ್‍ಗಳಿಗೆ 7 ವಿಕೆಟ್‍ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ 8ನೇ ವಿಕೆಟ್‍ಗೆ ಜೊತೆಗೂಡಿದ ಮ್ಯಾಕ್ಸ್‍ವೆಲ್ ( ಅಜೇಯ 201 ರನ್) ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ (ಅಜೇಯ 12 ರನ್) ಅವರ 201 ರನ್‍ಗಳ ಜೊತೆಯಾಟದಿಂದ 46.5 ಓವರ್‍ಗಳಲ್ಲೇ 293 ರನ್ ಬಾರಿಸುವ ಮೂಲಕ ಆಸ್ಟ್ರೇಲಿಯಾಕ್ಕೆ 3 ವಿಕೆಟ್‍ಗಳ ರೋಚಕ ಗೆಲುವು ತಂದುಕೊಟ್ಟರು. ಈ ಜಯದೊಂದಿಗೆ ಕಾಂಗರೂ ಪಡೆಯು 2023ರ ಸೆಮಿಫೈನಲ್‍ಗೆ ಅರ್ಹತೆ ಗಿಟ್ಟಿಸಿಕೊಂಡ 3ನೇ ತಂಡವಾಗಿದೆ.

ಮಾನವಕಳ್ಳ ಸಾಗಾಣಿಕೆ ದಂಧೆ : ಬೆಂಗಳೂರು ಸೇರಿ ದೇಶದ ಹಲವೆಡೆ NIA ದಾಳಿ

ನವದೆಹಲಿ, ನ.8- ಮಾನವ ಕಳ್ಳ ಸಾಗಣೆ ಆರೋಪದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ವಿವಿಧ ಕಡೆ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದೆ.

ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಹರಿಯಾಣ, ಪುದುಚೇರಿ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಎನ್‍ಐಎ ಶೋಧ ನಡೆಸಿದೆ.

ಬೆಂಗಳೂರು ನಗರದಲ್ಲಿ 15ಕ್ಕೂ ಅಧಿಕ ಕಡೆ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಎನ್‍ಐಎ ದಾಳಿ ನಡೆಸಿದೆ. ನಗರದ ಸೋಲದೇವನಹಳ್ಳಿ, ಕೆಆರ್ ಪುರಂ, ಬೆಳ್ಳಂದೂರು ಸೇರಿದಂತೆ 15ಕ್ಕೂ ಅಧಿಕ ಕಡೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದೆ.8 ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ.

ಎನ್‍ಐಎ ನ 15 ಅಧಿಕಾರಿಗಳ ತಂಡವು ಮಾನವ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಬೆಂಗಳೂರು ನಗರದ 15ಕ್ಕೂ ಹೆಚ್ಚು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ ಮಂಗಳವಾರ ರಾತ್ರಿ ದಾಳಿ ಮಾಡಿದೆ. ಎಂಟು ಮಂದಿ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದು ಎನ್‍ಐಎ ಅಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಬೆಂಗಳೂರಿಗೆ 24 ಟಿಎಂಸಿ ನೀರು ಮೀಸಲಿಡಲು ಸರ್ಕಾರ ಆದೇಶ : ಡಿಸಿಎಂ

ಅಕ್ರಮ ಬಾಂಗ್ಲಾ ವಲಸಿಗರು ಮಾನವ ಕಳ್ಳಸಾಗಾಣಿಕೆ ಮತ್ತು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಬಂಧ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಂಗ್ಲಾ ದೇಶದಿಂದ ನೂರಾರು ಮಂದಿಯನ್ನು ಭಾರತಕ್ಕೆ ಅಕ್ರಮವಾಗಿ ಕರೆ ತರುವುದು, ಇಲ್ಲಿ ಅವರನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಬಳಸುವುದು ಇವರ ಮೇಲಿನ ಆರೋಪವಾಗಿತ್ತು.

ಉದ್ಯೋಗದ ಆಮಿಷವೊಡ್ಡಿ ಅವರನ್ನು ಇಲ್ಲಿಗೆ ಕರೆತಂದು ಬಳಿಕ ಅವರಿಗೆ ಉಗ್ರ ತರಬೇತಿ ನೀಡಿ ದುಷ್ಕøತ್ಯಗಳಿಗೆ ಬಳಸುವ ವಿದ್ಯಮಾನಗಳು ನಡೆಯುತ್ತಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಅವರಲ್ಲಿ ಕೆಲವರು ಕಳ್ಳತನ, ದರೋಡೆ ಕೃತ್ಯಗಳಲ್ಲಿ ಶಾಮೀಲಾದರೆ ಇನ್ನೂ ಕೆಲವರು ಕೊಲೆ, ಉಗ್ರ ಕೃತ್ಯಗಳಲ್ಲೂ ಭಾಗಿಯಾಗುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ರಾಜ್ಯದ ಕೆಲವು ಕಡೆ ಅವರು ತಮ್ಮದೇ ಆದ ಕಾಲೋನಿಗಳನ್ನು ಸೃಷ್ಟಿಸಿಕೊಂಡು ರಕ್ಷಣೆ ಪಡೆಯುತ್ತಿದ್ದಾರೆ ಎಂಬ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದವು.

ಬೆಂಗಳೂರಿನ ಜಕ್ಕಸಂದ್ರ, ಬೆಳ್ಳಂದೂರು ಕೆರೆ ಮುಂಭಾಗ, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಮುನ್ನೇಕೊಳಲು, ಸೋಮಸುಂದರಪಾಳ್ಯ, ಬೇಗೂರು ರಸ್ತೆ ನೈಸ್ ರಸ್ತೆ ಸೇರುವ ಭಾಗ ಸೇರಿದಂತೆ ಅನೇಕ ಪ್ರದೇಶದಲ್ಲಿ ಅಕ್ರಮ ವಲಸಿಗರು ವಾಸಿಸುತ್ತಿದ್ದಾರೆ ಎಂಬ ಮಾತು ಈ ಹಿಂದೆಯೇ ಕೇಳಿ ಬಂದಿತ್ತು. ಕೆಲವರು ವೀಸಾ ಅವಧಿ ಮುಗಿದರೂ ಕಾನೂನು ಬಾಹಿರವಾಗಿ ದೇಶದ ವಿವಿಧ ಕಡೆ ನೆಲೆಸಿದ್ದರು.

ಮದುವೆ ದಿನವೇ ಪ್ರೇಯಸಿಗೆ ಕೈಕೊಟ್ಟು ಪ್ರಿಯಕರ ಪರಾರಿ

ಇನ್ನು ಕೆಲವು ಶ್ರೀಲಂಕಾ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ತಂಗಿದ್ದಕ್ಕೆ ಸಂಬಂಧಿಸಿದಂತೆ ಎನ್‍ಐಎ ಕಳೆದ ತಿಂಗಳು ತಮಿಳುನಾಡು ಮೂಲದ ವ್ಯಕ್ತಿ – ಮೊಹಮ್ಮದ್ ಇಮ್ರಾನ್ ಖಾನ್ ಅವರನ್ನು ಬಂಧಿಸಿತ್ತು ದಾಳಿಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬುದು ಖಚಿತಪಟ್ಟಿಲ್ಲ.

ಇದಕ್ಕೂ ಮೊದಲು, 2022ರಲ್ಲಿ, ರೊಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ಭಾರತದ ಭೂಪ್ರದೇಶಕ್ಕೆ ಸಾಗಿಸುವ ಹಾಗೂ ನಕಲಿ ದಾಖಲೆಗಳೊಂದಿಗೆ ಇಲ್ಲಿ ನೆಲೆಸಿರುವ ಬಗ್ಗೆ ತನಿಖೆ ನಡೆಸಿತ್ತು.

ಭಾರತ vs ಪಾಕಿಸ್ತಾನ ಸೆಮಿಫೈನಲ್..?

ಬೆಂಗಳೂರು, ನ.8- ಐಸಿಸಿ ಆಯೋಜನೆಯ 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‍ನ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ, ಅಫಘಾನಿಸ್ತಾನ ವಿರುದ್ಧ 3 ವಿಕೆಟ್‍ಗಳ ರೋಚಕ ಗೆಲುವು ಸಾಧಿಸುವ ಮೂಲಕ ಸೆಮೀಸ್ ಹಂತ ತಲುಪಿದ 3ನೇ ತಂಡವಾಗಿ ಗುರುತಿಸಿಕೊಂಡಿದೆ.

ತವರಿನ ಅಂಗಳದ ಲಾಭ ಹೊಂದಿರುವ ರೋಹಿತ್ ಶರ್ಮಾ ಪಡೆ ಆಡಿರುವ ಎಲ್ಲಾ 8 ಪಂದ್ಯಗಳಲ್ಲೂ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‍ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ್ದು, ಸೆಮಿಫೈನಲ್ ಪಂದ್ಯಕ್ಕೆ 4ನೇ ತಂಡವಾಗಿ ಎಂಟ್ರಿ ಕೊಡುವ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.

ಆಸ್ಟ್ರೇಲಿಯಾ ವರ್ಸಸ್ ದಕ್ಷಿಣ ಆಫ್ರಿಕಾ ಸೆಮಿಫೈನಲ್:
2019ರಲ್ಲಿ ನಡೆದ ರೌಂಡ್ ರಾಬಿನ್ ಆಧಾರದ ಮೇಲೆ ಹೇಳುವುದಾದರೆ ನವೆಂಬರ್ 16 ರಂದು ಕೋಲ್ಕತ್ತಾದ ಈಡೆನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಹಗಲು ರಾತ್ರಿಯ 2ನೇ ಉಪಾಂತ್ಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

2ನೇ ಹಂತದ ಭಾರತ್ ಜೋಡೋ ಯಾತ್ರೆ ಸಿದ್ಧತೆ

ಟೀಮ್ ಇಂಡಿಯಾಗೆ ಪ್ರತಿಸ್ರ್ಪ ಯಾರು..?
2023ರ ವಿಶ್ವಕಪ್ ಟೂರ್ನಿಯ ಪಾಯಿಂಟ್ಸ್ ಟೇಬಲ್‍ನಲ್ಲಿ 16 ಅಂಕ ಹಾಗೂ ಉತ್ತಮ ನೆಟ್ ರೇಟ್‍ನೊಂದಿಗೆ (+2.456) ಟಾಪ್ 1 ಸ್ಥಾನದಲ್ಲಿದ್ದು, 4ನೇ ಸ್ಥಾನಿಯಾಗಿ ಸೆಮಿಫೈನಲ್ ತಲುಪುವ ತಂಡದ ವಿರುದ್ಧ ನ.15 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ತಂಡದ ವಿರುದ್ಧ ಕಾದಾಟ ನಡೆಸಲಿದೆ.

ಭಾರತ ವರ್ಸಸ್ ಪಾಕಿಸ್ತಾನ:
2011ರ ವಿಶ್ವಕಪ್‍ನಲ್ಲಿ ಎಂ.ಎಸ್. ಧೋನಿ ಪಡೆ ಸಂಪ್ರ ದಾಯಿಕ ವೈರಿ ಪಾಕಿಸ್ತಾನವನ್ನು ಸೆಮಿಫೈನಲ್‍ನಲ್ಲಿ ಮಣಿಸಿ ಫೈನಲ್ಸ್‍ನಲ್ಲಿ ಶ್ರೀಲಂಕಾ ವಿರುದ್ಧ ಸೆಣಸಿ ಗೆಲುವು ಸಾಸಿ 2ನೇ ಬಾರಿ ಟ್ರೋಫಿ ಜಯಿಸಿತ್ತು. ಅದರಂತೆ ಈ ಬಾರಿಯೂ ಸೆಮಿಫೈನಲ್‍ನಲ್ಲಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಟೀಇಂಡಿಯಾ ಫೈನಲ್ ತಲುಪಲಿದೆ ಎಂದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.

4ನೇ ಸ್ಥಾನಕ್ಕೆ ಭರ್ಜರಿ ಫೈಟ್:
2023ರ ವಿಶ್ವಕಪ್‍ನ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಅಫಘಾನಿಸ್ತಾನ ತಂಡಗಳು ತಲಾ 8 ಅಂಕಗಳೊಂದಿಗೆ ಕ್ರಮವಾಗಿ 4,5 ಹಾಗೂ 6ನೇ ಸ್ಥಾನದಲ್ಲಿದ್ದು, ಲೀಗ್‍ನ ತಮ್ಮ ಮುಂದಿನ ಪಂದ್ಯದಲ್ಲಿ ಕ್ರಮವಾಗಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳ ವಿರುದ್ಧ ಸೆಣಸಲಿದ್ದು ಈ ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮೀಸ್‍ಗೆ ತಲುಪುವ ಲೆಕ್ಕಾಚಾರ ಹಾಕಿಕೊಂಡಿವೆ. ಒಂದು ವೇಳೆ ಈ 3 ತಂಡಗಳು ಜಯ ಗಳಿಸಿದರೆ, ಆಗ ರನ್ ರೇಟ್ ಹೆಚ್ಚಾಗಿರುವ ತಂಡವು ರೋಹಿತ್ ಶರ್ಮಾ ಪಡೆ ವಿರುದ್ಧ ಸೆಮಿಫೈನಲ್‍ನಲ್ಲಿ ಹೋರಾಟ ನಡೆಸಲಿದೆ.

ನಮ್ಮ ಗ್ಯಾರಂಟಿಗಳು ಪ್ರಧಾನಿಯ ನಿದ್ದೆಗೆಡಿಸಿದೆ : ಡಿಕೆಶಿ

ಬೆಂಗಳೂರು,ನ.8- ಲೋಕಸಭೆ ಚುನಾವಣೆಗೂ ಮುನ್ನಾ ರಾಜ್ಯ ಸರ್ಕಾರದಲ್ಲಿ ಗೊಂದಲ ಮೂಡಿಸಬೇಕು ಎಂದು ಬಿಜೆಪಿಯ ಕೆಲಸವಿಲ್ಲದ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಒಬ್ಬನೆ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮಗೆ ಬಹಳಷ್ಟು ಮಾಹಿತಿಗಳಿವೆ. ಸದ್ಯಕ್ಕೆ ನಾವು ಏನನ್ನು ಬಹಿರಂಗ ಪಡಿಸುವುದಿಲ್ಲ ಎಂದರು.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಪಡ್ನಾವೀಸ್ ನಡೆಸಿರುವ ಸಭೆಗೆ ರಾಜ್ಯದ ಕಾಂಗ್ರೆಸ್ ಶಾಸಕರು ಹೋಗಿಲ್ಲ. ಆದರೆ ಬಿಜೆಪಿಯವರು ಲೋಕಸಭೆ ಚುನಾವಣೆಗೂ ಮುನ್ನಾ ಗೊಂದಲ ಮಾಡಲು ಯತ್ನಿಸುತ್ತಿದ್ದಾರೆ. ಅವರ ಪಕ್ಷದಲ್ಲಿಯೇ ಸಾಕಷ್ಟು ಗೊಂದಲ ಇದೆ, ನಾಯಕತ್ವ ಇನ್ನೂ ತೀರ್ಮಾನವಾಗಿಲ್ಲ. ಅದರ ನಡುವೆ ನಮ್ಮ ಶಾಸಕರ ಕುಶಲ ವಿಚಾರಿಸಲು, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವಂತೆ ಬಂದು, ಹೊರ ಹೋಗುವಾಗ ರಾಜಕೀಯ ಮಾತನಾಡಿದ್ದಾಗಿ ಬಿಂಬಿಸುತ್ತಿದ್ದಾರೆ.

ಇಂತಹ ನೂರು ಪ್ರಯತ್ನ ಮಾಡಲಿ, ಮಾಡದಿರಲಿ, ನಮಗೆ ಎಲ್ಲಾ ಮಾಹಿತಿ ಗೋತ್ತಿದೆ. ಬಿಜೆಪಿಯ ಕೆಲವು ನಿರೋದ್ಯೋಗಿಗಳು, ಏಜೆಂಟರು ಓಡಾಡುತ್ತಿದ್ದಾರೆ. ಬಿಜೆಪಿಯವರು ಸಂಪರ್ಕ ಮಾಡಿ ಚರ್ಚೆ ಮಾಡಿದ ಬಳಿಕ ನಮ್ಮ ಶಾಸಕರು ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದರು.

ಮಹಿಳೆಯರ ಕುರಿತು ಹೊಲಸು ನಾಲಿಗೆ ಹರಿಬಿಟ್ಟಿದ್ದ ನಿತೀಶ್ ಕುಮಾರ್ ಕ್ಷಮೆಯಾಚನೆ

ನಾನು ಮನೆಯ ಮುಖ್ಯಸ್ಥ:
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆಗೆ ನಿನ್ನೆ ದಿಡೀರ್ ಭೇಟಿ ನೀಡಿದ ಬಗ್ಗೆ ಪತಿಕ್ರಿಯಿಸಿದ ಅವರು, ನಾನು ಮನೆಯ ಮುಖ್ಯಸ್ಥ, ಎಲ್ಲರ ಮನೆಗೂ ಹೋಗುತ್ತೇನೆ. ಕೆಲವರನ್ನು ನಮ್ಮ ಮನೆಗೆ ಕರೆಸಿಕೊಳ್ಳುತ್ತೇನೆ. ಅದರಲ್ಲಿ ವಿಶೇಷವೇನು ಇಲ್ಲ. ರಾಮಲಿಂಗಾರೆಡ್ಡಿ ಮನೆಗೆ ಹೋಗಿದ್ದೇನೆ, ಪರಮೇಶ್ವರ್ ನಮ್ಮ ಮನೆಗೆ ಬರುತ್ತೇನೆ ಎಂದಿದ್ದರು ನಾನೇ ಬರುತ್ತೇನೆ ಎಂದು ಹೇಳಿದ್ದೇನೆ. ಸತೀಶ್ ಜಾರಕಿಹೊಳಿ ನಮ್ಮ ಮನೆಗೆ ಬರುವುದಾಗಿ ಹೇಳಿದರು, ಬೇಡ ನಾನೇ ಬರುತ್ತೇನೆ ಎಂದು ಹೋಗಿದ್ದೆ ಎಂದರು.

ನಮ್ಮ ಮನೆಯಲ್ಲಿ ಜಾಗವೇ ಇರುವುದಿಲ್ಲ. ಜನ ಒಬ್ಬರ ಮೇಲೆ ಒಬ್ಬರು ನುಗ್ಗುತ್ತಿರುತ್ತಾರೆ. ಮನೆಯಲ್ಲಿ ಸಮಯವೂ ಇರುವುದಿಲ್ಲ, ಜಾಗವೂ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮಯವನ್ನೇ ನೀಡಲಾಗುತ್ತಿಲ್ಲ, ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದರು.

ಕಾಂಗ್ರೆಸ್‍ನಲ್ಲಿಲ ಸತೀಶ್ ಜಾರಕಿಹೊಳಿ ಮೂರನೇ ಶಕ್ತಿ ಕೇಂದ್ರವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಪ್ರತಿಕ್ರಿಯಿಸಿದ ಅವರು, ಒಬ್ಬರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಒಬ್ಬರೆ ಮುಖ್ಯಮಂತ್ರಿ ಮಾತ್ರ. ಮೂರನೇ ಶಕ್ತಿ ಕೇಂದ್ರ ಇಲ್ಲ. ರಾಜ್ಯದ ಐದು ವರ್ಷ ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ, ಅದು ಮುಗಿದ ಬಳಿಕ 2028ಕ್ಕೆ ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸ ಇದೆಯಲ್ಲಾ ಅದೇ ಸಂತೋಷ ಎಂದರು.

ಸಂಪುಟದಲ್ಲಿ ಬದಲಾವಣೆ ಇಲ್ಲ:
ಪಂಚರಾಜ್ಯಗಳ ಚುನಾವಣೆಯ ನಂತರ ರಾಜ್ಯ ಸಚಿವ ಸಂಪುಟ ಪುನಃರಚನೆಯಾಗಲಿದೆ ಎಂಬುದು ಆಧಾರ ರಹಿತ. ಸದ್ಯಕ್ಕೆ ಅಂತಹ ಯಾವ ಬದಲಾವಣೆಗಳು ಇಲ್ಲ. ನಿಗಮ ಮಂಡಳಿಗೆ ನೇಮಕಾತಿ ಕುರಿತು ಚರ್ಚೆ ನಡೆಸಲು ನವೆಂಬರ್ 15ರ ಬಳಿಕ ಎಐಸಿಸಿ ನಾಯಕರು ರಾಜ್ಯಕ್ಕೆ ಬರುತ್ತಾರೆ ಎಂದರು. ಕೆಪಿಸಿಸಿ ಅಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ ಸಚಿವರಾಗಿದ್ದಾರೆ. ಹೊಸ ತಂಡ ಬರಬೇಕು ಎಂದು ಹೈಕಮಾಂಡ್‍ನವರೊಂದಿಗೆ ಚರ್ಚೆ ಮಾಡಿದ್ದೇವೆ. ಎಐಸಿಸಿ ಅಧ್ಯಕ್ಷರು ನಮ್ಮ ರಾಜ್ಯದವರೆ ಇದ್ದಾರೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

ಪ್ರಧಾನಿ ನಿದ್ದೆ ಕೆಟ್ಟಿದೆ:
ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಮಂತ್ರಿಯವರು ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪ್ರಧಾನಿ ನಮ್ಮನ್ನು ಅಷ್ಟು ನೆನೆಸಿಕೊಳ್ಳುತ್ತಿದ್ದಾರಲ್ಲ ಸಂತೋಷ, ನಮ್ಮ ಗ್ಯಾರಂಟಿ, ರಾಜ್ಯದ ಜನರ ತೀರ್ಮಾನ ಪ್ರಧಾನಿಯವರ ನಿದ್ದೆ ಗೆಡಿಸಿದೆ ಎಂದರು. ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಐದರಲ್ಲೂ ಗೆಲ್ಲುತ್ತದೆ. ಮಿಜೋರಾಂನ ಬಗ್ಗೆ ಮಾಹಿತಿ ಇಲ್ಲ. ಉಳಿದಂತೆ ಎಲ್ಲಾ ಕಡೆ ಗೆಲ್ಲುತ್ತೇವೆ. ಉತ್ತರ ಭಾರತದಲ್ಲೆ ರಾಜಸ್ಥಾನದಲ್ಲಿ ಉತ್ತಮ ಅಭಿವೃದ್ಧಿಯ ಕೆಲಸಗಳಾಗಿವೆ ಎಂದರು.

ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡುವ ಅಂತಹ ಪರಿಸ್ಥಿತಿ ಯಾಕೆ ಬಂತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಬೇಕು. ನಮಗೆ 136 ಶಾಸರಕ ಹಾಗೂ ಪಕ್ಷೇತರರ ಬೆಂಬಲ ಇದೆ. ಜೆಡಿಎಸ್‍ನವರು ಒಗ್ಗಟ್ಟು ಪ್ರದರ್ಶನ ಮಾಡುವ ಪರಿಸ್ಥಿತಿ ಬಂದಿರುವುದು ಏಕೆಂದು ಆ ಪಕ್ಷದ ನಾಯಕರೇ ಹೇಳಬೇಕು ಎಂದರು.

ಮುಖ್ಯಮಂತ್ರಿಯವರು ಹೇಳಿದಂತೆ ಬಿಜೆಪಿ-ಜೆಡಿಎಸ್‍ನ ಬಹಳಷ್ಟು ಮಂದಿ ಕಾಂಗ್ರೆಸ್‍ಗೆ ಬರುತ್ತಾರೆ. ಇದೇ 15ಕ್ಕೆ ಅಡ್ಮಿಷನ್ ದಿನಾಂಕ ನಿಗದಿಯಾಗಿದೆ ಎಂದು ಡಿ.ಕೆ.ಶಿವಕುಮಾರ ಜೇಬು ತಡಕಾಡಿದರು.
ಬಹುಶಃ ಮನೆಯಲ್ಲಿ ಅಪಾಯಿಂಟ್ ಮೆಂಟ್ ಕಾರ್ಡ್ ಅನ್ನು ಮನೆಯಲ್ಲಿ ಬಿಟ್ಟಿರಬಹುದು. ಎಷ್ಟು ಜನ ಅಡ್ಮಿಷನ್ ತೆಗೆದುಕೊಳ್ಳುತ್ತಾರೆ ಎಂದು 14ರ ಸಂಜೆ ತಿಳಿಸುತ್ತೇನೆ ಎನ್ನುವ ಮೂಲಕ ನವೆಂಬರ್ 15ರಂದು ಪ್ರಭಾವಿ ನಾಯಕರು ಕಾಂಗ್ರೆಸ್ ಸೇರುತ್ತಿರುವ ಸುಳಿವು ನೀಡಿದರು.

ಎಲ್ಲಾ ಜಾತಿಗಳು ನ್ಯಾಯ:
ಸದಾಶಿವ ಆಯೋಗದ ವರದಿ ಜಾರಿ ಸೇರಿದಂತೆ ಪರಿಶಿಷ್ಟರ ಬೇಡಿಕೆಗಳ ಈಡೇರಿಕೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ನಮ್ಮ ಪಕ್ಷದಲ್ಲಿ ಕೆಲವು ಬದ್ಧತೆಗಳಿವೆ. ಚಿತ್ರದುರ್ಗದ ಸಮಾವೇಶದಲ್ಲಿ ಕಾಂಗ್ರೆಸ್ ನಿರ್ಣಯ ಕೈಗೊಂಡಿದೆ. ಎಲ್ಲವನೂ ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಎಲ್ಲಾ ಸಮಾಜಕ್ಕೂ ನ್ಯಾಯ ಕೊಡಿಸುತ್ತೇವೆ, ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ಬಿಬಿಎಂಪಿ ಇಂಜಿನಿಯರ್ ಇನ್ ಛೀಪ್ ಪ್ರಹ್ಲಾದ್ ಅವರ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿಲ್ಲ. ಬಜೆಟ್ ಘೋಷಿತ ಯೋಜನೆಗಳ ಪ್ರಕಾರ ಕೆಲಸ ನಡೆಯುತ್ತಿದೆ. ಹೊಸ ಬಜೆಟ್ ಕೊಟ್ಟಿಲ್ಲ, ಡಿಸೆಂಬರ್‍ಗೆ ವೇಳೆಗೆ ಹಣಕಾಸು ಹೊಂದಾಣಿಕೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದರು.

ಅದಾನಿ ಸಂಸ್ಥೆಯಲ್ಲಿ ಅಮೆರಿಕದಿಂದ 553 ಮಿಲಿಯನ್ ಡಾಲರ್ ಹೂಡಿಕೆ

ರಾಜ್ಯದಲ್ಲಿ ಹೊಸ ಕಾರು ಖರೀದಿ ಸೇರಿದಂತೆ ಅನಗತ್ಯ ವೆಚ್ಚಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು,
ಡಿಸೇಲ್ ಕಾರುಗಳನ್ನು ಬದಲಾವಣೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ದೆಹಲಿಯಲ್ಲಿ ಇರುವ ನನ್ನ ಕಾರನ್ನು ಬದಲಾಯಿಸಬೇಕಿದೆ. ಇಲ್ಲಿ ಹೊಸ ಬುಕ್ಕಿಂಗ್‍ಗೆ ಅವಕಾಶ ಇಲ್ಲ. ಬೆಂಗಳೂರಿಗೆ ಹೋಗಿ ಕಾರು ಬುಕ್ ಮಾಡಿ ಬದಲಾವಣೆ ಮಾಡಬೇಕಿದೆ. ಡಿಸೇಲ್ ಕಾರು ದಲಾಯಿಸಿ ಪೆಟ್ರೋಲ್ ಕಾರು ಖರೀದಿಸಲು ಅಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ಮೈಸೂರು ದಸರಾಗೆ ಜನವೋ ಜನ. ಜಂಬು ಸವಾರಿ ದಿನ ನಾನು ಮುಖ್ಯಮಂತ್ರಿಯವರ ಜೊತೆ ಬಸ್‍ನಲ್ಲಿ ಬಂದು ಬಿಟ್ಟೆ. ನನ್ನ ಪತ್ನಿ ಅವರ ಮನೆಯಲ್ಲಿದ್ದರು. ನನ್ನ ಮಾವನ ಮನೆಗೂ ಅರಮನೆಗೂ ಒಂದು ಕಿಲೋ ಮೀಟರ್. ನನ್ನ ಪತ್ನಿಯನ್ನು ಕರೆ ತರುವಂತೆ ಪೆÇಲೀಸ್ ಗಾಡಿ ಕಳುಹಿಸಿದೆ ಆದರೆ ಜನರ ನಡುವೆ ಕರೆ ತರಲಾಗಲಿಲ್ಲ, ನಾನು ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರಬೇಕು ಎಂದು ಕೊಂಡಿದ್ದೆ, ಅದು ಆಗಲಿಲ್ಲ ಅಷ್ಟು ಜನ. ಉಚಿತ ಪ್ರಯಾಣ ಎಂದು ಮಹಿಳೆಯರು ಮಾತ್ರ ಬರುತ್ತಿಲ್ಲ, ಜೊತೆಗೆ ಪತಿ, ಮಕ್ಕಳನ್ನು ಕರೆ ತರುತ್ತಾರೆ. ಪ್ರಯಾಣ ದರ 500 ರೂಪಾಯಿ ಉಳಿಸಿದರೆ ಊಟ, ವಸತಿ ಎಂದು ಒಂದುವರೆ ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದರು.

ಬೆಂಗಳೂರಿಗೆ 24 ಟಿಎಂಸಿ ನೀರು ಮೀಸಲಿಡಲು ಆದೇಶ : ಡಿಸಿಎಂ

ಬೆಂಗಳೂರು, ನ.8- ಕಾವೇರಿ ನ್ಯಾಯಾೀಧಿಕರಣ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹಂಚಿಕೆಯಾಗಿರುವಂತೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ 24 ಟಿಎಂಸಿ ನೀರನ್ನು ಮೀಸಲಿಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ ಸಚಿವರು ಆಗಿರುವ ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ಅಲ್ಲಿ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಮ್ಮ ಅಧಿಕಾರಿಗಳು ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡುವುದಾಗಿ ಪ್ರಾಧಿಕಾರದವರು ಭರವಸೆ ನೀಡಿದ್ದಾರೆ. ಬಹುಶಃ ಮುಂದಿನ ವಾರ ವಿಚಾರಣೆಗೆ ಸಮಯ ನಿಗದಿಯಾಗಬಹುದು. ನಾವು ಅದಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿದ್ದೇವೆ. ನಮಗೆ ಎಷ್ಟು ನೀರು ಬೇಕು, ಎಷ್ಟು ಉಳಿತಾಯವಾಗಲಿದೆ, ಸಮುದ್ರಕ್ಕೆ ಎಷ್ಟು ಹರಿದು ಹೋಗುತ್ತದೆ ಎಂಬ ಮಾಹಿತಿಯನ್ನು ಸಲ್ಲಿಸಲಿದ್ದೇವೆ.

ನಮಗೆ ಕುಡಿಯುವ ನೀರಿಗೆ 24 ಟಿಎಂಸಿ ಬೇಕು ಎಂದು ಸುಪ್ರೀಂಕೋರ್ಟ್ ಆದೇಶದ ಪ್ರಕಾರವೇ ಮೀಸಲಿಟ್ಟಿದ್ದೇವೆ. ಅದನ್ನು ಬಿಡಬ್ಯೂಎಸ್‍ಎಸ್‍ಬಿ ಬಳಸಿಕೊಳ್ಳಬೇಕು ಎಂದು ನಿನ್ನೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ಮೊದಲು 18 ಟಿಎಂಸಿ ನಿಗದಿ ಮಾಡಲಾಗಿತ್ತು. ಉಳಿಕೆ ಆರು ಟಿಎಂಸಿಯನ್ನು ಬಳಕೆ ಮಾಡಲು ಪರಿಶೀಲನೆ ನಡೆಸಿ ಅನುಮತಿ ನೀಡಲಾಗಿದೆ. ಗರಿಷ್ಠ 24 ಟಿಎಂಸಿಗೆ ಮಿತಿಗೊಳಿಸಿ ಆದೇಶಿಸಲಾಗಿದೆ. ಇನ್ನೂ ಮುಂದೆ ಅಣೆಕಟ್ಟೆಗಳಲ್ಲಿ 24 ಟಿಎಂಸಿಯನ್ನು ಮೀಸಲಿರಿಸಿ ನಂತರ ಉಳಿದ ನೀರನ್ನು ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

3ನೇ ಬಾರಿಗೆ ನ್ಯೂಜೆರ್ಸಿ ಸೆನೆಟ್‍ಗೆ ಆಯ್ಕೆಯಾದ ವಿನ್ ಗೋಪಾಲ್

ಕೆಆರ್‍ಎಸ್‍ನಲ್ಲಿ ನೀರಿದೆ ನಮಗೆ ಬಿಡಿ ಎಂದು ತಮಿಳುನಾಡಿನವರು ಕೇಳುತ್ತಾರೆ. ಇನ್ನೂ ಮುಂದೆ ಕುಡಿಯುವ ನೀರಿಗೆ 24 ಟಿಎಂಸಿಯನ್ನು ಮೀಸಲಿಡಬೇಕು. ಇದು 2018ರ ಸುಪ್ರೀಂಕೋರ್ಟ್ ಆದೇಶದಲ್ಲೇ ಉಲ್ಲೇಖವಿದೆ. ನಮ್ಮ ಹಕ್ಕನ್ನು ನಾವು ಕಳೆದುಕೊಳ್ಳುವುದಿಲ್ಲ. ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುವುದಾದರೆ ನಮ್ಮ ಅಭ್ಯಂತರ ಇಲ್ಲ. ನ್ಯಾಯಾಲಯದ ಆದೇಶದ ಪ್ರಕಾರವೇ ನಿರ್ಧಾರ ಕೈಗೊಂಡು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಳಿ 24 ಟಿಎಂಸಿ ಬಳಸಿಕೊಳ್ಳಲು ಅನುಮತಿಸಿಸಲಾಗಿದೆ ಎಂದರು.

ಬೆಂಗಳೂರು ಸುತ್ತಮುತ್ತಾ ಆನೆಕಲ್‍ನಲ್ಲಿ ಬೆಂಗಳೂರು ಬೆಳೆದಿದೆ, ವಿಮಾನ ನಿಲ್ದಾಣಕ್ಕೆ ನೀರು ಪೂರೈಸಲೇಬೇಕು.
ಹಿಂದೆ ತಾವು ನಗರಾಭಿವೃದ್ಧಿ ಸಚಿವರಾಗಿದ್ದಾಗ ಹೆಬ್ಬಾಳದ ಮುಂದಕ್ಕೆ ನೀರು ಕೊಡಬಾರದು ಎಂದು ನಿರ್ಧರಿಸಲಾಗಿತ್ತು. ನಂತರ ಬಂದ ಸರ್ಕಾರಗಳು ಆದೇಶ ಬದಲಿಸಿವೆ, ಹೀಗಾಗಿ ಎಲ್ಲಾ ಕಡೆಗೂ ನೀರು ಹಂಚಿಕೆ ಮಾಡಬೇಕಿದೆ, ಬೆಂಗಳೂರು ಉತ್ತರ ಭಾಗದಲ್ಲಿ ಬೆಳೆಯುತ್ತಿದೆ ಎಂದರು.

ಅದಾನಿ ಸಂಸ್ಥೆಯಲ್ಲಿ ಅಮೆರಿಕದಿಂದ 553 ಮಿಲಿಯನ್ ಡಾಲರ್ ಹೂಡಿಕೆ

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನುಕೂಲವಾಗಲಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತಮಿಳುನಾಡಿನಲ್ಲಿ ಕೆಲ ನದಿಗಳ ಅಂತರ್ ಜೋಡಣೆಯ ಪ್ರಸ್ತಾವನೆ ಮಾಡಿರುವುದರ ಬಗ್ಗೆ ಸದ್ಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರನ್ನು ಬಿಡುತ್ತೇವೆ ಅದರ ಬಗ್ಗೆ ಅವರಿಗೆ ಚಿಂತೆ ಬೇಡ. ನಾವು ನಮ್ಮ ರಾಜ್ಯದಲ್ಲಿ ಆಂತರಿಕವಾಗಿ ನದಿ ಜೋಡಣೆ ಮಾಡುತ್ತೇವೆಯೋ, ಅಣೆಕಟ್ಟುತ್ತೇವೆಯೋ ಅದರ ಬಗ್ಗೆ ತಮಿಳುನಾಡು ತಲೆ ಕೆಡಿಕೊಳ್ಳುವ ಅಗತ್ಯ ಇಲ್ಲ. ಮಳೆ ಇಲ್ಲದೆ ಸಂಕಷ್ಟ ಸಂದರ್ಭದಲ್ಲೂ ತಮಿಳುನಾಡಿಗೆ 2 ಸಾವಿರ ಎರಡುವರೆ ಸಾವಿರ ಬಿಡಿ ಎನ್ನುತ್ತಾರೆ, ಸಂಕಷ್ಟ ಕಾಲದಲ್ಲಿ ಇದನ್ನು ಪಾಲನೆ ಮಾಡುವುದು ಕಷ್ಟವಾಗುತ್ತದೆ. ನಿನ್ನೆ ಮೊನ್ನೆ ಮಳೆಯಾಗಿದ್ದರಿಂದ ಕೆಆರ್‍ಎಸ್‍ಗೆ ಒಳ ಸ್ವಲ್ಪ ಹರಿವು ಹೆಚ್ಚಾಗಿದೆ ಎಂದರು.

ಅಡ್ವಾಣಿ ಹುಟ್ಟುಹಬ್ಬಕ್ಕೆ ಮೋದಿ, ಶಾ ಸೇರಿ ಗಣ್ಯರಿಂದ ಶುಭಾಶಯ

ನವದೆಹಲಿ, ನ.8- ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿ ಗಣ್ಯರು ಜನ್ಮದಿನದ ಶುಭಾಶಯ ಕೋರಿದ್ದಾರೆ. ಸಾಮಾಜಿಕ ಜಾಲತಾಣ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಎಲ್.ಕೆ. ಅಡ್ವಾಣಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ನಮ್ಮ ರಾಷ್ಟ್ರವನ್ನು ಬಲಪಡಿಸಿದ ಸ್ಮರಣೀಯ ಕೊಡುಗೆಗಳನ್ನು ನೀಡಿದ ಸಮಗ್ರತೆ ಮತ್ತು ಸಮರ್ಪಣೆಗೆ ದಾರಿದೀಪವಾಗಿದ್ದಾರೆ. ಅವರ ದೂರದೃಷ್ಟಿಯ ನಾಯಕತ್ವವು ರಾಷ್ಟ್ರೀಯ ಪ್ರಗತಿ ಮತ್ತು ಏಕತೆಯನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ನಾನು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಬಯಸುತ್ತೇನೆ. ರಾಷ್ಟ್ರ ನಿರ್ಮಾಣದ ಕಡೆಗೆ ಅವರ ಪ್ರಯತ್ನಗಳು 140 ಕೋಟಿ ಭಾರತೀಯರಿಗೆ ಸೂರ್ತಿ ನೀಡುತ್ತಲೇ ಇರುತ್ತವೆ ಎಂದು ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಹಿರಿಯ ನಾಯಕನಿಗೆ ಶುಭ ಹಾರೈಸಿದ್ದಾರೆ ಮತ್ತು 96 ವರ್ಷ ವರ್ಷದ ಅಡ್ವಾಣಿ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಸೂರ್ತಿಯ ಮೂಲವಾಗಿದ್ದಾರೆ ಎಂದು ಹೇಳಿದ್ದಾರೆ.

ಗೌರವಾನ್ವಿತ ಲಾಲ್ ಕೃಷ್ಣ ಅಡ್ವಾಣಿ ಜೀ ಅವರಿಗೆ ಜನ್ಮದಿನದ ಶುಭಾಶಯಗಳು. ಅಡ್ವಾಣಿ ಜೀ ಅವರು ತಮ್ಮ ಅವಿರತ ಶ್ರಮ ಮತ್ತು ಸಂಘಟನಾ ಕೌಶಲ್ಯದಿಂದ ಪಕ್ಷವನ್ನು ಬೆಳೆಸಲು ಮತ್ತು ಕಾರ್ಯಕರ್ತರನ್ನು ಕಟ್ಟಲು ಶ್ರಮಿಸಿದ್ದಾರೆ. ಬಿಜೆಪಿಯ ಪ್ರಾರಂಭದಿಂದ ಅಕಾರಕ್ಕೆ ಬರುವವರೆಗೆ ಅಡ್ವಾಣಿ ಜಿ ಅವರು ಅನುಪಮ ಕೊಡುಗೆ ನೀಡಿದ್ದಾರೆ. ಅವರು ಪ್ರತಿಯೊಬ್ಬ ಕಾರ್ಯರ್ತನಿಗೆ ಸೂರ್ತಿ. ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಶಾ ಟ್ವೀಟ್ ಮಾಡಿದ್ದಾರೆ.

3ನೇ ಬಾರಿಗೆ ನ್ಯೂಜೆರ್ಸಿ ಸೆನೆಟ್‍ಗೆ ಆಯ್ಕೆಯಾದ ವಿನ್ ಗೋಪಾಲ್

ಲಾಲ್ ಕೃಷ್ಣ ಅಡ್ವಾಣಿ ಎಲ್.ಕೆ. ಅಡ್ವಾಣಿ ಅವರ ಪೂರ್ಣ ಹೆಸರು. ಇವರು ನವೆಂಬರ್ 8, 1927ರಲ್ಲಿ ಸ್ವಾತಂತ್ರ್ಯ ಪೂರ್ವ ಭಾರತದ ಸಿಂಧ್ ಪಾಂತ್ಯದ ಗೊರೆಗಾಂವ್‍ನಲ್ಲಿ ಜನಿಸಿದರು. ಕಿಶಿಂಚಂದ್ ಅಡ್ವಾಣಿ ಹಾಗೂ ಜ್ಞಾನಿದೇವಿ ಇವರ ತಂದೆ-ತಾಯಿ. ಇವರಿಗೆ ಶೀಲಾ ಎಂಬ ಸಹೋದರಿ ಇದ್ದಾರೆ. ಅಡ್ವಾಣಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್) ದ ಮೂಲಕ ಭಾರತದ ರಾಜಕೀಯ ರಂಗಕ್ಕೆ ಧುಮುಕಿದವರು.

ಮದುವೆ ದಿನವೇ ಪ್ರೇಯಸಿಗೆ ಕೈಕೊಟ್ಟು ಪ್ರಿಯಕರ ಪರಾರಿ

ತುಮಕೂರು, ನ.8- ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ನಂತರ ಪ್ರೀತಿ ಹುಟ್ಟಿ ಜೊತೆಯಾಗಿ ಓಡಾಡಿಗೊಂಡಿದ್ದ ಪ್ರಿಯಕರ ಇದೀಗ ಮದುವೆ ದಿನವೇ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಪ್ರೇಯಸಿ ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯ ಒದಗಿಸುವಂತೆ ಕಣ್ಣೀರಿಟ್ಟಿದ್ದಾಳೆ. ಎರಡೂವರೆ ವರ್ಷಗಳಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಇದೀಗ ಮದುವೆಯಾಗದೆ ಪರಾರಿಯಾಗಿದ್ದಾನೆಂದು ತುಮಕೂರು ಮೂಲದ ಯುವತಿ ಬೆಂಗಳೂರು ಮೂಲದ ಪ್ರಿಯಕರ ಗಜೇಂದ್ರ ವಿರುದ್ದ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬೆಂಗಳೂರಿನ ನೆಲಗದರನಹಳ್ಳಿ ವಾಸವಾಗಿರುವ ಗಜೇಂದ್ರ ಹಾಗು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಕಳೆದ ಎರಡು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು ಮತ್ತು ಹಲವೆಡೆ ಜೊತೆಯಾಗಿ ಸುತ್ತಾಡಿದ್ದರು.

3ನೇ ಬಾರಿಗೆ ನ್ಯೂಜೆರ್ಸಿ ಸೆನೆಟ್‍ಗೆ ಆಯ್ಕೆಯಾದ ವಿನ್ ಗೋಪಾಲ್

ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ತನ್ನ ಪ್ರೇಯಸಿಯನ್ನು ಇತ್ತೀಚೆಗೆ ಲಾಡ್ಜ್ ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದ ಗಜೇಂದ್ರ, ಈಗ ಏಕಾಏಕಿ ಮನೆಯಲ್ಲಿ ಒಪ್ಪುತ್ತಿಲ್ಲ ನಾವಿಬ್ಬರು ಬೇರೆಯಾಗೋಣ ಎಂದು ಹೊಸ ವರಸೆ ತೆಗೆದಿದ್ದ. ಇದರಿಂದ ಆತಂಕಗೊಂಡು ಯುವತಿ ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಗಜೇಂದ್ರನನ್ನು ಕರೆಸಿದ ಪೊಲೀಸರು ಆತನಿಗೆ ಬುದ್ಧಿ ಹೇಳಿದ್ದರು. ನಂತರ ಆತ ಯುವತಿಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡು ಠಾಣೆಯಲ್ಲೇ ಮುಚ್ಚಳಿಕೆ ಪತ್ರವನ್ನೂ ಸಹ ಬರೆದುಕೊಟ್ಟಿದ್ದ.

ಬೆಂಗಳೂರಿನ ಪೀಣ್ಯಾದ ದುಗ್ಗಾಲಮ್ಮ ದೇವಾಲಯ ಬಳಿ ಇವರಿಬ್ಬರ ಮದುವೆಗಾಗಿ ಎಲ್ಲಾ ತಯಾರಿ ಮಾಡಲಾಗಿತ್ತು. ಇಬ್ಬರೂ ತುಮಕೂರಿನಿಂದ ಕಾರಿನಲ್ಲಿ ಬರುವಾಗ ನೆಲಗದರನಹಳ್ಳಿ ಬಳಿ ಕಾರು ನಿಲ್ಲಿಸಿ ಅಲ್ಲಿಂದ ಇಳಿದು ಗಜೇಂದ್ರ ಎಸ್ಕೇಪ್ ಆಗಿದ್ದಾನೆ. ಗಜೇಂದ್ರ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ. ಈತ ಯುವತಿಗೆ ದೂರದ ಸಂಬಂಧಿ ಆಗಿದ್ದಾನೆ. ಈ ಬಗ್ಗೆ ಗಜೇಂದ್ರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.