ಬೆಂಗಳೂರು,ಡಿ.24- ಹೊಸ ವರ್ಷಾಚರಣೆ ಹತ್ತಿರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು, ಸಮಾಜಘಾತುಕ ಶಕ್ತಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಸಿಸಿಬಿಯ ಅಪರಾಧ ನಿಯಂತ್ರಣ ದಳ ನಗರದ ಹಲವೆಡೆ ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ರೌಡಿ ಶೀಟರ್ಗಳಿಗೆ ಚಳಿ ಬಿಡಿಸಿದೆ. ಸುಮಾರು 40ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆಗಳ ಮೇಲೆ ಏಕಕಾಲದಲ್ಲಿ ಪೊಲೀಸರ ವಿಶೇಷ ತಂಡ ದಾಳಿ ನಡೆಸಿದ್ದು, ಈ ನಡುವೆ ಹಲವರ ಮನೆಯಲ್ಲಿ ಲಾಂಗು, ಮಚ್ಚುಗಳು ಪತ್ತೆಯಾಗಿವೆ.
ಮಾದನಾಯಕನಹಳ್ಳಿಯಲ್ಲಿ ರೌಡಿಶೀಟರ್ ಕುಳ್ಳ ಶಿವರಾಜ್ ಮನೆ ಮೇಲೆ ದಾಳಿ ನಡೆಸಿದಾಗ ಮಾರಕಾಸ್ತ್ರಗಳು ಸೇರಿದಂತೆ ಪಿಸ್ತೂಲು ಕೂಡ ಪತ್ತೆಯಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.
ಪ್ರಮುಖವಾಗಿ ಬ್ಯಾಡರಹಳ್ಳಿ, ಪರಪ್ಪನ ಅಗ್ರಹಾರ, ಮಾದನಾಯಕನಹಳ್ಳಿ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿದೆ. ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನು ಕೆಲವರಿಗೆ ಎಚ್ಚರಿಕೆ ನೀಡಲಾಗಿದೆ. ಹೊಸ ವರ್ಷದ ಸಂದರ್ಭದಲ್ಲಿ ಡ್ರಗ್ಸ್ ಹಾಗೂ ಇನ್ನಿತರ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ.
ನಗರ ಪೊಲೀಸ್ ಆಯುಕ್ತ ದಯಾನಂದ್ ಅವರ ಸೂಚನೆ ಮೇರೆಗೆ ಅಲರ್ಟ್ ಆಗಿರುವ ಸಿಸಿಬಿ ಇಂದು ಭರ್ಜರಿ ಕಾರ್ಯಾಚರಣೆ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ. ಕೆಲವರ ವಿರುದ್ಧ ಗಂಭೀರ ಪ್ರಕರಣಗಳು ಇದ್ದು, ಅವರ ಚಲನವಲನಗಳ ಬಗ್ಗೆ ನಿಗಾವಹಿಸಲಾಗಿದೆ. ನಗರದಲ್ಲಿ ಪೊಲೀಸರ ಗಸ್ತನ್ನು ಹೆಚ್ಚಿಸಲಾಗಿದ್ದು, ಇಂದು ನಡೆದಿರುವ ರೌಡಿಶೀಟರ್ಗಳ ಮನೆ ಮೇಲಿನ ದಾಳಿಯಲ್ಲಿ ಹಲವು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಾಗಿದೆ.