ಚಂಡೀಗಢ,ಸೆ.6- ಉಚಿತ ಯೋಜನೆಗಳನ್ನು ಘೋಷಣೆ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಂಜಾಬ್ ಆಪ್ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ವ್ಯಾಟ್ ಹೆಚ್ಚಿಸಿ ವಿದ್ಯುತ್ ಸಬ್ಸಿಡಿಯನ್ನು ರದ್ದುಗೊಳಿಸಿದೆ.ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಇಂಧನ ಬೆಲೆ ಏರಿಕೆಯಿಂದಾಗಿ ಇತರ ಅಗತ್ಯ ವಸ್ತುಗಳ ಬೆಲೆ ಮೇಲೆ ಪರಿಣಾಮ ಬೀರಲಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಈಗಾಗಲೇ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಇದೀಗ ಇಂಧನದ ಬೆಲೆ ಏರಿಕೆ ಜನರಿಗೆ ಹೊರೆಯಾಗಿದ್ದು, ರಾಜ್ಯಾದ್ಯಂತ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.ಆಪ್ ಸರ್ಕಾರ ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ನಂತರ ಮೂರನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿದೆ.
ಪೆಟ್ರೋಲ್ ಬೆಲೆಯಲ್ಲಿ 61 ಪೈಸೆ, ಡಿಸೇಲ್ ಬೆಲೆಯನ್ನು 92 ಪೈಸೆ ಹೆಚ್ಚಿಸಲು ನಿರ್ಣಯ ಕೈಗೊಳ್ಳಲಾಗಿದೆ. ಮತ್ತೊಂದು ಪ್ರಮುಖ ನಿರ್ಣಯ ಎಂದರೆ, ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ 7 ಕಿಲೋ ವ್ಯಾಟ್ ವರೆಗೆ ನೀಡಲಾಗುತ್ತಿದ್ದ ವಿದ್ಯುತ್ ಸಬ್ಸಿಡಿ ಯೋಜನೆಯನ್ನೂ ಸರ್ಕಾರ ರದ್ದುಗೊಳಿಸಿದೆ.
ಈ ನಿರ್ಣಯದಿಂದಾಗಿ 1,500 ರಿಂದ 1,700 ಕೋಟಿ ಹಣ ಸಂಗ್ರಹವಾಗುತ್ತದೆ ಎಂದು ಹಣಕಾಸು ಸಚಿವ ಹರ್ಪಲ್ ಚೀಮಾ ತಿಳಿಸಿದ್ದಾರೆ. ಇಂಧನದ ಮೇಲಿನ ದರ ಹೆಚ್ಚಳದಿಂದ ಸರ್ಕಾರಕ್ಕೆ ವಾರ್ಷಿಕ 392 ಕೋಟಿ ಹಣ ಉಳಿಯುತ್ತದೆ. ಆದಾಗ್ಯೂ, ರಾಜ್ಯದ ಶೇ 90ರಷ್ಟು ನಿವಾಸಿಗಳಿಗೆ ನೀಡಲಾಗುತ್ತಿರುವ 300 ಯೂನಿಟ್‌ಗಳ ಉಚಿತ ವಿದ್ಯುತ್ ಮುಂದುವರಿಯುತ್ತದೆ ಎಂದು ಹೇಳಿದೆ.
7 ಕಿಲೋವ್ಯಾಟ್ ವರೆಗಿನ ವಿದ್ಯುತ್ ಬಳಕೆಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ. ಇದರ ಜೊತೆ ಬಸ್ ಟಿಕೆಟ್ ದರ ಪ್ರತಿ ಕಿ.ಮೀ.ಗೆ 23 ಪೈಸೆ ಏರಿಕೆ ಮಾಡಲಾಗಿದೆ.
ವಿದ್ಯುತ್ ಸಬ್ಸಿಡಿಯನ್ನು ರದ್ದುಗೊಳಿಸಿದ ನಿರ್ಧಾರಗಳನ್ನು ಸಮರ್ಥಿಸಿಕೊಂಡ ಹಣಕಾಸು ಸಚಿವ ಹರ್ಪಲ್ ಚೀಮಾ ಇದರಿಂದ 1,500-1700 ಕೋಟಿ ರೂ. ಉಳಿಸಬಹುದು ಎಂದು ತಿಳಿಸಿದರು. ವಾರ್ಷಿಕವಾಗಿ ಡೀಸೆಲ್ ಮಾರಾಟದಿಂದ 395 ಕೋಟಿ ರೂ. ಮತ್ತು ಪೆಟ್ರೋಲ್‌ನಿಂದ 150 ಕೋಟಿ ರೂ. ಹೆಚ್ಚುವರಿಯಾಗಿ ಸಂಗ್ರಹಿಸುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
ಕಾಂಗ್ರೆಸ್ ಚನ್ನಿ ಸರ್ಕಾರ ಘೋಷಣೆ ಮಾಡಿದ ಉಚಿತ ಭರವಸೆಗಳಿಂದ ರಾಜ್ಯಕ್ಕೆ ಸಂಕಷ್ಟ ಎದುರಾಗಿದೆ ಆಪ್ ಸರ್ಕಾರ ತಿಳಿಸಿದೆ. ಚನ್ನಿ ಸರ್ಕಾರ 2021ರಲ್ಲಿ 7 ಕಿಲೋವ್ಯಾಟ್‌ವರೆಗಿನ ಗೃಹ ಬಳಕೆಯ ವಿದ್ಯುತ್ ಶುಲ್ಕವನ್ನು ಪ್ರತಿ ಯುನಿಟ್‌ಗೆ 3 ರೂ.ಗೆ ಇಳಿಕೆ ಮಾಡಿತ್ತು. 7 ಕಿಲೋ ವ್ಯಾಟ್‌ವರೆಗೂ ಇದರ ಲಾಭ ಪಡೆಯಲು ಅವಕಾಶವಿತ್ತು.
ಆಮ್ ಆದಿ ಪಕ್ಷದ ನೇತೃತ್ವದ ಪಂಜಾಬ್ ಸರ್ಕಾರವು ಗೃಹ ಬಳಕೆದಾರರಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದ್ದು ಈ ಯೋಜನೆ ಮುಂದುವರಿಯಲಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಸಬ್ಸಿಡಿ ಮಾತ್ರ ಈಗ ರದ್ದುಗೊಂಡಿದೆ.
ಹಿಮಾಚಲದಂತೆ ಪಂಜಾಬ್ ಉಚಿತ ಯೋಜನೆಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಸೆ.4ರವರೆಗೆ ಸರ್ಕಾರಿ ನೌಕರರಿಗೆ ಸಂಬಳ ಪಾವತಿಯಾಗಿರಲಿಲ್ಲ. ಮಾರ್ಚ್‌ನಲ್ಲಿ ಮಂಡನೆಯಾದ ಬಜೆಟ್ ಭಾಷಣದಲ್ಲಿ ಹರ್ಪಾಲ್ ಚೀಮಾ ಅವರು 2024-25ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಪಂಜಾಬ್‌ನ ಸಾಲವು 3.74 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ತಿಳಿಸಿದ್ದರು.
ಈ ಕುರಿತು ಮಾತನಾಡಿರುವ ಸರ್ಕಾರ ಆಡಳಿತ ಸುಧಾರಣೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಭಗವತ್ ಮಾನ್ ಅವರ ನೇತೃತ್ವದಲ್ಲಿ ನಡೆದ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಪಂಜಾಬ್‌ನಲ್ಲಿ ಆಡಳಿತವನ್ನು ಸುಧಾರಿಸುವ ಮತ್ತು ಸ್ಥಿರವಾದ ಅಭಿವೃದ್ಧಿ ಕಾಪಾಡುವುದು ಎಎಪಿ ಸರ್ಕಾರ ಗುರಿಯಾಗಿದೆ ಎಂದು ಎಎಪಿ ಪಂಜಾಬ್‌ನ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಎಎಪಿ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಇಂಧನದ ಬೆಲೆ ಮೂರನೇ ಬಾರಿ ಹೆಚ್ಚಿಸಿದೆ. ಎಎಪಿ ಸರ್ಕಾರ ಪೆಟ್ರೋಲಿಯಂ ವ್ಯಾಪಾರವನ್ನು ಕೊಲ್ಲುತ್ತಿದೆ ಎಂದು ಪೆಟ್ರೋಲ್ ಪಂಪ್ ಡೀಲರ್ಸ್ ಅಸೋಸಿಯೇಷನ್ ಪಂಜಾಬ್‌ನ ವಕ್ತಾರ ಮಾಂಟಿ ಸೆಹಗಲ್ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಸರ್ಕಾರವೂ ಸಿಎನ್‌ಜಿ ಬಳಕೆ ಹೆಚ್ಚಿಸಲು ಹಸಿರು ಇಂಧನದ ಮೇಲೆ ವ್ಯಾಟ್ ಕಡಿಮೆ ಮಾಡಬೇಕು. ಈ ಮೂಲಕ ಅವುಗಳನ್ನು ಪೆಟ್ರೋಲ್ ಮತ್ತು ಡೀಸೆಲ್‌ಗಿಂತ ಅಗ್ಗ ಮಾಡಬೇಕು ಎಂದು ತಿಳಿಸಿದ್ದಾರೆ. ಸಚಿವ ಸಂಪುಟ ನಿರ್ಧಾರಕ್ಕೆ ಮುನ್ನ ಜಲಂಧರ್‌ನಲ್ಲಿ ಪೆಟ್ರೋಲ್ ಲೀಟರ್‌ಗೆ 96.17 ಮತ್ತು ಡೀಸೆಲ್ 86.32 ರೂ ಇತ್ತು.