Home Blog Page 1848

ಬಿಜೆಪಿಯವರು ಸುಮ್ಮನಿರಲಾಗದೆ ಮೈ ಪರಚಿಕೊಳ್ಳುತ್ತಿದ್ದಾರೆ : ಸಚಿವ ಚಲುವರಾಯ ಸ್ವಾಮಿ

ಮಂಡ್ಯ, ನ.1- ಬಿಜೆಪಿಯವರಿಗೆ ಸುಮ್ಮನಿರಲಾಗದೆ ಮೈ ಪರಚಿಕೊಳ್ಳುತ್ತಿದ್ದಾರೆ. ಹೈಕಮಾಂಡ್‍ನವರು ರಾಜ್ಯದ ನಾಯಕರನ್ನು ಸಂಪೂರ್ಣ ಕಡೆಗಣಿಸುತ್ತಿದ್ದಾರೆ. ಅದಕ್ಕಾಗಿ ಹಿನಾಯ ಪರಿಸ್ಥಿತಿಯಲ್ಲಿರುವ ಬಿಜೆಪಿಯವರು ಆಪರೇಷನ್ ಕಮಲ ಸೇರಿದಂತೆ ಇನ್ನಿಲ್ಲದ ಕಸರತ್ತು ನಡೆಸಿ ಹೈಕಮಾಂಡ್ ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಭಿನ್ನಮತಗಳಿಲ್ಲ. ಅಭಿವೃದ್ಧಿಗೆ ಹಣ ಕೇಳುತ್ತಾರೆ, ಸಚಿವ ಸ್ಥಾನ, ನಿಗಮ ಮಂಡಳಿಗಳಲ್ಲಿ ಅವಕಾಶ ಕೇಳುತ್ತಾರೆ. ನಮ್ಮ ಪಕ್ಷದಲ್ಲಿ ನಮ್ಮ ನಾಯಕರನ್ನು ಶಾಸಕರು ಕೇಳುತ್ತಾರೆ ಅದು ಸಹಜ. ಕಾಂಗ್ರೆಸ್ ಶಾಸಕರು ಬಿಜೆಪಿಯವರಲ್ಲಿ ಹೋಗಿ ಕೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿರುವ ನಮ್ಮ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಆರ್.ಅಶೋಕ್, ಸಿ.ಟಿ.ರವಿ ಅವರನ್ನು ನೋಡಿದರೆ ಪಾಪ ಎನ್ನಿಸುತ್ತದೆ. ಥೋ… ಪರಚಿಕೊಳ್ಳುತ್ತಾರೆ. ಸಿ.ಟಿ.ರವಿ ಅಲ್ಲೆಲ್ಲೋ ದೆಹಲಿಯಲ್ಲಿ ಹೋಗಿ ಮಾತನಾಡುತ್ತಾರೆ. ನನಗೆ ಬಹಳ ಆತ್ಮೀಯ. ಅಶೋಕ್, ಅಶ್ವಥನಾರಾಯಣ ಅವರು ಕೂಡ ಸ್ನೇಹಿತರು.

ರವಿ ನಾನು ಸೋಲುವುದೇ ಇಲ್ಲ ಎಂದುಕೊಂಡಿದ್ದರು. ಸೋತರು, ಸೋಲಿನ ಅನುಭವ ಅವರಿಗೆ ಇಲ್ಲ, ನಮಗಾದರೂ ಆ ಅನುಭವ ಇದೆ. ರಾಜ್ಯಾಧ್ಯಕ್ಷನನ್ನಾಗಿ ಮಾಡುತ್ತೇವೆ ಎಂದು ಅತ್ತ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದಲೂ ತೆಗೆದು ಹಾಕಿದ್ದಾರೆ. ಇಲ್ಲಿ ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿಯೂ ಮಾಡುತ್ತಿಲ್ಲ. ಈಗ ಅವರು ಏನು ಮಾಡಬೇಕು, ಮಾತನಾಡಲೇಬೇಕು, ಇಲ್ಲವಾದರೆ ಕಳೆದುಹೋಗುತ್ತಾರೆ. ಏನನ್ನಾದರೂ ಮಾತನಾಡಲೇಬೇಕು, ಪಾಪ ಅದಕ್ಕಾಗಿ ಮಾತನಾಡುತ್ತಾರೆ ಎಂದರು.

4 ವರ್ಷದ ಬಾಲಕಿ ಮೇಲೆ 14 ವರ್ಷದ ಬಾಲಕ ಅತ್ಯಾಚಾರ

ನನಗೆ ಯಾವ ಪಕ್ಷದಲ್ಲೂ ವೈರಿಗಳು ಇಲ್ಲ, ಕುಮಾರಸ್ವಾಮಿಯವರು ವೈರಿಯಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡುತ್ತಾರೆ. ನಾನು 50 ಸಾವಿರ ಅಂತರದಿಂದ ಸೋಲು ಕಂಡಿದ್ದೆ, ನಾನು ಯಾವತ್ತಾದರೂ ಕುಮಾರಸ್ವಾಮಿ ರೀತಿ ಆಡುತ್ತಿದ್ನಾ ? ಸೋಲಿನ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಜಿಲ್ಲೆಯ ಜನ ನಮಗೆ ತಂದೆ ತಾಯಿ ಸಮಾನ. ನಮ್ಮನ್ನು ಸೋಲಿಸಲಿ, ಗೆಲ್ಲಿಸಲಿ ಜಿಲ್ಲೆಯ ಅಭಿವೃದ್ಧಿಗೆ, ಜನರ ಸಮಸ್ಯೆ ಬಗೆ ಹರಿಸಲು ಕೆಲಸ ಮಾಡುತ್ತೇವೆ.

ಬಿಜೆಪಿ ಹೈಕಮಾಂಡ್ ಮೆಚ್ಚಿಸಲು ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಸ್ಥಳಿಯ ನಾಯಕರು ಏನೋ ಹೋರಾಟ ಮಾಡುತ್ತಿದ್ದಾರೆ. ಅವರ ಕೈನಲ್ಲಾಗಲ್ಲ. ಅವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ನನಗೂ ಅವರೆಲ್ಲಾ ಸ್ನೇಹಿತರೆ ಕುಮಾರಸ್ವಾಮಿ ಏನು ವೈರಿಯೇ, ಛೇ ಖಂಡಿತ ಅವರ ಬಗ್ಗೆ ನಮಗೆ ಪ್ರೀತಿ, ರವಿ ಗಣಿಗ ಅವರಿಗೂ ಪ್ರೀತಿ. ಆದರೆ ನಮಗೂ ಕುಮಾರಣ್ಣನ ಬಗ್ಗೆ ಅಯ್ಯೋ ಅನಿಸುತ್ತದೆ ಎಂದರು.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮನಸಾರೆ ಇಷ್ಟವಿಲ್ಲ. ದೇವೇಗೌಡ ಹತ್ತಿರ ಇರುವುದನ್ನು ಕೇಳಿ ನೋಡಿ ಸತ್ಯ ತಿಳಿಯುತ್ತದೆ. ಮೊನ್ನೆ ದೇವೇಗೌಡರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡುವಾಗ ಅವರ ಭುಜವನ್ನು ತಳ್ಳುತ್ತಿದ್ದರು. ಅಂತಹ ಹಿರಿಯರಿಗೆ ಯಾರಾದರೂ ಹಾಗೆ ತಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.

ನಮ್ಮ ಹಳೆಯ ಜನತಾದಳ ಈಗ ಹೇಗಾಗಿದೆ. ಈ ಮೊದಲು ದೇವೇಗೌಡರು ಬಿಜೆಪಿ ವಿರುದ್ಧ ಕಠಿಣ ಮಾತುಗಳಲ್ಲಿ ಟೀಕಿಸಿದ್ದರು. ಅದನ್ನೂ ನಾವು ಪುನಾರಾವರ್ತನೆ ಮಾಡುವುದಿಲ್ಲ. ಬಿಜೆಪಿ ಜೊತೆ ಸೇರಲ್ಲ ಎಂದಿದ್ದರು. ಅವರ ಈ ಇಳಿ ವಯಸ್ಸಿನಲ್ಲಿ.. ಮನಸ್ಸಿಗೆ ನೋವು ಕೊಡಲಾಗುತ್ತಿದೆ. ನಾನಾಗಿದ್ದರೆ , ನಾನು ಅವರ ಮಗನಾಗಿದ್ದರೆ ನನ್ನ ರಾಜಕೀಯ ಭವಿಷ್ಯ ಇವತ್ತೆ ಕೊನೆಯಾದರೂ ಸರಿ ದೇವೇಗೌಡರಿಗೆ ನೋವು ಕೊಟ್ಟು ರಾಜಕೀಯ ಮಾಡುತ್ತಿರಲಿಲ್ಲ ಎಂದರು.

ಜೈಲಿನಿಂದ ಬಿಡುಗಡೆಯಾಗಿ ಮನೆ ಸೇರಿದ ಚಂದ್ರಬಾಬು ನಾಯ್ಡು

ಒಂದೆರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ದೇವಗೌಡರಿಲ್ಲದೆ ಕುಮಾರಸ್ವಾಮಿ ಏನು ? ತಂದೆ ಬದುಕಿದ್ದಾಗಲೇ ಎರಡು ಬಾರಿ ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾಗಿರುವ ಇತಿಹಾಸ ಇಲ್ಲ. ಅಂತಹದ್ದರಲ್ಲಿ ಕುಮಾರಸ್ವಾಮಿ ಯಾರನ್ನೂ ಹೇಳದೆ ಕೇಳದೆ ಹೋಗಿ ಅಮಿತ್ ಶಾರನ್ನು ಭೇಟಿ ಮಾಡಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಶಕ್ತಿ ಹೀನರಾಗಿರುವ ಕುಮಾರಸ್ವಾಮಿ ಲೋಕಸಭೆ ಚುನಾವಣೆ ಎದುರಿಸಲಾಗದೆ ಬಿಜೆಪಿ ಜೊತೆ ಸೇರಿದ್ದಾರೆ. ಏನೇ ಪ್ರಯತ್ನ ಮಾಡಿದರು. ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ಡಿ.ಕೆ.ಶಿವಕುಮಾರ್ ಬಲಿಷ್ಠರಾಗಿದ್ದಾರೆ ಅದಕ್ಕಾಗಿ ಅವರನ್ನು ಗುರಿ ಮಾಡಿದ್ದಾರೆ. ಸಾಮಥ್ರ್ಯ ಇರುವವರನ್ನು ಮಾತ್ರವೇ ಪ್ರಶ್ನೆ ಮಾಡುತ್ತಾರೆ, ದುರ್ಬಲರನ್ನು ಯಾರು ಗುರಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಕೊನೆಗೂ ಸೆರೆಸಿಕ್ಕ ಚಿರತೆ, ನಿಟ್ಟುಸಿರುಬಿಟ್ಟ ನಾಗರಿಕರು

ಬೆಂಗಳೂರು,ನ.1- ನಗರದ ಹೊರವಲಯದಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದು, ಸುತ್ತಮುತ್ತಲ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.ಸೆರೆಸಿಕ್ಕ ಚಿರತೆಯನ್ನು ಅರಣ್ಯಾಧಿಕಾರಿಗಳು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಿದ್ದಾರೆ. ಇಂದು ಮುಂಜಾನೆಯಿಂದಲೇ ಈ ಚಿರತೆಯ ಸೆರೆಗಾಗಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದರು.


ಅರವಳಿಕೆ ಚುಚ್ಚುಮದ್ದು ನೀಡಲು ಪಶು ವೈದ್ಯಾಧಿಕಾರಿ ಮುಂದಾಗುತ್ತಿದ್ದಂತೆ ಚಿರತೆ ಇವರ ಮೇಲೆ ದಾಳಿ ಮಾಡಿದೆ. ಇವರ ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಇದಾದ ಕೆಲವೇ ನಿಮಿಷಗಳ ನಂತರ ಚಿರತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಪ್ರೇ ಮಾಡಲು ಮುಂದಾದಾಗ ಅವರ ಮೇಲೂ ಚಿರತೆ ದಾಳಿ ಮಾಡಿದ್ದು, ಗಾಯಗೊಂಡಿರುವ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ.

ಕಳೆದ ಶನಿವಾರ ಬೊಮ್ಮನಹಳ್ಳಿಯ ಕೂಡ್ಲುಗೇಟ್ ಸಮೀಪದ ಕೃಷ್ಣಾರೆಡ್ಡಿ ಕೈಗಾರಿಕಾ ಪ್ರದೇಶದ ಪಾಳು ಮನೆಯೊಂದರಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಆತಂಕಗೊಂಡಿದ್ದ ಸ್ಥಳೀಯ ಜನತೆ ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಸೀಮಿತವಾಗದಿರಲಿ : ಡಿಸಿಎಂ

ಚಿರತೆ ಇದ್ದ ಪಾಳು ಮನೆ ಸುತ್ತಮುತ್ತ ಎರಡು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಪೊದೆ ಬೆಳೆದುಕೊಂಡಿದ್ದರಿಂದ ಅದನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಚಿರತೆ ಓಡಾಡುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ ಚಿರತೆ ಬಹಿರಂಗವಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಬೇಟೆಗಾಗಿ ಹರಸಾಹಸ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಹೀಗಾಗಿ ಚಿರತೆ ಹುಡುಕಾಟಕ್ಕಾಗಿ ಮೈಸೂರು ಅರಣ್ಯ ಇಲಾಖೆಯ ವಿಶೇಷ ತಂಡವನ್ನು ಕರೆಸಿಕೊಳ್ಳಲಾಗಿತ್ತು. ಅರಣ್ಯ ವಿಭಾಗದ ಎಲ್ಲ ತಂಡಗಳು ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿವೆ.

ಶಾಸಕರಿಗೆ 50 ಕೋಟಿ ಆಮಿಷವೊಡ್ಡಿದ್ದು ಯಾರೆಂದು ಬಹಿರಂಗಪಡಿಸಿ : ಯತ್ನಾಳ್ ಸವಾಲ್

ವಿಜಾಪುರ,ನ.1- ನಮ್ಮ ಪಕ್ಷದ ಯಾರೊಬ್ಬರೂ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಸೇರುವಂತೆ 50 ಕೋಟಿ ಹಣದ ಆಮಿಷವೊಡ್ಡಿರುವ ಆಡಿಯೋ ಇಲ್ಲವೆ ವಿಡಿಯೋಗಳಿದ್ದರೆ ಕೂಡಲೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರಿಗೆ ರಾಜ್ಯದ ಜನತೆ ಸ್ಪಷ್ಟ ಜನಾದೇಶ ನೀಡಿದ್ದಾರೆ. ಆಡಳಿತ ನಡೆಸಲು ಆಗದವರು ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಆಪರೇಷನ್ ಕಮಲದ ಹುಸಿ ಸುದ್ದಿಯನ್ನು ತೇಲಿಬಿಟ್ಟಿದ್ದಾರೆ. ಒಂದು ವೇಳೆ ಶಾಸಕರಿಗೆ ಹಣದ ಆಮಿಷವೊಡ್ಡಿರುವ ದಾಖಲೆಗಳಿದ್ದರೆ ಬಿಡುಗಡೆ ಮಾಡಲು ಹಿಂದೇಟು ಏಕೆ ಎಂದು ಪ್ರಶ್ನೆ ಮಾಡಿದರು.

100, 50 ಕೋಟಿ ಎಂದು ಹೇಳುತ್ತಿರುವವರು ಮಾರುಕಟ್ಟೆಯಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಯಾರಾದರೂ ಕರೆಯಲಿ ಎಂದು ಇವರೇ ಹಣದ ಅಂತೆಕಂತೆಗಳನ್ನು ಸೃಷ್ಟಿಸುತ್ತಿದ್ದಾರೆ. ದಾಖಲೆಗಳಿದ್ದರೆ ಬಿಡುಗಡೆ ಮಾಡಲು ಹಿಂದೇಟು ಏಕೆ? ಇನ್ನು ಯಾವುದಾದರೂ ಮುಹೂರ್ತ ಕೂಡಿಬರಬೇಕೇ ಎಂದು ಪರೋಕ್ಷವಾಗಿ ಶಾಸಕ ರವಿ ಗಾಣಿಗ ವಿರುದ್ಧವೂ ವಾಗ್ದಾಳಿ ನಡೆಸಿದರು.

ಇಟಲಿಯಿಂದ ಪಂಜಾಬ್‍ಗೆ ಬಂದು ಪತ್ನಿ ಕೊಂದ ಅನಿವಾಸಿ ಭಾರತೀಯ

ಯಾವುದೇ ಕಾರಣಕ್ಕೂ ನಾವು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುವುದಿಲ್ಲ. ಈಗಾಗಲೇ 5 ತಿಂಗಳಲ್ಲಿ ಸರ್ಕಾರದ ಹಣೆಬರಹ ಏನೆಂಬುದು ಜನತೆಗೆ ಗೊತ್ತಾಗಿದೆ. ನನ್ನ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ಈ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ಮಹಾನ್ ನಾಯಕರೊಬ್ಬರು ಮಧ್ಯವರ್ತಿಗಳನ್ನು ಮುಂದಿಟ್ಟುಕೊಂಡು ಸಿ.ಡಿ ನಾಟಕ ಮಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಸಿ.ಡಿ ತಯಾರಿಸುವ ಕಂಪನಿಯೇ ಇದೆ. ಇದಕ್ಕೆ ಪ್ರಮುಖ ನಾಯಕರೊಬ್ಬರು ಮುಖ್ಯಸ್ಥರೆಂದು ಆರೋಪಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯಗೂ ಆಡಳಿತ ನಡೆಸಲು ಅವಕಾಶ ನೀಡದ ಕೆಲವರು ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಬೇಕೆಂದು ಹವಣಿಸುತ್ತಿದ್ದಾರೆ. ಕುರ್ಚಿ ಸಿಗುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ತಮ್ಮ ಬೆಂಬಲಿಗರ ಮೂಲಕ ಆಪರೇಷನ್ ಕಮಲ ಕೃಪಾಪೊಷಿತ ನಾಟಕವನ್ನು ಮಾಧ್ಯಮದ ಮುಂದೆ ಬಿಡುತ್ತಾರೆ. ಎಲ್ಲವೂ ಸದ್ಯದಲ್ಲೇ ಬಹಿರಂಗವಾಗಲಿದೆ. ಕಾದು ನೋಡಿ ಎಂದು ಯತ್ನಾಳ್ ಹೇಳಿದರು.

ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಸೀಮಿತವಾಗದಿರಲಿ : ಡಿಸಿಎಂ

ಬೆಂಗಳೂರು, ನ.1- ಬಸ್ ಗೆ ಬೆಂಕಿ ಹಚ್ಚುವುದರಲ್ಲಿ ಭಾಷೆ ಅಭಿಮಾನ ಇರುವುದಿಲ್ಲ. ರೈಲಿಗೆ ಬೆಂಕಿ ಹಚ್ಚುವುದರಲ್ಲಿ ರಾಜ್ಯದ ಅಭಿಮಾನ ಇರುವುದಿಲ್ಲ. ಈ ದೇಶದ ಎಲ್ಲರೂ ಒಂದೇ ತಾಯಿಯ ಮಕ್ಕಳು ಎಂಬುದನ್ನು ಅರಿಯಬೇಕು. ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಸೀಮಿತವಾಗದಿರಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಸರಾಯಿತು ಕರ್ನಾಟಕ ಉಸಿರಾಯಿತುಕನ್ನಡ, ಕರ್ನಾಟಕವೆಂದು ಹೆಸರಾಗಿ 50 ವರ್ಷಗಳು ತುಂಬಿದ ಸಂದರ್ಭದಲ್ಲಿ ಕನ್ನಡಿಗರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದರು.

ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿ ಆಗು, ಕನ್ನಡ ಜ್ಯೋತಿ ಬೆಳಗು ಜಗಕೆಲ್ಲ ಎಂಬ ಕವಿವಾಣಿಯನ್ನು ಸ್ಮರಿಸಿಕೊಂಡ ಅವರು, ಕನ್ನಡ.. ಕನ್ನಡಿಗ..ಕರ್ನಾಟಕ… ಈ ಮೂರಕ್ಕೂ ನವೆಂಬರ್ 1 ಕ್ಕೂ ಬಿಡಿಸಲಾರದ ನಂಟು. ಆದರೆ ಕನ್ನಡದ ಅಭಿಮಾನ ಬರೀ ನವೆಂಬರ್ 1 ಕ್ಕೆ ಸೀಮಿತ ಆಗದಿರಲಿ. ಕನ್ನಡ ಹೃದಯದ ಭಾಷೆಯಾಗಲಿ, ಕನ್ನಡ ಮನಸ್ಸಿನ ಭಾಷೆಯಾಗಲಿ ಎಂದರು.

ಅನೇಕ ಹಿರಿಯರು ಕನ್ನಡದ ಬಗ್ಗೆ ವಿವಿಧ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಅಂಕುಶದಿಂದ ಚುಚ್ಚಿದರೂ ನಾನು ಹುಟ್ಟಿದ ಊರನ್ನು ಮರೆಯುವುದಿಲ್ಲ ಎಂದು ಪಂಪ ಹೇಳಿದ್ದಾರೆ. ಕುರಾನಿನಲ್ಲಿ ಹೇಳುತ್ತಾರೆ, ಸ್ವರ್ಗವು ತಂದೆ-ತಾಯಿಯ ಪಾದದ ಕೆಳಗೆ ಇದೆ ಎಂದು. ಅಂದರೆ ತಂದೆ-ತಾಯಿ ಸ್ಪರ್ಶಿಸಿದ ನೆಲವೇ ಸ್ವರ್ಗ ಎಂದು. ನಮಗೆ ಆ ಸ್ವರ್ಗ ಕರ್ನಾಟಕ. ತುಂಗಾ, ಭದ್ರಾ, ಕೃಷ್ಣ, ಕಾವೇರಿ ಹರಿಯುವ ಈ ತಾಯಿ ನೆಲವೇ ನಮಗೆ ಸ್ವರ್ಗ ಎಂದರು.

ಕನ್ನಡದಲ್ಲಿ ಬೇಡಿಕೊಂಡರೆ ಹರಿ ವರಗಳ ಮಳೆ ಗರೆಯುತ್ತಾನೆ. ಹರ ಮುನಿಯದೆ ಪೊರೆಯುತ್ತಾನೆ ಎಂದು ಕುವೆಂಪು ಹೇಳುತ್ತಾರೆ. ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಲಕ್ಷಾಂತರ ಜನರನ್ನ ನೆನೆಯೋಣ ಎಂದು ಕರೆ ನೀಡಿದ ಅವರು, 2000 ವರ್ಷಗಳ ಇತಿಹಾಸ ಇರುವ ಕನ್ನಡ ಮರೆತರೆ ತಾಯಿಯನ್ನು ಮರೆತಂತೆ ಎಂದು ನಾವು ಅರಿಯಬೇಕಿದೆ ಎಂದರು.

ನಾವು ಕೋಮು ದ್ವೇಷಕ್ಕೆ ಸಿಲುಕದೆ, ಕರ್ನಾಟಕದ ಮನಸ್ಸುಗಳನ್ನು ಒಡೆಯದೇ ಯಾವ ಹೊರಗಿನ ಶಕ್ತಿಗೂ ಹೆದರದೆ ಒಂದಾಗಿ ಬದುಕುತ್ತೇವೆ. ಸರ್ವಜನಾಂಗದ ಶಾಂತಿಯ ತೋಟ ಮರಳಿ ನಿರ್ಮಿಸುತ್ತೇವೆ ಎಂಬ ದೀಕ್ಷೆ ತೊಡೋಣ. ಬಹಳಷ್ಟು ಮಂದಿಯ ತ್ಯಾಗ ಮತ್ತು ಬಲಿದಾನದ ಫಲವೇ ಅಖಂಡ ಕರ್ನಾಟಕ. ಇದನ್ನು ಜೋಪಾನವಾಗಿ ಕಾಪಾಡಬೇಕು ಎಂದರು.

ನಾವು ಹುಟ್ಟಿದ ನಂತರ ಮಾತು ಕಲಿಯಲು ಎರಡು ವರ್ಷ ಬೇಕು. ಆದರೆ ಯಾವುದನ್ನು ಆಡಬಾರದು ಎಂಬುದನ್ನು ಕಲಿಯಲು ಇಡೀ ಜೀವಮಾನ ಸಾಲದು. ಕುವೆಂಪು ಅವರು ಹೇಳಿದಂತೆ ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ, ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು, ಒಟ್ಟಿಗೆ ಬಾಳುವ ತೆರದಲಿ ಹರಸು. ಛಿದ್ರ ಮಾಡುವವರು ಈಗಲೂ ನಮ್ಮ ಸುತ್ತ ಇದ್ದಾರೆ. ಅವರಿಗೆ ಕುವೆಂಪು ಅವರ ಈ ಹಾಡನ್ನು ಕೇಳಿಸಬೇಕು ಎಂದರು.

ಶಾಲಾ ಶಿಕ್ಷಣ, ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕರ್ನಾಟಕ ನೆಲ, ಜಲ, ಭಾಷೆಯಿಂದ ಸಂವೃದ್ಧಗೊಂಡಿದೆ. ವ್ಯಾಪಕ ಉದ್ಯೋಗ ಅವಕಾಶಗಳಿವೆ. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 13 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಉಳಿದ ಅಗತ್ಯ ಇರುವ ಹುದ್ದೆಗಳ ನೇಮಕಾತಿಗೆ ಸರ್ಕಾರದ ಅನುಮತಿ ಕೋರಲಾಗುವುದು. 8311 ಹೊಸ ಕೊಠಡಿಗಳನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ. 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. 2024-25ನೇ ಸಾಲಿನಲ್ಲಿ 600 ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದರು.

ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೇಸ್ತಾನ್ ಧ್ವಜ ಪ್ರದರ್ಶಿಸಿದ ನಾಲ್ವರು ಅರೆಸ್ಟ್

ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಭಾರಿ ಪರೀಕ್ಷೆ ನಡೆಸಿ, ಸಾಧನೆ ಉತ್ತಮ ಪಡಿಸಲಾಗಿದೆ. ಅಪೌಷ್ಠಿಕತೆ ನಿವಾರಣೆಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೂರಕ ಆಹಾರವಾಗಿ ಮೊಟ್ಟೆ, ಚಿಕ್ಕಿ, ಬಾಳೆ ಹಣ್ಣು ವಿತರಿಸಲಾಗುತ್ತಿದೆ. ಈ ವರ್ಷದಿಂದ 9 ಮತ್ತು 10ನೇ ತರಗತಿಯ ಮಕ್ಕಳಿಗೂ ಪೂರಕ ಆಹಾರ ನೀಡಲಾಗುತ್ತಿದೆ. ಸ್ವಯಂ ಸೇವಾ ಸಂಘಗಳ ಸಹಯೋಗದಲ್ಲಿ ಹಾಲಿನೊಂದಿಗೆ ಹೆಚ್ಚಿನ ಪೋಷಕಾಂಶಗಳನ್ನು ನೀಡಲು ಈ ತಿಂಗಳಿನಿಂದಲೇ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ ಎಂದರು.

ಅರಣ್ಯ ಇಲಾಖೆ ಸಹಯೋಗದಲ್ಲಿ ಸಸ್ಯಶಾಮಲ ಯೋಜನೆಯಡಿ 50 ಲಕ್ಷ ಸಸಿ ನಡೆಸಲಾಗುತ್ತಿದೆ. ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆ ಓದಸಲಾಗುತ್ತಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನು ಶೇ.50ರಷ್ಟು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.

ಮಲೆನಾಡಿನ ಗಾಂಧಿ ಎಂದು ಹೆಸರಾಗಿರುವ ಹೆಚ್.ಜಿ.ಗೋವಿಂದೇಗೌಡರ ಹೆಸರಿನಲ್ಲಿ ಉತ್ತಮ ಸರ್ಕಾರಿ ಶಾಲೆಗಳಿಗೆ ನೀಡಲಾಗುವ ಪ್ರಶಸ್ತಿಗಳು ಮೂರು ವರ್ಷದಿಂದ ನೆನೆಗುದಿಗೆ ಬಿದ್ದಿದ್ದವು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅವನ್ನು ಪುನರಾರಂಭಿಸಲಾಗಿದ್ದು, ನಗದು ಪುರಸ್ಕಾರವನ್ನು ಹೆಚ್ಚಿಸಲಾಗಿದೆ. ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸಿಎಸ್‍ಆರ್ ನಿ ಬಳಕೆ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ರಿಜ್ಞಾನ್ ಅರ್ಷದ್ ಮಾತನಾಡಿ, ಕನ್ನಡ ನಾಡಿಗೆ ಅಕೃತವಾದ ಧ್ವಜ ಬೇಕಿದೆ. ಆರು ವರ್ಷದ ಹಿಂದೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಡಿರುವ ಶಿಫಾರಸ್ಸನ್ನು ಆಧರಿಸಿ ನಾಡಿನ ಧ್ವಜಕ್ಕೆ ಮಾನ್ಯತೆ ದೊರೆಯಬೇಕು ಎಂದರು.

ವಾಣಿಜ್ಯ ಸಿಲಿಂಡರ್ ಬೆಲೆ 101 ರೂ. ಏರಿಕೆ

ನವದೆಹಲಿ,ನ.1- ಸರ್ಕಾರಿ ಒಡೆತನದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು 101.50 ರೂ.ಗಳಷ್ಟು ಹೆಚ್ಚಿಸಿದ್ದು, ನೂತನ ದರ ಇಂದಿನಿಂದಲೇ ಜಾರಿಯಾಗಿದೆ. ಹೊಸ ದರದ ಪ್ರಕಾರದ ಎಲ್‍ಪಿಜಿ ವಾಣಿಜ್ಯ ಸಿಲಿಂಡರ್ ರಾಜಧಾನಿ ದೆಹಲಿಯಲ್ಲಿ 1833 ರೂ.ಗಳಿಗೆ ಲಭ್ಯವಿದೆ. ಕಳೆದ ಎರಡು ತಿಂಗಳಲ್ಲಿ ವಾಣಿಜ್ಯ ಸಿಲಿಂಡರಿನ ಬೆಲೆಯಲ್ಲಿ ಎರಡು ಬಾರಿ ಅಧಿಕವಾಗಿದೆ.

ಅಂದಹಾಗೆ ವಾಣಿಜ್ಯ ಮತ್ತು ಗೃಹಬಳಕೆಯ ಎಲ್ಪಿಜಿ ಸಿಲಿಂಡರ್‍ಗಳ ದರ ಪ್ರತಿ ತಿಂಗಳ ಮೊದಲ ದಿನದಂದು ಮಾಸಿಕ ಪರಿಷ್ಕರಣೆ ಗಳಿಗೊಳಪಡುತ್ತವೆ. ಅದರಂತೆ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 100 ರೂ. ದುಬಾರಿಯಾಗಿದ್ದರೆ, ಗೃಹಬಳಕೆಯ LPG ಸಿಲಿಂಡರ್ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ ಎಲ್‍ಪಿಜಿ ಸಿಲಿಂಡರ್‍ಗಳ ಹೊಸ ಬೆಲೆಗಳು 19 ಕೆಜಿ ವಾಣಿಜ್ಯ ಸಿಲಿಂಡರ್‍ಗಳಿಗೆ ಮಾತ್ರ ಅನ್ವಯಿಸುತ್ತವೆ. ದೇಶೀಯ LPG ಸಿಲಿಂಡರ್ಗಳು ಬೆಲೆಯಲ್ಲಿ ಯಾವುದೇ ಬದಲಾವಣೆಗೆ ಒಳಗಾಗುವುದಿಲ್ಲ ಮತ್ತು ಅದು ಸ್ಥಿರವಾಗಿರುತ್ತದೆ. ದೆಹಲಿಯಲ್ಲಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‍ನ ಬೆಲೆ 903 ರೂ, ಕೋಲ್ಕತ್ತಾದಲ್ಲಿ 14 ಕೆಜಿ ಸಿಲಿಂಡರ್ ಬೆಲೆ 929 ರೂ. ಇದೆ.

ಅಕ್ಟೋಬರ್ 1ರಂದು 19 ಕೆಜಿಯ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 209 ರೂ.ಗಳಷ್ಟು ಹೆಚ್ಚಿಸಿದಾಗ ತೈಲ ಕಂಪನಿಗಳು ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು ಹೆಚ್ಚಿಸಿರುವುದು ಉಲ್ಲೇಖನೀಯವಾಗಿದೆ. ಅಕ್ಟೋಬರ್‍ನಲ್ಲಿ ಹೊಸ ದರಗಳು ಜಾರಿಗೆ ಬಂದ ನಂತರ, ಚಿಲ್ಲರೆ ಮಾರಾಟ ದೆಹಲಿಯಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 1731.50 ರೂ ಆಗಿದ್ದು, ನವೆಂಬರ್‍ನಲ್ಲಿ ಹೆಚ್ಚಿದ ದರದ ನಂತರ ಈಗ 1833 ರೂ ಆಗಿದೆ.

ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೇಸ್ತಾನ್ ಧ್ವಜ ಪ್ರದರ್ಶಿಸಿದ ನಾಲ್ವರು ಅರೆಸ್ಟ್

ಸೆಪ್ಟೆಂಬರ್‍ನಲ್ಲಿ ಬೆಲೆಗಳನ್ನು ಕಡಿತಗೊಳಿಸಲಾಯಿತು. ವಾಣಿಜ್ಯ ಸಿಲಿಂಡರ್ ಸಹ ಸೆಪ್ಟೆಂಬರ್ನಲ್ಲಿ ಅಗ್ಗವಾಯಿತು. ತೈಲ ಮಾರುಕಟ್ಟೆ ಕಂಪನಿಗಳು ಸೆಪ್ಟೆಂಬರ್‍ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 157 ರೂ. ಕಡಿತಗೊಳಿಸಿದ್ದವು, ನಂತರ ಈ ಸಿಲಿಂಡರ್ ಅನ್ನು ದೆಹಲಿಯಲ್ಲಿ ರೂ 1522.50 ಮತ್ತು ಕೋಲ್ಕತ್ತಾದಲ್ಲಿ ರೂ 1636ಕ್ಕೆ ಮಾರಾಟ ಮಾಡಲಾಯಿತು. ಆಗಸ್ಟ್‍ನಲ್ಲಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು 100 ರೂ.ಗಳಷ್ಟು ಕಡಿಮೆ ಮಾಡಲಾಗಿತ್ತು.

ಇತ್ತೀಚಿನ ದರ ಪರಿಷ್ಕರಣೆಯೊಂದಿಗೆ 19 ಕೆಜಿ ತೂಕದ ವ್ಯಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1731 ರೂ.ನಿಂದ 1833 ರೂಪಾಯಿಗೆ ಏರಿಕೆಯಾಗಿದೆ. ಮುಂಬೈನಲ್ಲಿ 1785.50 ರೂ., ಕೋಲ್ಕತ್ತಾದಲ್ಲಿ 1943 ರೂ., ಚೆನ್ನೈನಲ್ಲಿ 1999.50 ರೂ., ಮತ್ತು ಬೆಂಗಳೂರಿನಲ್ಲಿ 1914.50 ರೂಪಾಯಿಗೆ ಏರಿಕೆಯಾಗಿದೆ.

ಅಕ್ಟೋಬರ್ 1ರಂದು ತೈಲ ಕಂಪನಿಗಳು ವಾಣಿಜ್ಯ ಬಳಕೆ ಎಲ್‍ಪಿಜಿ ಸಿಲಿಂಡರ್ ದರದಲ್ಲಿ 209 ರೂ.ಗಳಷ್ಟು ಏರಿಕೆ ಮಾಡಿತ್ತು. ಕಳೆದ ತಿಂಗಳು 19 ಕೆಜಿ ತೂಕದ ಸಿಲಿಂಡರ್ ಬೆಲೆ ಮುಂಬೈನಲ್ಲಿ 1,684 ರೂ., ಕೋಲ್ಕತ್ತಾದಲ್ಲಿ 1,839.50 ರೂ. ಮತ್ತು ಚೆನ್ನೈನಲ್ಲಿ 1,898 ರೂ. ಇತ್ತು. ಆದಾಗ್ಯೂ ಗೃಹಬಳಕೆಯ ಎಲ್‍ಪಿಜಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್‍ಗೆ 903 ರೂ. ಇದೆ. ಬೆಂಗಳೂರಿನಲ್ಲಿ 905 ರೂಪಾಯಿ ಇದೆ.

ಹಾಸನಾಂಬ ದರ್ಶನಕ್ಕೆ ಕ್ಷಣಗಣನೆ

ಹಾಸನ, ನ.1- ನಾಳೆಯಿಂದ ನ.15ರವರೆಗೆ ನಡೆಯುವ ಹಾಸನಾಂಬ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇವಸ್ಥಾನದ ಸುತ್ತಮುತ್ತ ಬ್ಯಾರಿಕೇಡ್ ನಿರ್ಮಾಣ ವಿದ್ಯುತ್ ಅಲಂಕಾರ , ಹೂವಿನ ಅಲಂಕಾರ ಸೇರಿದಂತೆ ಭಕ್ತರಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ತಯಾರಿಗಳು ಮುಕ್ತಾಯದ ಹಂತದಲ್ಲಿ ಇದೆ.

ದೇವಸ್ಥಾನದ ಸುತ್ತಮುತ್ತ ಸೇರಿದಂತೆ ನಗರಸಭೆ ಎದುರು ರಸ್ತೆಯಿಂದ ದೇವಾಲಯದವರೆಗೆ ಜರ್ಮನ್ ಟೆಂಟ್ ಅಳವಡಿಸಲಾಗಿದ್ದು ಹಾಗೂ ನೆಲಹಾಸು (ಮ್ಯಾಟ)ನ್ನು ಹಾಕಲಾಗಿದ್ದು ಅಲ್ಲಲ್ಲಿ ಫ್ಯಾನ್ ವ್ಯವಸ್ಥೆಯನ್ನು ಸಹ ಈ ಬಾರಿ ವಿಶೇಷವಾಗಿ ಮಾಡಲಾಗಿದೆ.

ಬ್ರಾಹ್ಮಣರ ಬೀದಿ ಸೇರಿದಂತೆ ಸಂತೆಪೇಟೆಯಿಂದ ಬರುವ ರಸ್ತೆ ಪಕ್ಕದಲ್ಲಿಯೂ ಬ್ಯಾರಿಕೆಡ್ ನಿರ್ಮಾಣ ಮಾಡಲಾಗಿದ್ದು ಇಲ್ಲಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಪ್ರವೇಶ ಕಲ್ಪಿಸಲಾಗುತ್ತಿದೆ. ದೇವಾಲಯದ ಗೋಪುರದ ಬಲ ಭಾಗದಲ್ಲಿ ಒಂದು ಸಾವಿರದ ಟಿಕೆಟ್ ಹಾಗೂ ವಿವಿಐಪಿ ಪಾಸ್ ಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿದ್ದು ಇಲ್ಲಿಯೇ ಟಿಕೆಟ್ ಕೌಂಟರ್ ಗಳನ್ನುತೆರೆಯಲಾಗಿದೆ.

ದೇವಾಲಯದ ಬಲಭಾಗದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಬ್ಯಾರಿಕೆಡ್ ನಿರ್ಮಾಣ ಮಾಡಲಾಗಿದ್ದು ಜರ್ಮನ್ ಟೆಂಟ್ ಅನ್ನು ಸಹ ಹಾಕಲಾಗಿದೆ. ವೃದ್ಧರಿಗೆ ಪ್ರತ್ಯೇಕ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದು ಈ ಬಾರಿಯ ವಿಶೇಷವಾಗಿದೆ.

ನಗರಸಭೆ ಎದುರಿನ ಪ್ರವೇಶ ದ್ವಾರದಿಂದ ಅಂಗವಿಕಲರಿಗೆ ದರ್ಶನಕ್ಕೆ ಆಗಮಿಸಲು ವೀಲ್ಚೇರಿಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಪ್ರಮುಖ ಪ್ರವೇಶ ದ್ವಾರ ಹಾಗೂ ಇತರೆಡೇ ಪೊಲೀಸ್ ಹಾಗೂ ಹೋಂ ಗಾಡ್ರ್ಸ್‍ಗಳನ್ನು ನಿಯೋಜನೆ ಮಾಡಿ ಸುಲಲಿತ ಹಾಗೂ ತಡೆರಹಿತ ಭಕ್ತರ ಸಾಲು ಸಾಗಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಿಸಿ ಕ್ಯಾಮರಾ ಕಣ್ಗಾವಲು: ಆಯಕಟ್ಟು ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೂ ಬಸ್ತ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಹಾಸನಾಂಬ ದೇವಾಲಯ ಗರ್ಭಗುಡಿಯ ಎಡಭಾಗದಲ್ಲಿ ಈ ಬಾರಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಇಲ್ಲಿ ದೇವಾಲಯದ ಸುತ್ತಮುತ್ತ ಹಾಗೂ ಆಯಕಟ್ಟು ಪ್ರದೇಶದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ದಾಖಲಾಗುವ ಸಾರ್ವಜನಿಕರ ಚಲನ ವಲನ ನಿಗ ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಶಕ್ತಿ ಯೋಜನೆ : ಲಕ್ಷ ಲಕ್ಷ ಮಹಿಳಾ ಭಕ್ತರ ನಿರೀಕ್ಷೆ: ಶಕ್ತಿ ಯೋಜನೆ ಜಾರಿಯಲ್ಲಿ ಇರುವುದರಿಂದ ರಾಜ್ಯದ ನಾನಾ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಮಹಿಳಾ ಭಕ್ತರು ಈ ಬಾರಿ ಹಾಸನಾಂಬ ದರ್ಶನೋತ್ಸವಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಿದ್ದು ಮಹಿಳೆಯರಿಗೆ ಶೌಚಾಲಯ, ಕುಡಿಯುವ ನೀರು, ಮಜ್ಜಿಗೆ ಸೇರಿದಂತೆ ಮಹಿಳಾ ಪೊಲೀಸ್ ನಿಯೋಜನೆ ಹೆಚ್ಚಿಸಿದೆ. ದೇವಾಲಯಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಈ ಬಾರಿ ದೊನ್ನೆ ಪ್ರಸಾದ ವಿತರಣೆಯನ್ನು ದೇವಿ ದರ್ಶನದ ಬಳಿಕ ನೀಡಲಾಗುವುದು ಎಂದು ದೇವಸ್ಥಾನ ಆಡಳಿತ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳಿಂದ ಪರಿಶೀಲನೆ: ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ, ದೇವಸ್ಥಾನ ಆಡಳಿತ ಅಧಿಕಾರಿ ಮಾರುತಿ ಸೇರಿದಂತೆ ಇತರೆ ಕಂದಾಯ ಅಧಿಕಾರಿಗಳು ದೇವಾಲಯದ ಸುತ್ತಮುತ್ತ ಕೈಗೊಂಡಿರುವ ಪ್ರಗತಿ ಪರಿಶೀಲನೆಯನ್ನು ನಡೆಸಿದ್ದು ದರ್ಶನೋತ್ಸವ ಯಶಸ್ವಿಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಪಾಕ್-ಬಾಂಗ್ಲಾ ಪಂದ್ಯದ ವೇಳೆ ಪ್ಯಾಲೇಸ್ತಾನ್ ಧ್ವಜ ಪ್ರದರ್ಶಿಸಿದ ನಾಲ್ವರು ಅರೆಸ್ಟ್

ದಸರಾ ಮಾದರಿ ದೀಪಲಂಕಾರ:
ಈಗಾಗಲೇ ನಗರದ ಪ್ರಮುಖ ರಸ್ತೆಗಳಲ್ಲಿ ದಸರಾ ಮಾದರಿ ದೀಪಲಂಕಾರ ಮಾಡಲಾಗಿದ್ದು ಡೈರಿ ವೃತ್ತ, ಸಂತೆಪೇಟೆ ಸರ್ಕಲ್, ಸುಭಾಷ್ ವೃತ್ತ, ಎನ್‍ಆರ್ ಸರ್ಕಲ್, ಹೇಮಾವತಿ ಪ್ರತಿಮೆ ಎದುರು, ಮಹಾವೀರ ಸರ್ಕಲ್, ಸಹ್ಯಾದ್ರಿ ವೃತ್ತ, ಸಾಲಗಾಮೆ ರಸ್ತೆ, ರೈಲು ನಿಲ್ದಾಣದ ಎದುರು ಸರ್ಕಲ್ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ದೀಪಲಂಕಾರ ಹಾಗೂ ಆರ್ಚ್ ಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ರಾತ್ರಿ ವೇಳೆ ರಸ್ತೆ ಹಾಗೂ ಸರ್ಕಾರಿ- ಖಾಸಗಿ ಕಟ್ಟಡಗಳು ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದ್ದು ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ದರ್ಶನೋತ್ಸವ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಜೊತೆಗೆ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮಹಿಳಾ ಪೊಲೀಸರನ್ನು ನಿಯೋಜನೆ ಮಾಡುವ ಸಂಬಂಧ ಜಿಲ್ಲಾ ಪೊಲೀಸ್ ವರಿಧಿಷ್ಠಾಕಾರಿ ಮೊಹಮ್ಮದ್ ಸುಜಿತಾ ಅವರು ಮಾಹಿತಿ ನೀಡಿದ್ದು 1200 ಪೊಲೀಸ್ ಸಿಬ್ಬಂದಿಯೊಂದಿಗೆ ಹೋಂ ಗಾಡ್ರ್ಸ್ ಗಳನ್ನು ಸಹ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಅಲ್ಲದೆ ಇತ್ತೀಚಿಗೆ ದೇವಾಲಯಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಹಾಗೂ ಬಂದೂಬಸ್ತ್ ಕುರಿತು ಮಾಹಿತಿ ಐಜಿಪಿ ಬೋರಲಿಂಗಯ್ಯ ಮಾಹಿತಿ ಪಡೆದು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ತುಲಾಭಾರ ವ್ಯವಸ್ಥೆ :
ಇದೇ ಪ್ರಥಮ ಬಾರಿಗೆ ಭಕ್ತಾದಿಗಳಿಗೆ ತುಲಾಭಾರ ವ್ಯವಸ್ಥೆಯನ್ನು ಮಾಡಲಾಗಿದ್ದು ಹಣ್ಣು , ತರಕಾರಿ , ಧನ ಧಾನ್ಯ ಸೇರಿದಂತೆ ಇತರೆ ವಸ್ತುಗಳ ಮೂಲಕ ತುಲಾಭಾರವನ್ನು ಮಾಡುವ ಸಂಬಂಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ತುಲಾಭಾರ ದಲ್ಲಿಯೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಟ್ರಂಪ್ ಅಧ್ಯಕ್ಷ ಚುನಾವಣೆಗೆ ಭಾರಿ ಬೆಂಬಲ

ಇ-ಹುಂಡಿ ವ್ಯವಸ್ಥೆ :
ದೇವಾಲಯ ಗರ್ಭಗುಡಿ ಹಾಗೂ ಸುತ್ತಮುತ್ತ ಈಗಾಗಲೇ ದೇವಾಲಯ ಆಡಳಿತ ಮಂಡಳಿಯಿಂದ ಹಣ ಆಭರಣ ಕಾಣಿಕೆ ಹುಂಡಿಯನ್ನು ಇಡಲಾಗಿದ್ದು ಇದರೊಂದಿಗೆ ಇದೇ ಪ್ರಥಮ ಬಾರಿ ಇ- ಪೇಮೆಂಟ್ ಕ್ಯೂಆರ್ ಕೋಡ್ ಬ್ಯಾನರ್ ವ್ಯವಸ್ಥೆಯನ್ನು ಮಾಡಲಾಗಿದೆ.

ಸರ್ಕಾರಿ ಶಾಲೆಗಳಿಗೆ ನೀರು-ವಿದ್ಯುತ್ ಉಚಿತ : ಸಿಎಂ ಘೋಷಣೆ

ಬೆಂಗಳೂರು, ನ.1- ಇಂದಿನಿಂದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡ ಶಾಲೆಗಳ ಸೌಲಭ್ಯ ಸುಧಾರಣೆಗೆ ತಮ್ಮ ಸರ್ಕಾರ ಬದ್ಧವಾಗಿದ್ದು, ಶಿಕ್ಷಣ ಇಲಾಖೆಯ ಪ್ರಸ್ತಾವನೆ ಆಧರಿಸಿ ಇಂದಿನಿಂದ ಉಚಿತ ವಿದ್ಯುತ್, ನೀರಿನ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು. ಕನ್ನಡಿಗರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗಳನ್ನಾಗಿ ಮಾಡುವ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ, ಕನ್ನಡ ಶಾಲೆಗಳ ಮೂಲಭೂತ ಸವಲತ್ತುಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿವೆ. ಅದರ ಪ್ರಯುಕ್ತ ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಎಂಬ ಕರ್ನಾಟಕ ಸಂಭ್ರಮ ಕಾರ್ಯಕ್ರಮವನ್ನು ವರ್ಷ ಪೂರ್ತಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಬಜೆಟ್‍ನಲ್ಲೂ ಕಾರ್ಯಕ್ರಮ ಘೋಷಣೆ ಮಾಡಿ ಅನುದಾನವನ್ನೂ ಮೀಸಲಿಡಲಾಗಿದೆ. ಹಿಂದಿನ ವರ್ಷವೇ ಈ ಕಾರ್ಯಕ್ರಮ ಮಾಡಬೇಕಿತ್ತು. ಆದರೆ ಆಗಿನ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದರು.

ಈ ದಿನದಿಂದ ನಾವು ಕನ್ನಡದಲ್ಲೇ ವ್ಯವಹರಿಸುವ ಪ್ರತಿಜ್ಞೆಯನ್ನು ಮಾಡಬೇಕಿದೆ. ಈ ಮೂಲಕ ನಮ್ಮ ತಾಯ್ನೆಲದ ಋಣ ತೀರಿಸಬೇಕು. ಇಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು, ಸಂಭ್ರಮಿಸಬೇಕು. ನೆರೆ ರಾಜ್ಯದಷ್ಟು ನಾವು ಭಾಷಾಭಿಮಾನಿಗಳಲ್ಲ, ಆದರೆ ಹೆಚ್ಚು ಧಾರಾಳತನ ಅನಗತ್ಯ. ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶಗಳಲ್ಲಿ ಸ್ಥಳೀಯ ಅಕೃತ ಭಾಷೆ ಮಾತನಾಡದೆ ಬದುಕಲಾಗಲ್ಲ ಎಂಬ ವಾತಾವಣ ಇದೆ. ಆದರೆ ಕರ್ನಾಟಕದಲ್ಲಿ ಕನ್ನಡ ಮಾತನಾಡದೆ ಬದುಕು ನಡೆಸಬಹುದಾದ ಪರಿಸ್ಥಿತಿ ನಮ್ಮಲ್ಲಿದೆ. ಯಾವ ಭಾಷೆ ಬೇಕಾದರೂ ಕಲಿಯಿತು. ಆದರೆ ನಮ್ಮ ಸಾರ್ವಭೌಮ ಕನ್ನಡ ಭಾಷೆಯನ್ನು ಮಾತನಾಡಿ.

ಸರ್ಕಾರದಲ್ಲಿ ನಡೆಯುವ ಆಡಳಿತ ಕನ್ನಡ ಭಾಷೆಯಲ್ಲೇ ಆಗಬೇಕು. ಇಲ್ಲಿ ಕೆಲಸ ಮಾಡುವವರು ಕನ್ನಡದಲ್ಲೇ ವ್ಯವಹರಿಸಬೇಕಾಗುತ್ತದೆ. ಕನ್ನಡ ನೆಲದಲ್ಲಿದ್ದೂ ಕನ್ನಡ ಮಾತನಾಡದವರು ಹಲವು ಭಾಗಗಳಲ್ಲಿ ಇದ್ದಾರೆ. ನಮ್ಮ ಆಡಳಿತ ಭಾಷೆ ಕನ್ನಡ. ಆದ್ದರಿಂದ ನಾವು ಕನ್ನಡದಲ್ಲೇ ವ್ಯವಹರಿಸಬೇಕು. ಪ್ರತಿಯೊಬ್ಬರ, ಪ್ರತಿಯೊಂದು ಭಾಷೆಗೂ ನಾವು ಗೌರವ ಕೊಡಬೇಕು. ಆದರೆ ನಮ್ಮ ನಾಡಿನಲ್ಲಿ ವ್ಯವಹರಿಸುವಾಗ, ಆಡಳಿತದಲ್ಲಿ ಕನ್ನಡ ಬಳಕೆ ಆಗಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿಯೂ ಚಾಚೂ ತಪ್ಪದೆ ಪಾಲಿಸಬೇಕು. ಆಗ ಮಾತ್ರ ಸುಗಮ ಆಡಳಿತ ಸಾಧ್ಯವಾಗಲಿದೆ ಎಂದು ಸೂಚಿಸಿದರು.

ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡದಲ್ಲೂ ಪ್ರವೇಶ ಪರೀಕ್ಷೆ ನಡೆಸಲು ಈ ಹಿಂದೆಯೂ ಒತ್ತಾಯಿಸಿದ್ದೆ. ಅಗತ್ಯಬಿದ್ದರೆ ಮತ್ತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದರು.

ಕನ್ನಡದಲ್ಲಿ ಕಲಿತರೆ ಉದ್ಯೋಗ ಸಿಗುವುದಿಲ್ಲ, ಜ್ಞಾನ ಸಂಪಾದನೆ ಸಾಧ್ಯವಿಲ್ಲ ಎನ್ನುವ ತಪ್ಪು ಕಲ್ಪನೆಯಿಂದ ಇಂಗ್ಲಿಷ್ ಕಾನ್ವೆಂಟ್ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇದು ಸರಿಯಲ್ಲ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಮಾಧ್ಯಮದಲ್ಲಿ ಕಲಿತವರು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ ಎಂದು ಉದಾಹರಿಸಿದರು. ಇಂಗ್ಲಿಷ್‍ನಲ್ಲಿ ಕಲಿತರೆ ಮಾತ್ರ ಜ್ಞಾನ ಸಂಪಾದನೆ ಎಂಬ ನಂಬಿಕೆ ಸರಿಯಲ್ಲ.

ಮಹತ್ವದ ಮಾಹಿತಿ : ನಿಮ್ಮ ಆಧಾರ್ ಬಯೋಮೆಟ್ರಿಕ್ ಲಾಕ್ ಮಾಡೋದು ಹೇಗೆ..?

ಕನ್ನಡ ಶಾಲೆಯಲ್ಲಿ ಓದುವ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದ ಅವರು, ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಕಲಿಕಾ ವಾತಾವರಣ ಹಾಗೂ ಶಾಲೆಗಳ ಗುಣಮಟ್ಟ ಹೆಚ್ಚಿಸುವುದು , ಅಗತ್ಯ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ನಮ್ಮ ಸರ್ಕಾರದ ಆಧ್ಯತೆ. ಕನ್ನಡ ಶಾಲೆಗಳಲ್ಲಿ ಉತ್ತಮ ಕಲಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕನಿಷ್ಠ ಎಸ್‍ಎಸ್‍ಎಲ್‍ಸಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಕಲಿಸಬೇಕು. ಕನ್ನಡದಲ್ಲಿ ಓದಿದ ಅನೇಕರು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಗಳಾಗಿದ್ದಾರೆ ಎಂದರು.

ತಮ್ಮ ಮಕ್ಕಳನ್ನು ಅವರ ಇಷ್ಟದ ಭಾಷೆಯಲ್ಲಿ ಕಲಿಸುವುದು ಪೋಷಕರ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ಮಾತೃಭಾಷೆಯ ಮಾಧ್ಯಮದಲ್ಲೇ ಕಲಿಯುವುದು ಅತ್ಯಂತ ವೈಜ್ಞಾನಿಕ ಎನ್ನುವುದನ್ನು ಗ್ರಹಿಸಬೇಕು ಎಂದರು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಪಂಚಖಾತ್ರಿ ಯೋಜನೆಗಳ ಪೈಕಿ ನಾಲ್ಕು ಯಶಸ್ವಿಯಾಗಿ ಜಾರಿಗೆ ತಂದಿದೆ. ಕನ್ನಡಿಗರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಕನ್ನಡಿಗರು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಿಸಲು ಅಗತ್ಯ ವಾತಾವರಣ ನಿರ್ಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ಆರ್.ವಿ.ದೇಶಪಾಂಡೆ, ರಿಜ್ವಾನ್ ಹರ್ಷದ್, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ 8 ಅಡಿ ಉದ್ದದ ಚಿನ್ನಲೇಪಿತ ರಾಮಲಲ್ಲಾ ವಿಗ್ರಹ

ವೇದಿಕೆಯ ಸಮೀಪದಲ್ಲೇ ಪ್ರತಿಷ್ಠಾಪಿಸಿದ್ದ ಕನ್ನಡಾಂಬೆಯ ಪ್ರತಿಮೆಗೆ ಪುಷ್ಟ ನಮನ ಸಲ್ಲಿಸಿದ ಮುಖ್ಯಮಂತ್ರಿಯವರು, ವಿದ್ಯಾರ್ಥಿಗಳ ಪಥ ಸಂಚಲನದ ಗೌರವ ರಕ್ಷೆಯನ್ನು ಸ್ವೀಕರಿಸಿದರು. ಬಳಿಕ ರಾಷ್ಟ್ರ ಹಾಗೂ ಕನ್ನಡ ಧ್ವಜಾರೋಹಣ ನೇರವೇರಿಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಖಾಸಗಿ ಬ್ಯಾಂಕ್ ವಂಚನೆ ಬಗ್ಗೆ RBI ಕಣ್ಣು

ಮುಂಬೈ, ನ.1-ಕೆಲವು ಖಾಸಗಿ ಬ್ಯಾಂಕ್‍ಗಳು ನಡೆಸುತ್ತಿರುವ ವಂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು RBI ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಬಿಸಿನೆಸ್ ಸ್ಟ್ಯಾಂಡರ್ಡ್ ಆಯೋಜಿಸಿದ ವಾರ್ಷಿಕ ಬಿಎಫ್‍ಎಸ್‍ಐ ಒಳನೋಟ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಕ ಮೇಲ್ವಿಚಾರಣೆಯ ಪ್ರಯತ್ನಗಳ ಭಾಗವಾಗಿ ಸಮಸ್ಯೆಯನ್ನು ನೋಡುತ್ತಿದೆ ಎಂದು ಹೇಳಿದರು.

ಕೆಲವು ಪ್ರಮುಖ ಬ್ಯಾಂಕ್‍ಗಳು ಶೇ.30 ಕ್ಕಿಂತ ಹೆಚ್ಚು ಆಟ್ರಿಷನ್ ದರಗಳನ್ನು ವರದಿ ಮಾಡುವ ಮಧ್ಯೆ ಬಂದ ಕಾಮೆಂಟ್‍ಗಳ ಬಗ್ಗೆ ದಾಸ್ ಪ್ರತಿ ಬ್ಯಾಂಕ್ ಅಂತಹ ಸಮಸ್ಯೆಗಳನ್ನು ನೋಡಿಕೊಳ್ಳಲು ಪ್ರಮುಖ ತಂಡವನ್ನು ನಿರ್ಮಿಸಬೇಕು ಎಂದು ಸೂಚಿಸಿದ್ದಾರೆ.

ಉದ್ಯೋಗ ಬದಲಾವಣೆಗೆ ಸಂಬಂಸಿದಂತೆ ಯುವಕರ ವೃತ್ತಿಜೀವನದ ದೃಷ್ಟಿಕೋನವು ಬದಲಾಗಿದೆ ಎಂದು ಅವರು ಹೇಳಿದರು ಮತ್ತು ಯುವಕರು ಈಗ ಈ ಅಂಶದ ಬಗ್ಗೆ ವಿಭಿನ್ನವಾಗಿ ಯೋಚಿಸುತ್ತಿದ್ದಾರೆ ಎಂದು ಹೇಳಿದರು.

ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ 8 ಅಡಿ ಉದ್ದದ ಚಿನ್ನಲೇಪಿತ ರಾಮಲಲ್ಲಾ ವಿಗ್ರಹ

ಆರ್ಥಿಕತೆಯ ಬೆಳವಣಿಗೆಯ ಆವೇಗವು ಬಲವಾಗಿ ಮುಂದುವರಿದಿದೆ ಮತ್ತು ಎರಡನೇ ತ್ರೈಮಾಸಿಕದಲ್ಲಿ ಈ ಸಂಖ್ಯೆಯು ತಲೆಕೆಳಗಾಗಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ. ಭೌಗೋಳಿಕ ರಾಜಕೀಯ ಅನಿಶ್ಚಿತತೆಯು ಜಾಗತಿಕ ಬೆಳವಣಿಗೆಗೆ ದೊಡ್ಡ ಅಪಾಯವಾಗಿದೆ ಎಂದು ಅವರು ಹೇಳಿದರು ಆದರೆ ಯಾವುದೇ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಲು ಭಾರತವು ಉತ್ತಮ ಸ್ಥಾನದಲ್ಲಿದೆ ಎಂದು ವಿವರಿಸಿದರು.

ಇಟಲಿಯಿಂದ ಪಂಜಾಬ್‍ಗೆ ಬಂದು ಪತ್ನಿ ಕೊಂದ ಅನಿವಾಸಿ ಭಾರತೀಯ

ಕಪುರ್ತಲಾ, ನ.1- ಇಟಲಿಯಿಂದ ಮನೆಗೆ ಹಿಂದಿರುಗಿದ ಕೆಲವೇ ಗಂಟೆಗಳ ನಂತರ, ಪಂಜಾಬ್‍ನ ಕಪುರ್ತಲಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಎನ್‍ಆರ್‍ಐ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಅನಿವಾಸಿ ಭಾರತೀಯ ಸುಖದೇವ್‍ಸಿಂಗ್ ತನ್ನ ಪತ್ನಿಯ ತಲೆಯನ್ನು ಪದೇ ಪದೇ ಮನೆಯ ನೆಲದ ಮೇಲೆ ಬಡಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಪುರ್ತಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವತ್ಸಲಾ ಗುಪ್ತಾ ಮಾತನಾಡಿ, ಅನಿವಾಸಿ ಭಾರತೀಯನನ್ನು ಸುಖದೇವ್ ಸಿಂಗ್ ಎಂದು ಗುರುತಿಸಲಾಗಿದ್ದು, ಸೋಮವಾರ ಇಟಲಿಯಿಂದ ಸಂಧು ಚಾಥಾ ಗ್ರಾಮದ ತನ್ನ ಮನೆಗೆ ಮರಳಿದ್ದ ಎಂದು ತಿಳಿಸಿದ್ದಾರೆ.ಅದೇ ದಿನ, ಅವರು ತಮ್ಮ ಪತ್ನಿ ಹರ್‍ಪ್ರೀತ್ ಕೌರ್ (45) ಅವರೊಂದಿಗೆ ಯಾವುದೋ ವಿಷಯಕ್ಕೆ ತೀವ್ರ ಜಗಳವಾಡಿದರು ಎಂದು ಎಸ್‍ಎಸ್‍ಪಿ ತಿಳಿಸಿದ್ದಾರೆ.

ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ 8 ಅಡಿ ಉದ್ದದ ಚಿನ್ನಲೇಪಿತ ರಾಮಲಲ್ಲಾ ವಿಗ್ರಹ

ಸಿಂಗ್ ಅವರು ತನ್ನ ಪತ್ನಿ ಕೌರ್ ಅವರನ್ನು ತನ್ನ ಕೋಣೆಗೆ ಎಳೆದೊಯ್ದರು ಮತ್ತು ಆಕೆಯ ತಲೆಯನ್ನು ನೆಲದ ಮೇಲೆ ಪದೇ ಪದೇ ಥಳಿಸಿದ್ದರು ಹೀಗಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಅವರು ಹೇಳಿದರು. ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೋಲೀಸರು ತಿಳಿಸಿದ್ದಾರೆ.

4 ವರ್ಷದ ಬಾಲಕಿ ಮೇಲೆ 14 ವರ್ಷದ ಬಾಲಕ ಅತ್ಯಾಚಾರ

ಡಿಯೋರಿಯಾ,ನ.1- ನಾಲ್ಕು ವರ್ಷದ ಬಾಲಕಿ ಮೇಲೆ 14 ವರ್ಷದ ಅಪ್ರಾಪ್ತ ಅತ್ಯಾಚಾರ ನಡೆಸಿರುವ ಘಟನೆ ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ನಡೆದಿದೆ. ಮೇಕೆ ಮೇಯಿಸಲು ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಅಪ್ರಾಪ್ತನನ್ನು ಬಂಸಲಾಗಿದೆ ಎಂದು ಡಿಯೋರಿಯಾ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ ಶರ್ಮಾ ತಿಳಿಸಿದ್ದಾರೆ.

ಘಟನೆಯ ಬಗ್ಗೆ ತಿಳಿದುಕೊಂಡ ಆಕೆಯ ಕುಟುಂಬಸ್ಥರು ಆಕೆಯನ್ನು ಗೌರಿ ಬಜಾರ್‍ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಅಲ್ಲಿಂದ ಆಕೆಯನ್ನು ಡಿಯೋರಿಯಾದ ಮಹರ್ಷಿ ದೇವ್ರಹಾ ಬಾಬಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿದೆ 8 ಅಡಿ ಉದ್ದದ ಚಿನ್ನಲೇಪಿತ ರಾಮಲಲ್ಲಾ ವಿಗ್ರಹ

ಅತ್ಯಾಚಾರ ಕುರಿತಂತೆ ಅಪ್ರಾಪ್ತರ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಹದಿಹರೆಯದವರನ್ನು ಬಂಧಿಸಿ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.