ಡೆಹ್ರಾಡೂನ್,ಅ.4- ಉತ್ತರಾಖಂಡದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ನಿನ್ನೆ ಪ್ರಕಟಿಸಲಾಗಿದ್ದು, ರಾಜ್ಯದಲ್ಲಿ ಒಟ್ಟು 71,58,949 ಮತದಾರರು ಉಳಿದಿದ್ದಾರೆ. ಎಸ್‌ಐಆರ್ ಆರಂಭವಾದಾಗ ಇದ್ದ 79.6 ಲಕ್ಷ ಮತದಾರರಿಗೆ ಹೋಲಿಸಿದರೆ ಸುಮಾರು 8.01 ಲಕ್ಷ ಮತದಾರರ ಇಳಿಕೆ ಕಂಡುಬಂದಿದೆ.
ಉತ್ತರಾಖಂಡದ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪ್ರಕಾರ, ಜೂನ್ 8ರಂದು ಎಸ್‌ಐಆರ್ ಪ್ರಕ್ರಿಯೆ ಆರಂಭಗೊಂಡಾಗ ರಾಜ್ಯದಲ್ಲಿ ಸುಮಾರು 79.6 ಲಕ್ಷ ಮತದಾರರಿದ್ದರು. ಮನೆಗಳಿಗೆ ಎಣಿಕೆ ನಮೂನೆಗಳ ವಿತರಣೆ ಮತ್ತು ಅವುಗಳ ಸಂಕಲನದ ಬಳಿಕ ಜುಲೈ 14ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 71.33 ಲಕ್ಷ ಮತದಾರರು ಇದ್ದರು.
ನಂತರ ಮತದಾರರಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಜುಲೈ 14ರಿಂದ ಆಗಸ್ಟ್ 13ರವರೆಗೆ ಅವಕಾಶ ನೀಡಲಾಯಿತು. ಆಗಸ್ಟ್ 13ರಿಂದ ಸೆಪ್ಟೆಂಬರ್ 28ರವರೆಗೆ ಸಲ್ಲಿಕೆಯಾದ ಅರ್ಜಿಗಳು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಯಿತು.
ಪುರುಷರೇ ಹೆಚ್ಚು
ಅಂತಿಮ ಮತದಾರರ ಪಟ್ಟಿಯಲ್ಲಿ 37,37,701 ಪುರುಷರು, 34,21,036 ಮಹಿಳೆಯರು ಮತ್ತು 212 ತೃತೀಯ ಲಿಂಗದ ಮತದಾರರು ಇದ್ದಾರೆ. 18ರಿಂದ 19 ವರ್ಷ ವಯಸ್ಸಿನ 72,656 ಯುವ ಮತದಾರರು ಹಾಗೂ 80 ವರ್ಷ ಮೇಲ್ಪಟ್ಟ 1,22,892 ಹಿರಿಯ ಮತದಾರರು ಪಟ್ಟಿಯಲ್ಲಿದ್ದಾರೆ.
ಎಸ್‌ಐಆರ್ ನಂತರದ ಹಕ್ಕು ಮತ್ತು ಆಕ್ಷೇಪಣೆಗಳ ಪ್ರಕ್ರಿಯೆಯಲ್ಲಿ 1,29,872 ಅರ್ಹ ಮತದಾರರನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದ್ದು, 1,04,708 ಹೆಸರುಗಳನ್ನು ತೆಗೆದುಹಾಕಲಾಗಿದೆ. ಜುಲೈ 1, 2026 ಅನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಈ ಪರಿಷ್ಕರಣೆ ನಡೆಸಲಾಗಿದೆ.
ಕಾಂಗ್ರೆಸ್‌ನಿಂದ ವಿಭಿನ್ನ ಲೆಕ್ಕ
ಆದರೆ ಮತದಾರರ ಸಂಖ್ಯೆ ಇಳಿಕೆಯ ಪ್ರಮಾಣದ ಕುರಿತು ಕಾಂಗ್ರೆಸ್ ಮತ್ತು ಚುನಾವಣಾ ಆಯೋಗದ ಅಂಕಿಅಂಶಗಳ ನಡುವೆ ವ್ಯತ್ಯಾಸ ಕಂಡುಬಂದಿದೆ. ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ಮನೋಜ್ ರಾವತ್, 2025ರ ಜನವರಿ 1ರ ವೇಳೆಗೆ ಉತ್ತರಾಖಂಡದಲ್ಲಿ 85.19 ಲಕ್ಷ ಮತದಾರರಿದ್ದರು ಎಂದು ಹೇಳಿದ್ದು, ಈಗ ಸಂಖ್ಯೆ 71.58 ಲಕ್ಷಕ್ಕೆ ಇಳಿದಿರುವುದರಿಂದ ಸುಮಾರು 14 ಲಕ್ಷ ಮತದಾರರು ಕಡಿಮೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ವಿರುದ್ಧವಾಗಿ ಇಸಿಐ ಕಚೇರಿ ಎಸ್‌ಐಆರ್ ಆರಂಭದ ವೇಳೆಯ ಅಧಿಕೃತ ಅಂಕಿಅಂಶವಾದ 79.6 ಲಕ್ಷವನ್ನು ಆಧಾರವಾಗಿಟ್ಟುಕೊಂಡಿದೆ. ಹೀಗಾಗಿ ಎಸ್‌ಐಆರ್‌ನಿಂದ ಉಂಟಾದ ಇಳಿಕೆಯನ್ನು ಲೆಕ್ಕ ಹಾಕುವಾಗ ಯಾವ ದಿನಾಂಕದ ಮತದಾರರ ಪಟ್ಟಿಯನ್ನು ಆಧಾರವಾಗಿ ಪರಿಗಣಿಸಬೇಕು ಎಂಬುದು ರಾಜಕೀಯ ಚರ್ಚೆಯ ಪ್ರಮುಖ ಅಂಶವಾಗಿದೆ.
ಮತ್ತೊಂದು ಅವಕಾಶ
ಅಂತಿಮ ಪಟ್ಟಿಯಲ್ಲಿ ಹೆಸರು ಕಾಣಿಸದಿದ್ದರೂ ಅರ್ಹರಾಗಿರುವ ಮತದಾರರಿಗೆ ಚುನಾವಣಾ ಆಯೋಗ ಮತ್ತೊಂದು ಅವಕಾಶ ನೀಡಿದೆ. ಅವರು ಇಸಿಐ-ಎನ್‌ಇಟಿ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಫಾರ್ಮ್-6 ಸಲ್ಲಿಸಬಹುದು ಅಥವಾ ತಮ ಬೂತ್ ಲೆವೆಲ್ ಅಧಿಕಾರಿ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಹ ಮತದಾರರನ್ನು ಗುರುತಿಸಲು ವಿಶೇಷ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಬಿಎಲ್‌ಒಗಳಿಗೆ ಮನೆ-ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಪೂರ್ವ-ಎಸ್‌ಐಆರ್ ಮತದಾರರ ಪಟ್ಟಿಯೊಂದಿಗೆ ಪ್ರಸ್ತುತ ಪಟ್ಟಿಯನ್ನು ಹೋಲಿಸಿ, ಹಿಂದಿನ ಪಟ್ಟಿಯಲ್ಲಿ ಹೆಸರು ಇದ್ದು ಈಗ ಕಾಣೆಯಾಗಿರುವ ಮತದಾರರನ್ನು ಗುರುತಿಸಲಾಗುತ್ತದೆ. ಅರ್ಹತೆ ದೃಢಪಟ್ಟಲ್ಲಿ ಫಾರ್ಮ್-6 ಭರ್ತಿ ಮಾಡಲು ಬಿಎಲ್‌ಒಗಳು ಸಹಾಯ ಮಾಡಲಿದ್ದಾರೆ.
ಮೊದಲ ಬಾರಿಗೆ ಮತದಾರರಾಗುವ ಯುವಕರು ಹಾಗೂ ಇತರ ಅರ್ಹ ಆದರೆ ಪಟ್ಟಿಯಿಂದ ಹೊರಗುಳಿದ ಮತದಾರರಿಗೂ ಬಿಎಲ್‌ಒಗಳು ನೆರವು ನೀಡಲಿದ್ದಾರೆ. ಈ ಮತದಾರರ ಪಟ್ಟಿಯನ್ನು ಬೂತ್ ಮಟ್ಟದ ಏಜೆಂಟ್‌ಗಳು ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳಲಾಗುವುದು.
ಒಟ್ಟಾರೆ, ಎಸ್‌ಐಆರ್ ಆರಂಭದ 79.6 ಲಕ್ಷದಿಂದ ಅಂತಿಮ 71.58 ಲಕ್ಷಕ್ಕೆ ಮತದಾರರ ಸಂಖ್ಯೆ ಇಳಿದಿರುವುದು ಉತ್ತರಾಖಂಡದ ಚುನಾವಣಾ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ಚುನಾವಣಾ ಆಯೋಗವು ಪರಿಷ್ಕರಣೆಯನ್ನು ಮತದಾರರ ಪಟ್ಟಿಯ ಶುದ್ಧೀಕರಣದ ಪ್ರಕ್ರಿಯೆ ಎಂದು ವಿವರಿಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ದೊಡ್ಡ ಪ್ರಮಾಣದ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿವೆ ಎಂದು ಪ್ರಶ್ನಿಸುತ್ತಿದೆ. ಅಂತಿಮ ಪಟ್ಟಿಯಿಂದ ಹೊರಗುಳಿದ ಅರ್ಹ ಮತದಾರರನ್ನು ಮರುಸೇರ್ಪಡೆಗೊಳಿಸುವ ಮುಂದಿನ ಹಂತ ಈ ವಿವಾದದ
ಅಂತಿಮ ಮತದಾರರ ಪಟ್ಟಿಯ ಪ್ರಮುಖ ವಿವರಗಳು
ಒಟ್ಟು ಮತದಾರರು: 71.58 ಲಕ್ಷ (71,58,949)
ಪುರುಷ ಮತದಾರರು: 37,37,701
ಮಹಿಳಾ ಮತದಾರರು: 34,21,036
ತೃತೀಯ ಲಿಂಗಿ ಮತದಾರರು: 212
ಯುವ ಮತದಾರರು (18-19 ವಯೋಮಾನ): 72,656
ಹಿರಿಯ ನಾಗರಿಕರು (80 ವರ್ಷಕ್ಕಿಂತ ಮೇಲ್ಪಟ್ಟವರು): 1,22,892
