ಮೈಸೂರು, ಮಾ.7- ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಟ್ಟರೆ, ಮುಂದಿನ ಎರಡು ಬಜೆಟ್‌ಗಳನ್ನು ಮಂಡಿಸುತ್ತೇನೆ. ಇಲ್ಲವೇ ಅಧಿಕಾರ ಬಿಡಿ ಎಂದರೆ ಬಿಟ್ಟುಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಪುನರ್‌ಸ್ಪಷ್ಟಪಡಿಸಿದರು. ಈಗಾಗಲೇ 17 ಬಜೆಟ್‌ಗಳನ್ನು ಮಂಡಿಸಿದ್ದೇನೆ. ರಾಜ್ಯದಲ್ಲಿ ಅತೀ ಹೆಚ್ಚು ಬಜೆಟ್ ಮಂಡಿಸಿರುವುದು ನಾನೇ. ಇನ್ನೆರಡು ಬಜೆಟ್ ಮಂಡಿಸಿದರೆ, 19 ಬಜೆಟ್‌ಗಳಾಗಿದ್ದು, ದಾಖಲೆ ನಿರ್ಮಾಣವಾಗುತ್ತದೆ. ಆದರೆ ತಮಗೆ ದಾಖಲೆ ಮುರಿಯುವುದು ಮುಖ್ಯ ಅಲ್ಲ ಎಂದರು.
ರಾಜ್ಯದ ಜನ, ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಟ್ಟರೆ ಇನ್ನೆರಡು ಬಜೆಟ್‌ಗಳನ್ನು ಮಂಡಿಸುತ್ತೇನೆ. ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ. ಅವರು ಅಧಿಕಾರದಲ್ಲಿ ಮುಂದುವರಿಯಿರಿ ಎಂದರೆ ಮುಂದುವರಿಯುತ್ತೇನೆ. ಬಿಡಿ ಎಂದರೆ ಬಿಡುತ್ತೇನೆ. ವಾಸ್ತವ ಬಿಟ್ಟು ಮಾತನಾಡುವುದಿಲ್ಲ ಎಂದು ಹೇಳಿದರು.
ಬಜೆಟ್ ಹಾಗೂ ಯುಗಾದಿ ನಂತರ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಹುದ್ದೆ ತೊರೆಯುತ್ತಾರೆ ಎಂದು ಚರ್ಚೆಗಳು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಆದರೆ ನಾನು ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ. ಸಿದ್ದರಾಮಯ್ಯ ಅವರು ಮುಂದುವರೆಯಬೇಕೆಂದು ಮೈಸೂರು ಜನರಿಗಷ್ಟೇ ಅಲ್ಲ, ರಾಜ್ಯದ ಜನರಿಗೂ ಆಸೆ ಇದೆ ಎಂದರು.
ಕೇಂದ್ರದಲ್ಲಿ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಅಡುಗೆ ಅನಿಲದ ಬೆಲೆ ಹಲವಾರು ಬಾರಿ ಹೆಚ್ಚಳವಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ವಿಷಾದಿಸಿದರು.
ಸಿದ್ದರಾಮಯ್ಯ ಅವರು ಸಾಲದ ಬಜೆಟ್ ಮಂಡಿಸಿದ್ದಾರೆ ಎಂದು ಟೀಕೆ ಮಾಡುತ್ತಿರುವ ಬಿಜೆಪಿಯವರು ಮೊದಲು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಓದಿಕೊಳ್ಳಿ. ಕೇಂದ್ರ ಸರ್ಕಾರ ಆರ್ಥಿಕ ಶಿಸ್ತನ್ನು ಮೀರಿ ಸಾಲ ಮಾಡಿದೆ. ವಿತ್ತೀಯ ಕೊರತೆ ಮಿತಿಮೀರಿದೆ. ನಿಯಮಗಳ ಪ್ರಕಾರ ಜಿಡಿಪಿಯ ಶೇ. 25ರ ಒಳಗೆ ಸಾಲದ ಮಿತಿ ಇರಬೇಕು. ವಿತ್ತೀಯ ಕೊರತೆ ಶೇ. 3ರ ಒಳಗಿರಬೇಕು.
ಕರ್ನಾಟಕದ ಸಾಲ ಶೇ. 24.94ರ ಒಳಗಿದೆ. ವಿತ್ತಿಯ ಕೊರತೆ ಶೇ. 2.95ರಷ್ಟಿದೆ. ಕೇಂದ್ರ ಸರ್ಕಾರದ ಸಾಲ 218 ಲಕ್ಷ ಕೋಟಿ ರೂ.ಗಳಷ್ಟಿದ್ದು, ಇದು ಜಿಡಿಪಿಯ ಶೇ. 55.6 ರಷ್ಟು, ಕೇಂದ್ರದ ವಿತ್ತೀಯ ಕೊರತೆ ಶೇ. 4.4ರಷ್ಟಿದೆ. ಕರ್ನಾಟಕದ ಜಿಡಿಪಿ ಪ್ರಕಾರ 33 ಲಕ್ಷ ಕೋಟಿ ರೂ. ಸಾಲ ಪಡೆಯಲು ಅವಕಾಶ ಇದೆ ಎಂದರು.
ಬಿಜೆಪಿಯವರು ಯಾವುದನ್ನೂ ಸರಿಯಾಗಿ ತಿಳಿದುಕೊಳ್ಳದೇ ಮಾತನಾಡುತ್ತಿದ್ದಾರೆ. ರಾಜ್ಯದ ಸಾಲದ ಬಗ್ಗೆ ಮಾತನಾಡುವ ವಿರೋಧ ಪಕ್ಷದವರು ಮೋದಿ ಸರ್ಕಾರದ ಸಾಲದ ಬಗ್ಗೆಯೂ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.
ತಮ ಬಜೆಟ್ ಯಾವುದೇ ಒಂದು ವರ್ಗಕ್ಕೇ ಸೀಮಿತವಲ್ಲ. ಇಡೀ ರಾಜ್ಯದ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಕೇಂದ್ರ ಸರ್ಕಾರ ನಮ ಪಾಲಿನ ಅನುದಾನವನ್ನು ನೀಡದೇ ಇರುವುದರಿಂದ ಆರ್ಥೀಕ ಒತ್ತಡ ಹೆಚ್ಚಾಗಿದೆ. ಜಿಎಸ್‌ಟಿ ಪರಿಷ್ಕರಣೆಯಿಂದ ರಾಜ್ಯಕ್ಕೆ 10 ಸಾವಿರ ಕೋಟಿ ರೂ. ನಷ್ಟವಾಗಿದೆ. ಇದರ ಬಗ್ಗೆಯೂ ಚರ್ಚೆ ಮಾಡಬೇಕೆಂದು ಹೇಳಿದರು.
