ಬೆಂಗಳೂರು, ಮಾ.18- ಅಧಿಕಾರ ಹಂಚಿಕೆಯ ಗೊಂದಲದ ನಡುವೆ ಸಚಿವ ಸಂಪುಟ ಪುನರ್‌ರಚನೆಗಾಗಿ ಶಾಸಕರುಗಳ ಒತ್ತಡ ಹೆಚ್ಚುತ್ತಿದ್ದು, ಔತಣ ಕೂಟಗಳು, ಪ್ರತ್ಯೇಕ ಸಭೆಗಳು ಹೆಚ್ಚಾಗುತ್ತಿವೆ.
ನಿನ್ನೆ ರಾತ್ರಿ ಮೊದಲ ಮತ್ತು ಎರಡನೇ ಬಾರಿ ಗೆದ್ದಿರುವ ಶಾಸಕರುಗಳು ನಗರದ ಖಾಸಗಿ ಹೋಟೆಲ್‌ನಲ್ಲಿ ಔತಣ ಕೂಟ ನಡೆಸಿದ್ದು, ಕನಿಷ್ಠ 10 ಮಂದಿ ಕಿರಿಯರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರರಿಗೆ ಮನವಿ ಮಾಡಿದ್ದಾರೆ.
ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಂತೆೆಯೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನಿನ್ನೆ ರಾತ್ರಿ 40ಕ್ಕೂ ಹೆಚ್ಚು ಶಾಸಕರು ಔತಣ ಕೂಟ ನಡೆಸುವ ಮುನ್ನ ಅವರ ನಿಯೋಗದ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಸಚಿವ ಸಂಪುಟ ಪುನರ್‌ರಚನೆ ಮಾಡಬೇಕು ಮತ್ತು ಹೊಸಬರಿಗೆ ಅವಕಾಶ ಕಲ್ಪಿಸಬೇಕೆಂದು ಒತ್ತಡ ಹೇರಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರು ತಮ ಆಪ್ತ ಬಣದಲ್ಲಿರುವ ಸಚಿವರುಗಳಿಗೆ ಪ್ರತ್ಯೇಕವಾದ ಭೋಜನಕೂಟ ನಡೆಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಅಂಗವಾಗಿ ಬಣ ರಾಜಕೀಯ ಹೊರತು ಪಡಿಸಿ, ಕಾಂಗ್ರೆಸ್‌ನ ಎಲ್ಲಾ ಸಚಿವರಿಗೆ, ಶಾಸಕರಿಗೆ ವಿಶೇಷ ಭೋಜನಕೂಟ ಏರ್ಪಡಿಸಿದರು. ಆದರೆ ಅನಂತರದ ಬೆಳವಣಿಗೆಗಳಲ್ಲಿ ಮತ್ತೆ ಬಣಗಳ ಮೇಲಾಟ ನಡೆಯುತ್ತಿದೆ.
ಈ ಮೊದಲು 3 ಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಶಾಸಕರು, ಬೆಂಗಳೂರಿನಲ್ಲಿ ಪ್ರತ್ಯೇಕವಾದ ಸಭೆ ನಡೆಸಿದರು. ಅದಕ್ಕೂ ಮುನ್ನ ಮೊದಲ ಬಾರಿ ಆಯ್ಕೆಯಾಗಿರುವ 41 ಮಂದಿ ಶಾಸಕರು, ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಸಂಪುಟ ಸಭೆಯ ಪುನರ್‌ರಚನೆ ವೇಳೆ ಹೊಸದಾಗಿ ಆಯ್ಕೆಯಾದ 5 ಮಂದಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ನಾಯಕತ್ವದ ಗೊಂದಲ ಬಗೆ ಹರಿಯದ ಹೊರತು, ಸಂಪುಟ ಪುನರ್‌ರಚನೆಯಾಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಸಂಪುಟ ಪುನರ್‌ರಚನೆಯಾದರೆ, ನಾಯಕತ್ವದ ವಿವಾದ ತಣ್ಣಗಾಗಲಿದೆ ಎಂದು ಸಿದ್ದರಾಮಯ್ಯ ಅವರ ಲೆಕ್ಕಾಚಾರ. ಹೀಗಾಗಿ ಸಂಪುಟ ಪುನರ್‌ರಚಿಸಲು ತಯಾರಿ ನಡೆಸುತ್ತಿದ್ದಾರೆ.
ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿ ಇವೆ. ಜೊತೆಗೆ 12ಕ್ಕೂ ಹೆಚ್ಚು ಮಂದಿಯನ್ನು ಕೈಬಿಟ್ಟು, ಸುಮಾರು 15 ರಿಂದ 20 ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಇರಾದೆಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಂಪುಟ ಸೇರಲಿಕ್ಕಾಗಿ ಒಂದಷ್ಟು ಜನ ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಕೆಲವೊಮೆ ಬಣದ ರಾಜಕೀಯವನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸುವ ಹಪಾಹಪಿಯಲ್ಲಿದ್ದಾರೆ. ನಾಯಕತ್ವದ ವಿವಾದಕ್ಕಿಂತಲೂ ಸಂಪುಟ ಪುನರ್‌ರಚನೆ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರಕ್ಕೆ ದುಬಾರಿಯಾಗುವ ಸಾಧ್ಯತೆ ಇದೆ.
