ಬೆಂಗಳೂರು,ಜೂ.22- ಕಳೆದ 2007ರಲ್ಲೇ ಸ್ಥಗಿತಗೊಳಿಸಲಾಗಿದ್ದ ಬಿಡದಿ ಟೌನ್‌ಶಿಪ್ ಯೋಜನೆಗೆ ಮರುಜೀವ ನೀಡಿ 2025ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಕೇಂದ್ರದ ಬೃಹತ್ ಕೈಗಾರಿಕಾ ಹಾಗೂ ಉಕ್ಕು ಕಾರ್ಖಾನೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ಯೋಜನೆಗೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಧರ್ಮಸಿಂಗ್, ಡಿ.ಕೆ.ಶಿವಕುಮಾರ್ ಅವರು 2007ರ ಜುಲೈನಲ್ಲಿ ನಡೆದ ವಿಧಾನಸಭೆ ಕಲಾಪದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ರೈತರನ್ನು ಒಕ್ಕಲೆಬ್ಬಿಸಿ ಟೌನ್‌ಶಿಪ್ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದರು.
ಆದರೆ 2025ರಲ್ಲಿ ಬಿಡದಿ ಟೌನ್‌ಶಿಪ್‌ಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 2026ರಲ್ಲಿ ಅಂತಿಮ ಅಧಿಸೂಚನೆಯನ್ನು ಕಾಂಗ್ರೆಸ್ ಸರ್ಕಾರ ಹೊರಡಿಸಿದೆ. ರೈತರ ಪರವಾಗಿ ಡಿನೋಟಿಫಿಕೆಷನ್ ಮಾಡಿದರೆ ಜೈಲಿಗೆ ಹೋಗಬೇಕಾಗಿಲ್ಲ. ಯೋಜನೆಯನ್ನೇ ಕೈಬಿಟ್ಟು ರೈತರ ಹಿತ ಕಾಪಾಡಬಹುದು ಎಂದು ಹೇಳಿದರು.
ಅತ್ಯಂತ ವೇಗವಾಗಿ ಸರ್ಕಾರದಲ್ಲಿ ಬಿಡದಿ ಟೌನ್‌ಶಿಪ್ ವಿಚಾರದ ಬೆಳೆವಣಿಗೆಗಳು ಆಗುತ್ತಿವೆ. ಈ ಟೌನ್‌ಶಿಪ್ ಪಿತಾಮಹ ಎಂದು ನನ್ನನ್ನು ಕರೆದಿದ್ದಾರೆ ಎಂದು ಹೇಳಿ, ವಿಧಾನಸಭಾ ಕಲಾಪದಲ್ಲಿ ಕಾಂಗ್ರೆಸ್ ನಾಯಕರು ಟೌನ್‌ಶಿಪ್ ವಿರೋಧಿಸಿ ಮಾಡಿದ್ದ ಭಾಷಣದ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಪತನವಾಗಿ ರಾಷ್ಟ್ರಪತಿ ಆಳ್ವಿಕೆ ಬಂದ ಸಂದರ್ಭದಲ್ಲಿ ಸ್ಥಗಿತವಾಗಿದ್ದ ಯೋಜನೆಗೆ ಚಾಲನೆ ನೀಡಲಾಗಿದೆ. 2009ರಲ್ಲಿದ್ದ ಬಿಜೆಪಿ ಸರ್ಕಾರ ಯೋಜನೆ ಸ್ಥಗಿತಗೊಳಿಸಲು ನಿರ್ಧರಿಸಿ ಡಿಎಲ್‌ಎಫ್ ಬಡ್ಡಿ ಸಹಿತ ಹಣ ನೀಡಿದೆ. ಅಲ್ಲಿಗೆ ಈ ಯೋಜನೆ ಮುಕ್ತಾಯಗೊಂಡಿತ್ತು.
2018ರಲ್ಲಿ ನಾನು 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಮುಂದುವರೆಸಬಹುದಿತ್ತು. ಆದರೆ ಆ ಕಾರ್ಯ ಮಾಡಲಿಲ್ಲ. 20 ವರ್ಷಗಳ ನಂತರ ಕಾಂಗ್ರೆಸ್ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದೆ ಎಂದು ಆರೋಪಿಸಿದ ಅವರು, ಬೆಂಗಳೂರಿನ ಮಾಸ್ಟರ್ ಪ್ಲಾನ್ ಮಾಡುವಾಗ ರೆಡ್‌ಝೋನ್ ಎಂದು ಗುರುತಿಸಲಾಗಿದೆ ಅಷ್ಟೇ ಎಂದರು.
ರೈತರ ಪರವಾಗಿ ಡಿನೋಟಿಫಿಕೇಷನ್ ಮಾಡಿ ಜೈಲಿಗೆ ಹೋಗೊಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ರೀಡೂ ವಿಚಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಜೈಲಿಗೆ ಹೋಗಿದ್ದಾರೆಯೇ ಎಂಬುದನ್ನು ಪ್ರಶ್ನಿಸಿದ ಅವರು, ಸತ್ತವರ ಹೆಸರಿನಲ್ಲಿ ಹೆಬ್ಬೆಟ್ಟು ಹಾಕಿಸಿ ಡಿನೋಟಿಫಿಕೆಷನ್ ಮಾಡಿಸಿದ್ದ ಭಯ ಅವರಿಗೆ ಕಾಡುತ್ತಿರಬೇಕು ಎಂದು ಟೀಕಿಸಿದರು.
ಇದೇ ಮುಖ್ಯಮಂತ್ರಿ ಬಿಎಂಐಸಿಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರು ಅರ್ಜಿ ಹಾಕಿ 30 ವರ್ಷದಿಂದ ಕಾಯುತ್ತಿದ್ದಾರೆ. ಅವರಿಗೆ ನಿವೇಶನ ನೀಡಿಲ್ಲ. ಬಿಡದಿ ಟೌನ್‌ಶಿಪ್ ಯೋಜನೆ ಇನ್ನೊಂದು ನೈಸ್ ಯೋಜನೆಯಾಗಲಿದೆ. ಈ ಯೋಜನೆಗೆ ನಾಲ್ಕೂವರೆ ಸಾವಿರ ರೈತರು ಅರ್ಜಿ ಹಾಕಿ ಆಕ್ಷೇಪ ವ್ಯಕ್ತಪಡಿಸಿದರೂ ಪರಿಗಣಿಸಿಲ್ಲ. ಈಗ ಪ್ರಜಾ ಸೇವಾ ಇಲಾಖೆ ಮಾಡುತ್ತಾರಂತೆ. ಅದು ಇನ್ನೊಂದು ನೈಸ್ ಕಂಪನಿ ಆಗದಿರಲಿ ಎಂದು ವ್ಯಂಗ್ಯವಾಡಿದರು.
ಕಾನೂನು ಹೋರಾಟ
ಡಿನೋಟಿಫಿಕೇಷನ್ ವಿರೋಧಿಸಿ 450 ದಿನಗಳಿಗೂ ಹೆಚ್ಚು ಕಾಲದಿಂದ ರೈತರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಹೋಗೋಣ ಬನ್ನಿ ಎಂದು ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರು.
ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರೈತರ ಹಿತ ಕಾಪಾಡಲು ಕಾನೂನು ಹೋರಾಟ ಮಾಡಲಾಗುವುದು. ದಾಖಲೆ ಸಿದ್ದಪಡಿಸಲು ತಂಡ ರಚಿಸಲಾಗಿದೆ. ಸದ್ಯದಲ್ಲೇ ಡಿನೋಟಿಫಿಕೇಷನ್ ವಿರುದ್ದ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದರು.
ನಾಗರಬಾವಿಯಲ್ಲಿ ಬಾಡಿಗೆ ಮನೆ ಮಾಡಿ ವ್ಯವಹಾರ ನಡೆಸಲಾಗುತ್ತಿದೆ. ಎಷ್ಟು ಜನ ಜೈಲಿಗೆ ಹೋಗೋಬೇಕೋ ತಯಾರಾಗಿ. 20 ವರ್ಷದ ಹಳೆಯ ಈ ಯೋಜನೆಯನ್ನು ಕೈಬಿಟ್ಟರೆ ರೈತರು ಹಿತ ಕಾಪಾಡಿದಂತಾಗುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಎಚ್.ಎಂ.ರಮೇಶ್‌ಗೌಡ, ಮಾಜಿ ಶಾಸಕ ಎ.ಮಂಜುನಾಥ್ , ಪಕ್ಷದ ಮುಖಂಡರಾದ ಚಂದನ್ ಮತ್ತಿತರರು ಉಪಸ್ಥಿತರಿದ್ದರು.
