ಚಿಂತಾಮಣಿ, ಅ.4- ಕಾಂಗ್ರೆಸ್ ಪಾಲಿನ ಫೈಯರ್ ಬ್ರ್ಯಾಂಡ್ ಹೆಸರಾಗಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಇದೇ ಪಕ್ಷದಲ್ಲೇ ಹಿರಿಯ ನಾಯಕರ ವಿರುದ್ಧ ತಿರುಗಿ ಬೀಳುವ ಮೂಲಕ ಆಂತರಿಕ ಬೇಗುದಿಗೆ ಶರಣಾಗಿದ್ದಾರೆ.
ಕಾಂಗ್ರೆಸ್ ನಾಯಕರ ಒಳ ಜಗಳದ ನಡುವೆ ಕಂಬಾಲಹಳ್ಳಿ ಹತ್ಯಾಕಾಂಡ ಮತ್ತೆ ಮುನ್ನೆಲೆಗೆ ಬಂದಿದೆ. ನ್ಯಾಯಾಲಯಗಳಲ್ಲಿ ಇತ್ಯರ್ಥಗೊಂಡಿರುವ ಈ ಪ್ರಕರಣ ಮತ್ತೆ ಮರು ತನಿಖೆಯಾಗಬೇಕು, ಸಂತ್ರಸ್ಥರಿಗೆ ನ್ಯಾಯ ಸಿಗಬೇಕು ಎಂಬ ಒತ್ತಾಯಗಳನ್ನು ಪ್ರದೀಪ್ ಈಶ್ವರ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಪ್ರದೀಪ್ ಈಶ್ವರ್, ಕಂಬಾಲಹಳ್ಳಿ ಘಟನೆಯಲ್ಲಿ ಏಳು ಮಂದಿ ಜೀವಂತವಾಗಿ ಸುಟ್ಟು ಕರಕಲಾಗಿದ್ದು, ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾಗಲು ಕಾರಣವಾದ ಅಂಶಗಳ ಕುರಿತು ಹಲವು ಪ್ರಶ್ನೆಗಳನ್ನು ಅವರು ಎತ್ತಿದ್ದಾರೆ. 2014ರಲ್ಲಿ ಕೊಪ್ಪಳ ಜಿಲ್ಲೆಯ ಮರುಕುಂಬಿಯಲ್ಲಿ ದಲಿತರ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ 2024ರಲ್ಲಿ 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಂಬಾಲಹಳ್ಳಿ ಪ್ರಕರಣದಲ್ಲಿ ಮೃತರ ಕುಟುಂಬದವರು ಹಾಗೂ ಘಟನೆಯನ್ನು ಕಣ್ಣಾರೆ ಕಂಡವರು ತೆಲುಗಿನಲ್ಲಿ ನೀಡಿದ್ದ ಹೇಳಿಕೆಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಸಂದರ್ಭದಲ್ಲಿ ಸ್ಥಳೀಯ ಭಾಷಾಂತರಕಾರನಿಂದಾದ ತಪ್ಪಿನಿಂದ ಪ್ರಕರಣದ ದಿಕ್ಕು ಬದಲಾಯಿತು ಎಂದು ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ.
ತೆಲುಗಿನಲ್ಲಿ ನೀಡಿದ್ದ ಹೇಳಿಕೆಗಳನ್ನು ಕನ್ನಡಕ್ಕೆ ಭಾಷಾಂತರಿಸುವ ವೇಳೆ ಅವುಗಳನ್ನು ಬದಲಿಸಲು ಯಾರಾದರೂ ಪ್ರೇರೇಪಣೆ ನೀಡಿದ್ದರೇ, ಭಾಷಾಂತರದಲ್ಲಿ ಲೋಪವಾಗಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಂಬಾಲಹಳ್ಳಿ ಪ್ರಕರಣವನ್ನು ಮರುತನಿಖೆಗೆ ಒಳಪಡಿಸಿದರೆ ಹಲವು ಅಂಶಗಳು ಬಹಿರಂಗವಾಗಲಿವೆ. ಇದೇ ವೇಳೆ ಚಿಂತಾಮಣಿ ತಾಲೂಕಿನಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪವನ್ನೂ ಮಾಡಿದ್ದಾರೆ. ಕಂಬಾಲಹಳ್ಳಿ ಘಟನೆಗೆ ಕಾರಣವಾದ ಕುಟುಂಬವೊಂದರ ಪ್ರಭಾವಿ ರಾಜಕಾರಣಿ ಈಗ ತಮ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಎಲ್ಲಿಯೂ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.
ಇದರ ನಡುವೆ, ಚಿಂತಾಮಣಿ ತಾಲ್ಲೂಕಿನ ಪ್ರಭಾವಿ ರಾಜಕಾರಣಿಯೊಬ್ಬರು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಕುಟುಂಬದ ವ್ಯಕ್ತಿಯೊಬ್ಬರು ತಮ ವಿರುದ್ಧ ದ್ವೇಷದ ಪ್ರಚಾರ ನಡೆಸುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ಮತ್ತೊಂದು ಆರೋಪ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ತಮ ವಿರುದ್ಧ ಕೆಲವರನ್ನು ಮಾತನಾಡಿಸುತ್ತಿದ್ದಾರೆ ಎಂದು ಹೇಳಿರುವ ಅವರು, ಸಂಬಂಧಪಟ್ಟವರ ಅಕ್ರಮಗಳು ಹಾಗೂ ಆಸ್ತಿಗಳ ಕುರಿತು ಶೀಘ್ರದಲ್ಲೇ ಮಾಹಿತಿ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.
ಹೈದರಾಬಾದ್ನಲ್ಲಿರುವ ಅವರ ಡಯಾಗ್ನೊಸ್ಟಿಕ್ ಸೆಂಟರ್, ಮುಂಬೈನಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್ ಸೇರಿದಂತೆ ಹಲವು ಆಸ್ತಿ ಮಾಹಿತಿಗಳನ್ನು ಬಹಿರಂಗಪಡಿಸುವ ಎಚ್ಚರಿಕೆ ನೀಡಿದ್ದಾರೆ.ಚಿಂತಾಮಣಿ ತಾಲ್ಲೂಕಿನ ಎಸ್. ರಾಗುಟ್ಟಹಳ್ಳಿಯ ರಾಮನ ದೇವಾಲಯಕ್ಕೆ ಆಗಿನ ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ದೇವಾಲಯವನ್ನು ಮೂರು ವರ್ಷಗಳ ಕಾಲ ಮುಚ್ಚಲಾಗಿತ್ತು ಎಂಬ ಆರೋಪ ಕೇಳಿಬರುತ್ತಿದೆ ಎಂದು ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಈ ಆರೋಪ ನಿಜವೇ ಎಂಬುದನ್ನು ಸಂಬಂಧಪಟ್ಟವರು ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದ್ದಾರೆ.ಕಂಬಾಲಹಳ್ಳಿ ಪ್ರಕರಣಕ್ಕೆ ನ್ಯಾಯ ದೊರಕಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ತೀವ್ರಗೊಂಡಿದ್ದು, ಪ್ರಕರಣದ ಕುರಿತು ಮರುತನಿಖೆ ನಡೆಸುವಂತೆ ಆಗ್ರಹಗಳು ಕೇಳಿಬರುತ್ತಿವೆ.
2023ರ ವಿಧಾನಸಭೆ ಚುನಾವಣೆಯಲ್ಲಿ ತಮಗೆ ಕಾಂಗ್ರೆಸ್ ಟಿಕೆಟ್ ಸಿಗಲು ನೆರವಾಗಿದ್ದ ಹಾಗೂ ಗೆಲುವಿಗೆ ಸಹಕಾರ ನೀಡಿದ ಕಾಂಗ್ರೆಸ್ನ ಪ್ರಭಾವಿ ಹಿರಿಯ ನಾಯಕರ ವಿರುದ್ಧವೇ ಪ್ರದೀಪ್ ಈಶ್ವರ್ ಈಗ ತಿರುಗಿ ಬಿದ್ದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರಿದೆ.
