Wednesday, December 4, 2024
Homeರಾಜ್ಯಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಯಾರು..?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳು ಯಾರು..?

ಚಿಕ್ಕಬಳ್ಳಾಪುರ, ಮಾ.23- ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್, ಬಿಜೆಪಿ ಮೈತ್ರಿಕೂಟದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಮೀನ ಮೇಷ ಎಣಿಸುತ್ತಿದೆ. ಇದರಿಂದಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ತಳಮಳ ಉಂಟಾಗಿದೆ.

ರಾಜ್ಯದ ಬಹುತೇಕ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಆಖೈರುಗೊಳಿಸಿ ಈಗಾಗಲೇ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ, ಕ್ಷೇತ್ರದಲ್ಲಿ ಮತಯಾಚನೆಗಳಿಗೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಮೈತ್ರಿ ಹಾಗೂ ಕಾಂಗ್ರೆಸ್ ಪಕ್ಷವು ಕಾದು ನೋಡುವ ತಂತ್ರ ರೂಪಿಸಿಕೊಂಡಿದೆ.

ಇದರಿಂದಾಗಿ ಪಕ್ಷದಿಂದ ನಾನೇ ಅಭ್ಯರ್ಥಿ, ನಾನೇ ಅಭ್ಯರ್ಥಿ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ರೇಸ್ನಲ್ಲಿರುವ ಅಭ್ಯರ್ಥಿಗಳ ತೊಳಲಾಟ ಒಂದು ಕಡೆಯಾದರೆ ಮುಖಂಡರು ಹಾಗೂ ಕಾರ್ಯಕರ್ತರ ತಳಮಳ ತೀವ್ರಗೊಳ್ಳಲಾರಂಭಿಸಿದೆ. ಇಲ್ಲಿ ಯಾವ ಪಕ್ಷವೂ ಯಾವೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡದಿರುವುದು ಒಂದು ಕಡೆ ಅಚ್ಚರಿ ಬೆಳವಣಿಗೆ.

ಇನ್ನೊಂದು ಕಡೆ ಕುತೂಹಲಕಾರಿ ಸಂಗತಿಗಳನ್ನು ರಾಜಕೀಯ ಚರ್ಚೆಗಳ ತಾಣವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ಅರಳಿಕಟ್ಟೆಗಳು ಮಾರ್ಪಟ್ಟಿವೆ. ಮೈತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ಗಳು ಮಾತ್ರ ಅಭ್ಯರ್ಥಿಗಳ ಆಯ್ಕೆ ಆಖೈರು ಗೊಳಿಸಲು ಸಾಧ್ಯವಾಗದೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಟ್ಟಿಗೆ ಅವರ್ನ ಬಿಟ್ ಇವರ್ನ ಬಿಟ್ ಇವರ್ಯಾರು ಅನ್ನೋ ಲೆಕ್ಕಾಚಾರದಲ್ಲಿ ಗೌಣವಾಗಿ ಕುತೂಹಲಕ್ಕೆ ಕಾರಣವಾಗಿದೆ.

ಒಂದೊಂದು ಕಡೆ ಚರ್ಚೆಗಳನ್ನು ಮಾಡುತ್ತಾ ಈ ಬಾರಿಯ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವೊಂದರಲ್ಲೇ ಮೂರು ನಾಲ್ಕು ಮಂದಿ ಚುನಾವಣಾ ಕಣಕ್ಕೆ ಇಳಿಯಲು ರೇಸ್ನಲ್ಲಿದ್ದು, ಈ ಮೂವರು ಅಭ್ಯರ್ಥಿಗಳ ಅವರವರ ಪರವಾಗಿರುವ ಬಹುತೇಕ ಮುಖಂಡರು, ಕಾರ್ಯಕರ್ತರು ಯಾರ ಕಡೆ ನಿಲ್ಲಬೇಕು ಎಂಬ ದ್ವಂದ್ವ ನಿಲುವಿನಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಬಿಜೆಪಿ ಪಕ್ಷದಲ್ಲೂ ಇದೇ ನಿಲುವು ಎಂಬುದರಲ್ಲಿ ಎರಡು ಮಾತಿಲ್ಲ.

ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯ್ಲಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಗೌರಿಬಿದನೂರಿನ ಮಾಜಿ ಸಚಿವ ಎನ್.ಎಚ್. ಶಿವಶಂಕರ್ ರೆಡ್ಡಿ ಇವರ ನಡುವೆ ಟಿಕೆಟ್ ಪಡೆದುಕೊಳ್ಳಲು ತೀವ್ರ ಪೈಪೊಟಿ ನಡೆದಿದೆ. ಅದೇ ರೀತಿ ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾದಳ ಮೈತ್ರಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಮಾಜಿ ಮಾಜಿ ಸಚಿವ ಡಾ.ಕೆ. ಸುಧಾಕರ್, ಬಿ.ಡಿ.ಎ. ಛೇರ್ಮನ್ ಶಾಸಕ ವಿಶ್ವನಾಥ್ ಅವರ ಪುತ್ರ ಅಲೋಕ್ ವಿಶ್ವನಾಥ್, ನನ್ನ ಮಗನಿಗೆ ಟಿಕೆಟ್ ಕೊಟ್ಟಿಲ್ಲ ಅಂದ್ರೆ ನನಗೆ ಕೊಡಿ ಅಂತ ಯಲಹಂಕ ಕ್ಷೇತ್ರದ ಶಾಸಕ ವಿಶ್ವನಾಥ್ ಹೈ ಕಮಾಂಡ್ಗೆ ಒತ್ತಡ ಹೇರುವ ಮೂಲಕ ಈ ಪಕ್ಷದಲ್ಲೂ ಸಹ ಯಾರೊಬ್ಬರನ್ನು ಆಖೈರುಗೊಳಿಸಿಲ್ಲ. ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್„ಸಲು ಬಹುಭಾಷಾ ಚಿತ್ರನಟಿ ಸುಮಲತಾ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಹೆಸರು ಸಹ ಕೇಳಿ ಬಂದಿತ್ತು.

ಆದರೆ ಎರಡು ದಿನಗಳಿಂದ ಅವರೀರ್ವರ ಹೆಸರು ಆಕಾಂಕ್ಷಿಗಳ ಪಟ್ಟಿಯಿಂದ ನಾಪತ್ತೆಯಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಇಚ್ಛಾ ಶಕ್ತಿ ಇಲ್ಲದೆ ಅತಂತ್ರವಾಗಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಎಂಟು ವಿಧಾನಸಭಾ ಕ್ಷೇತ್ರಗಳು ಒಳಪಡಲಿದ್ದು ಕ್ರಮವಾಗಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಯಲಹಂಕ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿರುತ್ತದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯು ಭಾರತೀಯ ಜನತಾ ಪಕ್ಷ ಯಲಹಂಕ ಮತ್ತು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇದ್ದು ಇನ್ನು ಉಳಿದಂತೆ ಕಾಂಗ್ರೆಸ್ ಪಕ್ಷವೇ ಅಧಿಕ ವಿಧಾನಸಭಾ ಕ್ಷೇತ್ರದ ಸ್ಥಾನಗಳನ್ನು ಹೊಂದಿರುತ್ತದೆ. ಹೀಗಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದೇ ರೀತಿ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಕಾಂಗ್ರೆಸ್ ಪಕ್ಷಕ್ಕೆ ಒಲಿದಂತೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ಪಕ್ಷಕ್ಕೆ ತನ್ನ ಒಲವನ್ನು ತೋರುವನೇ ಎಂಬುದು ಇದೀಗ ನಿಗೂಢ ಪ್ರಶ್ನೆಯಾಗಿದೆ. ಇದಕ್ಕೆ ಪುಷ್ಟಿಯಾಗಿ ಗ್ಯಾರಂಟಿಗಳ ಮೇಲೆ ಅವಲಂಬಿತವಾಗಿರುವ ಕಾಂಗ್ರೆಸ್ ಸರ್ಕಾರ ಇನ್ನೊಂದೆಡೆ ಮೋದಿ ಅವರ ವೈಯಕ್ತಿಕ ವರ್ಚಸ್ಸು ಮತ್ತು ಹಿಂದುತ್ವ ಈ ಚುನಾವಣೆಯಲ್ಲಿ ಪ್ರಮುಖ ಅಂಶಗಳಾಗಿ ಮಾರ್ಪಡುವ ಎಲ್ಲಾ ಲಕ್ಷಣಗಳು ಚುನಾವಣಾ ಪೂರ್ವದಿಂದಲೇ ಕಂಡು ಬಂದಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವು ವೈಯಕ್ತಿಕವಾಗಿ ಸ್ವಯಂ 1977ರಲ್ಲಿ ರೂಪಗೊಂಡಿತು ನಂತರ ನಡೆದ ಚುನಾವಣೆಗಳಲ್ಲಿ 1996ರಲ್ಲಿ ಆರ್ ಎಲ್ ಜಾಲಪ್ಪ ಜಾತ್ಯತೀತ ಜನತಾದಳದಿಂದ 2019 ರಲ್ಲಿ ಬಿಎನ್ ಬಚ್ಚೇಗೌಡ ಭಾರತೀಯ ಜನತಾ ಪಕ್ಷದಿಂದ ಗೆಲುವು ಸಾ„ಸಿದ್ದು ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಇಲ್ಲಿ ಜಯಗಳಿಸಿರುತ್ತಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ತನ್ನದೇ ಆದ ಕೊಡುಗೆಗಳನ್ನು ನೀಡಿ ತನ್ನದೇ ಆದ ಮಹತ್ವಗಳನ್ನು ಪಡೆದಿದೆ ತನ್ನದೇ ಆದ ಸಮಸ್ಯೆಗಳನ್ನು ಸಹ ಹೊಂದಿದ್ದು ಪ್ರಮುಖವಾಗಿ ಈ ಸಮಸ್ಯೆಗಳ ನಿವಾರಣೆಗೆ ರಾಜಕೀಯವಾಗಿ ಇಚ್ಛಾಶಕ್ತಿ ಇರುವ ಅಭ್ಯರ್ಥಿ ಮೈತ್ರಿ ಪಕ್ಷದಿಂದ ಬರುವವರು ಕಾಂಗ್ರೆಸ್ ಪಕ್ಷದಿಂದ ಬರುವರು ಎಂಬುದು ಇದೀಗ ಮತದಾರರ ಆಕಾಂಕ್ಷೆಗೆ ಒಳಪಟ್ಟಿದೆ.

RELATED ARTICLES

Latest News