Thursday, December 12, 2024
Homeರಾಜಕೀಯ | Politicsಜೆಡಿಎಸ್-ಬಿಜೆಪಿ ಮೈತ್ರಿಗೆ ಜನರಲ್ಲಿ ಮುಂದುವರೆದ ಅಸಹನೆ

ಜೆಡಿಎಸ್-ಬಿಜೆಪಿ ಮೈತ್ರಿಗೆ ಜನರಲ್ಲಿ ಮುಂದುವರೆದ ಅಸಹನೆ

People's continued impatience with the JDS-BJP alliance

ಬೆಂಗಳೂರು,ನ.23- ವಿಧಾನಸಭೆ ಉಪಚುನಾವಣೆಗಳ ಫಲಿತಾಂಶದಲ್ಲಿ ಆಡಳಿತಾರೂಢ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಜೆಡಿಎಸ್-ಬಿಜೆಪಿಯ ಮೈತ್ರಿಕೂಟದ ವಿಚಾರವಾಗಿ ಜನರ ಅಸಹನೆ ಕಂಡುಬಂದಿದೆ.ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಆರಂಭಗೊಂಡ ಮೈತ್ರಿ ವಿಧಾನಸಭೆ ಉಪಚುನಾವಣೆಯಲ್ಲೂ ಮುಂದುವರೆದಿತ್ತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಜೆಡಿಎಸ್-ಬಿಜೆಪಿಯ ಮೈತ್ರಿಯ ಬಳಿಕ ನಿರೀಕ್ಷಿತ ಫಲಿತಾಂಶ ದೊರೆಯದೇ ಹಿನ್ನಡೆಯಾಗಿತ್ತು. ಆದರೂ ಕೇಂದ್ರ ಸರ್ಕಾರದ ರಚನೆ ವೇಳೆ ಜೆಡಿಎಸ್ನಿಂದ ಕುಮಾರಸ್ವಾಮಿ ಕೇಂದ್ರ ಸಚಿವರಾದರು.

ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಶಿಗ್ಗಾಂವಿ ಮತ್ತು ಸಂಡೂರು ಬಿಜೆಪಿ ಉಳಿಸಿಕೊಂಡು ಚನ್ನಪಟ್ಟಣವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿತ್ತು. ಚುನಾವಣಾ ಕಾಲದಲ್ಲಿ ಅಭಿವೃದ್ಧಿ ಯೋಜನೆಗಳಿಗಿಂತಲೂ ಭಾವನಾತಕ ಚರ್ಚೆಗಳೇ ಜಾಸ್ತಿ ನಡೆದವು. ಬಿಜೆಪಿ ವಕ್ಫ್ ವಿಚಾರವನ್ನು ಪ್ರಮುಖವಾಗಿ ಮುಂದಿಟ್ಟುಕೊಂಡಿದ್ದರೆ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜಾತಿ ಅಸ್ತ್ರವನ್ನು ಪ್ರಯೋಗಿಸಿತ್ತು. ಕಾಂಗ್ರೆಸ್ ನಾಯಕರು ಬಿಜೆಪಿ-ಜೆಡಿಎಸ್ ಪಕ್ಷಗಳ ವಾಗ್ದಾಳಿಗಳಿಗೆ ಪ್ರತ್ಯುತ್ತರಿಸುವುದರಲ್ಲೇ ಹೈರಾಣಾಗಿ ಹೋಗಿದ್ದರು.

ಆದರೆ ಚುನಾವಣಾ ಫಲಿತಾಂಶ ಭಿನ್ನವಾಗಿ ಬಂದಿದೆ. ಚನ್ನಪಟ್ಟಣದಲ್ಲಿ ಸಚಿವ ಜಮೀರ್ ಅಹಮದ್ ಖಾನ್, ಕೇಂದ್ರ ಸಚಿವರ ಕುಮಾರಸ್ವಾಮಿ ಅವರನ್ನು ನಿಂದಿಸುವ ಮೂಲಕ ವರ್ಣಬೇಧ ನೀತಿಯನ್ನು ಪುನರ್ ಸ್ಥಾಪಿಸಿದರು ಎಂಬ ಟೀಕೆಗಳು ವ್ಯಾಪಕವಾಗಿದ್ದವು. ಇದರ ನಡುವೆಯೂ ಕೂಡ ನಿಖಿಲ್ ಕುಮಾರಸ್ವಾಮಿಗೆ ಹಿನ್ನಡೆಯಾಗಿರುವುದು ಅಚ್ಚರಿ ಮೂಡಿಸಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ಗೆ ಸೇರ್ಪಡೆಯಾದ ಸಿ.ಪಿ.ಯೋಗೇಶ್ವರ್ ಸದ್ದುಗದ್ದಲವಿಲ್ಲದೆ ಪ್ರಚಾರ ನಡೆಸಿದರು. ಚನ್ನಪಟ್ಟಣವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಷ್ಠೆಯನ್ನಾಗಿ ಪರಿಗಣಿಸಿದರು. ಕಾಂಗ್ರೆಸ್ಗೆ ವಲಸೆ ಬಂದಿದ್ದರೂ ಕೂಡ ಯೋಗೇಶ್ವರ್ರವರ ಗೆಲುವು ಡಿಕೆ ಸಹೋದರರ ಪ್ರಾಬಲ್ಯವನ್ನು ಹೆಚ್ಚುವಂತೆ ಮಾಡಿದೆ.

ಸಂಡೂರಿನಲ್ಲಿ ಗಣಿದಣಿ ಜನಾರ್ಧನರೆಡ್ಡಿ ಮತ್ತು ಸ್ಥಳೀಯ ನಾಯಕರ ಅಬ್ಬರದ ಪ್ರಚಾರದ ನಡುವೆಯೂ ಕಾಂಗ್ರೆಸ್ನ ಅಭ್ಯರ್ಥಿ ಅನ್ನಪೂರ್ಣ ಗೆಲುವು ಸಾಧಿಸಿದ್ದಾರೆ.ಇ.ತುಕಾರಾಂ ಅವರು ಸಂಸದರಾದ ಬಳಿಕ ತೆರವಾದ ಸಂಡೂರು ಕ್ಷೇತ್ರಕ್ಕೆ ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲಾಯಿತು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಲ್ಲಿ ಠಿಕಾಣಿ ಹೂಡಿ ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷರೂ ಆಗಿರುವ ಬಂಗಾರು ಹನುಮಂತು ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಲು ಪ್ರಯತ್ನಿಸಿದರು.ಮಾಜಿ ಸಚಿವ ಶ್ರೀರಾಮಲು ಈ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಚುನಾವಣೆಯಲ್ಲಿ ಶ್ರೀರಾಮಲು ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಗಮನ ಸೆಳೆಯಲಿಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಬಾರಿ ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರು. ಸಂಡೂರಿನ ಜನ ಕಾಂಗ್ರೆಸ್ ಅಭ್ಯರ್ಥಿಯ ಕೈ ಹಿಡಿಯುವ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಜೈ ಅಂದಂತಿದೆ.ಶಿಗ್ಗಾಂವಿಯಲ್ಲಿ ಮಾಜಿ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮಾಯಿ ಸಂಸದರಾದ ಬಳಿಕ ಶಿಗ್ಗಾಂವಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಬೊಮಾಯಿ ಅವರ ಪುತ್ರ ಭರತ್ ಅವರನ್ನೇ ಬಿಜೆಪಿ ಕಣಕ್ಕಿಳಿಸಿತ್ತು.

ಕಾಂಗ್ರೆಸ್ನಲ್ಲಿ ಯಾಸಿರ್ಖಾನ್ ಪಠಾಣ್ ಹಾಗೂ ಅಜ್ಜಂಪೀರ್ ಖಾದ್ರಿ ಅವರ ನಡುವೆ ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆದಿತ್ತು. ಟಿಕೆಟ್ ದೊರೆಯದ ಕಾರಣಕ್ಕೆ ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಪಠಾಣ್ ಅವರನ್ನು ರೌಡಿ ಶೀಟರ್ ಎಂದು ಜರೆದಿದ್ದರು.ಈ ಎಲ್ಲಾ ಟೀಕೆ, ವ್ಯಂಗ್ಯಗಳ ನಡುವೆಯೂ ಕಾಂಗ್ರೆಸ್ ಮುನ್ನಡೆ ಸಾಧಿಸಿರುವುದು ಅಚ್ಚರಿ ಮೂಡಿಸಿದೆ.ಒಟ್ಟಿನಲ್ಲಿ 3 ಕ್ಷೇತ್ರದ ಫಲಿತಾಂಶ ರಾಜ್ಯದ ಮಟ್ಟಿಗೆ ಕಾಂಗ್ರೆಸ್ನ ಬಲವನ್ನು ಹೆಚ್ಚಿಸಿದೆ.

RELATED ARTICLES

Latest News