Homeರಾಜಕೀಯರಿಯಲ್‌ ಎಸ್ಟೇಟ್‌ ದಂಧೆಯೇ ಸರ್ಕಾರದ ಅಜೆಂಡಾ : ಆರ್‌.ಅಶೋಕ್‌

ರಿಯಲ್‌ ಎಸ್ಟೇಟ್‌ ದಂಧೆಯೇ ಸರ್ಕಾರದ ಅಜೆಂಡಾ : ಆರ್‌.ಅಶೋಕ್‌

Real estate scam is the government's agenda: R. Ashok

ಬೆಂಗಳೂರು,ಮೇ 21- ರಾಜಧಾನಿಯ ಅಕ್ಕಪಕ್ಕದ ಜಿಲ್ಲೆಗಳಿಗೆ ಬೆಂಗಳೂರು ಹೆಸರು ಅಂಟಿಸಿ ರಿಯಲ್‌ ಎಸ್ಟೇಟ್‌ ದಂಧೆ ವಿಸ್ತರಿಸುವುದರಲ್ಲಿ ತೋರಿಸುತ್ತಿರುವ ಆಸಕ್ತಿಯ ಅರ್ಧದಷ್ಟಾದರೂ ಬೆಂಗಳೂರಿನ ಸುರಕ್ಷತೆ, ಕಾನೂನು ಸುವ್ಯವಸ್ಥೆ ಬಗ್ಗೆ ಈ ಕಾಂಗ್ರೆಸ್‌‍ ಸರ್ಕಾರಕ್ಕಿದ್ದಿದ್ದರೆ ಇಂದು ಸಿಲಿಕಾನ್‌ ಸಿಟಿ ಅಪರಾಧಗಳ ನಗರ ಆಗುತ್ತಿರಲಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಬೇಸರ ಹೊರಹಾಕಿದ್ದಾರೆ.

ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಬೆಂಗಳೂರಿನ ಅಕ್ಕಪಕ್ಕದ ಜಿಲ್ಲೆಗಳಿಗೆ ಬೆಂಗಳೂರು ಹೆಸರು ತಳಕು ಹಾಕಿ, ಜಮೀನಿನ ಬೆಲೆ ಏರಿಸಿ ರಿಯಲ್‌ ಎಸ್ಟೇಟ್‌ ಲಾಬಿಯ ಜೇಬು ತುಂಬಿಸುವುದನ್ನೇ ಏಕೈಕ ಅಜೆಂಡಾ ಮಾಡಿಕೊಂಡಿರುವ ಕಾಂಗ್ರೆಸ್‌‍ ಸರ್ಕಾರ ಬೆಂಗಳೂರಿನ ಅಭಿವೃದ್ಧಿ, ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಇದರ ಪರಿಣಾಮವಾಗಿ ನಮ ಹೆಮೆಯ ಸಿಲಿಕಾನ್‌ ಸಿಟಿ, ಕ್ರೈಮ್‌ ಸಿಟಿಯಾಗಿ ಮಾರ್ಪಟ್ಟಿದೆ. ಆವಿಷ್ಕಾರದ ರಾಜಧಾನಿ, ಅಪರಾಧಗಳ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆೆ.

2024ರಲ್ಲಿ ಬೆಂಗಳೂರಿನಲ್ಲಿ 176 ಕೊಲೆ ಪ್ರಕರಣಗಳು ದಾಖಲು. ಮಹಾನಗರಗಳ ಅಪರಾಧ ಪಟ್ಟಿಯಲ್ಲಿ ಬೆಂಗಳೂರು ಟಾಪ್‌ ನಗರಗಳಲ್ಲಿ ಒಂದಾಗಿದೆ.ಮಹಿಳೆಯರ ಮೇಲಿನ ದೌರ್ಜನ್ಯ – 4,748 ಪ್ರಕರಣಗಳು, ಅದರಲ್ಲೂ 16 ಗ್ಯಾಂಗ್‌ ರೇಪ್‌ ಪ್ರಕರಣಗಳು ದಾಖಲಾಗಿವೆ. ಇದೇನಾ ಬ್ರ್ಯಾಂಡ್‌ ಬೆಂಗಳೂರು? ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಪ್ರಶ್ನಿಸಿದ್ದಾರೆ.

ಒಂದೇ ವರ್ಷದಲ್ಲಿ 17,561 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿವೆ. ಜನರ ಬೆವರಿನ ಹಣವನ್ನು ಸೈಬರ್‌ ಕಳ್ಳರು ಲೂಟಿ ಮಾಡುತ್ತಿದ್ದಾರೆ. ಗಾಂಜಾ, ಹೆರಾಯಿನ್‌ ಸೇರಿ 98.69 ಕೋಟಿ ಮೌಲ್ಯದ ಮಾದಕ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. ಆದರೆ ಡ್ರಗ್ಸ್ ಮಾಫಿಯಾ ಮಾತ್ರ ನಿರ್ಭಯವಾಗಿ ಓಡಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಹಿರಿಯರನ್ನು ಗುರಿಯಾಗಿಸಿ 671 ಪ್ರಕರಣಗಳು ದಾಖಲಾಗಿವೆ. ಅಪ್ರಾಪ್ತರ ಅಪರಾಧ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ. 2022ರಲ್ಲಿ 200 ಇದ್ದ ಪ್ರಕರಣಗಳು 2023ರಲ್ಲಿ 427ಕ್ಕೆ ಏರಿಕೆಯಾಗಿದೆ. 2024ರಲ್ಲಿ ಕೂಡ 386 ಪ್ರಕರಣಗಳು ದಾಖಲಾಗಿವೆ. ಇದೇನಾ ಸಾಧನಾ ಸಮಾವೇಶದ ಸಾಧನೆ? ಇದೇನಾ ನಿಮ ಬ್ರ್ಯಾಂಡ್‌ ಬೆಂಗಳೂರು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು ಜನರ ಸುರಕ್ಷತೆ ಕುಸಿದು ಬಿದ್ದಿದೆ. ಆದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ತುಮಕೂರು-ರಾಮನಗರದ ರಿಯಲ್‌ ಎಸ್ಟೇಟ್‌ ಲಾಭದ ಚಿಂತೆಯೇ ಹೆಚ್ಚು. ಜನರ ಭದ್ರತೆಗಿಂತ ರಿಯಲ್‌ ಎಸ್ಟೇಟ್‌ ದಂಧೆಯೇ ಮುಖ್ಯವಾಗಿರುವ ಕಾಂಗ್ರೆಸ್‌‍ ಸರ್ಕಾರದಿಂದ ಇನ್ನೇನು ನಿರೀಕ್ಷಿಸಬಹುದು? ಎಂದು ಕುಹಕವಾಡಿದ್ದಾರೆ. ಜನರ ಜೀವ-ಆಸ್ತಿ ರಕ್ಷಿಸಲು ವಿಫಲವಾದ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ. ಬೆಂಗಳೂರಿನ ಗೌರವ, ಸುರಕ್ಷತೆ ಮತ್ತು ಭವಿಷ್ಯಕ್ಕಾಗಿ ಕಾಂಗ್ರೆಸ್‌‍ ಸರ್ಕಾರವನ್ನ ಕಿತ್ತೊಗೆಯುವುದು ಅನಿವಾರ್ಯವಾಗಿದೆ ಎಂದು ಅಶೋಕ್‌ ಎಚ್ಚರಿಸಿದ್ದಾರೆ.

RELATED ARTICLES

Latest News