ಬೆಂಗಳೂರು,ಮೇ.4- ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಎಸ್‌ಐಟಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಗೃಹಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದರು.
ಪ್ರಕರಣದ ಸಂಬಂಧಪಟ್ಟಂತೆ ಇದುವರೆಗಿನ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿಯವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿದ್ದು, ಲುಕ್‌ಔಟ್ ನೋಟಿಸ್ ಜೊತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಸಹಿಸಲಾಗದು ಎಂದು ಮುಖ್ಯಮಂತ್ರಿಯವರು ಅಧಿ ಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸೂಕ್ತ ಕ್ರಮಗಳೊಂದಿಗೆ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು. ಸಿಬಿಐ ಸಹಕಾರದೊಂದಿಗೆ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸುವ ಸಾಧ್ಯತೆ ಇದೆ. ಇದರಿಂದ ತನಿಖೆಗೆ ವೇಗ ಸಿಗಲಿದೆ. ವಿಮಾನ ನಿಲ್ದಾಣಗಳಿಂದ ಮಾಹಿತಿ ಸಿಕ್ಕ ಕೂಡಲೇ ಬಂಧಿಸಿ ಕರೆ ತರುವುದಾಗಿ ಅಧಿಕಾರಿಗಳು ಸಭೆಯಲ್ಲಿ ಮುಖ್ಯಮಂತ್ರಿಯವರಿಗೆ ವಿವರಿಸಿದ್ದಾರೆ.
ಮಾಹಿತಿ ಪಡೆಯಲು ಬ್ಲೂ ಕಾರ್ನರ್ ನೋಟೀಸ್ :
196 ಸದಸ್ಯ ರಾಷ್ಟ್ರಗಳೊಂದಿಗೆ ಸಹಯೋಗ ಹೊಂದಿರುವ ಅಂತಾರಾಷ್ಟ್ರೀಯ ಪೊಲೀಸ್ ಸಂಸ್ಥೆ (ಇಂಟರ್‌ಪೋಲ್) ಹಲವಾರು ಸ್ವರೂಪದ ನೋಟೀಸ್‌ಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಶಿಕ್ಷೆಗೆ ಒಳಗಾಗಿರುವ ತಪ್ಪಿತಸ್ಥ ಆರೋಪಿಗಳ ಸ್ಥಳ ಪತ್ತೆ ಮತ್ತು ಬಂಧನಕ್ಕಾಗಿ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಲಾಗುತ್ತದೆ. ನಾಪತ್ತೆಯಾಗಿರುವ ಅಪ್ರಾಪ್ತರ ಸ್ಥಳ ಪತ್ತೆ ಮತ್ತು ಸ್ವಯಂ ಗುರುತನ್ನು ಹೇಳಿಕೊಳ್ಳಲು ಸಾಧ್ಯವಾಗದಿರುವವರ ಪತ್ತೆಗಾಗಿ ಎಲ್ಲೋ ಕಾರ್ನರ್ ನೋಟೀಸ್ ಹೊರಡಿಸಲಾಗುತ್ತದೆ.
ಬ್ಲೂ ಕಾರ್ನರ್ ನೋಟೀಸ್ ಅನ್ನು ವ್ಯಕ್ತಿಯ ಗುರುತು, ಸ್ಥಳ ಪತ್ತೆ ಮತ್ತು ಅಪರಾಧ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತನ ಚಟುವಟಿಕೆಗಳ ಹೆಚ್ಚುವರಿ ಮಾಹಿತಿಯನ್ನು ಕಲೆ ಹಾಕಲು ಹೊರಡಿಸಲಾಗುತ್ತದೆ. ಮೃತಪಟ್ಟವರ ಮಾಹಿತಿ ಸಂಗ್ರಹ ಹಾಗೂ ಗುರುತು ಪತ್ತೆಗೆ ಬ್ಲಾಕ್ ನೋಟೀಸ್ ಸೇರಿದಂತೆ ಗ್ರೀನ್, ಆರೆಂಜ್, ಪರ್ಪಲ್ ನೋಟೀಸ್‌ಗಳನ್ನು ನಿಗದಿಪಡಿಸಲಾಗಿದೆ.