Saturday, November 23, 2024
Homeರಾಜ್ಯಯುಪಿಎ ಅವಧಿಯಲ್ಲಿ ಎಷ್ಟು ಅನುದಾನ ನೀಡಿತ್ತು ಎಂಬುದನ್ನು ಬಹಿರಂಗಪಡಿಸಿ : ಆರ್.ಅಶೋಕ್ ಸವಾಲ್

ಯುಪಿಎ ಅವಧಿಯಲ್ಲಿ ಎಷ್ಟು ಅನುದಾನ ನೀಡಿತ್ತು ಎಂಬುದನ್ನು ಬಹಿರಂಗಪಡಿಸಿ : ಆರ್.ಅಶೋಕ್ ಸವಾಲ್

ಬೆಂಗಳೂರು,ಏ.28- ಹಿಂದಿನ ಡಾ.ಮನಮೋಹನಸಿಂಗ್‌ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಯುಪಿಎ ಎಷ್ಟು ಅನುದಾನವನ್ನು ಕೇಂದ್ರದಿಂದ ಬಿಡುಗಡೆ ಮಾಡಿತ್ತು ಎಂಬುದನ್ನು ಕಾಂಗ್ರೆಸ್‌ ನಾಯಕರು ಶ್ವೇತಪತ್ರ ಹೊರಡಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಬಹಿರಂಗ ಸವಾಲು ಹಾಕಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುಪಿಎ ಕೊಟ್ಟ ಪರಿಹಾರ ನೋಡಿದರೆ ಸ್ಮಶಾನದಲ್ಲಿ ಬಾಯಿ ಬಡಿದುಕೊಳ್ಳಬೇಕು. ಸಿದ್ದರಾಮಯ್ಯನವರೇ ನಾವು 4,860 ಕೋಟಿ ರೂ. ಪರಿಹಾರ ಕೇಳಿದ್ದೇವೆ ಅಂತ ಅಂತ ಹೇಳಿದ್ದಾರೆ. ಕೇಂದ್ರ 3,454 ಕೋಟಿ ರೂ. ನೀಡಿದೆ. ಸಿದ್ದರಾಮಯ್ಯಗೆ ಎರಡು ನಾಲಿಗೆ ಇದೆಯೋ ಹತ್ತು ನಾಲಿಗೆ ಇದೆಯೋ? ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಇಬ್ಬರೂ ಸುಳ್ಳು ರಾಮಯ್ಯ, ಸುಳ್ಳು ಕುಮಾರ್‌, ಬುರುಡೆ ಕುಮಾರ್‌ ಎಂದು ವಾಗ್ದಾಳಿ ನಡೆಸಿದರು.

ಈ ವೇಳೆ ಯುಪಿಎ ಮತ್ತು ಎನ್‌ಡಿಎ ಅವಧಿಯಲ್ಲಿ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ದಾಖಲೆ ರಿಲೀಸ್‌ ಮಾಡಿ ವಾಗ್ದಾಳಿ ನಡೆಸಿದರು. ಕಳೆದ ಹತ್ತು ವರ್ಷಗಳ ಯುಪಿಎ ಅವಧಿಯಲ್ಲಿ ನಾವು 44,838.59 ಕೋಟಿ ರೂ. ಕೇಳಿದ್ದರೆ ಮನೆಹಾಳರು ಕೊಟ್ಟಿದ್ದು ಕೇವಲ 3,579.22 ಕೋಟಿ ರೂ. ಮಾತ್ರ. ಕಳೆದ ಹತ್ತು ವರ್ಷದಲ್ಲಿ ಎನ್‌ಡಿಎ ಸರ್ಕಾರದ ಬಳಿ 25,728 ಕೋಟಿ ರೂ. ಕೇಳಿದ್ದರೆ 1,1482 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಅಂಕಿ ಅಂಶ ಬಿಡುಗಡೆ ಮಾಡಿ ಅಕೋಶ ಹೊರಹಾಕಿದರು.

ಕೇಂದ್ರ ನೀಡಿದ ಬರ ಪರಿಹಾರದಲ್ಲಿ ಲೂಟಿ ಹೊಡೆಯಬಾರದು. ನಾವು ಕೇಂದ್ರದ ಹಣಕ್ಕೆ ಕಾವಲು ಕಾಯುತ್ತೇವೆ. ಕೇಂದ್ರ ಎಷ್ಟು ಹಣವನ್ನು ಬಿಡುಗಡೆ ಮಾಡಿದೆಯೋ, ನೀವೂ ಅಷ್ಟೇ ಬಿಡುಗಡೆ ಮಾಡಿ. ನೀವು ಅಷ್ಟೇ ಹಣ ಬಿಡುಗಡೆ ಮಾಡಲು ಸಾಧ್ಯವಾಗದೇ ಇದ್ದರೆ ನಿಮ್ಮದು ಪಾಪರ್‌ ಸರ್ಕಾರ. ಯೋಗ್ಯತೆ, ಮಾನ ಮರ್ಯಾದೆ ಇದ್ದರೆ ಕೇಂದ್ರದಷ್ಟೇ ನೀವೂ ಈಗ ಬರ ಪರಿಹಾರ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಅಶೋಕ್‌ ಸವಾಲು ಎಸೆದರು.

ಯುಪಿಎ ಅವಧಿಯಲ್ಲಿ ಎಷ್ಟು? :
2004-05 ರಲ್ಲಿ ಬರಗಾಲ ಇದ್ದಾಗ ಕರ್ನಾಟಕ 1,147.70 ಕೋಟಿ ರೂ. ಕೇಳಿತ್ತು. ಆದರೆ ಯುಪಿಎ ಸರ್ಕಾರ ನೀಡಿದ್ದು ಕೇವಲ 131 ಕೋಟಿ ರೂ. 2005-06ರಲ್ಲಿ ಅತಿವೃಷ್ಟಿಗೆ 4,297 ಕೋಟಿ ರೂ. ಕೇಳಲಾಗಿತ್ತು. ಯುಪಿಎ ನೀಡಿದ್ದು 358 ಕೋಟಿ ರೂ.. 2006-07ರಲ್ಲಿ ಪ್ರವಾಹ/ಬರಗಾಲಕ್ಕೆ 2.858 ಕೋಟಿ ರೂ. ಕೇಳಲಾಗಿತ್ತು. ನೀಡಿದ್ದು 226 ಕೋಟಿ ರೂ. ಮಾತ್ರ.
2007-08ರಲ್ಲಿ ಜುಲೈನಲ್ಲಿ ಪ್ರವಾಹ ವೇಳೆ 406 ಕೋಟಿ ರೂ. ಕೇಳಿದ್ರೆ ಕೊಟ್ಟಿದ್ದು ಶೂನ್ಯ.

ಇದೇ ವರ್ಷದ ಆಗಸ್‌್ಟನಲ್ಲಿ 1,510 ರೂ. ಕೇಳಿದ್ರೆ ಕೊಟ್ಟಿದ್ದು ಚಿಪ್ಪು. ಅದೇ ವರ್ಷದ ಅಕ್ಟೋಬರ್‌ನಲ್ಲಿ 3,941ಕೋಟಿ ರೂ. ಕೇಳಲಾಗಿತ್ತು, ನೀಡಿದ್ದು 178 ಕೋಟಿ ರೂ.
2008-09 ರಲ್ಲಿ ಬರಕ್ಕೆ 516 ಕೋಟಿ ರೂ ಕೇಳಿದರೆ, ಕೊಟ್ಟಿದ್ದು ಕೇವಲ 1 ಕೋಟಿ. 2009-10 ರಲ್ಲಿ ಪ್ರವಾಹ, ಬರಕ್ಕೆ 7,759 ಕೋಟಿ ರೂ. ಹಣವನ್ನು ಬಿಜೆಪಿ ಸರ್ಕಾರ ಕೇಳಿತ್ತು. ಆದರೆ ಅವರು ನೀಡಿದ್ದು 957 ಕೋಟಿ ರೂ. ಮಾತ್ರ. 2010-11 ರಲ್ಲಿ ಪ್ರವಾಹಕ್ಕೆ ಸರ್ಕಾರ 1045 ಕೋಟಿ ರೂ. ಕೇಳಿತ್ತು. ಆದರೆ ಒಂದು ರೂ. ನೀಡಿಲ್ಲ.

2011-12 ರಲ್ಲಿ 6,415 ಕೋಟಿ ರೂ. ಕೇಳಿದ್ದಕ್ಕೆ 429 ಕೋಟಿ ರೂ. ನೀಡಿತ್ತು. 2012-13 ರಲ್ಲಿ ಬರಕ್ಕೆ 11,489 ಕೋಟಿ ಕೇಳಿದರೆ, 397 ಕೋಟಿ ರೂ. ಸಿಕ್ಕಿತ್ತು. 2013-14 ರಲ್ಲಿ 2,258 ಕೋಟಿ ಕೇಳಿದ್ದರೆ ಕೊಟ್ಟಿದ್ದು 668 ಕೋಟಿ ಮಾತ್ರ ಎಂದು ಅಶೋಕ್‌ ಹೇಳಿದರು.

ಎನ್‌ಡಿಎ ಅವಧಿಯಲ್ಲಿ ಎಷ್ಟು? :
2015-16 ರಲ್ಲಿ 3,831 ಕೋಟಿ ರೂ. ಕೇಳಿದ್ದಕ್ಕೆ 1,853 ಕೋಟಿ ರೂ. ನೀಡಿತ್ತು. 2016-17 ರಲ್ಲಿ ಬರ ಇದ್ದಾಗ 4,703 ಕೋಟಿ ರೂ. ಕೇಳಿದ್ದರೆ ಸರ್ಕಾರ 2,293 ಕೋಟಿ ರೂ. ವಿತರಿಸಿತ್ತು. 2017-18 ರಲ್ಲಿ 3,690 ಕೋಟಿ ರೂ. ಕೇಳಿದ್ದರೆ 1,141 ಕೋಟಿ ರೂ. ನೀಡಿತ್ತು.

2018-19 ರಲ್ಲಿ ರಾಜ್ಯ 2,434 ಕೋಟಿ ರೂ. ಕೇಳಿದ್ದರೆ ಸರ್ಕಾರ 1,248 ಕೋಟಿ ರೂ. ನೀಡಿತ್ತು. 2019-20 ರಲ್ಲಿ 3,837 ಕೋಟಿ ರೂ. ಕೇಳಿದ್ದರೆ 3,412 ಕೋಟಿ ರೂ. ಸಿಕ್ಕಿತ್ತು. 2020-21 ರಲ್ಲಿ ಪ್ರವಾಹ ಬಂದಾಗ 2,242.48 ಕೋಟಿ ರೂ. ಕೇಳಿದ್ದಕ್ಕೆ 1,480 ಕೋಟಿ ರೂ. ನೀಡಿತ್ತು.

2021-22 ರಲ್ಲಿ ಪ್ರವಾಹ, ಭೂಕುಸಿತ ವೇಳೆ 2122 ಕೋಟಿ ರೂ. ಕೇಳಿದ್ದರೆ ಸರ್ಕಾರ 2,255.8 ಕೋಟಿ ರೂ. ನೀಡಿತ್ತು. 2022-23 ರಲ್ಲಿ 1944 ಕೋಟಿ ರೂ. ಕೇಳಿದ್ದರೆ 1,603 ಕೋಟಿ ರೂ. ಸಿಕ್ಕಿತ್ತು. 2023-24 ರಲ್ಲಿ18171 ಕೋಟಿ ರೂ. ಕೇಳಿದ್ದರೆ 4,151.42 ಕೋಟಿ ರೂ.(ಎನ್‌ಡಿಆರ್‌ಎಫ್‌+ಎಸ್‌ಡಿಆರ್‌ಎಫ್‌ ಸೇರಿ) ಸಿಕ್ಕಿದೆ ಎಂದು ಅಶೋಕ್‌ ತಿಳಿಸಿದರು.

RELATED ARTICLES

Latest News