ಬೆಂಗಳೂರು,ಮಾ.23- ಸಾರ್ವಜನಿಕರ ಸಹಕಾರದಿಂದ ವಾಲಿಂಟಿಯರ್ರ್ಸ್ ಬೀಟ್ ಜಾರಿಗೆ ತರಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.ಮಹಾಲಕ್ಷ್ಮಿಲೇಔಟ್ನ ಗೆಳೆಯರ ಬಳಗದ ವೃತ್ತದಲ್ಲಿನ ಡಾ. ರಾಜ್‌ಕುಮಾರ್ ಆಡಿಟೋರಿಯಂನಲ್ಲಿ ನಡೆದ ಮಾಸಿಕ ಜನಸಂಪರ್ಕ ದಿವಸ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸ್ ಬೀಟ್ ಆರಂಭಿಸಬೇಕು ಎಂಬ ಚಿಂತನೆಯಿದ್ದು, ಪ್ರಥಮವಾಗಿ ವಿಜಯನಗರ, ಚಂದ್ರಲೇಔಟ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಈ ಹಿಂದೆ ನೈಬರ್ವುಡ್ ಸ್ಕೀಮ್ ಮತ್ತು ಪೊಲೀಸ್ ವಾಲಿಂಟಿಯರ್ಸ್ ಎಂಬ ಯೋಜನೆಗಳು ಇದ್ದವು. ಈಗ ಮತ್ತೆ ಸಾರ್ವಜನಿಕ ಸಹಕಾರದೊಂದಿಗೆ ವಾಲಿಂಟಿಯರ್ಸ್ ಬೀಟ್ ಜಾರಿಗೆ ತರುವುದರಿಂದ ರಾತ್ರಿ ಕಳ್ಳತನ ಮತ್ತು ಮನೆಗಳ್ಳತನದಂತಹ ಪ್ರಕರಣಗಳನ್ನು ತಡೆಯಲು ಪೊಲೀಸ್ ಇಲಾಖೆಗೆ ಸಹಾಯವಾಗಲಿದೆ. ಸಭೆಯಲ್ಲಿ ಭಾಗವಹಿಸಿದ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಆಯುಕ್ತರ ಬಳಿ ಹೇಳಿಕೊಂಡರು.
ಜ್ಯುವೆಲರಿ ಮಾಲೀಕರೊಬ್ಬರು ಮಾತನಾಡಿ, ಚಿನ್ನವನ್ನು ಅಡವಿಡಲು ಬರುವವರ ಬಗ್ಗೆ ನಿಗಾ ಇಡಲು ಸರಗಳ್ಳರ ಮತ್ತು ಕಳ್ಳತನ ಆರೋಪಿಗಳ ಥಮ್ ಇಂಪ್ರೆಷನ್ ಮಾಹಿತಿಯನ್ನು ಜ್ಯುವೆಲರಿ ಅಂಗಡಿಗಳಿಗೆ ನೀಡಬೇಕು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಆಯುಕ್ತರು ಯಾರಾದರೂ ಅಂತಹ ಅನುಮಾನಾಸ್ಪದ ವ್ಯಕ್ತಿಗಳು ಅಂಗಡಿಗಳಿಗೆ ಬಂದಾಗ ತಕ್ಷಣ 112ಗೆ ಕರೆ ಮಾಡಿ ಮಾಹಿತಿ ನೀಡಿದರೆ ಅಲ್ಲಿಗೆ ನಮ್ಮ ಪೊಲೀಸ್ ತಂಡ ಬರುತ್ತದೆ. ಮುಂದಿನ ದಿನಗಳಲ್ಲಿ ಈ ಕುರಿತು ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನು ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾ, ಗೊರಗುಂಟೆಪಾಳ್ಯ ಮುಂತಾದ ಪ್ರದೇಶಗಳಲ್ಲಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಆಯುಕ್ತರಿಗೆ ಸಾರ್ವಜನಿಕರು ದೂರುಗಳನ್ನು ನೀಡಿದರು.ಉತ್ತರ ವಿಭಾಗದ ಪೊಲೀಸ್ ಆಯುಕ್ತ ಸೈದಲು ಅದಾವತ್, ಸಂಚಾರ ಉತ್ತರ ವಿಭಾಗದ ಉಪಪೊಲೀಸ್ ಆಯುಕ್ತರಾದ ಸಿರಿಗೌರಿ ಹಾಗೂ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.