ಬೆಂಗಳೂರು,ಮಾ.12- ಸಾವಿರಾರು ಕೋಟಿ ವಹಿವಾಟು ನಷ್ಟ, ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗುತ್ತಿರುವ ಯಂತ್ರೋಪಕರಣಗಳು, ಅಧಿಕಾರಿಗಳ ನಿರ್ಲಕ್ಷ್ಯ, ಹೇಳುವವರು, ಕೇಳುವವರಿಲ್ಲದ ಪರಿಸ್ಥಿತಿ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಪ್ರತಿದಿನ ಕಂಡುಬರುತ್ತಿರುವ ದೃಶ್ಯಗಳು.
ಎಂಎಸ್ಎನ್ಇಗಳು ಸೇರಿದಂತೆ ದೊಡ್ಡ ಪ್ರಮಾಣದ ಕೈಗಾರಿಕೆಗಳು ದಾಬಸ್‌ಪೇಟೆ ಕೈಗಾರಿಕಾ ವಲಯದಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತವೆ, ಸಾವಿರಾರು ಕೋಟಿ ವಹಿವಾಟು ನಡೆಯುತ್ತದೆ, ಲಕ್ಷಾಂತರ ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ.
ಆದರೆ ಪ್ರತಿದಿನ 6 ರಿಂದ 7 ಬಾರಿ ಕರೆಂಟ್ ಕಟ್ ಮಾಡುವ ಮೂಲಕ ಕೈಗಾರಿಕೆಗಳಿಗೆ ಭಾರೀ ಪ್ರಮಾಣದ ಹೊಡೆತ ಬೀಳುತ್ತಿದೆ. ಏಕಾಏಕಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಕಟ್ ಆಗುವುದರಿಂದ ಕೋಟ್ಯಂತರ ಬೆಲೆ ಬಾಳುವ ಯಂತ್ರೋಪಕರಣಗಳಿಗೆ ಹಾನಿಯಾಗುತ್ತದೆ. ವಿದ್ಯುತ್ ಕಡಿತದ ಬಗ್ಗೆ ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆಯನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲ. ಕೈಗಾರಿಕೆಗಳ ಪರಿಸ್ಥಿತಿ ಆಲಿಸುವ ದಯೆ, ಕರುಣೆ ಯಾವುದೂ ಕೂಡ ಅಧಿಕಾರಿಗಳಿಗೆ, ಇಲಾಖೆಗೆ ಇದ್ದಂತೆ ಇಲ್ಲ.
ಈ ಪರಿಸ್ಥಿತಿಯ ವಿರುದ್ಧ ಹಲವು ಕೈಗಾರಿಕೋದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕೈಗಾರಿಕೋದ್ಯಮ ಯಶಸ್ವಿಯಾಗಬೇಕಾದರೆ ಮೂಲಭೂತ ಸೌಕರ್ಯಗಳು ಅಗತ್ಯ. ನೀರು, ವಿದ್ಯುತ್, ಮಾನವ ಸಂಪನ್ಮೂಲ ಇರಬೇಕು. ಆದರೆ ದಾಬಸ್ಪೇಟೆ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ನ ಸಮಸ್ಯೆ ಅಗಾಧವಾಗಿ ಕಾಡುತ್ತಿದೆ.
ಇದರಿಂದ ಉತ್ಪಾದನಾ ವಲಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ರೀತಿಯಾದರೆ ಕೈಗಾರಿಕೋದ್ಯಮಿಗಳು ಇಲ್ಲಿಂದ ಸ್ಥಳಾಂತರ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಮಸ್ಯೆಗಳನ್ನು ಪರಿಹರಿಸಿ ಕೈಗಾರಿಕೋದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟರೆ ಕೈಗಾರಿಕಾ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಆದರೆ ಸಮಸ್ಯೆ ಆಲಿಸಬೇಕಾದವರಿಗೆ ಕಣ್ಣು, ಕಿವಿ, ದಯಾ, ದಾಕ್ಷಿಣ್ಯ ಯಾವುದೂ ಇಲ್ಲದಿದ್ದರೆ ಯಾರು ಕೈಗಾರಿಕಾ ಸ್ಥಾಪನೆ ಮಾಡುತ್ತಾರೆ? ಬಂಡವಾಳ ಹೂಡಲು ಮುಂದೆ ಬರುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಬೇಸಿಗೆ ಸಂದರ್ಭದಲ್ಲಿ ಸ್ವಲ್ಪ ವಿದ್ಯುತ್ ಸಮಸ್ಯೆ ಇರುತ್ತದೆ. ಕೈಗಾರಿಕೋದ್ಯಮಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿರುವುದು ಪ್ರಭುತ್ವದ ಜವಾಬ್ದಾರಿ. ಆದರೆ ವ್ಯವಸ್ಥೆ ಕಲ್ಪಿಸುವುದಿರಲಿ, ಸಮಸ್ಯೆ ಆಲಿಸುವ ಸಂಯಮ ತೋರಿಸದೇ ಇರುವುದು ಎಷ್ಟು ಸಮಂಜಸ, ವಿದ್ಯುತ್ ದರ ಹೆಚ್ಚಳ ಮಾಡಿರುವುದಲ್ಲದೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದಿರುವುದು ಕೂಡ ಕೈಗಾರಿಕೋದ್ಯಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.