Thursday, April 16, 2026
Homeರಾಜಕೀಯಉಪಚುನಾವಣೆ : ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ, ಮತದಾರರ ಮನಗೆಲ್ಲಲು ನಾನಾ ಕಸರತ್ತು

ಉಪಚುನಾವಣೆ : ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ, ಮತದಾರರ ಮನಗೆಲ್ಲಲು ನಾನಾ ಕಸರತ್ತು

By-election: Open campaigning Ends tomorrow

ಬೆಂಗಳೂರು,ಏ.6- ಆಡಳಿತಾರೂಢ ಕಾಂಗ್ರೆಸ್‌‍ ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ಜಿದ್ದಾಜಿದ್ದಿನ ರಣರಂಗವಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದ್ದು, ಮತದಾರರನ್ನು ಪುಸಲಾಯಿಸಲು ಎಲ್ಲಾ ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ, ಕೇಂದ್ರ ಸಚಿವ ಹೆಚ್‌.ಡಿ .ಕುಮಾರಸ್ವಾಮಿ, ಮಾಜಿ ಸಿಎಂ ಬಸವರಾಜ ಬೊಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಕಾಂಗ್ರೆಸ್‌‍ ಮತ್ತು ಬಿಜೆಪಿಯ ಘಟಾನುಘಟಿ ನಾಯಕರು ಎರಡೂ ಕಡೆ ತಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು.

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ನಾಳೆ ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದ್ದು ಗುರುವಾರ ಮತದಾನ ನಡೆಯಲಿದೆ. ಕೊನೆ ಕ್ಷಣದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಕಾಂಗ್ರೆಸ್‌‍ ಮತ್ತು ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಜಿದ್ದಿಗೆ ಬಿದ್ದವರಂತೆ ಸುಡುವ ಬಿಸಿಲನ್ನು ಲೆಕ್ಕಿಸದೆ ಮತಯಾಚನೆ ಮಾಡಿದರು.

ಶತಾಯಗತಾಯ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್‌‍ ತನ್ನ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಳೆದ ಒಂದು ವಾರದಿಂದ ಭಾರಿ ಪ್ರಚಾರ ನಡೆಸಿ ಮತದಾರರ ಮನವರಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದೆ. ಹೇಗಾದರೂ ಮಾಡಿ ಉಪಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್‌‍ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ತನ್ನೆಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮೊದಲ ಬಾರಿಗೆ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಬಿಜೆಪಿ ಎರಡೂ ಕಡೆ ಕೈ ಅಭ್ಯರ್ಥಿಗಳಿಗೆ ಸಮಬಲದ ಪೈಪೋಟಿ ನೀಡುತ್ತಿದೆ.

ರಾಜ್ಯ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದು ಇನ್ನು ಕೆಲವೇ ದಿನಗಳಲ್ಲಿ ಮೂರು ವರ್ಷ ಪೂರ್ಣಗೊಳಿಸಲಿದೆ. ಇದೇ ಸಂದರ್ಭದಲ್ಲಿ ಸರ್ಕಾರದ ವರ್ಚಸ್ಸು ಕುಗ್ಗುತ್ತಿದೆ ಎಂಬ ಆರೋಪವೂ ಇದೆ.

ಬಿಜೆಪಿ ಮತ್ತು ಜೆಡಿಎಸ್‌‍ ಈ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಈ ಕ್ಷಣದಲ್ಲಿ ಚುನಾವಣೆಗೆ ಹೋದರೆ ಕಾಂಗ್ರೆಸ್‌‍ ಸೋಲು ಶತಃಸಿದ್ಧ ಎಂದು ಹೇಳುತ್ತಿದೆ. ಆದರೆ ಇದೀಗ ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌‍ ಸರ್ಕಾರದ ವರ್ಚಸ್ಸಿಗೆ ಅನುಕೂಲ ಅಗಬಹುದು.

ಎರಡು ಕ್ಷೇತ್ರಗಳನ್ನು ಗೆದ್ದರೆ ರಾಜ್ಯದಲ್ಲಿ ಅಡಳಿತ ವಿರೋಧಿ ಅಲೆ ಇಲ್ಲ ಎಂದು ಬಿಂಬಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಅನುಕೂಲ ಆಗಲಿದೆ. ಈ ಎರಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಪಾಲಿಗೆ ಎರಡು ಕ್ಷೇತ್ರಗಳ ಉಪ ಚುನಾವಣೆಯನ್ನು ಗೆದ್ದರೆ ಮತ್ತಷ್ಟು ಬಲ ಹೆಚ್ಚುವುದಂತೂ ಸ್ಪಷ್ಟ.

ಹಾಗಾಗಿ ಸಿದ್ದರಾಮಯ್ಯ ಅವರು ಎರಡೂ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಪ್ರಸ್ತುತ ವಿಷಯಗಳನ್ನು ಇಟ್ಟುಕೊಂಡು ಎರಡೂ ಪಕ್ಷದವರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಹಿನ್ನೆಲೆ ಹಾಲಿ ಹಾಗೂ ಮಾಜಿ ಸಿಎಂ ಸೇರಿದಂತೆ ಘಟಾನುಘಟಿಗಳು ಆಗಮಿಸಿ ಕ್ಷೇತ್ರದಾದ್ಯಂತ ಸಂಚಾರ ಮಾಡಿ, ಮತ ಯಾಚಿಸುತ್ತಿದ್ದಾರೆ. ಜೊತೆಗೆ ಜಾತಿ, ಅನುಕಂಪ, ಅಭಿವೃದ್ಧಿ ಹಾಗೂ ಇತರ ವಿಷಯಗಳನ್ನಿಟ್ಟುಕೊಂಡು ಪ್ರಚಾರ ತಂತ್ರ ಮಾಡುತ್ತಿದ್ದಾರೆ.

ಎರಡೂ ಕ್ಷೇತ್ರವನ್ನು ತನ್ನ ಬಳಿಯಲ್ಲೇ ಉಳಿಸಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷ ಪಣ ತೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಎಐಸಿಸಿ ಮಾರ್ಗದರ್ಶನದಂತೆ ಅಭ್ಯರ್ಥಿಗಳ ಆಯ್ಕೆ ಮತ್ತು ಗೆಲುವಿನ ರಣತಂತ್ರ ರೂಪಿಸಲು ಸಚಿವರನ್ನು ಒಳಗೊಂಡ ಪ್ರಬಲ ಉಸ್ತುವಾರಿ ಸಮಿತಿಗಳನ್ನು ರಚಿಸಿ ಅಖಾಡಕ್ಕೆ ಇಳಿದಿದ್ದಾರೆ.ಬಾಗಲಕೋಟೆಯಲ್ಲಿ ಕುರುಬ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿಯ ಮತಗಳು ನಿರ್ಣಾಯಕವಾಗಿದ್ದು, ಇಲ್ಲಿಗೆ 15 ಸದಸ್ಯರ ಉಸ್ತುವಾರಿ ಸಮಿತಿಯನ್ನು ಕಾಂಗ್ರೆಸ್‌‍ ನೇಮಿಸಿದೆ.

ಈ ಸಮಿತಿಯಲ್ಲಿ ಎಂಟು ಮಂದಿ ಪ್ರಭಾವಿ ಸಚಿವರಿದ್ದು, ಆರ್‌.ಬಿ.ತಿಮಾಪುರ, ಎಂ.ಬಿ.ಪಾಟೀಲ ಮತ್ತು ಸತೀಶ ಜಾರಕಿಹೊಳಿ ಅವರಿಗೆ ಸ್ಥಾನ ನೀಡಿರುವುದು, ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿರುವ ಸಮುದಾಯಗಳನ್ನು ಸೆಳೆಯುವ ತಂತ್ರವೆಂದೇ ವಿಶ್ಲೇಷಿಸಲಾಗಿದೆ. ದಾವಣಗೆರೆಯಲ್ಲಿ ಲಿಂಗಾಯತ ಮತ್ತು ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌‍, 16 ಜನರ ಸಮಿತಿಯನ್ನು ರಚಿಸಿದ್ದು, ಅದರಲ್ಲಿ 10 ಮಂದಿ ಸಚಿವರಿದ್ದಾರೆ. ಇಲ್ಲಿ ಸಚಿವರಾದ ಎಸ್‌‍.ಎಸ್‌‍. ಮಲ್ಲಿಕಾರ್ಜುನ್‌ ಮತ್ತು ಜಮೀರ್‌ ಅಹದ್‌ ಖಾನ್‌ ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಿದೆ.

ಕಳೆದ ಬಾರಿ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್‌ ಗೆದ್ದಿದ್ದರು. ಈ ಕ್ಷೇತ್ರವನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಮತ್ತೊಂದು ಕಡೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಯಾಸೀನ್‌ ಖಾನ್‌ ಪಠಾಣ್‌ ಗೆಲುವು ಸಾಧಿಸಿದ್ದರು. ಶಿಗ್ಗಾಂವಿ ಉಸ್ತುವಾರಿ ಹಾಗೂ ಗೆಲ್ಲಿಸೋ ಜವಾಬ್ದಾರಿಯನ್ನು ಸಿಎಂ ಸಿದ್ದರಾಮಯ್ಯ ಅವರು ಸತೀಶ್‌ ಜಾರಕಿಹೊಳಿಗೆ ವಹಿಸಿದ್ದರು.

ಹೀಗಾಗಿ ಎರಡು ಕ್ಷೇತ್ರಗಳಲ್ಲೂ ಮಾಜಿ ಸಿಎಂ ಪುತ್ರರನ್ನು ಕಾಂಗ್ರೆಸ್‌‍ ಅಭ್ಯರ್ಥಿಗಳು ಸೋಲಿಸಿದ್ದರು. ಇದು ಸಿದ್ದರಾಮಯ್ಯ ಅವರಿಗೆ ಪ್ಲಸ್‌‍ ಪಾಯಿಂಟ್‌ ಅಗಿತ್ತು. ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಎರಡೂ ಸ್ಥಾನಗಳನ್ನು ಗೆಲ್ಲಬೇಕಾದ ಅಗ್ನಿಪರೀಕ್ಷೆ ಎದುರಾಗಿದೆ.
ಈ ಹಿಂದೆ ನಡೆದಿದ್ದ ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣ ಕ್ಷೇತ್ರದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌‍ ಜಯಭೇರಿ ಬಾರಿಸಿತ್ತು. ಶಿಗ್ಗಾವಿಯನ್ನು ಬಿಜೆಪಿಯಿಂದ (ಬಸವರಾಜ ಬೊಮ್ಮಾಯಿ) ಮತ್ತು ಚನ್ನಪಟ್ಟಣವನ್ನು ಜೆಡಿಎಸ್‌‍ನಿಂದ (ಎಚ್‌.ಡಿ. ಕುಮಾರಸ್ವಾಮಿ) ಕಾಂಗ್ರೆಸ್‌‍ ಕಸಿದುಕೊಂಡಿತ್ತು.

ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ತಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಇಟ್ಟುಕೊಂಡು ಕಾಂಗ್ರೆಸ್‌‍ ಪಕ್ಷದವರು ಪ್ರಚಾರ ಮಾಡುತ್ತಿದ್ದರೆ, ಇತ್ತ ಬಿಜೆಪಿ ಪಕ್ಷದವರು ಗ್ಯಾರಂಟಿ ಯೋಜನೆಯಿಂದಾಗಿ ಸರ್ಕಾರ ದಿವಾಳಿ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದೆ. ಇಂತಹ ಸನ್ನಿವೇಶದಲ್ಲಿ ಮೇ ಅಥವಾ ಜೂನ್‌ ಒಳಗಾಗಿ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ.

ಇದೇ ಸಂದರ್ಭದಲ್ಲಿ ಹೈಕಮಾಂಡ್‌ ಏನು ತೀರ್ಮಾನ ಕೈಗೊಳ್ಳಲಿದೆ ಎಂಬ ಕುತೂಹಲವೂ ಕೆರಳಿದೆ. ಇದೇ ಸಂದರ್ಭದಲ್ಲಿ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಕಾಂಗ್ರೆಸ್‌‍ ಪಾಲಿಗೆ ಮಾತ್ರವಲ್ಲ, ಸಿದ್ದರಾಮಯ್ಯ ಪಾಲಿಗೂ ಪ್ರತಿಷ್ಠೆಯಾಗಿದೆ.

ಆದರೆ, ಮತದಾರರು ಪ್ರಭು ಮಾತ್ರ ಎರಡು ಪಕ್ಷದವರ ಮಾತು ಆಲಿಸಿ, ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಕುತೂಹಲಕರವಾಗಿದೆ. ಏ.9 ರಂದು ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.

RELATED ARTICLES

Latest News